ಬೆಂಗಳೂರು: ಅಪಾರ್ಟ್ ಮೆಂಟಿನಲ್ಲಿ ಸಿಲಿಂಡರ್ ಸ್ಫೋಟದಿಂದ ಅಗ್ನಿ ಅವಘಡ ಸಂಭವಿಸಿಲ್ಲ; ನಿಖರ ಕಾರಣ ಪತ್ತಗೆ ಎಫ್ ಎಸ್ ಎಲ್ ಪರಿಶೀಲನೆ
ನಗರದ ಬಿಟಿಎಂ ಲೇ ಔಟ್ ನ ದೇವರ ಚಿಕ್ಕನಹಳ್ಳಿಯಲ್ಲಿರುವ ಆಶ್ರಿತ್ ಅಪಾರ್ಟ್ ಮೆಂಟ್ ನ 210ನೇ ಫ್ಲ್ಯಾಟ್ ನಲ್ಲಿ ಬೆಂಕಿ ಕಾಣಿಸಿಕೊಂಡು ತನ್ನ ಕೆನ್ನಾಲಿಗೆಯನ್ನು ಚಾಚಿ ತಾಯಿ ಮತ್ತು ಮಗಳು ಸಜೀವ ದಹನವಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ವಿಧಿ ವಿಜ್ಞಾನ ಪ್ರಯೋಗಾಲಯ (FSL) ತಂಡ ಸ್ಥಳಕ್ಕೆ ಆಗಮಿಸಿದೆ.
Published: 22nd September 2021 11:55 AM | Last Updated: 22nd September 2021 01:24 PM | A+A A-

ಅಪಾರ್ಟ್ ಮೆಂಟಿನಲ್ಲಿ ಬೆಂಕಿ ಹೊತ್ತಿ ಉರಿದು ಅಗ್ನಿಶಾಮಕ ದಳ ನಂದಿಸಿದ ನಂತರದ ದೃಶ್ಯ
ಬೆಂಗಳೂರು: ನಗರದ ಬಿಟಿಎಂ ಲೇ ಔಟ್ ನ ದೇವರ ಚಿಕ್ಕನಹಳ್ಳಿಯಲ್ಲಿರುವ ಆಶ್ರಿತ್ ಅಪಾರ್ಟ್ ಮೆಂಟ್ ನ 210ನೇ ಫ್ಲ್ಯಾಟ್ ನಲ್ಲಿ ಬೆಂಕಿ ಕಾಣಿಸಿಕೊಂಡು ತನ್ನ ಕೆನ್ನಾಲಿಗೆಯನ್ನು ಚಾಚಿ ಮನೆಯೊಳಗಿದ್ದ ತಾಯಿ ಮತ್ತು ಮಗಳು ಸಜೀವ ದಹನವಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ವಿಧಿ ವಿಜ್ಞಾನ ಪ್ರಯೋಗಾಲಯ(FSL) ತಂಡ ಸ್ಥಳಕ್ಕೆ ಆಗಮಿಸಿದೆ.
ಅಗ್ನಿ ದುರಂತಕ್ಕೆ ಕಾರಣವೇನೆಂದು ಪರಿಶೀಲಿಸಲು ವಿಧಿವಿಜ್ಞಾನ ಪ್ರಯೋಗಾಲಯ ತಂಡ ಆಗಮಿಸಿ ಹುಡುಕಾಟ-ಪರಿಶೀಲನೆ ಮಾಡುತ್ತಿದೆ. ಎಫ್ ಎಸ್ ಎಲ್ ತಂಡದೊಂದಿಗೆ ಅಗ್ನಿಶಾಮಕ ದಳ ಕೂಡ ಸ್ಥಳದಲ್ಲಿದೆ. ಸದ್ಯ ಅಪಾರ್ಟ್ ಮೆಂಟಿನ ಅಕ್ಕಪಕ್ಕದ ನಿವಾಸಿಗಳನ್ನು ಸ್ಥಳಾಂತರ ಮಾಡಲಾಗಿದ್ದು ಅಪಾರ್ಟ್ ಮೆಂಟಿನ ಸ್ಥಿತಿ ಸಹಜ ಸ್ಥಿತಿಗೆ ಬರುವವರೆಗೆ ಮನೆಗಳಿಗೆ ಬಾರದಂತೆ ಸೂಚನೆ ನೀಡಲಾಗಿದೆ.
