ರಾಜ್ಯದಲ್ಲಿ ಹಲವು ವಿಮಾನ ನಿಲ್ದಾಣಗಳು ಹೊಸ ವರ್ಷಕ್ಕೆ ಆರಂಭ ಸಾಧ್ಯತೆ

ಸಾಂಕ್ರಾಮಿಕ ರೋಗ ಕೋವಿಡ್ ಕುರಿತು ದಿನಕಳೆಯುತ್ತಿದ್ದಂತೆ ರಾಜ್ಯದಲ್ಲಿ ಆತಂಕ ದೂರಾಗುತ್ತಿದ್ದು, ಈ ನಡುವಲ್ಲೇ ರಾಜ್ಯದಲ್ಲಿ ಹಲವು ವಿಮಾನ ನಿಲ್ದಾಣಗಳ ನಿರ್ಮಾಣ ಕಾಮಗಾರಿ ಪೂರ್ಣಗೊಂಡು ಹೊಸ ವರ್ಷಕ್ಕೆ ಆರಂಭಗೊಳ್ಳಲು ಸಜ್ಜಾಗಿವೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಸಾಂಕ್ರಾಮಿಕ ರೋಗ ಕೋವಿಡ್ ಕುರಿತು ದಿನಕಳೆಯುತ್ತಿದ್ದಂತೆ ರಾಜ್ಯದಲ್ಲಿ ಆತಂಕ ದೂರಾಗುತ್ತಿದ್ದು, ಈ ನಡುವಲ್ಲೇ ರಾಜ್ಯದಲ್ಲಿ ಹಲವು ವಿಮಾನ ನಿಲ್ದಾಣಗಳ ನಿರ್ಮಾಣ ಕಾಮಗಾರಿ ಪೂರ್ಣಗೊಂಡು ಹೊಸ ವರ್ಷಕ್ಕೆ ಆರಂಭಗೊಳ್ಳಲು ಸಜ್ಜಾಗಿವೆ.

ಶಿವಮೊಗ್ಗ ಮತ್ತು ವಿಜಯಪುರದಲ್ಲಿ ವಿಮಾನ ನಿಲ್ದಾಣಗಳ ನಿರ್ಮಾಣ ಬಹುತೇಕ ಪೂರ್ಣಗೊಂಡಿದ್ದು, 2023ರ ಹೊಸ ವರ್ಷದಂದು ಕಾರ್ಯಾರಂಭಗೊಳ್ಳಲಿವೆ ಎಂದು ತಿಳಿದುಬಂದಿದೆ. ಆದರೆ, ಹಾಸನದಲ್ಲಿ ವರ್ಷಾಂತ್ಯದ ವೇಳೆಗೆ ಆರಂಭಗೊಳ್ಳುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಈ ನವೆಂಬರ್ ತಿಂಗಳಿನಲ್ಲಿ ಔಪಚಾರಿಕವಾಗಿ ಉದ್ಘಾಟನೆಗೊಂಡ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ 2ನೇ ಟರ್ಮಿನಲ್ ನಲ್ಲಿಯೂ ದೇಶೀಯ ಸಂಚಾರಗಳು ಪ್ರಾರಂಭಗೊಳ್ಳಲಿವೆ ಎಂದು ಹೇಳಲಾಗುತ್ತಿದೆ.

ಕೊಡಗಿನಲ್ಲಿ ಹೆಲಿಪೋರ್ಟ್ ಸಿದ್ಧಗೊಳ್ಳುತ್ತಿದ್ದು, ಪೈಲಟ್‌ಗಳಿಗೆ ತರಬೇತಿ ನೀಡಲು ಎರಡು ಹೊಸ ಫ್ಲೈಯಿಂಗ್ ತರಬೇತಿ ಸಂಸ್ಥೆಗಳನ್ನು ಬೆಳಗಾವಿಯಲ್ಲಿ ಪ್ರಾರಂಭಿಸಲಾಗುತ್ತಿದೆ.

ವಾಣಿಜ್ಯ ಮತ್ತು ಕೈಗಾರಿಕೆಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ ಅವರು ಮಾತನಾಡಿ, ದೇಶದಲ್ಲಿ ಮೂರನೇ ಅತಿದೊಡ್ಡ ದೇಶೀಯ ಆಪರೇಟರ್ ಆಗಿರುವ ಬೆಂಗಳೂರು ಅತ್ಯಂತ ಪ್ರಮುಖವಾಗಿದೆ. ನಾವು ಮಂಗಳೂರು, ಮೈಸೂರು, ಹುಬ್ಬಳ್ಳಿ, ಬೆಳಗಾವಿ ಮತ್ತು ಕಲಬುರಗಿಯಲ್ಲಿ ಬಲವಾದ ಕ್ರಿಯಾತ್ಮಕ ವಿಮಾನ ನಿಲ್ದಾಣಗಳನ್ನು ಹೊಂದಿದ್ದೇವೆ ಎಂದು ಹೇಳಿದ್ದಾರೆ.

