ಬೆಂಗಳೂರು ಜೋಡಿ ಕೊಲೆ ಪ್ರಕರಣ: ಉದ್ಯಮಿಯ ಮಾಜಿ ಕಾರು ಚಾಲಕ ಸೇರಿ ಮೂವರ ಬಂಧನ

ಕೋರಮಂಗಲ ಜೋಡಿ ಕೊಲೆ ಪ್ರಕರಣವನ್ನು 48 ಗಂಟೆಗಳಲ್ಲಿ ಭೇದಿಸಿದ ಪೊಲೀಸರು, ಪ್ರಮುಖ ಆರೋಪಿ ಉದ್ಯಮಿಯ ಮಾಜಿ ಕಾರು ಚಾಲಕ ಸೇರಿದಂತೆ ಮೂವರನ್ನು ಮಂಗಳವಾರ ಬಂಧಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಕೋರಮಂಗಲ ಜೋಡಿ ಕೊಲೆ ಪ್ರಕರಣವನ್ನು 48 ಗಂಟೆಗಳಲ್ಲಿ ಭೇದಿಸಿದ ಪೊಲೀಸರು, ಪ್ರಮುಖ ಆರೋಪಿ ಉದ್ಯಮಿಯ ಮಾಜಿ ಕಾರು ಚಾಲಕ ಸೇರಿದಂತೆ ಮೂವರನ್ನು ಮಂಗಳವಾರ ಬಂಧಿಸಿದ್ದಾರೆ.

ಬಂಧಿತರನ್ನು ಜಗದೀಶ್ (24), ಅಭಿಷೇಕ್ (22) ಮತ್ತು ಆತನ ಸಹೋದರ ಕಿರಣ್ (19) ಎಂದು ಗುರ್ತಿಸಲಾಗಿದೆ.

ಮಂಗಮ್ಮನಪಾಳ್ಯದಲ್ಲಿ ಅಕ್ಕಪಕ್ಕದ ಮನೆಯವರಾದ ಇವರು ಕಾರು, ಆಟೋ ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ. ಜಗದೀಶ್ ಪ್ರಕರಣದ ಪ್ರಮುಖ ಆರೋಪಿಯಾಗಿದ್ದು, ಉದ್ಯಮಿ ರಾಜಗೋಪಾಲ್ ರೆಡ್ಡಿ ಅವರ ಮಾಜಿ ಚಾಲಕನಾಗಿದ್ದ  ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಬಂಧಿತ ಆರೋಪಿಗಳಿಂದ ರೂ. 5 ಲಕ್ಷ ನಗದು, ವಿದೇಶಿ ಕರೆನ್ಸಿ ಸೇರಿದಂತೆ ಬೆಲೆಬಾಳುವ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಬೆಂಗಳೂರು ಪೊಲೀಸ್ ಕಮಿಷನರ್ ಸಿಎಚ್ ಪ್ರತಾಪ್ ರೆಡ್ಡಿ ತಿಳಿಸಿದ್ದಾರೆ.

ಪ್ರಕರಣದ ಪ್ರಮುಖ ಆರೋಪಿ ಜಗದೀಶ್ ಸುಮಾರು ಒಂದು ವರ್ಷದಿಂದ ರೆಡ್ಡಿಯವರ ಕಾರು ಚಾಲಕನಾಗಿ ಕೆಲಸ ಮಾಡಿದ್ದ. ಚಾಲಕನಾಗಿ ಕೆಲಸ ಮಾಡುತ್ತಿದ್ದಾಗ ರೆಡ್ಡಿಯನರ ಮನೆಯಲ್ಲಿಯೇ ಉಳಿದುಕೊಂಡಿದ್ದ. ರೆಡ್ಡಿಯವರು ಮನೆಯಲ್ಲಿ ಬೆಲೆಬಾಳುವ ವಸ್ತುಗಳನ್ನು ಎಲ್ಲಿ ಇಟ್ಟಿರುತ್ತಾರೆಂಬುದು ಆತನಿಗೆ ತಿಳಿದಿತ್ತು. ಅನುಮತಿಯಿಲ್ಲದೆ ರೆಡ್ಡಿ ಅವರ ಕಾರನ್ನು ಹೊರ ತೆಗೆದುಕೊಂಡು ಹೋಗಿದ್ದ ಕಾರಣಕ್ಕೆ ರೆಡ್ಡಿಯವರು ಜಗದೀಶ್ ನನ್ನು ಕೆಲಸದಿಂದ ತೆಗೆದು ಹಾಕಿದ್ದರು.