ಇದನ್ನೂ ಓದಿ: ಬೆಂಗಳೂರು: ಸಿಲಿಂಡರ್ ಸ್ಫೋಟದಿಂದ ಆಶ್ರಿತ್ ಅಪಾರ್ಟ್ ಮೆಂಟ್ ನಲ್ಲಿ ಬೆಂಕಿ; ಇಬ್ಬರು ಸಜೀವದಹನ
ಮನೆಯೊಳಗಿದ್ದ ಎರಡು ಸಿಲಿಂಡರ್ ಗಳು ಹಾಗೆಯೇ ಇದ್ದು, ಸಿಲೆಂಡರ್ ಸ್ಫೋಟದಿಂದ ಬೆಂಕಿ ಕಾಣಿಸಿಕೊಂಡಿದ್ದು ಅಲ್ಲ ಎಂದು ಹೇಳಲಾಗುತ್ತಿದೆ. ಹಾಗಾದರೆ ಮನೆಯೊಳಗಿದ್ದ ಯುಪಿಎಸ್ ಬ್ಯಾಟರಿ, ಪಿಒಪಿ, ಫರ್ನಿಚರ್, ಫ್ರಿಜ್, ಟಿವಿಯಿಂದಲೇ, ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಲೇ ಎಂದು ಸ್ಥಳಕ್ಕೆ ವಿಧಿವಿಜ್ಞಾನ ಪ್ರಯೋಗಾಲಯ ತಂಡದ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
ನಿನ್ನೆ ಆಗಿದ್ದೇನು?: ಮೊನ್ನೆಯಷ್ಟೇ ಅಮೆರಿಕದಿಂದ ಬಂದಿದ್ದ ತಾಯಿ-ತಂದೆ ಮಗಳ ಮನೆಗೆ ಬಂದಿದ್ದರು. ಬೆಂಕಿ ದುರಂತ ನಡೆಯುವಾಗ ತಾಯಿ-ಮಗಳು ಇಬ್ಬರೇ ಇದ್ದರು. ನಿನ್ನೆ ಸಂಜೆ 4.20ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಾಗ ತಾಯಿ ಬಾಲ್ಕನಿಗೆ ಬಂದು ಕುಳಿತುಕೊಂಡರೆ ಮಗಳು ಫೋನ್ ನಲ್ಲಿ ಪಕ್ಕದ ಫ್ಲ್ಯಾಟ್ ನಲ್ಲಿದ್ದ ತಮ್ಮ ಪತಿ ಭೀಮ್ ಸೇನ್ ಮತ್ತು ಅಳಿಯನಿಗೆ ಬೆಂಕಿಯಲ್ಲಿ ಹೊತ್ತಿ ಉರಿಯುತ್ತಿದ್ದೇವೆ, ಬಂದು ಕಾಪಾಡಿ ಎಂದು ಕಣ್ಣೀರಿಡುತ್ತಲೇ ಇದ್ದರು. ಕೇವಲ 15-20 ನಿಮಿಷಗಳಲ್ಲಿ ಈ ದುರ್ಘಟನೆ ನಡೆದುಹೋಗಿದೆ ಎಂದು ಅಳಿಯ ಸಂದೀಪ್ ಮಾಧ್ಯಮಗಳಿಗೆ ವಿವರಿಸಿದ್ದಾರೆ.
