RTI ಕಾರ್ಯಕರ್ತ ಲಿಂಗರಾಜು ಹತ್ಯೆ: ಪಾಲಿಕೆ ಮಾಜಿ ಸದಸ್ಯೆ ಗೌರಮ್ಮ, ಪತಿ ಗೋವಿಂದರಾಜು ಸೇರಿ ಎಲ್ಲ ಆರೋಪಿಗಳ ಖುಲಾಸೆ!

ರಾಜ್ಯಾದ್ಯಂತ ಭಾರಿ ಸುದ್ದಿಗೆ ಗ್ರಾಸವಾಗಿದ್ದ ಆರ್ ಟಿಐ ಕಾರ್ಯಕರ್ತ ಲಿಂಗರಾಜು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಪಾಲಿಕೆ ಮಾಜಿ ಸದಸ್ಯೆ ಗೌರಮ್ಮ, ಪತಿ ಗೋವಿಂದರಾಜು ಸೇರಿದಂತೆ ಪ್ರಕರಣದ ಎಲ್ಲ ಆರೋಪಿಗಳನ್ನು ಪ್ರಕರಣದಿಂದ ಖುಲಾಸೆಗೊಳಿಸಿದೆ.
ಆರ್ ಟಿಐ ಕಾರ್ಯಕರ್ತ ಲಿಂಗರಾಜು ಹತ್ಯೆ
ಆರ್ ಟಿಐ ಕಾರ್ಯಕರ್ತ ಲಿಂಗರಾಜು ಹತ್ಯೆ
Updated on

ಬೆಂಗಳೂರು: ರಾಜ್ಯಾದ್ಯಂತ ಭಾರಿ ಸುದ್ದಿಗೆ ಗ್ರಾಸವಾಗಿದ್ದ ಆರ್ ಟಿಐ ಕಾರ್ಯಕರ್ತ ಲಿಂಗರಾಜು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಪಾಲಿಕೆ ಮಾಜಿ ಸದಸ್ಯೆ ಗೌರಮ್ಮ, ಪತಿ ಗೋವಿಂದರಾಜು ಸೇರಿದಂತೆ ಪ್ರಕರಣದ ಎಲ್ಲ ಆರೋಪಿಗಳನ್ನು ಪ್ರಕರಣದಿಂದ ಖುಲಾಸೆಗೊಳಿಸಿದೆ.

ಹತ್ತು ವರ್ಷದ ಹಿಂದೆ ಅಂದರೆ 2012ರಲ್ಲಿ ಬೆಂಗಳೂರು ನಗರದಲ್ಲಿ ನಡೆದಿದ್ದ ಆರ್‌ಟಿಐ ಕಾರ್ಯಕರ್ತ ಲಿಂಗರಾಜು ಹತ್ಯೆ ಪ್ರಕರಣದಲ್ಲಿ ಬಿಬಿಎಂಪಿ ಮಾಜಿ ಸದಸ್ಯೆ ಗೌರಮ್ಮ ಅವರ ಪತಿ ಸಿ.ಗೋವಿಂದರಾಜು ಸೇರಿ 10 ಮಂದಿ ಆರೋಪಿಗಳನ್ನು ಹೈಕೋರ್ಟ್ ಖುಲಾಸೆಗೊಳಿಸಿದೆ. ಸಾಕ್ಷಿಗಳ ಕೊರತೆ ಮತ್ತು ಪ್ರಮುಖ ಸಾಕ್ಷಿಗಳು ಪ್ರತಿಕೂಲ ಹೇಳಿಕೆ ನೀಡಿರುವುದರಿಂದ ಆರೋಪ ಸಾಬೀತು ಮಾಡುವ ಅಂಶಗಳಿಲ್ಲವೆಂದು ನ್ಯಾಯಾಲಯ ಎಲ್ಲ ಆರೋಪಿಗಳನ್ನು ಆರೋಪ ಮುಕ್ತಗೊಳಿಸಿದೆ. 

