

ಮಂಗಳೂರು/ಕೊಡಗು/ಉತ್ತರ ಕನ್ನಡ: ಕರಾವಳಿ, ಕೊಡಗು, ಮಲೆನಾಡು, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಧಾರಾಕಾರ ಮಳೆ ಮುಂದುವರಿದಿದೆ. ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ, ಕೊಡಗು, ಉತ್ತರ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಅಲ್ಲಿನ ಪರಿಸ್ಥಿತಿ ನೋಡಿಕೊಂಡು ಮುಂಜಾಗ್ರತೆ ಕ್ರಮವಾಗಿ ಶಾಲೆಗಳಿಗೆ ಜಿಲ್ಲಾಡಳಿತ ರಜೆ ಘೋಷಿಸಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುರಿಯುತ್ತಿರುವ ಅವ್ಯಾಹತ ಮಳೆಯಿಂದ ಹಲವು ಪ್ರದೇಶಗಳಲ್ಲಿ ಭೂಕುಸಿತ ಉಂಟಾಗಿದೆ. ಮರಗಳು ಧರೆಗುರುಳಿವೆ. ರಸ್ತೆ, ಮನೆಗಳ ಮುಂದೆ ಪ್ರವಾಹ ಪರಿಸ್ಥಿತಿ ಎದುರಾಗಿದೆ. ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ ರಾಜೇಂದ್ರ ಕೆ ವಿ ಇಂದು ಜಿಲ್ಲೆಯ ಎಲ್ಲಾ ಅಂಗನವಾಡಿಗಳು, ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದ್ದಾರೆ.
ಮಂಗಳೂರಿನ ಗುರುಪುರ ಹೆದ್ದಾರಿ ಬಳಿ ಭಾರೀ ಭೂಕುಸಿತ ಉಂಟಾಗಿರುವುದರಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಎಂಜಿನಿಯರ್ ಗಳು ಒಂದು ಬದಿಯ ಸಂಚಾರವನ್ನು ಮುಚ್ಚಿದ್ದಾರೆ. ಬದಲಿ ಸಂಚಾರದ ಬಗ್ಗೆ ಪೊಲೀಸರು ಕ್ರಮ ಕೈಗೊಳ್ಳಲಿದ್ದಾರೆ. ಮಾಜಿ ಶಾಸಕ ಮೌವುದ್ದಿನ್ ಬಾವಾ ಗುರುಪುರ-ಆದ್ಯಪಾಡಿ ರಸ್ತೆಗೆ ಭೂಕುಸಿತ ಉಂಟಾದ ಹಿನ್ನೆಲೆಯಲ್ಲಿ ಭೇಟಿ ನೀಡಿದ್ದಾರೆ. ಸುತ್ತಮುತ್ತಲಿನ ಸುಮಾರು 800 ಕುಟುಂಬಗಳಿಗೆ ಬದಲಿ ಮಾರ್ಗ ಸಂಚಾರಕ್ಕೆ ಇಲ್ಲದಿರುವುದರಿಂದ ಜಿಲ್ಲಾಧಿಕಾರಿಗಳು ತಕ್ಷಣವೇ ಕ್ರಮ ಕೈಗೊಳ್ಳಬೇಕೆಂದು ಕೋರಿದ್ದಾರೆ. ಈ ರಸ್ತೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಂಪರ್ಕಿಸುತ್ತದೆ.
ಭಾರೀ ಮಳೆಯ ನಡುವೆ ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗುತ್ತಿದೆ. ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗಿರುವುದರಿಂದ ಇನೊಲಿ, ಪವೂರು, ಹರೆಕಲ ಪ್ರದೇಶಗಳು ಮುಳುಗಡೆಯಾಗಿವೆ. ಕೃಷಿ ಭೂಮಿಗಳು ಸಹ ನೀರಿನಿಂದ ಮುಳುಗಡೆಯಾಗಿವೆ. ಈ ಮಧ್ಯೆ, ಹರೆಕಲದಿಂದ ಅಡ್ಯರ್ ವರೆಗೆ ದೋಣಿ ವ್ಯವಸ್ಥೆ ನಿಂತುಹೋಗಿದೆ. ಈ ಮಧ್ಯೆ ಶಾಸಕ ಯು ಟಿ ಖಾದರ್ ಅಡ್ಯರ್ ಗೆ ಭೇಟಿ ನೀಡಿದ್ದಾರೆ. ಬಂಟ್ವಾಳದಲ್ಲಿ ವಿದ್ಯುತ್ ಕಂಬ ಧರೆಗುರುಳಿದೆ. ಕುಡ್ತಮುಗೇರಿನಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ.
ಉಳ್ಳಾಲದಲ್ಲಿ ಸಮುದ್ರ ಕೊರೆತ
ಸೋಮೇಶ್ವರ, ಉಚ್ಚಿಲ, ಬಟ್ಟಪ್ಪಾಡಿ, ಉಳ್ಳಾಲದ ಸಿ ಗ್ರೌಂಡ್ನಲ್ಲಿ ಕಡಲ್ಕೊರೆತ ತೀವ್ರಗೊಂಡಿದ್ದು, ಕೆಲವು ಮನೆಗಳು ಕೊಚ್ಚಿ ಹೋಗುವ ಆತಂಕ ಎದುರಾಗಿದೆ. ಬೆಟ್ಟಂಪಾಡಿಯ ರಸ್ತೆಯನ್ನು ಈಗಾಗಲೇ ಸಮುದ್ರ ನುಂಗಿ ಹಾಕಿದೆ. ಉಳ್ಳಾಲ, ಕಲ್ಲಾಪು ಎಂಬಲ್ಲಿ 15 ಮನೆಗಳಿಗೆ ನೀರು ನುಗ್ಗಿದೆ. ಉಚ್ಚಿಲದಲ್ಲಿ ಶಾಲೆ, ಅಂಗನವಾಡಿ ಜಲಾವೃತಗೊಂಡಿದೆ.
ಇದೇ ವೇಳೆ ತೌಡುಹೊಳಿ ಕ್ರಾಸ್ನಿಂದ ನರಿಂಗಾನ ಗ್ರಾಮದ ಜಂಕ್ಷನ್ಗೆ ಸಂಪರ್ಕ ಕಲ್ಪಿಸುವ ಕೊರಕಟ್ಟಾದಲ್ಲಿ ಎರಡು ಬಂಡೆಗಳು ಉರುಳಿಬಿದ್ದಿವೆ. ಲೋಕೋಪಯೋಗಿ ಇಲಾಖೆ ಸಿಬ್ಬಂದಿ ಹಾಗೂ ಸ್ಥಳೀಯರ ಸಹಕಾರದಿಂದ ಬಂಡೆಗಲ್ಲುಗಳನ್ನು ತೆರವುಗೊಳಿಸಲಾಯಿತು. ನಡುಪದವು ಮತ್ತು ಮೋಂಟುಗೋಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಭೂಕುಸಿತ ಉಂಟಾಗಿ ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ.
ಕೇರಳ-ಕರ್ನಾಟಕ ಗಡಿ ಭಾಗವಾದ ವಿಟ್ಲ-ಪೆರ್ಲ ರಸ್ತೆಯ ಸಾರಡ್ಕದಲ್ಲಿ ಭೂಕುಸಿತ ಉಂಟಾಗಿದ್ದು ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ. ಹಾಸನ ಜಿಲ್ಲೆಯಲ್ಲಿ ಕೂಡ ಮಳೆಯ ಆರ್ಭಟ ಮುಂದುವರಿದಿದೆ.