ನರೇಗಾ ಯೋಜನೆ: ಗರ್ಭಿಣಿ, ಬಾಣಂತಿಯರಿಗೆ ಕೆಲಸದ ಪ್ರಮಾಣದಲ್ಲಿ ಶೇ.50 ರಿಯಾಯಿತಿ

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆ (ಎಂಜಿಎನ್‌ಆರ್‌ಇಜಿಎ) ಅಡಿಯಲ್ಲಿ  ಮಹಿಳೆಯರ ಪಾಲ್ಗೊಳ್ಳುವಿಕೆ ಪ್ರಮಾಣವನ್ನು ಹೆಚ್ಚಿಸುವ ನಿಟ್ಟಿನಲ್ಲಿ ರಾಜ್ಯದ ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್‌ ರಾಜ್‌ ಇಲಾಖೆ ಮಹತ್ವದ ಆದೇಶವನ್ನು ಹೊರಡಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆ (ಎಂಜಿಎನ್‌ಆರ್‌ಇಜಿಎ) ಅಡಿಯಲ್ಲಿ  ಮಹಿಳೆಯರ ಪಾಲ್ಗೊಳ್ಳುವಿಕೆ ಪ್ರಮಾಣವನ್ನು ಹೆಚ್ಚಿಸುವ ನಿಟ್ಟಿನಲ್ಲಿ ರಾಜ್ಯದ ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್‌ ರಾಜ್‌ ಇಲಾಖೆ ಮಹತ್ವದ ಆದೇಶವನ್ನು ಹೊರಡಿಸಿದೆ.

ಯೋಜನೆಯಡಿ ವಿಶೇಷ ಚೇತನರು ಮತ್ತು ಹಿರಿಯ ನಾಗರಿಕರಿಗೆ ದಿನಕ್ಕೆ ನಿಗದಿತ ಕೂಲಿ ಪಡೆಯಲು ನಿರ್ವಹಿಸಬೇಕಾದ ಕೆಲಸದ ಪ್ರಮಾಣದಲ್ಲಿ ಶೇ.50 ರಷ್ಟು ರಿಯಾಯಿತಿಯನ್ನು ರಾಜ್ಯ ಸರ್ಕಾರ ನೀಡಿದೆ. ಅಷ್ಟೇ ಅಲ್ಲ, ಸದ್ಯ ಮಹಿಳೆಯರ ಭಾಗವಹಿಸುವಿಕೆ ಶೇ.51ರಷ್ಟಿದ್ದು, ಇದನ್ನು ಶೇ.60 ಕ್ಕೆ ಹೆಚ್ಚಿಸುವ ಗುರಿ ಇದೆ. ಶೇ.60 ಕ್ಕಿಂತ ಹೆಚ್ಚಿನ ಪ್ರಮಾಣದ ಮಹಿಳೆಯರನ್ನು ಹೊಂದಿರುವ ಕಾಮಗಾರಿಗಳಲ್ಲಿ ಮಹಿಳೆಯರು ನಿರ್ವಹಿಸಬೇಕಾದ ಕೆಲಸದ ಪ್ರಮಾಣದಲ್ಲಿ ಶೇ.10 ರಷ್ಟು ರಿಯಾಯಿತಿ ನೀಡಲಾಗಿದೆ.

ನರೇಗಾ ಕಾಮಗಾರಿಗಳಲ್ಲಿ ಗರ್ಭಿಣಿಯರು ಮತ್ತು ಬಾಣಂತಿಯರು ಸಾಕಷ್ಟು ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದು, ಅವರ ದೈಹಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಕೆಲಸದ ಪ್ರಮಾಣದಲ್ಲಿ ರಿಯಾಯಿತಿ ನೀಡುವುದು ಅವಶ್ಯಕವಾಗಿದೆ‌. ಈ ಹಿನ್ನೆಲೆಯಲ್ಲಿ ಕೆಲಸ ನಿರ್ವಹಿಸುವ 6 ತಿಂಗಳು ತುಂಬಿದ ಗರ್ಭಿಣಿಯರಿಗೆ ಮಗುವಿನ ಜನನದವರೆಗೆ ಹಾಗೂ ಬಾಣಂತಿಯರಿಗೆ ಮಗುವಿನ ಜನನ ದಿನಾಂಕದಿಂದ 6 ತಿಂಗಳವರೆಗೆ ನಿಗದಿತ ಕೂಲಿ ಪಡೆಯಲು ನಿಗದಿಪಡಿಸಲಾದ ಕೆಲಸದ ಪ್ರಮಾಣದಲ್ಲಿ ಶೇ.50 ರಷ್ಟು ರಿಯಾಯಿತಿ ಸಿಕ್ಕಿದೆ. ಈ ರಿಯಾಯಿತಿ ನೀಡಲು ಆರೋಗ್ಯ ಇಲಾಖೆ ನೀಡುವ ತಾಯಿ ಕಾರ್ಡ್​ ಆಧಾರವಾಗಿ ಪರಿಗಣಿಸಲು ತಿಳಿಸಲಾಗಿದೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ (RDPR) ಇಲಾಖೆಯ ಅಂಕಿಅಂಶಗಳ ಪ್ರಕಾರ, ನರೇಗಾ ಯೋಜನೆ ಅಡಿಯಲ್ಲಿ ರಾಜ್ಯವು 1.8 ಕೋಟಿ ಜನರು ನೋಂದಾಯಿಸಿಕೊಂಡಿದ್ದು, ಇದರಲ್ಲಿ 90 ಲಕ್ಷ (ಶೇ.51.42)ಮಹಿಳಾ ಉದ್ಯೋಗಿಗಳಿದ್ದಾರೆಂದು ತಿಳಿದುಬಂದಿದೆ. ಕಳೆದ 5 ವರ್ಷಗಳಲ್ಲಿ ಮಹಿಳೆಯರ ಭಾಗವಹಿಸುವಂತೆ ನಿರಂತರವಾಗಿ ಹೆಚ್ಚಾಗುತ್ತಿರುವುದು ಇದರಿಂದ ತಿಳಿದುಬಂದಿದೆ.

