ಬೆಂಗಳೂರು: ಕೋವಿಡ್ ಲಸಿಕೆ ಪಡೆಯಲು ಗರ್ಭಿಣಿ, ಬಾಣಂತಿಯರು ಮುಂದು!

ಕೋವಿಡ್ ಲಸಿಕೆ ಪಡೆದುಕೊಳ್ಳಲು ಗರ್ಭಿಣಿಯರು ಹಾಗೂ ಹಾಲುಣಿಸುವ ತಾಯಿಯಂದಿರು ಹಿಂಜರಿಯುತ್ತಿದ್ದ ಬೆಳವಣಿಗೆಗಳು ಕಡಿಮೆಯಾಗುತ್ತಿದ್ದು, ನಿಧಾನಗತಿಯಲ್ಲಿ ಲಸಿಕೆ ಪಡೆದುಕೊಳ್ಳಲು ಮುಂದಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಬಿಎಂಪಿ ಅಧಿಗಾರಿಗಳು ಲಸಿಕೆ ಅಭಿಯಾನವನ್ನು ವಿಸ್ತರಿಸಲು ನಿರ್ಧರಿಸಿದ್ದಾರೆಂದು ತಿಳಿದುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಕೋವಿಡ್ ಲಸಿಕೆ ಪಡೆದುಕೊಳ್ಳಲು ಗರ್ಭಿಣಿಯರು ಹಾಗೂ ಹಾಲುಣಿಸುವ ತಾಯಿಯಂದಿರು ಹಿಂಜರಿಯುತ್ತಿದ್ದ ಬೆಳವಣಿಗೆಗಳು ಕಡಿಮೆಯಾಗುತ್ತಿದ್ದು, ನಿಧಾನಗತಿಯಲ್ಲಿ ಲಸಿಕೆ ಪಡೆದುಕೊಳ್ಳಲು ಮುಂದಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಬಿಎಂಪಿ ಅಧಿಗಾರಿಗಳು ಲಸಿಕೆ ಅಭಿಯಾನವನ್ನು ವಿಸ್ತರಿಸಲು ನಿರ್ಧರಿಸಿದ್ದಾರೆಂದು ತಿಳಿದುಬಂದಿದೆ. 

ಗರ್ಭಿಣಿ ಹಾಗೂ ಹಾಲುಣಿಸುವ ಮಹಿಳೆಯರಿಗೆ ನಗರದ 20 ಹೆರಿಗೆ ಆಸ್ಪತ್ರೆಗಳಲ್ಲಿಯೇ ಪಾಲಿಕೆ ವತಿಯಿಂದ ವಾರದಲ್ಲಿ ಮೂರು ದಿನಗಳ ಕಾಲ (ಸೋಮವಾರ, ಬುಧವಾರ ಮತ್ತು ಶುಕ್ರವಾರ) ಲಸಿಕೆ ನೀಡಲು ಚಿಂತನೆ ನಡೆಸುತ್ತಿದೆ. 

ಜುಲೈ 27 ರಿಂದ ಅಭಿಯಾನ ಆರಂಭವಾಗಿದ್ದು, ಅಂದಿನಿಂದ 3,701 ಗರ್ಭಿಣಿಯರು ಹಾಗೂ 830 ಮಂದಿ ಬಾಣಂತಿ ಮಹಿಳೆಯರು ನಗರದಲ್ಲಿ ಒಂದು ಡೋಸ್ ಲಸಿಕೆ ಪಡೆದುಕೊಂಡಿದ್ದಾರೆಂದು ತಿಳಿದುಬಂದಿದೆ. 

12 ಸಾರ್ವಜನಿಕ ಆರೋಗ್ಯ ಕೇಂದ್ರಗಳು, 6 ರೆಫರಲ್ ಆಸ್ಪತ್ರೆಗಳು, 3 ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳು (ಯುಪಿಎಚ್‌ಸಿ) ), ಒಂದು ಸಮುದಾಯ ಆರೋಗ್ಯ ಕೇಂದ್ರ, ವಾಣಿ ವಿಲಾಸ ಆಸ್ಪತ್ರೆ ಮತ್ತು ಗೋಶಾ ಆಸ್ಪತ್ರೆಗಳಲ್ಲಿ ಮಹಿಳೆಯರಿಗೆ ಕೋವಾಕ್ಸಿನ್ ಅಥವಾ ಕೋವಿಶೀಲ್ಡ್‌ ಲಸಿಕೆ ನೀಡಲಾಗಿದೆ ಎಂದು ಬಿಬಿಎಂಪಿ ಮಾಹಿತಿ ನೀಡಿದೆ. 

