ರಾಜ್ಯ ಕಾರ್ಮಿಕ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ..!

ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಸುಮಾರು 30 ಯೋಜನೆಗಳನ್ನು ಜಾರಿಗೊಳಿಸುತ್ತಿರುವ ರಾಜ್ಯ ಕಾರ್ಮಿಕ ಇಲಾಖೆಯು ಸಿಬ್ಬಂದಿ ಕೊರತೆಯಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಸುಮಾರು 30 ಯೋಜನೆಗಳನ್ನು ಜಾರಿಗೊಳಿಸುತ್ತಿರುವ ರಾಜ್ಯ ಕಾರ್ಮಿಕ ಇಲಾಖೆಯು ಸಿಬ್ಬಂದಿ ಕೊರತೆಯಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿದೆ.

ಇಲಾಖೆಯಲ್ಲಿರುವ ಒಟ್ಟು 888 ಹುದ್ದೆಗಳ ಪೈಕಿ 407 ಹುದ್ದೆಗಳು ಖಾಲಿ ಇದೆ, ಅಂದರೆ, ಇಲಾಖೆ ಪ್ರಸ್ತುತ ಶೇ.50ರಷ್ಟು ಸಿಬ್ಬಂದಿಯೊಂದಿಗೆ ಮಾತ್ರ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿದುಬಂದಿದೆ.

ಜಾರಿಗೊಳಿಸಲು ಅನೇಕ ಕಲ್ಯಾಣ ಯೋಜನೆಗಳಿವೆ, ವಿಶೇಷವಾಗಿ ರಾಜ್ಯದ ಜನಸಂಖ್ಯೆಯ ಬಹುಪಾಲು ಹೊಂದಿರುವ ಅಸಂಘಟಿತ ವಲಯದ ಕಾರ್ಮಿಕರಿಗಾಗಿ ಇಲಾಖೆಯಿಂದ ಹಲವು ಯೋಜನೆಗಳ ಜಾರಿಗೊಳಿಸಬೇಕಿದೆ. ಈ ಯೋಜನೆಗಳು ಕೌಶಲ್ಯ ಸುಧಾರಣೆ, ಆರ್ಥಿಕ ನೆರವು, ವೈದ್ಯಕೀಯ ನೆರವು ಮತ್ತು ಅವರ ಮಕ್ಕಳಿಗೆ ಶಿಕ್ಷಣದ ಗುರಿಯನ್ನು ಹೊಂದಿದ್ದು, ಇವುಗಳನ್ನು ಕಾರ್ಮಿಕ ನಿರೀಕ್ಷಕರು (ಲೇಬರ್ ಇನ್ಸ್'ಪೆಕ್ಟರ್) ಜಾರಿಗೊಳಿಸಬೇಕಿದೆ.

233 ತಾಲೂಕುಗಳಿಗೆ ಕೇವಲ 81 ಕಾರ್ಮಿಕ ನಿರೀಕ್ಷಕರು ಇದ್ದಾರೆ. "ನಮ್ಮ ಇಲಾಖೆಯ ಗಾತ್ರ ಚಿಕ್ಕದಾಗಿದೆ, ಆದರೆ ನಾವು ಹೆಚ್ಚಿನ ಸಂಖ್ಯೆಯ ಜನರಿಗೆ ಸೇವೆ ಸಲ್ಲಿಸುತ್ತೇವೆ. ಪ್ರತಿ ತಾಲೂಕಿಗೆ ಕನಿಷ್ಠ ಒಬ್ಬ ಕಾರ್ಮಿಕ ನಿರೀಕ್ಷಕರ ಅಗತ್ಯವಿದೆ. ಕಾರ್ಮಿಕ ನಿರೀಕ್ಷಕರಿಗೆ ಮಂಜೂರಾದ ಸಾಮರ್ಥ್ಯ 147 ಆಗಿದೆ, ಆದರೆ 81 ಮಂದಿ ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಕಾರ್ಮಿಕ ಇಲಾಖೆಯು ವಿವಿಧ ಕಾರ್ಮಿಕ ಕಾನೂನುಗಳ ಅನುಷ್ಠಾನ, ಯೋಜನೆಗಳ ಮೇಲ್ವಿಚಾರಣೆ ಮತ್ತು ಕನಿಷ್ಠ ವೇತನ ಪಾವತಿಯನ್ನು ಖಾತರಿಪಡಿಸುವತ್ತ ಕೆಲಸ ಮಾಡುತ್ತಿದೆ.

