ಹೊಸ ವರ್ಷಕ್ಕೆ ದಿನಗಣನೆ ಆರಂಭ: ಎರಡು ವರ್ಷಗಳ ಬಳಿಕ ಸಂಭ್ರಮದಿಂದ ಆಚರಿಸಲು ಸಿಲಿಕಾನ್ ಸಿಟಿ ಸಜ್ಜು

ಕೋವಿಡ್-19 ಪ್ರಕರಣಗಳಲ್ಲಿ ಗಣನೀಯ ಇಳಿಕೆ ಕಂಡುಬಂದ ಹಿನ್ನೆಲೆಯಲ್ಲಿ ನಗರದ ಆತಿಥ್ಯ ಉದ್ಯಮವು 2023ನ್ನು ಅದ್ಧೂರಿಯಾಗಿ ಸ್ವಾಗತಿಸಲು ಸಜ್ಜಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಕೋವಿಡ್-19 ಪ್ರಕರಣಗಳಲ್ಲಿ ಗಣನೀಯ ಇಳಿಕೆ ಕಂಡುಬಂದ ಹಿನ್ನೆಲೆಯಲ್ಲಿ ನಗರದ ಆತಿಥ್ಯ ಉದ್ಯಮವು 2023ನ್ನು ಅದ್ಧೂರಿಯಾಗಿ ಸ್ವಾಗತಿಸಲು ಸಜ್ಜಾಗಿದೆ.

ಹೊಸ ವರ್ಷಕ್ಕೆ ದಿನಗಣನೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಈಗಾಗಲೇ ನಗರದ ಹಲವಾರು ರೆಸಾರ್ಟ್‌ಗಳು ಮತ್ತು ಪಬ್‌ಗಳ ಮಾಲೀಕರು ಈಗಾಗಲೇ ಸೆಲೆಬ್ರಿಟಿಗಳನ್ನು ಸಂಪರ್ಕಿಸಿದ್ದು, ಇಲ್ಲಿಯವರೆಗೆ ಉಂಟಾದ ನಷ್ಟವನ್ನು ಮರಳಿ ಸಂಗ್ರಹಿಸಲು ಡಿಸೆಂಬರ್ 31 ರಂದು ಜನರನ್ನು ಸೆಳೆಯಲು ಸಿದ್ಧತೆ ನಡೆಸುತ್ತಿದ್ದಾರೆ. ಅಲ್ಲದೆ, ಹೊಸ ವರ್ಷದ ಮುನ್ನಾದಿನದಂದು ಹೆಚ್ಚಿನ ನಿರ್ಬಂಧಗಳನ್ನು ವಿಧಿಸದಂತೆ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.

ಬೆಂಗಳೂರು ಹೊಟೇಲ್ ಅಸೋಸಿಯೇಶನ್‌ನ ಕಾರ್ಯಕಾರಿ ಸದಸ್ಯ ಕೃಷ್ಣರಾಜ್ ಎಸ್‌ಪಿ ಮಾತನಾಡಿ, ಇತ್ತೀಚೆಗೆ ನಗರ ಪೊಲೀಸ್ ಆಯುಕ್ತರು ಮಧ್ಯರಾತ್ರಿಯವರೆಗೆ ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳನ್ನು ತೆರೆಯಲು ಅನುಮತಿ ನೀಡಿದ್ದಾರೆ. “ಈಗ, ಆಚರಣೆಗಳನ್ನು ಆಯೋಜಿಸಲು ನಮಗೆ ಸಾಕಷ್ಟು ಸಮಯವಿದೆ. ಕಾರ್ಯಕ್ರಮಗಳಿಗೆ ಯಾವುದೇ ನಿರ್ಬಂಧಗಳನ್ನು ವಿಧಿಸದಂತೆ ಬಿಬಿಎಂಪಿ ಅಧಿಕಾರಿಗಳು ಮತ್ತು ಪೊಲೀಸರಿಗೆ ನಾವು ಮನವಿ ಮಾಡಿಕೊಂಡಿದ್ದೇವೆಂದು ಹೇಳಿದರು.

