'ಮುರುಘಾ ಸ್ವಾಮಿಗಿಂತ ನಮ್ ಟಗರು ಕಳ್ಳ, ಒಂದೇ ಸಾರಿ 20 ಕುರಿಗಳ ಮೇಲೆ ಬೀಳುತ್ತೆ; ಸಿದ್ದರಾಮಯ್ಯ ವಿರುದ್ಧ ಮುಖಂಡರ ಪಿಸುಮಾತು ವೈರಲ್

ರಾಜ್ಯದಲ್ಲಿ ಮತ್ತೊಂದು ಗುಸುಗುಸು.. ಪಿಸುಪಿಸು ಮಾತು ಬಹಿರಂಗವಾಗಿದ್ದು, ಕುರುಬ ಸಮುದಾಯದ ಮುಖಂಡರಾದ ಮುಕುಡಪ್ಪ ಮತ್ತು ಎಸ್. ಪುಟ್ಟಸ್ವಾಮಿ ನಡುವಿನ ಮಾತುಕತೆ ವ್ಯಾಪಕ ವೈರಲ್ ಆಗಿದೆ.
ಸಿದ್ದರಾಮಯ್ಯ ಮತ್ತು ಮುಕುಡಪ್ಪ
ಸಿದ್ದರಾಮಯ್ಯ ಮತ್ತು ಮುಕುಡಪ್ಪ

ಬೆಂಗಳೂರು: ರಾಜ್ಯದಲ್ಲಿ ಮತ್ತೊಂದು ಗುಸುಗುಸು.. ಪಿಸುಪಿಸು ಮಾತು ಬಹಿರಂಗವಾಗಿದ್ದು, ಕುರುಬ ಸಮುದಾಯದ ಮುಖಂಡರಾದ ಮುಕುಡಪ್ಪ ಮತ್ತು ಎಸ್. ಪುಟ್ಟಸ್ವಾಮಿ ನಡುವಿನ ಮಾತುಕತೆ ವ್ಯಾಪಕ ವೈರಲ್ ಆಗಿದೆ.

ಕುರುಬ ಸಮುದಾಯದ ಕೆಎಸ್ ಈಶ್ವರಪ್ಪ ಅವರನ್ನು ಮತ್ತೆ ಸಂಪುಟ ಸೇರಿಸಿಕೊಳ್ಳವಂತೆ ಕರೆಯಲಾಗಿದ್ದ ಸುದ್ದಿಗೋಷ್ಠಿಗೂ ಮುನ್ನ ಸಿದ್ದರಾಮಯ್ಯನವರ ವೈಯಕ್ತಿಕ ಜೀವನದ ಬಗ್ಗೆ ಕುರುಬ ಸಮುದಾಯದ ಮುಖಂಡರಾದ ಮುಕುಡಪ್ಪ ಮತ್ತು ಎಸ್. ಪುಟ್ಟಸ್ವಾಮಿ ಪಿಸುಮಾತು ನಡೆಸಿದ್ದು, ಈ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ.

ವಿಡಿಯೋದಲ್ಲಿ ಮುಕುಡಪ್ಪ ಅವರು ಸಿದ್ದರಾಮಯ್ಯರನ್ನು ಉದ್ದೇಶಿಸಿ, 'ಮುರುಘಾ ಸ್ವಾಮೀಜಿ ವಿಷಯ ಹೊರಬಂದಿದೆ. ನಮ್ಮ ಟಗರು ಏನ್ ಕಡಿಮೆನಾ? 20 ಕುರಿಗಳ ಮೇಲೆ ಒಂದು ಟಗರು ಎಗರಿ ಬೀಳುತ್ತೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯನವರ ಬಗ್ಗೆ ಮಾತನಾಡಿದ್ದಾರೆ.

'ನಮ್ಮ ಟಗರು ಇದೆಯಲ್ಲಾ ಮುರುಘಾ ಸ್ವಾಮೀಜಿಯಂತೆ ಕಳ್ಳ...  ನಮ್ಮ ಟಗರು ಏನ್ ಕಡಿಮೆನಾ 20 ಕುರಿಗಳ ಮೇಲೆ ಒಂದು ಟಗರು ಎಗರಿ ಬೀಳುತ್ತೆ. ಕೆಲವರ ವಿಷಯ ಹೊರಬರುತ್ತೆ. ಇಂತ ವಿಚಾರಗಳಲ್ಲಿ ಸಿದ್ದು ತುಂಬಾ ಹುಷಾರು, ಮನೆ ಸೇರಿಕೊಂಡು ಬಿಡುತ್ತಾರೆ.. ಸಿದ್ಧರಾಮಯ್ಯ ನೋಡಿ ಕಲಿಯಬೇಕು ಎಂದು ಹೇಳಿದ್ದಾರೆ. ಇದಕ್ಕೆ ಎಸ್. ಪುಟ್ಟಸ್ವಾಮಿ ಅವರೂ ಕೂಡ ಧನಿಗೂಡಿಸಿದ್ದಾರೆ.

ಯಾರು ಈ ಮುಕುಡಪ್ಪ?
ಮುಕುಡಪ್ಪ ಅವರು ಕುರುಬ ಸಮುದಾಯದ ಪ್ರಮುಖ ನಾಯಕರಾಗಿದ್ದು, ಕೆಪಿಎಸ್ಸಿ ಮಾಜಿ ಸದಸ್ಯರಾಗಿದ್ದರು. ಮುಖ್ಯವಾಗಿ ಮಾಜಿ ಸಿದ್ದರಾಮಯ್ಯ ಅವರ ಆಪ್ತರ ಬಣದಲ್ಲಿ ಗುರುತಿಸಿಕೊಂಡವರಾಗಿದ್ದಾರೆ. ಇನ್ನು ಮುಕುಡಪ್ಪ ಅವರೊಂದಿಗೆ ಮಾತಿಗೆ ಮಾತು ಸೇರಿಸಿದ್ದವರು ನಿವೃತ್ತ ಐಎಎಸ್ ಅಧಿಕಾರಿ ಎಸ್ ಪುಟ್ಟಸ್ವಾಮಿ. ಇವರೂ ಕೂಡ ಕೂಡ ಕುರುಬ ಸಮುದಾಯಕ್ಕೆ ಸೇರಿದವರಾಗಿದ್ದು, ತಮ್ಮದೇ ಸಮುದಾಯದ ನಾಯಕನ ವಿರುದ್ಧ ಇವರು ಆಡಿರುವ ಮಾತುಗಳು ಇದೀಗ ವ್ಯಾಪಕ ವೈರಲ್ ಆಗುತ್ತಿದೆ.

ಈ ಹಿಂದೆ ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್ ವಿರುದ್ಧವೂ ಇಂತಹುದ್ದೇ ಪಿಸುಮಾತು ವೈರಲ್ ಆಗಿತ್ತು. ಕಾಂಗ್ರೆಸ್ ಮುಖಂಡ ವಿಎಸ್ ಉಗ್ರಪ್ಪ ಸುದ್ದಿಗೋಷ್ಠಿ ವೇಳೆ ಆಡಿದ್ದ ಮಾತುಗಳು ವ್ಯಾಪಕ ವೈರಲ್ ಆಗಿ ಕಾಂಗ್ರೆಸ್ ಪಕ್ಷಕ್ಕೆ ಮುಜುಗರ ತಂದಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com