ಅಧೀನ ನ್ಯಾಯಾಲಯ ಆಜಾದ್ ನಗರದ ಮಾಜಿ ಪಾಲಿಕೆ ಸದಸ್ಯೆ ಗೌರಮ್ಮ, ಪತಿ ಸಿ.ಗೋವಿಂದರಾಜು ಮತ್ತಿತರರಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿತ್ತು. ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಯನ್ನು ಆಲಿಸಿದ ನ್ಯಾಯಮೂರ್ತಿಗಳಾದ ಕೆ.ಸೋಮಶೇಖರ್ ಮತ್ತು ಟಿ.ಜಿ.ಶಿವಶಂಕರೇಗೌಡ ಅವರನ್ನು ಒಳಗೊಂಡ ವಿಭಾಗೀಯಪೀಠ ಈ ಆದೇಶ ನೀಡಿದೆ. ಪ್ರಾಸಿಕ್ಯೂಷನ್ ಆರೋಪವನ್ನು ಸಾಬೀತುಪಡಿಸುವಂತಹ ಸೂಕ್ತ, ಸಮಗ್ರ ಹಾಗೂ ಪೂರಕ ಸಾಕ್ಷ್ಯ ಮತ್ತು ದಾಖಲೆಗಳನ್ನು ಸಲ್ಲಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಹಾಗಾಗಿ ಆರೋಪಿಗಳನ್ನು ಖುಲಾಸೆಗೊಳಿಸಲಾಗುತ್ತಿದೆ ಎಂದು ನ್ಯಾಯಾಲಯ ಹೇಳಿದೆ.

ಈ ಪ್ರಕರಣದಲ್ಲಿ 44 ಮಂದಿ ಸಾಕ್ಷ್ಯ ಹೇಳಿದ್ದು, ಪ್ರಾಸಿಕ್ಯೂಷನ್ ಅವುಗಳ ಆಧಾರದ ಮೇಲೆ ನಿಂತಿದೆ, ಆದರೆ ಮೃತರ ಪತ್ನಿ ಹಾಗೂ ಪುತ್ರನೇ ಪ್ರತಿಕೂಲ ಸಾಕ್ಷಿ ಹೇಳಿದ್ದಾರೆ. ಹಾಗಾಗಿ ಆರೋಪಿಗಳು ಕ್ರಿಮಿನಲ್ ಉದ್ದೇಶದಿಂದಲೇ ಕೊಲೆಗೈಯ್ದಿದ್ದಾರೆ ಎಂಬ ಅರೋಪವನ್ನು ಸಾಬೀತುಪಡಿಸುವಲ್ಲಿ ಪ್ರಾಸಿಕ್ಯೂಷನ್ ವಿಫಲವಾಗಿದೆ. ಹಾಗಾಗಿ ಇಡೀ ಪ್ರಕರಣ ಸಂದೇಹಾಸ್ಪದವಾಗಿದೆ, ಹಾಗಾಗಿ ಆರೋಪಿಗಳನ್ನು ಬೆನಿಫಿಟ್ ಆಫ್ ಡೌಟ್ ಆಧರಿಸಿ ಖುಲಾಸೆ ಮಾಡಲಾಗುತ್ತಿದೆ ಎಂದು ನ್ಯಾಯಾಲಯ ಆದೇಶಿಸಿದೆ.

ಏನಿದು ಪ್ರಕರಣ?
ಆರ್.ಟಿ.ಐ ಕಾರ್ಯಕರ್ತ ಲಿಂಗರಾಜು ಅವರನ್ನು ಆರೋಪಿಗಳು 2012ರ ನವೆಂಬರ್ 20ರಂದು ಆರೋಪಿಗಳು ಮಚ್ಚು ಹಾಗೂ ಕತ್ತಿಗಳಿಂದ ಮೈಸೂರು ರಸ್ತೆಯ ಬಿಎಂಕೆ ಬಡಾವಣೆಯ ಅವರ ನಿವಾಸದ ಎದುರೇ ಕೊಲೆಗೈಯ್ದಿದ್ದರು. ತೀವ್ರ ಕುತೂಹಲ ಕೆರೆಳಿಸಿದ್ದ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಹೈಕೋರ್ಟ್, ತನಿಖೆಗೆ ವಿಶೇಷ ತಂಡವನ್ನು ರಚನೆ ಮಾಡಿತ್ತು. ಆನಂತರ ಪೊಲೀಸರು ಆಗಿನ ಪಾಲಿಕೆ ಸದಸ್ಯೆ ಗೌರಮ್ಮ, ಪತಿ ಗೋವಿಂದರಾಜು, ರಂಗಸ್ವಾಮಿ, ಅರ್. ಶಂಕರ್, ರಾಘವೇಂದ್ರ ಚಂದ್ರ, ಶಂಕರ್ ಅಲಿಯಾಸ್ ಗುಂಡ, ಉಮಾಶಂಕರ್, ಸಿ.ವೇಲು, ಜಹೀರ್, ಸುರೇಶ್ ಮತ್ತು ಲೋಕನಾಥ್ ಸೇರಿ 10 ಮಂದಿಯನ್ನು ಬಂಧಿಸಿತ್ತು. ಅವರುಗಳ ವಿರುದ್ಧ ಆರೋಪಪಟ್ಟಿಯನ್ನೂ ಸಹ ದಾಖಲಿಸಿತ್ತು.

