'7 ದಿನಗಳೊಳಗೆ ಈದ್ಗಾ ಮೈದಾನದ ಮತ್ತಷ್ಟು ದಾಖಲೆ ನೀಡಿ': ವಕ್ಫ್ ಬೋರ್ಡ್ ಗೆ ಬಿಬಿಎಂಪಿ ಮತ್ತೊಂದು ನೋಟಿಸ್!

ಚಾಮರಾಜಪೇಟೆ ಈದ್ಗಾ ಮೈದಾನ (Chamarajpet Idgah Maidan) ವಿವಾದ ವಿಚಾರಕ್ಕೆ ಸಂಬಂಧಿಸಿದಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ವಕ್ಫ್ ಬೋರ್ಡ್​ಗೆ ಮತ್ತೊಂದು ನೋಟಿಸ್ ನೀಡಿದೆ. 
ಚಾಮರಾಜಪೇಟೆ ಈದ್ಗಾ ಮೈದಾನ
ಚಾಮರಾಜಪೇಟೆ ಈದ್ಗಾ ಮೈದಾನ
Updated on

ಬೆಂಗಳೂರು: ಚಾಮರಾಜಪೇಟೆ ಈದ್ಗಾ ಮೈದಾನ (Chamarajpet Idgah Maidan) ವಿವಾದ ವಿಚಾರಕ್ಕೆ ಸಂಬಂಧಿಸಿದಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ವಕ್ಫ್ ಬೋರ್ಡ್​ಗೆ ಮತ್ತೊಂದು ನೋಟಿಸ್ ನೀಡಿದೆ. 

ಚಾಮರಾಜಪೇಟೆ ಈದ್ಗಾ ಮೈದಾನ ಮಾಲೀಕತ್ವ ತನ್ನದೇ ಎಂದು ಘೋಷಿಸಿಕೊಂಡು ಬಿಬಿಎಂಪಿಗೆ ದಾಖಲೆಗಳ ಸಲ್ಲಿಕೆ ಮಾಡಿದ್ದ ವಕ್ಫ್ ಬೋರ್ಡ್​ ಗೆ ಮತ್ತಷ್ಟು ದಾಖಲೆಗಳನ್ನು ಸಲ್ಲಿಕೆ ಮಾಡುವಂತೆ ಬಿಬಿಎಂಪಿ ನೋಟಿಸ್ ನೀಡಿದೆ. ವಕ್ಫ್ ಬೋರ್ಡ್​ ಸಲ್ಲಿಕೆ ಮಾಡಿದ್ದ ದಾಖಲೆಗಳನ್ನು ಪರಿಶೀಲಿಸಿದ ಬಳಿಕ ಬಿಬಿಎಂಪಿ (BBMP) ಪಶ್ಚಿಮ ಜಂಟಿ ಆಯುಕ್ತ ಶ್ರೀನಿವಾಸ್ ಮತ್ತಷ್ಟು ದಾಖಲೆ ನೀಡುವಂತೆ ವಕ್ಫ್ ಬೋರ್ಡ್​ಗೆ ನೋಟಿಸ್ ಜಾರಿ ಮಾಡಿದ್ದಾರೆ ಎನ್ನಲಾಗಿದೆ.

ಅಂತೆಯೇ ವಕ್ಫ್ ಬೋರ್ಡ್ ದಾಖಲೆಗಳನ್ನು ಸಲ್ಲಿಸಲು 7 ದಿನ ಕಾಲಾವಕಾಶ ನೀಡಲಾಗಿದ್ದು, ಒಂದು ವೇಳೆ ಮಾಲಿಕತ್ವ ಸಾಬೀತು ಮಾಡಲು ಬೇಕಾದ ದಾಖಲೆ ಸಲ್ಲಿಸದೇ ಹೋದರೆ ಬಿಬಿಎಂಪಿ ಮುಂದಿನ ನಿರ್ಧಾರ ಕೈಗೊಳ್ಳಲಿದೆ ಎಂದು ಸೂಚಿಸಿದೆ.

ಈದ್ಗಾ ಮೈದಾನ ತನ್ನದೇ ಎಂದು ಹೇಳಿಕೊಂಡಿದ್ದ ವಕ್ಫ್ ಬೋರ್ಡ್ 1954ರ ಗೆಜೆಟ್ ನೋಟಿಫಿಕೇಷನ್ ದಾಖಲೆ ಕೊಟ್ಟು, ಇದರ ಆಧಾರದ ಮೇಲೆ ಖಾತೆ ಮಾಡಿಕೊಡಿ ಎಂದು ಬಿಬಿಎಂಪಿಗೆ ಮನವಿ ಮಾಡಿತ್ತು. ಆದರೆ ಮಾಲಿಕತ್ವ ಸಾಬೀತು ಮಾಡಲು ಇನ್ನಷ್ಟು ದಾಖಲೆಗಳುಬೇಕು. ಒಂದು ವೇಳೆ ಮಾಲಿಕತ್ವ ಸಾಬೀತು ಮಾಡಲು ಬೇಕಾದ ದಾಖಲೆ ಸಲ್ಲಿಸದೇ ಹೋದರೆ ಬಿಬಿಎಂಪಿ ಮುಂದಿನ ನಿರ್ಧಾರ ಕೈಗೊಳ್ಳಲಿದೆ ಎಂದು ಬಿಬಿಎಂಪಿ ನೋಟಿಸ್ ನಲ್ಲಿ ಸೂಚಿಸಿದೆ.

