ಬೆಲೆ ಏರಿಕೆಗೆ ಜನಾಕ್ರೋಶ ವ್ಯಕ್ತವಾಗುತ್ತಿಲ್ಲ: ರಮೇಶ್ ಕುಮಾರ್ ಅಸಮಾಧಾನ

ಬೆಲೆ ಏರಿಕೆ ಕುರಿತು ವಿಧಾನಸಭಾ ಕಲಾಪದ ನಾಲ್ಕನೇ ದಿನವೂ ಚರ್ಚೆ ಮುಂದುವರಿಯಿತು. ಚರ್ಚೆಯಲ್ಲಿ ಪಾಲ್ಗೊಂಡ ಕಾಂಗ್ರೆಸ್ ಶಾಸಕ ರಮೇಶ್ ಕುಮಾರ್, ಬೆಲೆ ಏರಿಕೆ ಯಾವುದಕ್ಕೆ ಆಗಿದೆ, ಯಾವ ವಸ್ತುಗಳ ಬೆಲೆ ಏರಿಕೆ ಆಗಿದೆ ಎಂಬುದರ ಬಗ್ಗೆ ಹೆಚ್ಚಿನ ಮಂದಿಗೆ ಗಮನವೇ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ರಮೇಶ್ ಕುಮಾರ್
ರಮೇಶ್ ಕುಮಾರ್

ಬೆಂಗಳೂರು: ಬೆಲೆ ಏರಿಕೆ ಕುರಿತು ವಿಧಾನಸಭಾ ಕಲಾಪದ ನಾಲ್ಕನೇ ದಿನವೂ ಚರ್ಚೆ ಮುಂದುವರಿಯಿತು. ಚರ್ಚೆಯಲ್ಲಿ ಪಾಲ್ಗೊಂಡ ಕಾಂಗ್ರೆಸ್ ಶಾಸಕ ರಮೇಶ್ ಕುಮಾರ್, ಬೆಲೆ ಏರಿಕೆ ಯಾವುದಕ್ಕೆ ಆಗಿದೆ, ಯಾವ ವಸ್ತುಗಳ ಬೆಲೆ ಏರಿಕೆ ಆಗಿದೆ ಎಂಬುದರ ಬಗ್ಗೆ ಹೆಚ್ಚಿನ ಮಂದಿಗೆ ಗಮನವೇ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಬೆಲೆ ಏರಿಕೆಗೆ ಸಿಲುಕಿರುವ ಜನರು ಇಲ್ಲಿ ಕಡಿಮೆಯಿದ್ದಾರೆ. ಹಿಂದೆ ಬೆಲೆ ಏರಿಕೆ ಬಗ್ಗೆ ‌ಮಾತನಾಡಿದ್ದರೆ ಜನ ಗಮನಿಸುತ್ತಿದ್ದರು. ಆಡಳಿತ ಹಾಗೂ ವಿರೋಧ ಪಕ್ಷದ ಸದಸ್ಯರ ಆಕ್ರೋಶ ಸಹಜವಾಗಿ ಉಕ್ಕಿ ಬರುತ್ತಿತ್ತು. ಆದರೆ ಈಗ ಆ ರೀತಿಯ ವ್ಯವಸ್ಥೆ ರಾಜಕೀಯ ಪಕ್ಷಗಳ ಮಧ್ಯೆ ಇಲ್ಲ ಎಂದರು.

