ರಾಜ್ಯದ ಮೊದಲ ಸುರಂಗ ಅಕ್ವೇರಿಯಂ ಕಬ್ಬನ್ ಪಾರ್ಕ್ ನಲ್ಲಿ ಸ್ಥಾಪನೆ!

ಬೆಂಗಳೂರಿನ ಆಕರ್ಷಣೆಗಳಲ್ಲಿ ಒಂದಾಗಿರುವ ಐತಿಹಾಸಿಕ ಕಬ್ಬನ್ ಪಾರ್ಕ್‌ ಶೀಘ್ರದಲ್ಲೇ ಮತ್ತಷ್ಟು ಪ್ರವಾಸಿಗರನ್ನು ಆಕರ್ಷಿಸಲಿದ್ದು, ಈ ಪ್ರತಿಷ್ಠಿತ ಉದ್ಯಾನದಲ್ಲಿ ಶೀಘ್ರದಲ್ಲೇ ಸುರಂಗ ಅಕ್ವೇರಿಯಂ ತಲೆ ಎತ್ತಲಿದೆ.
ಕಬ್ಬನ್ ಪಾರ್ಕ್ ಮತ್ತು ಸುರಂಗ ಅಕ್ವೇರಿಯಂ
ಕಬ್ಬನ್ ಪಾರ್ಕ್ ಮತ್ತು ಸುರಂಗ ಅಕ್ವೇರಿಯಂ

ಬೆಂಗಳೂರು: ಬೆಂಗಳೂರಿನ ಆಕರ್ಷಣೆಗಳಲ್ಲಿ ಒಂದಾಗಿರುವ ಐತಿಹಾಸಿಕ ಕಬ್ಬನ್ ಪಾರ್ಕ್‌ ಶೀಘ್ರದಲ್ಲೇ ಮತ್ತಷ್ಟು ಪ್ರವಾಸಿಗರನ್ನು ಆಕರ್ಷಿಸಲಿದ್ದು, ಈ ಪ್ರತಿಷ್ಠಿತ ಉದ್ಯಾನದಲ್ಲಿ ಶೀಘ್ರದಲ್ಲೇ ಸುರಂಗ ಅಕ್ವೇರಿಯಂ ತಲೆ ಎತ್ತಲಿದೆ.

ಕಬ್ಬನ್ ಪಾರ್ಕ್‌ ಮತ್ಸ್ಯಾಲಯಕ್ಕೆ ಹೊಸ ಲುಕ್‌ ಸಿಗಲಿದ್ದು, 1983 ರಲ್ಲಿ ನಿರ್ಮಾಣವಾಗಿದ್ದ ಮತ್ಸ್ಯಾಲಯವನ್ನು ಪಿಪಿಪಿ (ಖಾಸಗಿ ಸಾರ್ವಜನಿಕ ಸಹಭಾಗಿತ್ವ) ಮಾದರಿಯಲ್ಲಿ ಅಭಿವೃದ್ದಿ ಪಡಿಸಲು ಬಂದರು ಹಾಗೂ ಮೀನುಗಾರಿಕಾ ಇಲಾಖೆ ನಿರ್ಧಾರ ಮಾಡಿದೆ. 38 ವರ್ಷ ಹಳೆಯದಾದ ಮತ್ಸ್ಯಾಲಯವನ್ನು ಆಧುನಿಕವಾಗಿ ನವೀಕರಿಸುವ ಮೂಲಕ ಹೊಸ ಲುಕ್‌ ನೀಡಲಾಗುತ್ತದೆ. 

ಕಬ್ಬನ್ ಪಾರ್ಕ್ ನಲ್ಲಿ ಸುದೀರ್ಘ ಸುರಂಗ ಅಕ್ವೇರಿಯಂ ನಿರ್ಮಿಸಲು ಇಲಾಖೆ ನಿರ್ಧರಿಸಿದ್ದು, ಮೀನುಗಾರಿಕೆ ಇಲಾಖೆಯು ಬೆಂಗಳೂರು ಮೂಲದ ಏಜೆನ್ಸಿಯ ಸಹಯೋಗದೊಂದಿಗೆ ಖಾಸಗಿ ಸಾರ್ವಜನಿಕ ಸಹಭಾಗಿತ್ವದ ಮಾದರಿಯಲ್ಲಿ ಅಕ್ವೇರಿಯಂ ಅನ್ನು ಅಭಿವೃದ್ಧಿಪಡಿಸುತ್ತಿದೆ. ಜುಲೈ 4 ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ಹೇಳಲಾಗಿದೆ.

