ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ವಾಟ್ಸಪ್ ಸ್ಟೇಟಸ್ ವಿಚಾರ: ಮಾರಕಾಸ್ತ್ರಗಳಿಂದ ಪುತ್ರನ ಮೇಲೆ ಹಲ್ಲೆ, ಜೀವದ ಹಂಗು ತೊರೆದು ಮಗನ ರಕ್ಷಿಸಿದ 45 ವರ್ಷದ ವ್ಯಕ್ತಿ

ವಾಟ್ಸಪ್ ಸ್ಟೇಟಸ್ ಬದಲಿಸುವ ಕ್ಷುಲ್ಲಕ ವಿಚಾರಕ್ಕೆ ಮನೆಗೆ ನುಗ್ಗಿ ಮಗನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಲು ಬಂದ ದುಷ್ಕರ್ಮಿಗಳ ಗುಂಪಿನೊಂದಿಗೆ 45 ವರ್ಷದ ವ್ಯಕ್ತಿಯೊಬ್ಬರು ಸೆಣಸಾಡಿ ಪುತ್ರನ ಜೀವ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬೆಂಗಳೂರು: ವಾಟ್ಸಪ್ ಸ್ಟೇಟಸ್ ಬದಲಿಸುವ ಕ್ಷುಲ್ಲಕ ವಿಚಾರಕ್ಕೆ ಮನೆಗೆ ನುಗ್ಗಿ ಮಗನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಲು ಬಂದ ದುಷ್ಕರ್ಮಿಗಳ ಗುಂಪಿನೊಂದಿಗೆ 45 ವರ್ಷದ ವ್ಯಕ್ತಿಯೊಬ್ಬರು ಸೆಣಸಾಡಿ ಪುತ್ರನ ಜೀವ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬೆಂಗಳೂರಿನ ಬ್ಯಾಡರಹಳ್ಳಿಯ ಮಹದೇಶ್ವರ ನಗರದಲ್ಲಿ ಈ ಘಟನೆ ನಡೆದಿದ್ದು, ಏಕಾಏಕಿ ಕೆಲ ದುಷ್ಕರ್ಮಿಗಳು ಮನೆಗೇ ನುಗ್ಗಿ ಪುತ್ರ ಅಕ್ಷಯ್ (18)ನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆಗೆ ಮುಂದಾದಾಗ ದೃತಿಗೆಡದ 45 ವರ್ಷದ ಆನಂದ್ ರಾವ್ ದುಷ್ಕರ್ಮಿಗಳ ವಿರುದ್ಧ ಸೆಣಸಾಡಿದ್ದಾರೆ. ಅಲ್ಲದೆ ಪುತ್ರ ಬಲಿಯಾಗುವುದನ್ನು ತಡೆದಿದ್ದಾರೆ. ತಂದೆಯ ಸಾಹಸಕ್ಕೆ ಇದೀಗ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಅಂತೆಯೇ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲ್ಲೆ ಮಾಡಿದ್ದ ಆರೋಪಗಳಾದ ಹರ್ಷ, ಸುಮಂತ್, ಗಣೇಶ್ ಮತ್ತು ಶ್ರೀಕಾಂತ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಏನಿದು ಘಟನೆ?
ಪೊಲೀಸ್ ಮೂಲಗಳ ಪ್ರಕಾರ ಆಗಸ್ಟ್ 15 ರಂದು ಬ್ಯಾಡರಹಳ್ಳಿಯ ಮಹದೇಶ್ವರ ನಗರದಲ್ಲಿ ಕ್ರಿಕೆಟ್ ಆಟದ ವೇಳೆ ವೃತ್ತಿಯಲ್ಲಿ ಫುಡ್ ಡೆಲಿವರಿ ಎಕ್ಸಿಕ್ಯೂಟಿವ್ ಆಗಿರುವ ಹಲ್ಲೆಗೊಳಗಾದ ಅಕ್ಷಯ್ ಆರೋಪಿಗಳಾದ ಹರ್ಷ, ಸುಮಂತ್, ಗಣೇಶ್ ಮತ್ತು ಶ್ರೀಕಾಂತ್ ರೊಂದಿಗೆ ಜಗಳ ಮಾಡಿಕೊಂಡಿದ್ದ. ಬಳಿಕ ಅಕ್ಷಯ್ ವಾಟ್ಸಾಪ್ ಸ್ಟೇಟಸ್‌ನಲ್ಲಿ ಅವರು 'ಬಾಸ್' ಎಂಬ ಶೀರ್ಷಿಕೆಯೊಂದಿಗೆ ತಮ್ಮ ಫೋಟೋವನ್ನು ಹಾಕಿರುವುದನ್ನು ಆರೋಪಿಗಳು ಗಮನಿಸಿದ್ದರು. ಗಣೇಶ್ ಮತ್ತು ಸುಮಂತ್ ಜಗಳದ ಸಮಯದಲ್ಲಿ ಅವಮಾನದ ಸೇಡು ತೀರಿಸಿಕೊಳ್ಳಲು ಬಯಸಿದ್ದರು.