ಮಹಿಳೆಯರಿಗೆ ಲಸಿಕೆ ನೀಡುವುದಕ್ಕೂ ಮುನ್ನ ಅವರೊಂದಿಗೆ ಸಮಾಲೋಜನೆ ಹಾಗೂ ತಪಾಸಣೆ ನಡೆಸಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಲಸಿಕೆ ಅಭಿಯಾನ ಸಾಕಷ್ಟು ಸಮಯವನ್ನು ತೆಗೆದುಕೊಳ್ಲುತ್ತಿದೆ. ಗರ್ಭಿಣಿ ಮಹಿಳೆಯರನ್ನು ಹೆಚ್ಚು ಅಪಾಯಕ್ಕೆ ಸಿಲುಕಿರುವವರೆಂದು ಪರಿಶೀಲಿಸಲಾಗುತ್ತಿದ್ದು, ಹೀಗಾಗಿ ಪರಿಶೀಲನೆ ನಡೆಸಿದ ಬಳಿಕವೇ ಲಸಿಕೆ ನೀಡಲಾಗುತ್ತಿದೆ. ಗರ್ಭಣಿಯರು ಹಾಗೂ ಹಾಲುಣಿಸುವ ತಾಯಿಯಂದಿರಲ್ಲಿ ರಕ್ತದೊತ್ತಡ, ಮಧುಮೇಹ ಸೇರಿದಂತೆ ಇತರೆ ರೋಗಗಳ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ. ಒಂದು ವೇಳೆ ಅವರಲ್ಲಿ ಸಮಸ್ಯೆಗಳು ಕಾಣಿಸಿಕೊಂಡಿದ್ದೇ ಆದರೆ, ಲಸಿಕೆಯನ್ನು ತಡವಾಗಿ ನೀಡಲಾಗುತ್ತಿದೆ. ಸಮಾಲೋಚನೆ ನಡೆಸುವ ವೇಲೆ ಲಸಿಕೀಕರಣ ಬಳಿಕ ಎದುರಾಗುವ ಪರಿಣಾಮಗಳ ಕುರಿತು ಮಾಹಿತಿ, ಸಲಹೆಗಳನ್ನು ನೀಡಲಾಗುತ್ತದೆ. ಬಳಿಕ ಸ್ತ್ರೀರೋಗ ತಪಾಸಣೆ ನಡೆಸಲಾಗುತ್ತಿದೆ. ನಂತರ ಲಸಿಕೆ ನೀಡಲಾಗುತ್ತದೆ ಎಂದು ಬಿಬಿಎಂಪಿ ಆರೋಗ್ಯ ಅಧಿಕಾರಿಯೊಬ್ಬರು ಹೇಳಿದ್ದಾರೆ. 

ಲಸಿಕೆ ನೀಡಿದ ಕೂಡಲೇ ಪ್ರಕ್ರಿಯೆ ಇಲ್ಲಿಗೆ ಮುಗಿಯುವುದಿಲ್ಲ. ಮುಂದಿನ 10 ದಿನಗಳ ಕಾಲ ಅವರ ಆರೋಗ್ಯವನ್ನು ಮೇಲ್ವಿಚಾರಣೆ ಮಾಡಲಾಗುತ್ತದೆ. ಲಸಿಕೆ ಪಡೆದ ಕೇಂದ್ರವು ನಂತರ ಅಧಿಕಾರಿಗಳಿಗೆ ಮಾಹಿತಿ ನೀಡಲಿದೆ. ಬಳಿಕ ಮಹಿಳೆಯರಿಗೆ ಕರೆ ಮಾಡಿ ಆರೋಗ್ಯ ವಿಚಾರಿಸಲಾಗುತ್ತದೆ. ಆಶಾ ಕಾರ್ಯಕರ್ತೆಯರು ಮಹಿಳೆಯರ ಮನೆಗಳಿಗೆ ಭೇಟಿ ನೀಡುತ್ತಾರೆ. ಸಣ್ಣ ಪ್ರಮಾಣದಲ್ಲಿ ಲಸಿಕೆ ಅಭಿಯಾನ ನಡೆಸಲಾಗುತ್ತಿದೆ. ದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಪ್ರಸವಪೂರ್ವ ತಪಾಸಣೆಗೆ ಮಹಿಳೆಯರು ಬಂದಾಗ, ಲಸಿಕೆ ಪಡೆಯುವ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಗಳನ್ನೂ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ. 