ಸಿಬ್ಬಂದಿ ಕೊರತೆಯು ಇತರ ಉದ್ಯೋಗಿಗಳ ಕೆಲಸದ ಹೊರೆಯನ್ನು ಹೆಚ್ಚಿಸುತ್ತಿದೆ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಹಿರಿಯ ಅಧಿಕಾರಿಯೊಬ್ಬರು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ.

ಈ ಸಂಬಂಧ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಅವರನ್ನು ಸಂಪರ್ಕಿಸಿದಾಗ, ಕರ್ನಾಟಕ ಲೋಕಸೇವಾ ಆಯೋಗಕ್ಕೆ ಪತ್ರ ಬರೆಯಲಾಗಿದ್ದು, 45 ಕಾರ್ಮಿಕ ನಿರೀಕ್ಷಕರ ನೇಮಕಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.

ನಿರ್ಮಾಣ ವಿಭಾಗದಲ್ಲಿ 230 ಕ್ಕೂ ಹೆಚ್ಚು ಕ್ಲೆರಿಕಲ್ ಸಿಬ್ಬಂದಿಯನ್ನು ನೇಮಿಸಿಕೊಳ್ಳಲು ಅನುಮತಿಯನ್ನು ಪಡೆದಿದ್ದೇವೆ, ಮುಖ್ಯವಾಗಿ ಡೇಟಾ ಆಪರೇಟರ್‌ಗಳ ನೇಮಕಾತಿಗೆ ಅನುಮತಿ ಪಡೆದುಕೊಳ್ಳಲಾಗಿದೆ. ಆದಾಗ್ಯೂ, ನಾವು ಒಂದೇ ಬಾರಿಗೆ ನೇಮಕಾತಿಯನ್ನು ಕೈಗೊಳ್ಳಲು ಸಾಧ್ಯವಿಲ್ಲ. ಹಂತಹಂತವಾಗಿ ನೇಮಕಾತಿ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಮತ್ತೊಬ್ಬ ಹಿರಿಯ ಅಧಿಕಾರಿ ಮಾತನಾಡಿ, ಸಿಬ್ಬಂದಿ ಕೊರತೆ ಕೇವಲ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿಲ್ಲ. ಇತರ ರಾಜ್ಯಗಳಾದ ಮಹಾರಾಷ್ಟ್ರ, ತಮಿಳುನಾಡು ಮತ್ತು ಪಂಜಾಬ್ ಕೂಡ ಇದೇ ಬಿಕ್ಕಟ್ಟನ್ನು ಎದುರಿಸುತ್ತಿವೆ. ಕಾರ್ಮಿಕ ಇಲಾಖೆ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಈ ಸಮಸ್ಯೆಯನ್ನು ಬಗೆಹರಿಸಲು ಸರ್ಕಾರ ಕ್ರಮಕೈಗೊಳ್ಳಲು ಇದು ಸಕಾಲವಾಗಿದೆ. ಪ್ರಸ್ತುತ ಇರುವ ಗುತ್ತಿಗೆ ನೌಕರರೇ ಹಲವು ಸಮಸ್ಯೆಗಳನ್ನು ಎದುರಿಸುತ್ತಿರುವ ಕಾರಣ ಹೊರಗುತ್ತಿಗೆ ನೇಮಕ ಮಾಡುವ ಪ್ರಸ್ತಾವನೆ ಸರಿಯಲ್ಲ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com