ಕಾಡಾನೆ ದಾಳಿಯಿಂದ ಬೇಸತ್ತು ಕಂದಕ ತೋಡಲು ಮುಂದಾದ ಹಾಸನದ ರೈತರು, ಕಾಫಿ ತೋಟಗಾರರು

ಸಕಲೇಶಪುರ ಸುತ್ತಮುತ್ತಲಿನ ಪ್ರದೇಶಗಳ ರೈತರು ಮತ್ತು ಕಾಫಿ ತೋಟಗಾರರು ತಮ್ಮ ಜಮೀನನ್ನು ಆನೆಗಳ ಹಾವಳಿಯಿಂದ ರಕ್ಷಿಸಲು ಕಂದಕಗಳನ್ನು ಅಗೆಯುತ್ತಿದ್ದಾರೆ. ರೈತರು ತಮ್ಮ ಜಮೀನಿನ ಸುತ್ತಲೂ 20 ಅಡಿ ಆಳ ಮತ್ತು 20 ಅಡಿ ಅಗಲದ ಕಂದಕಗಳನ್ನು ತೋಡಲು ಮುಂದಾಗಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಹಾಸನ: ಜಿಲ್ಲೆಯ ಸಕಲೇಶಪುರ ಸುತ್ತಮುತ್ತಲಿನ ಪ್ರದೇಶಗಳ ರೈತರು ಮತ್ತು ಕಾಫಿ ತೋಟಗಾರರು ತಮ್ಮ ಜಮೀನನ್ನು ಆನೆಗಳ ಹಾವಳಿಯಿಂದ ರಕ್ಷಿಸಲು ಕಂದಕಗಳನ್ನು ಅಗೆಯುತ್ತಿದ್ದಾರೆ. ರೈತರು ತಮ್ಮ ಜಮೀನಿನ ಸುತ್ತಲೂ 20 ಅಡಿ ಆಳ ಮತ್ತು 20 ಅಡಿ ಅಗಲದ ಕಂದಕಗಳನ್ನು ತೋಡಲು ಮುಂದಾಗಿದ್ದಾರೆ.

ಅರಣ್ಯಾಧಿಕಾರಿಗಳು ತಮ್ಮ ಸಂಕಷ್ಟದತ್ತ ಕಣ್ಣು ಮುಚ್ಚಿ ಕುಳಿತಿರುವ ಹಿನ್ನೆಲೆಯಲ್ಲಿ ಕಂದಕ ತೋಡಿದ್ದೇವೆ ಎಂದು ರೈತರು ಆರೋಪಿಸಿದ್ದಾರೆ.

ಕಂದಕಗಳನ್ನು ಎಲೆಗಳು ಮತ್ತು ಬಿದಿರಿನ ಕಡ್ಡಿಗಳಿಂದ ಮುಚ್ಚಲಾಗಿದ್ದು, ತಮ್ಮ ಜಮೀನಿನ ಕಡೆಗೆ ಬರಲು ಪ್ರಯತ್ನಿಸುವ ಆನೆಗಳು ಕಂದಕಕ್ಕೆ ಬೀಳುತ್ತವೆ. ಕಂದಕದಲ್ಲಿ ಸಿಲುಕಿರುವ ಆನೆಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ನಂತರ ಸ್ಥಳಾಂತರಿಸಲಿ ಎಂದು ರೈತರು ತಿಳಿಸಿದ್ದಾರೆ. ಈ ವಿಚಾರದಲ್ಲಿ ಅರಣ್ಯ ಅಧಿಕಾರಿಗಳಿಗೆ ತಲೆ ಬಿಸಿಯಾಗಿದೆ.

ಹಾಸನ ಜಿಲ್ಲೆಯ ಆಲೂರು, ಸಕಲೇಶಪುರ, ಬೇಲೂರು ಭಾಗದಲ್ಲಿ ಆನೆಗಳ ಹಾವಳಿ ಹೆಚ್ಚಾಗಿದೆ. ಕಾಫಿ, ಬಾಳೆ, ಮೆಣಸು ಬೆಳೆಗಳು ನಾಶವಾಗಿದ್ದು, ಈ ಭಾಗದ ಜನರ ಸುರಕ್ಷತೆಗೂ ಅಪಾಯ ತಂದೊಡ್ಡಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ನಮ್ಮ ಕಷ್ಟದ ಬಗ್ಗೆ ಸರ್ಕಾರಕ್ಕೆ ಕಾಳಜಿ ಇಲ್ಲದಂತಾಗಿದೆ. ಕಂದಕ ತೋಡಿರುವ ಬಗ್ಗೆ ಸರ್ಕಾರ ಹಾಗೂ ಅರಣ್ಯ ಇಲಾಖೆಗೆ ತಿಳಿಸಿದ್ದೇವೆ ಎಂದು ರೈತರು ಹೇಳಿದರು.