ಈ ಹಿಂದೆ ಬೆಂಗಳೂರಿನಲ್ಲಿ ಸೈಕಲ್ ಸವಾರಿಗೆ ನಾಲ್ಕನೆ ತೆರಿಗೆ ಹಾಕಲಾಗಿತ್ತು. ಇದರ ವಿರುದ್ಧ 1962ರಲ್ಲಿ ಆಂದೋಲನವೇ ಆಗಿತ್ತು. 1980ರಲ್ಲಿ ಹೊರ ರೋಗಿಗಳಿಗೆ ಒಂದು ರೂಪಾಯಿ ಮಾಡಲಾಯಿತು. ಇದರ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಈಗ ಅಂತಹ ‌ಪರಿಸ್ಥಿತಿ ಇಲ್ಲ. ಪ್ರತಿ ದಿನ ಬೆಲೆ ಏರಿಕೆ ಆಗುತ್ತಲೇ ಇದೆ. ಆದರೆ ನಮ್ಮ ಗಮನಕ್ಕೆ ಬಂದಿಲ್ಲ. ಬೆಲೆ ಏರಿಕೆ ವಿರುದ್ಧ ಹಿಂದೆ ಇದ್ದ ಜನಾಕ್ರೋಶ ಈಗ ಇಲ್ಲದಂತಾಗಿದೆ ಎಂದು ಜನರ ಮೌನದ ಬಗ್ಗೆ ರಮೇಶ್ ಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು.

ಬೆಂಗಳೂರಿನಲ್ಲಿ ಕಲ್ಯಾಣ ಮಂಟಪಕ್ಕೆ ಎರಡು ದಿನ ಮದುವೆಗೆ ನಾಲ್ಕೈದು ಲಕ್ಷ ರೂಪಾಯಿ ಖರ್ಚಾಗುತ್ತದೆ. ಅಲ್ಲಿ ವಿಶೇಷ ಮದುವೆ ಆಗುತ್ತಾ? ಇದನ್ನು ಯಾರು ಮಾಡಿದರು? ನಾವೆಲ್ಲ ಇದಕ್ಕೆ ಕಾರಣ. ನಾವು ಪ್ಯಾಲೇಸ್ ಬಿಟ್ಟು ಬೇರೆ ಕಡೆ ಮದುವೆ ಮಾಡಿದರೆ ಮನೆತನಕ್ಕೆ ಗೌರವ ಇಲ್ಲ ಎಂಬ ಭಾವನೆಯಿಂದ ಪ್ಯಾಲೇಸ್, ದೊಡ್ಡ ದೊಡ್ಡ ಕಲ್ಯಾಣಮಂಟಪಗಳಲ್ಲಿ ಮದುವೆ ಮಾಡಲು ಆರಂಭಿಸಿದೆವು ಎನ್ನುವ ಮೂಲಕ ರಾಜಕಾರಣಿಗಳ, ಶ್ರೀಮಂತರ ಮದುವೆಯನ್ನು ರಮೇಶ್ ಕುಮಾರ್ ಉಲ್ಲೇಖಿಸಿದರು.

ಇನ್ನು ಮಠ ಮಾನ್ಯಗಳ ಸ್ವಾಮೀಜಿಗಳ ಬೆಲೆಯೂ ಏರುತ್ತಿದೆ. ಹಿಂದೆ ಭಕ್ತಾದಿಗಳು ಅಕ್ಕಿ, ಬೇಳೆ, ಧಾನ್ಯಗಳನ್ನು ನೀಡುತ್ತಿದ್ದರು. ಈಗ ಕಾರುಗಳನ್ನು ನೀಡುತ್ತಿರುವವರು ಹೆಚ್ಚಿದ್ದಾರೆ ಎಂದು ವ್ಯಂಗ್ಯಭರಿತ ದನಿಯಲ್ಲಿ ಅಕ್ರೋಶ ಹೊರಹಾಕಿದರು.

ಬೆಲೆ ಏರಿಕೆ ಮೇಲೆ ಸರ್ಕಾರದ ನಿಯಂತ್ರಣವಿಲ್ಲ:
ಬೆಲೆ ಏರಿಕೆಯ ಮೇಲೆ ಸರ್ಕಾರದ ನಿಯಂತ್ರಣವಿಲ್ಲ. ತಪ್ಪು ಮಾಡುವವರಿಗೆ ಶಾಸನದ ಭಯವಿಲ್ಲದಂತಾಗಿದೆ ಎಂದು ಶಾಸಕ ರಮೇಶ್ ಕುಮಾರ್ ಕಳವಳ ವ್ಯಕ್ತಪಡಿಸಿದ್ದಾರೆ.

