ಬೆಳಗಾವಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬುಧವಾರ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಭೇಟಿ ಮಾಡಿದ್ದು, ಈ ವೇಳೆ ರಾಜ್ಯದ ವಿವಿಧ ನೀರಾವರಿ ಯೋಜನೆಗಳಿಗೆ ಸಂಬಂಧಿಸಿದಂತೆ ಚರ್ಚೆ ನಡೆಸಿದರು.
ಭದ್ರಾ ಮೇಲ್ದಂಡೆ, ಕೃಷ್ಣಾ ಮೇಲ್ದಂಡೆ ಯೋಜನೆ 3ನೇ ಹಂತ, ಮೇಕೆದಾಟು ಯೋಜನೆ ಮತ್ತು ಕಳಸಾಬಂಡೂರಿ ಯೋಜನೆ ಸೇರಿದಂತೆ ರಾಜ್ಯದ ಪ್ರಮುಖ ನೀರಾವರಿ ಯೋಜನೆಗಳ ಕುರಿತು ಕೇಂದ್ರ ಸಚಿವರೊಂದಿಗೆ ಮುಖ್ಯಮಂತ್ರಿಗಳು ಮಾತುಕತೆ ನಡೆಸಿದರು.
ಯೋಜನೆಗಳನ್ನು ಕೈಗೆತ್ತಿಕೊಳ್ಳಲು ರಾಜ್ಯಕ್ಕೆ ಸಹಾಯ ಮಾಡಲು ನಿರಾಕ್ಷೇಪಣಾ ಪ್ರಮಾಣಪತ್ರ ಮತ್ತು ಕ್ಲಿಯರೆನ್ಸ್‌ಗಳನ್ನು ನೀಡುವಂತೆ ಅವರು ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರಿಗೆ ಮನವಿ ಮಾಡಿದರು.
ಇದೇ ವೇಳೆ ಕರ್ನಾಟಕದಲ್ಲಿ ಅನುಷ್ಠಾನಗೊಳ್ಳುತ್ತಿರುವ ಗ್ರಾಮೀಣ ಮನೆಗಳಿಗೆ ಪೈಪ್‌ಲೈನ್ ನೀರು ಒದಗಿಸುವ ಜಲ ಜೀವನ್ ಮಿಷನ್ (ಜೆಜೆಎಂ) ಸ್ಥಿತಿಯ ಬಗ್ಗೆ ಬೊಮ್ಮಾಯಿ ಅವರು ಶೇಖಾವತ್‌ಗೆ ಮಾಹಿತಿ ನೀಡಿದರು.
ಈ ವೇಳೆ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ, ಕರ್ನಾಟಕ ಜಲಸಂಪನ್ಮೂಲ ಸಚಿವ ಗೋವಿಂದ್ ಕಾರಜೋಳ ಮತ್ತು ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ್ ಉಪಸ್ಥಿತರಿದ್ದರು.
ಮುಖ್ಯಮಂತ್ರಿಯಾದ ನಂತರ ಬೊಮ್ಮಾಯಿ ಅವರ 13ನೇ ದೆಹಲಿ ಭೇಟಿ ಇದಾಗಿದೆ, ಗುರುವಾರ ಮೊದಲ ಹಂತದ ಚುನಾವಣೆ ನಡೆಯಲಿರುವ ಗುಜರಾತ್‌ನಲ್ಲಿ ಪ್ರಚಾರ ಕಾರ್ಯದಲ್ಲಿ ಕೇಂದ್ರದ ನಾಯಕರು ನಿರತರಾಗಿದ್ದರಿಂದ ಈ ಬಾರಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸೇರಿದಂತೆ ಪಕ್ಷದ ಪ್ರಮುಖರನ್ನು ಭೇಟಿಯಾಗಿ ಸಾಧ್ಯವಾಗಿಲ್ಲ. ಇದರಂತೆ ಸಚಿವ ಸಂಪುಟ ವಿಸ್ತರಣೆ ಕುರಿತು ಕೇಂದ್ರೀಯ ನಾಯಕರೊಂದಿಗೆ ಚರ್ಚಿಸಲು ಮುಖ್ಯಮಂತ್ರಿಗಳಿಗೆ ಸಾಧ್ಯವಾಗಿಲ್ಲ.
ದೆಹಲಿ ಭೇಟಿ ವೇಳೆ ಮುಖ್ಯಮಂತ್ರಿಗಳು ಮಹಾರಾಷ್ಟ್ರದೊಂದಿಗಿನ ರಾಜ್ಯದ ಗಡಿ ವಿವಾದದ ಕುರಿತು ರಾಜ್ಯದ ವಕೀಲ ಮುಕುಲ್ ರೋಹಟಗಿ ಅವರೊಂದಿಗೆ ಚರ್ಚೆ ನಡೆಸಿದರು.