ಇಲಾಖೆಯು ಕಳೆದ ವರ್ಷದಿಂದ ನರೇಗಾ ಜಾಬ್ ಕಾರ್ಡ್ ಹೊಂದಿಲ್ಲದ ಮಹಿಳೆಯರನ್ನು ಗುರುತಿಸಲು ಮನೆ-ಮನೆ ಸಮೀಕ್ಷೆಯನ್ನು ಪ್ರಾರಂಭಿಸಿತ್ತು. ಇಲಾಖೆಯು ಉದ್ಯೋಗಗಳನ್ನು ಒದಗಿಸುವಲ್ಲಿ ಮಹಿಳೆಯರು ಮತ್ತು ಮಹಿಳೆಯರ ನೇತೃತ್ವದ ಕುಟುಂಬಗಳಿಗೆ ಆದ್ಯತೆ ನೀಡುತ್ತಿದೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ (RDPR) ಇಲಾಖೆಯ ಆಯುಕ್ತೆ ಶಿಲ್ಬಾ ನಾಗ್ ಅವರು ಮಾತನಾಡಿ, ಮಾರ್ಚ್ 2023 ರ ವೇಳೆಗೆ ಒಟ್ಟು ಉದ್ಯೋಗಿಗಳ ಸಂಖ್ಯೆಯಲ್ಲಿ ಶೇಕಡಾ 60 ರಷ್ಟು ಮಹಿಳೆಯರನ್ನು ತಲುಪುವ ಗುರಿಯನ್ನು ಇಲಾಖೆ ಹೊಂದಿದೆ ಎಂದು ಹೇಳಿದ್ದಾರೆ.

ಈ ಉಪಕ್ರಮವು ಮಹಿಳೆಯರ ಸಬಲೀಕರಣಕ್ಕೆ ಸಹಕಾರಿಯಾಗಲಿದೆ. ಮಹಿಳೆಯರಲ್ಲಿ ಹೆಚ್ಚಿನವರು ವಲಸೆ ಹೋಗದ ಕಾರಣ ಯೋಜನೆ ಅನೇಕರಿಗೆ ಅನುಕೂಲವಾಗಿದೆ ಮತ್ತು ಮಹಿಳೆಯರ ಕೆಲಸದ ಸಾಮರ್ಥ್ಯವೂ ಉತ್ತಮವಾಗಿದೆ ಎಂದು ತಿಳಿಸಿದ್ದಾರೆ.

ಯೋಜನೆಯು ಮಹಿಳೆಯರನ್ನು ಪ್ರೋತ್ಸಾಹಿಸುವುದಾಗಿದೆ. ಈ ಸಂಬಂಧ ಸರ್ಕಾರ ಆದೇಶವನ್ನೂ ಹೊರಡಿಸಿದೆ. ಮಹಿಳೆಯರನ್ನು ಕೇಂದ್ರೀಕರಿಸುವ ನರೇಗಾ ಮತ್ತು ಇತರ ಯೋಜನೆಗಳ ಬಗ್ಗೆ ಮಾಹಿತಿ ನೀಡಲು ಇಲಾಖೆಯು ಎಲ್ಲಾ ಪಂಚಾಯತ್‌ಗಳಲ್ಲಿ ವಿಶೇಷ ಗ್ರಾಮಸಭೆಗಳನ್ನು ನಡೆಸಿದೆ. ಮಹಿಳೆಯರು ಯೋಜನೆಯ ಲಾಭ ಪಡೆದುಕೊಳ್ಳಲು ಗ್ರಾಮ ಸಭೆ ಸ್ಥಳಗಳಲ್ಲಿ ವಿಶೇಷ ಸಹಾಯ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com