ಕಬ್ಬನ್‌ಪಾರ್ಕ್‌ನಲ್ಲಿರುವ ಈ ಮತ್ಸ್ಯಾಲಯಕ್ಕೆ ಪ್ರತಿ ನಿತ್ಯ ಸಾಕಷ್ಟು ಪ್ರವಾಸಿಗರು ಆಗಮಿಸುತ್ತಿದ್ದಾರೆ. ವಾರ್ಷಿಕವಾಗಿ 1.20 ಲಕ್ಷ ಪ್ರವಾಸಿಗರು ಮತ್ಸ್ಯಾಲಯಕ್ಕೆ ಭೇಟಿ ನೀಡುತ್ತಾರೆ. ಪ್ರತಿವರ್ಷ 12 ಲಕ್ಷ ಆದಾಯವೂ ಪ್ರವಾಸಿಗರಿಂದ ಸಂಗ್ರಹವಾಗುತ್ತದೆ. ಇದೀಗ ಮತ್ತಷ್ಟು ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಮತ್ಸ್ಯಾಲಯಕ್ಕೆ ಹೊಸ ಟಚ್‌ ನೀಡಲು ಇಲಾಖೆ ನಿರ್ಧಾರ ಮಾಡಿದೆ. ಈಗಾಗಲೇ ಟೆಂಡರ್‌ ಪ್ರಕ್ರಿಯೆಯೂ ನಡೆದಿದ್ದು, bloo aqua studio ಬೆಂಗಳೂರು ಸಂಸ್ಥೆ ಹದಿನೈದು ಕೋಟಿ ರೂಪಾಯಿ ವೆಚ್ಚದಲ್ಲಿ ಮತ್ಸ್ಯಾಲಯವನ್ನು ಅಭಿವೃದ್ದಿ ಮಾಡಲು ಪ್ರಸ್ತಾವನೆ ಸಲ್ಲಿಸಿದೆ. ಇದರಂತೆ ಮತ್ಸ್ಯಾಲಯದ ಹೊಸ ವಿನ್ಯಾಸವನ್ನು ಬದಲಾಯಿಸದೆ 2 ಅಂತಸ್ತಿನಲ್ಲಿ ವಿವಿಧ ಟ್ಯಾಂಕ್‌ಗಳನ್ನು ಇರಿಸಿ ಅಲಂಕರಿಸಲಾಗುತ್ತದೆ. ಇಲ್ಲಿ ಮೆರೈನ್‌ ಅಕ್ವೇರಿಯಂ, ಜೆಲ್ಲಿ ಅಕ್ವೇರಿಯಂ ಹಾಗೂ ಸಿಹಿ ನೀರಿನ ಅಲಂಕಾರಿಕ 150 ಕ್ಕೂ ಹೆಚ್ಚು ಮೀನು ತಳಿಗಳನ್ನು ಪ್ರದರ್ಶಿಸಲಾಗುತ್ತದೆ. 

ಇನ್ನು ಈ ಸುರಂಗ ಅಕ್ವೇರಿಯಂನಲ್ಲಿ 30 ಕ್ಕೂ ಹೆಚ್ಚು ಬಗೆಯ ಅಲಂಕಾರಿಕ ಆಕ್ವಾ ಪ್ರಾಣಿಗಳು ಇರುತ್ತವೆ ಮತ್ತು ಇದು 60,000 ಲೀಟರ್ ಸಮುದ್ರದ ನೀರನ್ನು ಹೊಂದಿರುತ್ತದೆ. ಇದು 24 ಅಡಿ ಉದ್ದ, 10 ಅಡಿ ಅಗಲ ಮತ್ತು 15 ಅಡಿ ಎತ್ತರ ಇರಲಿದೆ ಎಂದು ಪಿಪಿಪಿ ಮಾದರಿಯ ಪಾಲುದಾರರಾಗಿರುವ ನಮ್ಮ ಬೆಂಗಳೂರು ಆಕ್ವಾ ಪ್ರೈವೇಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಎಸ್ ನಂದಕುಮಾರ್ ಹೇಳಿದ್ದಾರೆ. ಸಿಂಗಾಪುರ, ದುಬೈ ಮತ್ತು ಚೀನಾದಲ್ಲಿ ಇದೇ ರೀತಿಯ ಸುರಂಗ ಅಕ್ವೇರಿಯಂಗಳನ್ನು ಅಭಿವೃದ್ಧಿಪಡಿಸಲಾಗಿದೆ. ಭಾರತದಲ್ಲಿ ಗುಜರಾತಿನಲ್ಲಿ ಒಂದಿದೆ. ಆದರೆ ಇದು ಕರ್ನಾಟಕದಲ್ಲಿ ಇದೇ ಮೊದಲು ಎಂದು ಅವರು ಹೇಳಿದರು.

