ಅನ್ನಪೂರ್ಣೇಶ್ವರಿ ನಗರದಲ್ಲಿ ಪತ್ನಿ ಕೊಲೆ ಪ್ರಕರಣ: ಸಿನಿಮೀಯ ಶೈಲಿಯಲ್ಲಿ ಕೊಲೆಗೆ ಸಂಚು!
ಇತ್ತೀಚೆಗೆ ಅನ್ನಪೂರ್ಣೇಶ್ವರಿ ನಗರದಲ್ಲಿ ಪತಿಯೇ ಪತ್ನಿಯನ್ನು ಕೊಲೆ ಮಾಡಿರುವ ಪ್ರಕರಣದ ಆರೋಪಿ ಕಾಂತರಾಜ್ನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ವೇಳೆ ಸ್ಫೋಟಕ ಮಾಹಿತಿ ಹೊರಬಿದ್ದಿದೆ.
Published: 25th September 2021 04:30 PM | Last Updated: 25th September 2021 05:35 PM | A+A A-

ಆರೋಪಿ ಕಾಂತರಾಜ್ ಮತ್ತು ಹತ್ಯೆಯಾದ ಆತನ ಪತ್ನಿ ರೂಪಾ
ಬೆಂಗಳೂರು: ಇತ್ತೀಚೆಗೆ ಅನ್ನಪೂರ್ಣೇಶ್ವರಿ ನಗರದಲ್ಲಿ ಪತಿಯೇ ಪತ್ನಿಯನ್ನು ಕೊಲೆ ಮಾಡಿರುವ ಪ್ರಕರಣದ ಆರೋಪಿ ಕಾಂತರಾಜ್ನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ವೇಳೆ ಸ್ಫೋಟಕ ಮಾಹಿತಿ ಹೊರಬಿದ್ದಿದೆ.
ಫೈನಾನ್ಸ್ ಮತ್ತು ರಿಯಲ್ ಎಸ್ಟೇಟ್ ಬ್ರೋಕರ್ ಆಗಿ ಕೆಲಸ ಮಾಡುತ್ತಿದ್ದ ಕಾಂತರಾಜ್, ಸೆ.22ರ ಸಂಜೆ ಪತ್ನಿ ರೂಪಾ ಅವರನ್ನು ಕತ್ತು ಸೀಳಿ ಕೊಲೆ ಮಾಡಿ ಪರಾರಿಯಾಗಿದ್ದ.
ಪತ್ನಿ ರೂಪಾ, ಶೀಲ ಶಂಕಿಸಿ ಖಿನ್ನತೆಗೊಳಗಾಗಿದ್ದ ಆರೋಪಿ ಕಾಂತರಾಜ್, 15 ದಿನಗಳ ಹಿಂದೆಯೇ ಕನ್ನಡದ ಸೂಪರ್ ಹಿಟ್ ಚಿತ್ರಗಳಾದ ಬಾ ನಲ್ಲೆ ಮಧುಚಂದ್ರಕೆ ಹಾಗೂ ಯುಗಪುರುಷ ಚಿತ್ರದಂತೆ ಪತ್ನಿಯನ್ನು ಕೊಲ್ಲಲ್ಲು ನಿರ್ಧರಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಹಾಡಹಗಲೇ ವ್ಯಕ್ತಿಯ ಬರ್ಬರ ಕೊಲೆ
ಚಿಕ್ಕಮ್ಮನ ಮಗನೊಂದಿಗೆ ರೂಪಾ ಅನೈತಿಕ ಸಂಬಂಧ ಇಟ್ಟುಕೊಂಡಿರುವ ಬಗ್ಗೆ ಶಂಕಿಸುತ್ತಿದ್ದ ಕಾಂತರಾಜ್, ಇನ್ನಿಬ್ಬರನ್ನು ಕೊಲೆ ಮಾಡಲು ಸಂಚು ರೂಪಿಸಿದ್ದ ಸಂಗತಿ ತಿಳಿದುಬಂದಿದೆ. ಇನ್ನಿಬ್ಬರನ್ನು ಹತ್ಯೆ ಮಾಡಬೇಕಾಗಿದೆ, ನಂತರ ತಾನೂ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ, ಬಿಟ್ಬಿಡಿ ಸರ್ ಎಂದು ಪೊಲೀಸರ ಬಳಿ ಆತ ಕೇಳಿಕೊಂಡಿದ್ದ ಎನ್ನಲಾಗಿದೆ.
ಪತ್ನಿ ರೂಪಾಳನ್ನು ಕೊಲೆ ಮಾಡಬೇಕು ಎಂದು ನಿರ್ಧರಿಸಿದ್ದ ಟ್ರಿಪ್ ಹೋಗೋಣ ಎಂದು ಪತ್ನಿಯೊಂದಿಗೆ ಜೋಗ ಜಲಪಾತಕ್ಕೆ ತೆರಳಿದ್ದ ಕಾಂತರಾಜ್ ಜಲಪಾತ ತೋರಿಸುವ ನೆಪದಲ್ಲಿ ಪತ್ನಿಯನ್ನು ಎತ್ತರಕ್ಕೆ ಕರೆದುಕೊಂಡು ಹೋಗಿದ್ದಾನೆ. ಅಲ್ಲದೇ ಅಲ್ಲಿಂದ ತಳ್ಳಿ ಕೊಲೆ ಮಾಡಲು ಸಂಚೂ ರೂಪಿಸಿದ್ದ. ಆದರೆ, ಪತ್ನಿ ಎತ್ತರದ ಸ್ಥಳದಲ್ಲಿ ತಲೆ ತಿರುಗುತ್ತದೆ ಎಂದು ವಾಪಸ್ಸಾಗಿದ್ದರು. ಮೂರು ದಿನ ಕೊಲೆ ಮಾಡಲು ಯತ್ನಿಸಿದ್ದರು, ಸಫಲವಾಗಲಿಲ್ಲ. ಬಳಿಕ ಮತ್ತೊಂದು ಪ್ಲಾನ್ ಮಾಡಿದ್ದ ಕಾಂತರಾಜ್ ಯುಗಪುರುಷ ಸಿನಿಮಾದಂತೆ ಕಾರಿನಿಂದ ಗುದ್ದಲು ಯತ್ನಿಸಿದ್ದ. ಆದರೆ, ಸುತ್ತಲೂ ಜನರಿದ್ದ ಕಾರಣ ಅದು ಕೂಡ ಸಾಧ್ಯವಾಗಿರಲಿಲ್ಲ.
ಕೊನೆಗೆ ಕೋಪದಲ್ಲಿ ಕಾಂತರಾಜ್ ಮನೆಗೆ ಬಂದು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಕೊಲೆ ನಂತರ ಮನೆಯ ಬಾಗಿಲು ಹಾಕಿಕೊಂಡು ಪರಾರಿಯಾಗಿದ್ದ ಎಂದು ಆರೋಪಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ ಎಂದು ಅನ್ನಪೂರ್ಣೇಶ್ವರಿ ನಗರ ಪೊಲೀಸರು ತಿಳಿಸಿದ್ದಾರೆ.