ವಕ್ಫ್‌ ಬೋರ್ಡ್‌ಗೆ ಬಿಬಿಎಂಪಿ ಖಾತೆ ಮಾಡಿಕೊಟ್ಟಿಲ್ಲ
ಇನ್ನು ಇದೇ ವಿಚಾರವಾಗಿ ನಿನ್ನೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಪಶ್ಚಿಮ ವಲಯದ ಜಂಟಿ ಆಯುಕ್ತ ಶ್ರೀನಿವಾಸ್‌ ಅವರು, ವಕ್ಫ್‌ ಬೋರ್ಡ್‌ಗೆ ಬಿಬಿಎಂಪಿಯಿಂದ ಖಾತೆ ಮಾಡಿಕೊಟ್ಟಿಲ್ಲ. ವಕ್ಫ್‌ ಬೋರ್ಡ್‌ ನೀಡಿರುವ ದಾಖಲೆ ಪರಿಶೀಲಿಸಲಾಗುತ್ತಿದೆ. 1965ರ ಅಧಿಸೂಚನೆಯಂತೆ ಖಾತೆ ಮಾಡಿಕೊಡಲು ವಕ್ಫ್‌ ಬೋರ್ಡ್‌ ಮನವಿ ಮಾಡಿಕೊಂಡಿದೆ. ಆದರೆ ಖಾತೆ ಮಾಡಿಕೊಟ್ಟಿಲ್ಲ. 2 ಎಕರೆ 5 ಗುಂಟೆ ಅಧಿಸೂಚನೆ ಆಗಿರುವ ಬಗ್ಗೆ ದಾಖಲೆ ನೀಡಿದೆ. ಪೂರಕ ದಾಖಲೆ ನೀಡುವಂತೆ ವಕ್ಫ್‌ ಬೋರ್ಡ್‌ಗೆ ಸೂಚಿಸಿದ್ದೇವೆ. 40 ದಿನಗಳೊಳಗೆ ಈದ್ಗಾ ಮೈದಾನದ ವಿವಾದ ಬಗೆಹರಿಸುತ್ತೇವೆ. ಈದ್ಗಾ ಮೈದಾನದ ಜಾಗ ಅಧಿಕೃತವಾಗಿ ಯಾರಿಗೂ ಸೇರಿದ್ದಲ್ಲ ಎಂದು ಹೇಳಿದ್ದರು.

ಅಂತೆಯೇ ಜಾಗದ ದಾಖಲೆಗಳ ಪರಿಶೀಲನೆ ಮಾಡುತ್ತಿದ್ದೇವೆ. ಪೊಸಿಶನ್ ಬಿಬಿಎಂಪಿ ಹೆಸರಲ್ಲಿದೆ. ಮಾಲೀಕತ್ವ ಬಗ್ಗೆ ಪರಿಶೀಲನೆ ನಡೆಸುತ್ತಿದ್ದೇವೆ. ಇದೆಲ್ಲಾ ವಿವಾದಗಳಿಗೆ ಅಂತ್ಯ ಹಾಡಲು 45 ದಿನಗಳ ಕಾಲಾವಕಾಶ ಬೇಕು. ಆರಂಭದಿಂದ ಈ ಜಾಗ ರೆವಿನ್ಯೂ ಅಂತಿದೆ. ಯಾರ ಪ್ರಭಾವವೂ ಇಲ್ಲ. ನಮ್ಮ ಅಧಿಕಾರಿಗಳ ಮೇಲೆ ಒತ್ತಡ ಇಲ್ಲ. 1935ರಿಂದ ಮೈದಾನದ ಕುರಿತು ದಾಖಲೆ‌ಗಳನ್ನು ಎನ್ ಆರ್ ರಮೇಶ್ ಸಲ್ಲಿಸಿದ್ದಾರೆ. 1974ರಿಂದ ಮೈದಾನದಲ್ಲಿ ಜರುಗಿದ ಕಾರ್ಯಕ್ರಮಗಳ ಬಗ್ಗೆ ಪತ್ರ ಬರೆದು ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಪರಿಶೀಲಿಸಲಾಗುವುದು ಎಂದು ಅವರು ಹೇಳಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com