ಒಂದು ಲಕ್ಷ ಲೀಟರ್ ನೀರು ಇರುವ ಕೊಯಿ ಕೊಳವನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು, ಇವು 1.5 ಅಡಿಗಳಷ್ಟು ದೊಡ್ಡ ಮೀನುಗಳನ್ನು ಹೊಂದಿರುವ ದೊಡ್ಡ ಕೊಳಗಳಾಗಿವೆ. ಮೀನುಗಳು ವಿವಿಧ ಬಣ್ಣಗಳಿಂದ ಕೂಡಿರುತ್ತವೆ ಮತ್ತು ಸಂದರ್ಶಕರು ಅವುಗಳಿಗೆ ಆಹಾರವನ್ನು ಕೂಡ ನೀಡಬಹುದು. ಅಂತಹ ಕನಿಷ್ಠ 150 ಮೀನುಗಳನ್ನು ಹೊಂದಲು ನಾವು ಯೋಜಿಸುತ್ತಿದ್ದೇವೆ. ವಿವಿಧ ಬಗೆಯ ಅಕ್ವೇರಿಯಂಗಳನ್ನು ಹೊಂದಿರುವ ಮ್ಯೂಸಿಯಂ ಮತ್ತು ಹೈಟೆಕ್ ಸೌಲಭ್ಯಗಳನ್ನು ಹೊಂದಿರುವ ಮೀನುಗಳು ಹೆಚ್ಚುವರಿ ಆಕರ್ಷಣೆಯಾಗಿರಲಿದೆ. ಮೀನುಗಾರಿಕೆಯನ್ನು ಕೈಗೊಳ್ಳಲು ಬಯಸುವ ಉದ್ಯಮಿಗಳಿಗೆ ತರಬೇತಿ ನೀಡುವ ಸೌಲಭ್ಯವೂ ಇರುತ್ತದೆ. ಅಕ್ವೇರಿಯಂಗೆ 17,000 ಚದರ ಅಡಿ ಜಾಗವನ್ನು ಮಂಜೂರು ಮಾಡಲಾಗಿದ್ದು, ಆರಂಭದಲ್ಲಿ 2,000 ಚದರ ಅಡಿಯನ್ನು ಬಳಸಿಕೊಳ್ಳಲಾಗುವುದು ಎಂದು ನಂದಕುಮಾರ್ ಹೇಳಿದರು.

'ಅಕ್ವೇರಿಯಂ ವಿಶ್ವ ದರ್ಜೆಯ ಆಕರ್ಷಣೆಯಾಗಲಿದೆ'
ಅಂತೆಯೇ ಪ್ರಸ್ತುತ ಕಬ್ಬನ್ ಪಾರ್ಕ್ ನಲ್ಲಿರುವ ಮತ್ಸಾಲಯವನ್ನು ವಿಶ್ವ ದರ್ಜೆಯ ಪ್ರವಾಸಿ ಆಕರ್ಷಣೆಯಾಗಿ ಅಭಿವೃದ್ಧಿಪಡಿಸಲು ನಮಗೆ ಸಾಕಷ್ಟು ಸ್ಥಳಾವಕಾಶವಿದೆ ಎಂದು ಹೇಳಿದ ನಂದಕುಮಾರ್ ಅವರು, 1983ರಲ್ಲಿ ನಿರ್ಮಿಸಲಾಗಿರುವ ಅಕ್ವೇರಿಯಂ ಅನ್ನು ಒಮ್ಮೆಯೂ ನವೀಕರಿಸಲಾಗಿಲ್ಲ. ಇದರಿಂದ ವಾರ್ಷಿಕ 12 ಲಕ್ಷ ರೂ. ಆದಾಯ ಬರುತ್ತಿದ್ದು, ಇದನ್ನು ನವೀಕರಿಸುವ ಅಗತ್ಯವಿದೆ ಎಂದು ಹೇಳಿದರು. ಇದೇ ವಿಚಾರವಾಗಿ ಮೀನುಗಾರಿಕಾ ಸಚಿವ ಎಸ್.ಅಂಗಾರ ಅವರು ಮಾತನಾಡಿ ಮತ್ಸಾಲಯದ ಮೂಲ ರಚನೆಗೆ ಧಕ್ಕೆಯಾಗದಂತೆ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.

ಟಿಕೆಟ್ ದರ
ಮೂಲಗಳ ಪ್ರಕಾರ, ಅಕ್ವೇರಿಯಂನ ಟಿಕೆಟ್ ದರವನ್ನು ವಯಸ್ಕರಿಗೆ ರೂ 80 ಮತ್ತು ಮಕ್ಕಳಿಗೆ ರೂ 25 ನಿಗದಿಪಡಿಸುವ ಸಾಧ್ಯತೆಯಿದೆ. ಇದನ್ನು ವಾರಾಂತ್ಯದಲ್ಲಿ ಕ್ರಮವಾಗಿ ರೂ 100 ಮತ್ತು ರೂ 40 ಕ್ಕೆ ಹೆಚ್ಚಿಸಬಹುದು. ಪ್ರತಿ ಮೂರು ವರ್ಷಗಳಿಗೊಮ್ಮೆ ಟಿಕೆಟ್ ದರವನ್ನು ಹೆಚ್ಚಿಸಲಾಗುವುದು ಎಂದು ಇಲಾಖೆ ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com