ಅಭಿಯಾನ ಆರಂಭವಾದ ಮೊದಲ ವಾರದಲ್ಲಿ ಪ್ರತಿಕ್ರಿಯೆ ಅತ್ಯಂತ ಕಡಿಮೆ ಇತ್ತು. ಇದೀಗ ನಿಧಾನಗತಿಯಲ್ಲಿ ಏರಿಕೆಯಾಗುತ್ತಿದೆ. ಲಸಿಕೆ ನೀಡಲೂ ಕೂಡ ಕೆಲವು ನಿಯಮಗಳನ್ನು ಅನುಸರಿಸಲಾಗುತ್ತಿದೆ. ಅರ್ಹ ಫಲಾನುಭವಿಗಳಿಗಷ್ಟೇ ಲಸಿಕೆ ನೀಡಲಾಗುತ್ತಿದೆ. ಕೌಂಟರ್ ಓಪನ್ ಮಾಡಿ ಮಹಿಳೆಯರು ಕಾದು ನಿಲ್ಲುವಂತೆ ಮಾಡುತ್ತಿಲ್ಲ. ಫಲಾನುಭವಿಗಳಿರುವ ಸ್ಥಳಕ್ಕೆ ತೆರಳಿ, ಅವರನ್ನು ಸುರಕ್ಷಿತವಾಗಿ ಆಸ್ಪತ್ರೆಗಳಿಗೆ ಕರೆ ತಂದು ಲಸಿಕೆ ನೀಡುವ ಕೆಲಸ ಮಾಡುತ್ತಿದ್ದೇವೆ. ಹಿಂಜರಿಯುತ್ತಿದ್ದ ಬೆಳವಣಿಗೆಗಳು ಕಡಿಮೆಯಾಗಿವೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ ಡಿ.ರಣದೀಪ್ ಅವರು ಹೇಳಿದ್ದಾರೆ. 

ವಾಣಿ ವಿಲಾಸ ಆಸ್ಪತ್ರೆಯಲ್ಲಿ 511 ಗರ್ಭಿಣಿಯರು ಮತ್ತು 124 ಹಾಲುಣಿಸುವ ತಾಯಂದಿರು ಲಸಿಕೆ ಪಡೆದುಕೊಂಡಿದ್ದಾರೆ. ಇದೀಗ ಹೆಚ್ಚಿನ ಮಹಿಳೆಯರು ಕೋವಿಡ್ ಲಸಿಕೆ ತೆಗೆದುಕೊಳ್ಳಲು ಮುಂದೆ ಬರುತ್ತಿದ್ದಾರೆ ಎಂದು ವೈದ್ಯಕೀಯ ಅಧಿಕಾರಿ ಡಾ.ಸಂತೋಷ್ ಡಿ ಪ್ರಭಾ ತಿಳಿಸಿದ್ದಾರೆ. 

ದಿನಕ್ಕೆ ಸುಮಾರು 10 ರಿಂದ 15 ಜನರು ಬರುತ್ತಾರೆ ಮತ್ತು ಆಸ್ಪತ್ರೆಯ ವಾರ್ಡ್‌ಗಳಲ್ಲಿ ದಾಖಲಾಗುವವರು ಕೂಡ ಮುಂದೆ ಬರುತ್ತಿದ್ದಾರೆ, ಸ್ಟಾಫ್ ನರ್ಸ್‌ಗಳು ರೋಗಿಗಳೊಂದಿಗೆ ಸಮಾಲೋಚನೆ ನಡೆಸುವ ಕಾರ್ಯ ಮಾಡುತ್ತಿದ್ದಾರೆಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com