ಈವೆಂಟ್‌ಗಳನ್ನು ಆಯೋಜಿಸಲು ನಟರು ಮತ್ತು ಗಾಯಕರನ್ನು ಆಹ್ವಾನಿಸಲು ರೆಸಾರ್ಟ್ ಮತ್ತು ಪಬ್ ಮಾಲೀಕರು ನಿರ್ಧರಿಸಿದ್ದಾರೆ ಮತ್ತು ಈ ವರ್ಷ ಹೆಚ್ಚಿನ ಜನರು ಆಗಮಿಸುವ ನಿರೀಕ್ಷೆಗಳಿವೆ. “ಸಾಂಕ್ರಾಮಿಕ ಸಮಯದಲ್ಲಿ ಹಲವಾರು ಮಾಲೀಕರು ತಮ್ಮ ವ್ಯವಹಾರದಲ್ಲಿ ಭಾರಿ ನಷ್ಟವನ್ನು ಅನುಭವಿಸಿದರು. ಅದೃಷ್ಟವಶಾತ್, ಈ ವರ್ಷ ಹಿಂದೆ ಅನುಭವಿಸಿದ ನಷ್ಟವನ್ನು ಮರುಪಡೆಯಲು ನಮಗೆ ಅವಕಾಶವಿದೆ ಎಂದು ತಿಳಿಸಿದರು.

ಪಬ್ ಮಾಲೀಕರೊಬ್ಬರು ಮಾತನಾಡಿ, “ಬಾಲಿವುಡ್ ಸೆಲೆಬ್ರಿಟಿಗಳೊಂದಿಗೆ ಉತ್ತಮ ಸಂಪರ್ಕ ಹೊಂದಿರುವ ಡಿಜೆಗಳನ್ನು ಇಂದಿರಾನಗರದಲ್ಲಿರುವ ನನ್ನ ಪಬ್‌ಗೆ ಕರೆತರಲು ಮಾತುಕತೆ ನಡೆಸಲಾಗಿದೆ. ಪ್ರಸಿದ್ಧ ಗಾಯಕನನ್ನು ಕರೆತರಲು, ಲೈವ್ ಈವೆಂಟ್ ಅನ್ನು ಆಯೋಜಿಸಲು ಚಿಂತನೆ ನಡೆಸಿದ್ದೇನೆ, ಆದರೆ ಈಗಲೇ ಹೆಸರುಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದಿದ್ದಾರೆ.

ಕಳೆದ ವರ್ಷ, ಕೋವಿಡ್ -19  ಓಮಿಕ್ರಾನ್ ರೂಪಾಂತರದ ಪ್ರಕರಣಗಳು ಹೆಚ್ಚಾಗಿದ್ದ ಹಿನ್ನೆಲೆಯಲ್ಲಿ ಹೊಸ ವರ್ಷದ ಮುನ್ನಾದಿನದ ಹೊಸವರ್ಷ ಆಚರಣೆಗಳಿಗೆ ಪೊಲೀಸರು ನಿರ್ಬಂಧ ಹೇರಿದ್ದರು. ಅಲ್ಲದೆ, ರಾಜ್ಯಾದ್ಯಂತ ರಾತ್ರಿ ಕರ್ಫ್ಯೂ ವಿಧಿಸಿದ್ದರು. ಎಲ್ಲಾ ಕೋವಿಡ್ ಪ್ರೋಟೋಕಾಲ್‌ಗಳಿಗೆ ಬದ್ಧವಾಗಿ ರೆಸ್ಟೋರೆಂಟ್‌ಗಳು, ಹೋಟೆಲ್‌ಗಳು, ಪಬ್‌ಗಳು ಮತ್ತು ಕ್ಲಬ್‌ಗಳು ಶೇಕಡಾ 50 ರಷ್ಟು ಆಸನ ಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಿಸಲು ಅನುಮತಿ ನೀಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com