ಯಾವುದೇ ನಗರದಲ್ಲಿ ವಾಯು ಸಂಪರ್ಕದ ವಿಭಾಗವು ವ್ಯಾಪಾರ ಅವಕಾಶಗಳು, ಕೈಗಾರಿಕಾ ಬೆಳವಣಿಗೆ, ಕೃಷಿ ಸರಕುಗಳ ಮಾರುಕಟ್ಟೆ ಮತ್ತು ಪ್ರವಾಸೋದ್ಯಮಕ್ಕೆ ಸಹಾಯಕವಾಗಿದೆ ಎಂದು ತಿಳಿಸಿದ್ದಾರೆ.

ವಿಮಾನ ನಿಲ್ದಾಣಗಳು ಸಂಪೂರ್ಣವಾಗಿ ಆರಂಭಗೊಳ್ಳುವುದಕ್ಕೂ ಮುನ್ನ ರಾಜ್ಯ ಸರ್ಕಾರ ಆರಂಭಿಕ ವರ್ಷಗಳಲ್ಲಿ ಸೂಕ್ತ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳುವುದು ಬಹುಮುಖ್ಯವಾಗುತ್ತದೆ ಎಂದಿದ್ದಾರೆ.

ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಒಕ್ಕೂಟದ (ಎಫ್‌ಕೆಸಿಸಿಐ) ಅಂತರರಾಷ್ಟ್ರೀಯ ವ್ಯವಹಾರಗಳ ಸಮಿತಿಯ ನಿರ್ದೇಶಕ ಜಿ ಕೃಷ್ಣ ಕುಮಾರ್ ಮಾತನಾಡಿ, ಹೊಸ ವಿಮಾನ ನಿಲ್ದಾಣಗಳಲ್ಲಿನ ಹಾರಾಟವು ಕೈಗೆಟುವಂತೆ ಇರಬೇಕು. ನನ್ನ ವ್ಯಾಪಾರದ ಪಾಲುದಾರರೊಬ್ಬರು ಕಳೆದ ವಾರ ಬೆಂಗಳೂರಿನಿಂದ ಮಂಗಳೂರಿಗೆ ವಿಮಾನದಲ್ಲಿ ಪ್ರಯಾಣಿಸಲು ಸುಮಾರು 12,000 ರೂಪಾಯಿಗಳನ್ನು ಪಾವತಿಸಬೇಕಾಗಿತ್ತು, ಬೆಂಗಳೂರು ಮತ್ತು ಕಲಬುರಗಿ ನಡುವಿನ ಪ್ರಯಾಣ ದರ ಸುಮಾರು 9,000 ರೂ. ಜನಪ್ರಿಯ ವಂದೇ ಭಾರತ್ ಎಕ್ಸ್‌ಪ್ರೆಸ್ ಶೀಘ್ರದಲ್ಲೇ ಬೆಂಗಳೂರು ಮತ್ತು ಹುಬ್ಬಳ್ಳಿಯನ್ನು ಸಂಪರ್ಕಿಸಲು ಸಿದ್ಧವಾಗಿರುವುದರಿಂದ, ಸಾರ್ವಜನಿಕರು ದುಬಾರಿ ವಿಮಾನ ಪ್ರಯಾಣವನ್ನು ಏಕೆ ಆರಿಸುತ್ತಾರೆ? ಎಂದು ಪ್ರಶ್ನಿಸಿದ್ದಾರೆ.

ಹೀಗಾಗಿ ವಿಮಾನ ದರಗಳ ಮಿತಿಯನ್ನು ಖಚಿತಪಡಿಸಿಕೊಳ್ಳುವ ಅಗತ್ಯವನ್ನು ಕೇಂದ್ರ, ನಾಗರಿಕ ವಿಮಾನಯಾನ ಸಚಿವಾಲಯ ಮತ್ತು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯಕ್ಕೆ ರಾಜ್ಯವು ಮನವರಿಕೆ ಮಾಡಬೇಕಾಗಿದೆ ಎಂದು ಒತ್ತಾಯಿಸಿದ್ದಾರೆ.

ವಿಮಾನ ಪ್ರಯಾಣದ ಮತ್ತೊಂದು ದೊಡ್ಡ ಅನನುಕೂಲವೆಂದರೆ ಪ್ರಯಾಣಿಕರು ನಗರದ ಹೊರವಲಯಗಳಲ್ಲಿ ಇಳಿಯವುದು. ಆದರೆ, ರೈಲುಗಳು ಅವರನ್ನು ನಗರಕ್ಕೆ ಕರೆತರುತ್ತದೆ. “ಮೈಸೂರಿನ ಒಳಗೆ ಹಾಗೂ ಹೊರಗೆ ಸುತ್ತಮುತ್ತಲಿನ ಪ್ರವಾಸೋದ್ಯಮವನ್ನು ಉತ್ತೇಜಿಸಲು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಅಗತ್ಯವಿದೆ. ಅನೇಕ ಅಂತರಾಷ್ಟ್ರೀಯ ಪ್ರಯಾಣಿಕರು ಬೆಂಗಳೂರಿಗೆ ಬಂದಿಳಿದು ನಂತರ ರಸ್ತೆ ಮೂಲಕ ಕೊಡಗಿಗೆ ಪ್ರಯಾಣಿಸುವಂತಾಗುತ್ತಿದೆ ಎಂದು ಕೃಷ್ಣ ಕುಮಾರ್ ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com