ಆನೆಗಳ ಹಾವಳಿಯಿಂದ ಅಪಾರ ಪ್ರಮಾಣದ ಬೆಳೆ ನಷ್ಟ ಅನುಭವಿಸಿರುವ ಹಾಸನ ಜಿಲ್ಲೆಯ ರೈತರು ಹಾಗೂ ಕಾಫಿ ತೋಟಗಾರರು ಡಿಸೆಂಬರ್ ಮೊದಲ ವಾರದಲ್ಲಿ ಕಂದಕ ತೋಡುವ ಯೋಜನೆ ಕುರಿತು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದರು.

ಕಾಡಾನೆ ದಾಳಿಯಿಂದಾಗಿ ಉಂಟಾಗಿರುವ ಬೆಳೆ ನಷ್ಟ ಪರಿಶೀಲಿಸಲು ತೆರಳಿದ್ದಾಗ, ಕಂದಕ ತೋಡುವ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ರೈತರು ಎಚ್ಚರಿಕೆ ನೀಡಿದ್ದರು. ಆದರೆ, ಆನೆಗಳ ಹಾವಳಿ ಸಮಸ್ಯೆ ಬಗೆಹರಿಸಲು ಸರ್ಕಾರ ತಲೆ ಕೆಡಿಸಿಕೊಂಡಿಲ್ಲ. ಅರಣ್ಯ ಇಲಾಖೆಗೂ ಈ ಸಮಸ್ಯೆ ಬಗೆಹರಿಸಲು ನಿರ್ದೇಶನ ನೀಡುತ್ತಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.

ಆನೆಗಳು ಕಂದಕಕ್ಕೆ ಬಿದ್ದಾಗ, ನೀವು (ಅರಣ್ಯ ಇಲಾಖೆ ಅಧಿಕಾರಿಗಳು) ಬಂದು ಅವುಗಳನ್ನು ಎತ್ತಿ ತೆಗೆದುಕೊಂಡು ಹೋಗಬೇಕು ಎಂದು ರೈತರು ಅವರಿಗೆ ಹೇಳಿದ್ದರು.

ತಮ್ಮ ಜಮೀನಿನಲ್ಲಿ ಕಂದಕ ತೋಡುತ್ತೇವೆ, ಅರಣ್ಯ ಇಲಾಖೆಗೆ ಸೇರಿದ ಜಾಗದಲ್ಲಿ ಅಲ್ಲ ಎಂದು ರೈತರು ಪಟ್ಟು ಹಿಡಿದಿದ್ದಾರೆ. ಆನೆಗಳು ಕಂದಕಕ್ಕೆ ಬೀಳುವವರೆಗೆ ಮತ್ತು ಅವುಗಳ ಆರ್ತನಾದ ಸರ್ಕಾರಕ್ಕೆ ಕೇಳುವವರೆಗೆ ಆನೆಗಳ ಹಾವಳಿಗೆ ಪರಿಹಾರವಿಲ್ಲ ಎಂದು ರೈತರು ಅಧಿಕಾರಿಗಳಿಗೆ ತಿಳಿಸಿದ್ದಾರೆ.

ಈ ಪ್ರದೇಶದಲ್ಲಿ ಪರಿಸ್ಥಿತಿ ಎಷ್ಟು ಗಂಭೀರವಾಗಿದೆ ಎಂದರೆ, ತಮ್ಮ ಕುಟುಂಬ ಸದಸ್ಯರು ಫೋನ್ ಕರೆ ಸ್ವೀಕರಿಸದಿದ್ದರೆ, ಆನೆ ದಾಳಿಗೆ ಹೆದರಿ ಕುಟುಂಬಸ್ಥರು ಜಮೀನಿಗೆ ಓಡಿ ಬರುತ್ತಾರೆ ಎಂದು ರೈತರು ವಿವರಿಸಿದರು.

ನಮ್ಮ ಸ್ವಂತ ಮಕ್ಕಳಂತೆ ಕಾಫಿ ಗಿಡಗಳನ್ನು ಬಿತ್ತಿ ಪೋಷಣೆ ಮಾಡಿದ್ದೇವೆ. ಕ್ರಮ ಕೈಗೊಳ್ಳದಿದ್ದರೆ ಕಂದಕದಲ್ಲಿ ಆನೆಗಳೆಲ್ಲ ಕಾಣಸಿಗುತ್ತವೆ. ಸಾಯಿಸುವುದಿಲ್ಲ. ಆನೆಗಳು ಕಂದಕಕ್ಕೆ ಬಿದ್ದಾಗ ತಿಳಿಸುತ್ತೇವೆ ಎನ್ನುತ್ತಾರೆ ರೈತರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com