ಬೆಂಕಿಯ ಕೆನ್ನಾಲಿಗೆಗೆ ತಾಯಿ-ಮಗಳಿಗೆ ಮನೆಯಿಂದ ಹೊರಗೆ ಬರಲು ಸಾಧ್ಯವಾಗಿಲ್ಲ, ಇತ್ತ ಬಾಲ್ಕನಿಯಲ್ಲಿ ಗ್ರಿಲ್ ಹಾಕಿಸಿದ್ದರಿಂದ ಅಲ್ಲಿಂದಲೂ ಹೊರಬರಲಾರದೆ ಬೆಂಕಿಗೆ ಸಜೀವ ದಹನವಾಗಿ ಹೋಗಿದ್ದಾರೆ. ಕೆಳಗೆ 80ರಿಂದ 100 ಮಂದಿ ನಿಂತು ನೋಡುತ್ತಿದ್ದವರಿಗೆ ಏನೂ ಮಾಡಲು ಸಾಧ್ಯವಾಗಿಲ್ಲ
ಸಿಲಿಂಡರ್ ಸ್ಫೋಟದಿಂದ ಅಲ್ಲ: ಪ್ರಾಥಮಿಕ ತನಿಖೆಯಿಂದ ಸಿಲಿಂಡರ್ ಸ್ಫೋಟದಿಂದ ಬೆಂಕಿ ಹತ್ತಿ ಉರಿದಿದ್ದಲ್ಲ ಎಂದು ಗೊತ್ತಾಗಿದ್ದು ಪೊಲೀಸರು ಅಸಹಜ ಸಾವು ಎಂದು ಕೇಸು ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.
ಅಪಾರ್ಟ್ಮೆಂಟ್ನಲ್ಲಿ ಅಗ್ನಿ ಅವಘಡ ಕೇಸ್ ಬಗ್ಗೆ ಅಗ್ನಿಶಾಮಕ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದೇನೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ. ಮನೆಯಲ್ಲಿ ಇದ್ದ ಎರಡು ಸಿಲಿಂಡರ್ ಬ್ಲಾಸ್ಟ್ ಆಗಿಲ್ಲ. ಎಲ್ಲಿ ಲೋಪ ಆಗಿದೆ ಅಂತ ಪತ್ತೆ ಹಚ್ಚುವ ಕೆಲಸ ಆಗುತ್ತಿದೆ. ಸರಿಯಾದ ಸಂರಕ್ಷತಾ ಕ್ರಮ ಕೈಗೊಳ್ಳದಿರುವವರಿಗೆ ಕಟ್ಟಡ ನಿರ್ಮಾಣಕ್ಕೆ ಅನುಮತಿ ಕೊಡಬಾರದು. ಈ ಪ್ರಕರಣದಲ್ಲಿ ಯಾರ ತಪ್ಪಿದೆ ಎಂದು ಪತ್ತೆ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಬೆಂಗಳೂರು ಅಗ್ನಿ ಅವಘಡ: ಅಮೆರಿಕದಿಂದ ಬಂದ 24 ಗಂಟೆಗಳಲ್ಲೇ ಘನಘೋರ ದುರಂತ..!
ಅಪಾರ್ಟ್ ಮೆಂಟ್ ಗಳಲ್ಲಿ ಇನ್ನಷ್ಟು ಸುರಕ್ಷಿತ ಕ್ರಮಗಳನ್ನು ಅಳವಡಿಸಿಕೊಳ್ಳುವ ಬಗ್ಗೆ ಚಿಂತನೆ ನಡೆಸುವಂತೆ ಈ ದುರ್ಘಟನೆ ನಡೆದಿದೆ ಎಂದು ಹೇಳಿದರು. ಇಂತಹ ಪರಿಸ್ಥಿತಿಯನ್ನು ನಿಭಾಯಿಸಲು ಅಗ್ನಿಶಾಮಕ ದಳವನ್ನು ಮತ್ತಷ್ಟು ಆಧುನೀಕರಣಗೊಳಿಸಿ ತಂತ್ರಜ್ಞಾನ ಹೆಚ್ಚಿಸಲು ಮುಂದಾಗಿದ್ದೇವೆ ಎಂದು ತಿಳಿಸಿದರು.