ಈ ಪ್ರಕರಣವನ್ನು ಬುಧವಾರಕ್ಕೆ ಸುಪ್ರೀಂ ಕೋರ್ಟ್‌ನಲ್ಲಿ ಪಟ್ಟಿ ಮಾಡಲಾಗಿದ್ದರೂ, ಸಂವಿಧಾನ ಪೀಠವು ಮತ್ತೊಂದು ಪ್ರಕರಣದ ವಿಚಾರಣೆಯನ್ನು ಮುಂದುವರೆಸಿದ್ದರಿಂದ ಅದು ವಿಚಾರಣೆಗೆ ಬಂದಿಲ್ಲ ಎಂದು ಮೂಲಗಳು ತಿಳಿಸಿವೆ. ದೆಹಲಿ ಭೇಟಿ ವೇಳೆ ಮುಖ್ಯಮಂತ್ರಿಗಳು ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿದರು ಎಂದು ತಿಳಿದುಬಂದಿದೆ.
ಹಿರಿಯ ವಕೀಲ ಫಾಲಿ ಎಸ್ ನಾರಿಮನ್ ಭೇಟಿಯಾದ ಸಿಎಂ ಬೊಮ್ಮಾಯಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬುಧವಾರ ಹಿರಿಯ ವಕೀಲ ಫಾಲಿ ಎಸ್. ನಾರಿಮನ್ ಅವರನ್ನು ಭೇಟಿ ಮಾಡಿದರು.
ನಾರಿಮನ್ ಅವರು ಐದು ದಶಕಗಳಿಗೂ ಹೆಚ್ಚು ಕಾಲ ಕರ್ನಾಟಕದ ಪರ ವಕೀಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ ಮತ್ತು ನೀರಿನ ವಿಷಯದಲ್ಲಿ ರಾಜ್ಯದ ಹಿತಾಸಕ್ತಿ ಕಾಪಾಡಿದ್ದಾರೆ ಎಂದು ಬೊಮ್ಮಾಯಿ ಹೇಳಿದರು.
ಈಗ ಅವರ ಸಲಹೆಗಳು ಹೆಚ್ಚಿನ ಮೌಲ್ಯವನ್ನು ಹೊಂದಿವೆ. ರಾಮಕೃಷ್ಣ ಹೆಗಡೆ, ಸಾ.ರಾ.ಬೊಮ್ಮಾಯಿ, ಎಚ್.ಡಿ.ದೇವೇಗೌಡರಂತಹ ಮುಖ್ಯಮಂತ್ರಿಗಳ ಅವಧಿಯಲ್ಲಿ ಅವರು ಸೇವೆ ಸಲ್ಲಿಸಿದ್ದಾರೆ. “ಇದು ಕೇವಲ ಸೌಜನ್ಯದ ಭೇಟಿಯಾಗಿದೆ ಮತ್ತು ಅವರಿಗೆ ಧನ್ಯವಾದ ಹೇಳಲು ಬಂದಿದ್ದೇನೆ. ಅವರೊಂದಿಗೆ ರಾಜ್ಯದ ಗಡಿ ಅಥವಾ ನೀರಿನ ವಿವಾದದ ಬಗ್ಗೆ ಯಾವುದೇ ವಿಶೇಷ ಚರ್ಚೆ ನಡೆದಿಲ್ಲ ಎಂದು ತಿಳಿಸಿದರು.
ಈ ವೇಳೆ 94 ವರ್ಷ ವಯಸ್ಸಿನ ನಾರಿಮನ್ ಅವರು, ತಮ್ಮ ನೇತೃತ್ವದ ಕಾನೂನು ತಂಡವು ಸುಪ್ರೀಂ ಕೋರ್ಟ್ ಮತ್ತು ಅಂತರರಾಜ್ಯ ಜಲ ನ್ಯಾಯಮಂಡಳಿಗಳಲ್ಲಿ ಎದುರಿಸಿದ ಸವಾಲುಗಳನ್ನು ಸ್ಮರಿಸಿದರು.
ನಾರಿಮನ್ ಅವರು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಸಚಿವ ಎಚ್.ಕೆ.ಪಾಟೀಲ್, ಎಂ.ಬಿ.ಪಾಟೀಲ್, ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರನ್ನು ಸ್ಮರಿಸಿದರು.
ಈ ವೇಳೆ ಹಿರಿಯ ವಕೀಲ ಮೋಹನ್ ಕಾತರಕಿ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ತಾಂತ್ರಿಕ ಸಮಿತಿ ಅಧ್ಯಕ್ಷ ಅನಿಲ್ ಕುಮಾರ್ ಮರಾಳಿ ಮುಖ್ಯಮಂತ್ರಿಗಳ ಜತೆಗಿದ್ದರು.
Advertisement