ಒಂದು ದಿನದ ನಂತರ ದಾರಿಯಲ್ಲಿ ಸಿಕ್ಕ ಅಕ್ಷಯ್ ಗೆ ತನ್ನ ವಾಟ್ಸಪ್ ಸ್ಟೇಟಸ್ ಬದಲಿಸುವಂತೆ ಸೂಚಿಸಿದ್ದರು. ಆದರೆ ಇದನ್ನು ನಿರಾಕರಿಸಿದ ಅಕ್ಷಯ್ ಮನೆಗೆ ಹೋದ. ಆತನನ್ನೇ ಹಿಂಬಾಲಿಸಿದ್ದ ಆರೋಪಿಗಳು ಮನೆಯನ್ನು ನೋಡಿಕೊಂಡು ತಮ್ಮ ಇತರೆ ಸ್ನೇಹಿತರೊಂದಿಗೆ ಮಾರಕಾಸ್ತ್ರಗಳ ಸಹಿತ ಸಮೇತ ಆಗಮಿಸಿ ಜಗಳ ತೆಗೆದಿದ್ದಾರೆ.  ಅಲ್ಲದೆ ನಾಲ್ವರು ಆರೋಪಿಗಳು ಏಕಾಏಕಿ ನುಗ್ಗಿ ಮಾರಕಾಯುಧಗಳಿಂದ ಅಕ್ಷಯ್ ಮೇಲೆ ಹಲ್ಲೆ ನಡೆಸಿದ್ದಾರೆ. ಮಗನ ಕಿರುಚಾಟವನ್ನು ಕೇಳಿದ ಅಕ್ಷಯ್ ತಂದೆ ಆನಂದ್ ರಾವ್ ಅವರು ತಮ್ಮ ಕೊಠಡಿಯಿಂದ ಹೊರಬಂದು ದುಷ್ಕರ್ಮಿಗಳೊಂದಿಗೆ ಸೆಣಸಾಡಿದ್ದಾರೆ.

ತಾವೂ ಕೂಡ ಮಚ್ಚನ್ನು ಎತ್ತಿಕೊಂಡು ಅವರನ್ನು ಮನೆಯಿಂದ ಹೊರಕ್ಕೆ ಓಡಿಸಿ ಮಗನ ಪ್ರಾಣ ಉಳಿಸಿದ್ದಾರೆ. ನೆರೆಹೊರೆಯವರು ಘಟನೆಯ ವಿಡಿಯೋ ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದು, ಇದು ವ್ಯಾಪಕ ವೈರಲ್ ಆಗಿದೆ.

ಏತನ್ಮಧ್ಯೆ, ಘಟನೆಯ ಬಗ್ಗೆ ಎಚ್ಚೆತ್ತ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಸಂತ್ರಸ್ತರ ಹೇಳಿಕೆ ಆಧರಿಸಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರಸ್ತುತ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಅಂತೆಯೇ ಹಲ್ಲೆಗೊಳಗಾಗಿರುವ ಸಂತ್ರಸ್ಥ ಅಕ್ಷಯ್ ನನ್ನು ಆಸ್ಪತ್ರೆಗೆ ದಾಖಲಾಗಿದ್ದು, ಆವನ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ಹೇಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
 

Related Stories

No stories found.

Advertisement

X
Kannada Prabha
www.kannadaprabha.com