
ಬೆಂಗಳೂರು: ರಾಜ್ಯಾದ್ಯಂತ 67ನೇ ಕನ್ನಡ ರಾಜ್ಯೋತ್ಸವ ಸಂಭ್ರಮ ಮನೆ ಮಾಡಿದ್ದು, ರಾಜ್ಯೋತ್ಸವ ಆಚರಣೆಗೆ ನಗರದ ಕಂಠೀರವ ಸ್ಟೇಡಿಯಂನಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕಾರ್ಯಕ್ರಮಕ್ಕೆ ಹಲವು ಜನರು ಆಗಮಿಸುವ ಹಿನ್ನೆಲೆಯಲ್ಲಿ ಸ್ಟೇಡಿಯಂ ಸುತ್ತಮುತ್ತಲೂ ಬಿಗಿ ಭದ್ರತೆಯನ್ನು ನಿಯೋಜಿಸಲಾಗಿದೆ.
ಇಂದು ಬೆಳಿಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಕನ್ನಡ ಧ್ವಜಾರೋಹಣ ಮಾಡಿಲಿದ್ದು, ನಂತರ ರಾಜ್ಯವನ್ನುದ್ದೇಶಿಸಿ ಮಾತನಾಡಲಿದ್ದಾರೆ.
ಮಧ್ಯಾಹ್ನ 2 ಗಂಟೆಗೆ ಮೈಸೂರು ಬ್ಯಾಂಕ್ ಬಳಿಯ ನೃಪತುಂಗ ಕಲ್ಯಾಣ ಮಂಟಪದಿಂದ ಕನ್ನಡ ತಾಯಿ ಭುವನೇಶ್ವರಿ ಪೂಜೆ, ಉತ್ಸವ ಹಾಗೂ ಮೆರವಣಿಗೆ ನಡೆಯಲಿದ್ದು, ಸಂಜೆ 4 ಗಂಟೆಗೆ ರಾಜ್ಯೋತ್ಸವ ಪ್ರಶಸ್ತಿ ಪಡೆದವರ ಜೊತೆ ಸಂತೋಷ ಕೂಟ ನಡೆಯಲಿದೆ. ಪ್ರತಿ ಶಾಲೆ, ಗ್ರಾಮ, ಸಂಘ ಸಂಸ್ಥೆಗಳು, ಸರ್ಕಾರಿ ಕಚೇರಿಗಳಲ್ಲಿ ಇಂದು ಕನ್ನಡ ರಾಜ್ಯೋತ್ಸವ ನಡೆಯಲಿದೆ.
ನಿನ್ನೆಯಷ್ಟೇ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಸಿಎಂ ಬೊಮ್ಮಾಯಿಯವರು, ನಾಡಿನಾದ್ಯಂತ ಗ್ರಾಮಗಳಲ್ಲಿ, ನಗರಗಳಲ್ಲಿ, ಶಾಲೆ ಹಾಗೂ ಇತರ ಸಂಘ ಸಂಸ್ಥೆಗಳಲ್ಲಿ ಸರ್ಕಾರಿ ಕಚೇರಿಗಳಲ್ಲಿ ರಾಜ್ಯೋತ್ಸವ ಆಚರಿಸಬೇಕು ಹಾಗೂ ಕನ್ನಡದ ಧ್ವಜಗಳನ್ನು ಹಾರಿಸಬೇಕು ಎಂದು ಕರೆ ನೀಡಿದರು.
ನಾಳೆ ಸಂಜೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗಳ ವಿತರಣೆ ರವೀಂದ್ರ ಕಲಾಕ್ಷೇತ್ರದಲ್ಲಿ ಆಗಲಿದ್ದು, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಎಲ್ಲ ಶ್ರೇಷ್ಠ ವ್ಯಕ್ತಿಗಳಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಕಾರ್ಯಕ್ರಮದಲ್ಲಿ ಎಲ್ಲರೂ ಪಾಲ್ಗೊಳ್ಳಬೇಕು ಎಂದು ಮುಖ್ಯಮಂತ್ರಿಗಳು ತಿಳಿಸಿದರು.
Advertisement