ಯಾರು ಪತ್ರಕರ್ತ ಲಿಂಗರಾಜು?
ಲಿಂಗರಾಜು 'ಮಹಾ ಪ್ರಚಂಡ' ಎಂಬ ಪತ್ರಿಕೆಯ ಸಂಪಾದಕರಾಗಿದ್ದು, ಮಾಹಿತಿ ಹಕ್ಕು ಅಡಿ ದಾಖಲೆಗಳನ್ನು ತೆಗೆದು ತನಿಖಾ ಸಂಸ್ಥೆಗಳಿಗೆ ದೂರು ನೀಡುತ್ತಿದ್ದರು. ಅಂದಿನ ಪಾಲಿಕೆ ಸದಸ್ಯೆ ಗೌರಮ್ಮ ಪತಿ ಗೋವಿಂದರಾಜು ಅವರ ಜೊತೆಗೆ ಸ್ನೇಹದಿಂದ ಇದ್ದರೂ ಅವರ ಭೂ ಅಕ್ರಮ ಕುರಿತು ಲಿಂಗರಾಜು 2010ರಲ್ಲಿ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಈ ಬಗ್ಗೆ ಮಾತುಕತೆ ರಾಜಿಗೆ ಗೋವಿಂದರಾಜು ಯತ್ನಿಸಿ ವಿಫಲರಾದಾಗ, ಲಿಂಗರಾಜುಗೆ ಬೆದರಿಕೆ ಹಾಕಿದ್ದರು. ಗೋವಿಂದರಾಜು ಬೆದರಿಕೆ ಹಾಕಿರುವ ಬಗ್ಗೆ ಲಿಂಗರಾಜು ವಕೀಲ ಧ್ರುವಕುಮಾರ್ ಅವರಿಂದ ಪ್ರಮಾಣ ಪತ್ರ ಕೂಡ ಮಾಡಿಸಿದ್ದರು. ಅಜಾದ್ ನಗರ ಕಾರ್ಪೋರೇಟರ್ ಗೌರಮ್ಮ ಮತ್ತು ಗೋವಿಂದರಾಜು ಅವರ ಅಕ್ರಮ ಸಂಪತ್ತಿನ ಬಗ್ಗೆ ದಾಖಲೆಗಳನ್ನು ಸಂಗ್ರಹಿಸಿ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು. ದೂರಿನ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು ಕಾರ್ಪೋರೇಟರ್ ಗೌರಮ್ಮ ಮತ್ತು ಗೋವಿಂದರಾಜು ವಿರುದ್ಧ ಅಕ್ರಮ ಆಸ್ತಿ ಗಳಿಕೆ ಕೇಸು ದಾಖಲಿಸಿ ದಾಳಿ ನಡೆಸಿದ್ದರು.

ಈ ವೇಳೆ ಮಹತ್ವದ ದಾಖಲೆಗಳನ್ನು ಲೋಕಾಯುಕ್ತ ಪೊಲೀಸರು ವಶಪಡಿಸಿಕೊಂಡಿದ್ದರು. ಇದಾದ ಕೆಲವೇ ದಿನಗಳ ಬಳಿಕ ದೂರುದಾರ ಲಿಂಗರಾಜು ಅವರನ್ನು ವಿಠ್ಠಲ್ ನಗರದ ಅವರ ನಿವಾಸದ ಎದುರಲ್ಲೇ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಪ್ರಕರಣ ಬೆನ್ನಟ್ಟಿದ ಪೊಲೀಸರು ಪ್ರಮುಖ ಸಾಕ್ಷಾಧಾರಗಳ ಆಧಾರದ ಮೇಲೆ ರೌಡಿ ಶೀಟರ್ ಚಂದ್ರು ಮತ್ತು ಆತನ ಸಹಚರರಾದ ವೇಲು, ಶಂಕರ್, ಉಮಾಶಂಕರ್, ರಂಗಸ್ವಾಮಿ, ರಾಘವೇಂದ್ರ, ಶಂಕರ್ ಎಂಬುವರನ್ನು ಬಂಧಿಸಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com