ಇದರಂತೆ ರೆಡ್ಡಿ ಹಾಗೂ ಕುಟುಂಬದವರು ಮನೆಯಲ್ಲಿಲ್ಲದ ಸಮಯಕ್ಕಾಗಿ ಆರೋಪಿ ಕಾದು ಕುಳಿತಿದ್ದ. ಇದರಂತೆ ಶನಿವಾರ ರಾತ್ರಿ 10 ಗಂಟೆ ಸುಮಾರಿಗೆ ರೆಡ್ಡಿ ನಿವಾಸಕ್ಕೆ ತೆರಳಿದ ಮೂವರು ಆರೋಲಿಗಳು, ಸಿಬ್ಬಂದಿ ದಿಲ್ ಬಹದ್ದೂರ್ ಎಂಬಾತನನ್ನು ಕತ್ತು ಹಿಸುಕಿ ಹತ್ಯೆ ಮಾಡಿದ್ದಾರೆ. ನಂತರ ಶವವನ್ನು ನೀರಿನ ಸಂಪ್‌ನಲ್ಲಿ ಎಸೆದು ಮುಚ್ಚಳವನ್ನು ಮುಚ್ಚಿದ್ದಾರೆ. ನಂತರ ಮನೆಯಲ್ಲಿಯೇ ಉಳಿದುಕೊಂಡಿದ್ದ ಮನೆಕೆಲಸಗಾರ ಕರಿಯಪ್ಪಗಾಗಿ ಬೆಳಿಗ್ಗೆವರೆಗೂ ಕಾದಿದ್ದರು. ಭಾನುವಾರ ಬೆಳಗ್ಗೆ 5.30ರ ಸುಮಾರಿಗೆ ಬಾಗಿಲು ತೆಗೆದಾಗ ಜಗದೀಶ್ ಇರುವುದನ್ನು ನೋಡಿದ್ದಾರೆ. ಜಗದೀಶ್ ಮನೆಗೆ ಬಂದಿರುವುದು ತಿಳಿದರೆ ಮಾಲೀಕರು ಛೀಮಾರಿ ಹಾಕುತ್ತಾರೆ ಎಂದು ಕರಿಯಪ್ಪ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ವೇಳೆ ಆತನ ಕತ್ತು ಹಿಸುಕಿ ಹತ್ಯೆ ಮಾಡಿ ಮನೆಗೆ ನುಗ್ಗಿದ್ದಾರೆ. ನಂತರ ಬೆಲೆಬಾಳುವ ವಸ್ತುಗಳನ್ನು ಹೊತ್ತು ಸ್ಥಳದಿಂದ ಕಾಲ್ಕಿತ್ತಿದ್ದಾರೆಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಆರಂಭದಲ್ಲಿ ಸಿಬ್ಬಂದಿ ಬಹದ್ದೂರ್ ಕಾಣದ ಹಿನ್ನೆಲೆಯಲ್ಲಿ ಆತನ ಮೇಲೆ ಪೊಲೀಸರಿಗೆ ಶಂಕೆ ವ್ಯಕ್ತವಾಗಿತ್ತು. ಆದರೆ, ಆತನ ಮೊಬೈಲ್ ಸಿಗ್ನಲ್ ಮೆಜೆಸ್ಟಿಕ್ ನಲ್ಲಿರುವುದಾಗಿ ತೋರಿಸುತ್ತಿತ್ತು. ನಂತರ ತನಿಖೆ ಚುರುಕುಗೊಳಿಸಿದ ಪೊಲೀಸರಿಗೆ ಬಹದ್ದೂರ್ ಶವ ಸಂಪ್ ನಲ್ಲಿ ಪತ್ತೆಯಾಗಿದ್ದು. ದೂರವಾಣಿ ಕರೆಗಳು, ಸಿಸಿಟಿವಿ ದೃಶ್ಯಾವಳಿಗಳು ಬೇರೆಯದ್ದೇ ಕಥೆ ಹೇಳುತ್ತಿತ್ತು. ಇವುಗಳ ಆಧಾರದ ಮೇಲೆ ಆರೋಪಿಗಳನ್ನು ಬಂಧಿಸಲಾಯಿತು ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com