ವಿಧಾನಸಭೆಯಲ್ಲಿ ನಾಲ್ಕನೇ ದಿನವೂ ಬೆಲೆ ಏರಿಕೆ ಚರ್ಚೆ ಮುಂದುವರಿಯಿತು. ಈ ವೇಳೆ ಮಾತನಾಡಿದ ಮಾಜಿ ಸ್ಪೀಕರ್ ರಮೇಶ್ ಕುಮಾರ್, ಗೌರಿ, ಗಣೇಶ ಹಬ್ಬದ ಸಂದರ್ಭದಲ್ಲಿ ಊರಿಗೆ ಹೋಗುವವರ ಸಂಖ್ಯೆ ಹೆಚ್ಚಿದ್ದರೆ, ಕೆಎಸ್ ಆರ್ ಟಿಸಿ ಬಸ್ ಗಳ ಸಂಖ್ಯೆ ಕಡಿಮೆಯಿತ್ತು. ಹೀಗಾಗಿ ಬೇರೆ ಬಸ್ ಗಳಲ್ಲಿ ಟಿಕೆಟ್ ದರ ವಿಮಾನ ಪ್ರಯಾನ ದರಕ್ಕಿಂತಲೂ ಹೆಚ್ಚಿತ್ತು. ಇದರ ಬಗ್ಗೆ ಕೇಳುವವರೇ ಇಲ್ಲವಾಗಿದ್ದರು. ಈ ರೀತಿಯಲ್ಲಿಯೂ ಸಾರ್ವಜನಿಕರು ಬೆಲೆ ಏರಿಕೆ ಬಿಸಿ ಅನುಭವಿಸುತ್ತಿದ್ದಾರೆ ಎಂದು ಹೇಳಿದರು.

ಪಂಚತಾರಾ ಹೋಟೆಲ್ ಗಳಲ್ಲಿ ತ್ರಿತಾರಾ ಹೋಟೆಲ್ ಗಳಲ್ಲಿ ಊಟ, ತಿಂಡಿ, ಪಾನೀಯದ ಬೆಲೆ ಎಷ್ಟಿದೆ ಎಂಬುದರ ಬಗ್ಗೆ ಸರ್ಕಾರ ಗಮನ ಹರಿಸಿದೆಯೇ ಎಂದು ಪ್ರಶ್ನಿಸಿದ ರಮೇಶ್ ಕುಮಾರ್, ಶುದ್ಧ ಕುಡಿಯುವ ನೀರನ್ನು ಎಲ್ಲರಿಗೂ ನೀಡಲು ಆಗಿದೆಯೇ? ಆಗಿಲ್ಲ. ಆದರೆ ಬೇಕಾದಷ್ಟು ಪೆಟ್ರೋಲ್ ಬಂಕ್ ಗಳಿವೆ. ಒಟ್ಟಾರೆ ದೇಶ ಡಂಪಿಂಗ್ ಯಾರ್ಡ್ ಆಗುತ್ತಿದೆ ಎಂದು ಖೇದ ವ್ಯಕ್ತಪಡಿಸಿದರು.

ಬೆಲೆ ಏರಿಕೆಯ ಪರಿಣಾಮ ಮದುವೆ, ಮುಂಜಿ, ಔಷಧ ಶಿಕ್ಷಣ ಎಲ್ಲದರ ಮೇಲೂ ಆಗುತ್ತಿದೆ. ಯಾವುದಕ್ಕೆ ಆದ್ಯತೆ ನೀಡಬೇಕು, ಮೌಲ್ಯ ಇರಬೇಕು ಎಂಬುದನ್ನು ತಿಳಿಯದಿದ್ದಾಗ ಸಾಮಾನ್ಯರು ಬೆಲೆ ಏರಿಕೆಯ ಬಿಸಿ ಅನುಭವಿಸಬೇಕಾಗುತ್ತದೆ. ಜನೋಪಯೋಗಿ ಸಂಸ್ಥೆಗಳು ಖಾಸಗೀಕರಣಗೊಂಡಾಗ ಸಹಜವಾಗಿಯೇ ಬೆಲೆ ಏರಿಕೆಯಾಗುತ್ತದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com