ಧರ್ಮ ದಂಗಲ್ ನಡುವೆಯೇ ನೆರವೇರಿತು ವಿವಿ ಪುರಂ ಸುಬ್ರಹ್ಮಣ್ಯ ಸ್ವಾಮಿ ಜಾತ್ರೆ, ಬೆಳ್ಳಿ ತೇರು ಎಳೆದು ಸಂಭ್ರಮಿಸಿದ ಭಕ್ತರು!

ಧರ್ಮ ದಂಗಲ್ ವಿವಾದದ ನಡುವೆಯೇ ವಿಶ್ವೇಶ್ವರಪುರದಲ್ಲಿರುವ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇಗುಲದಲ್ಲಿ ಮಂಗಳವಾರ ರಥೋತ್ಸವ ಸಡಗರ ಸಂಭ್ರಮದಿಂದ ನಡೆಯಿತು. 
ವಿವಿ ಪುರಂ ಸುಬ್ರಹ್ಮಣ್ಯ ಸ್ವಾಮಿ ಜಾತ್ರೆ, ಬೆಳ್ಳಿ ತೇರು
ವಿವಿ ಪುರಂ ಸುಬ್ರಹ್ಮಣ್ಯ ಸ್ವಾಮಿ ಜಾತ್ರೆ, ಬೆಳ್ಳಿ ತೇರು

ಬೆಂಗಳೂರು: ಧರ್ಮ ದಂಗಲ್ ವಿವಾದದ ನಡುವೆಯೇ ವಿಶ್ವೇಶ್ವರಪುರದಲ್ಲಿರುವ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇಗುಲದಲ್ಲಿ ಮಂಗಳವಾರ ರಥೋತ್ಸವ ಸಡಗರ ಸಂಭ್ರಮದಿಂದ ನಡೆಯಿತು. 

ಸಾಲಂಕೃತ ಉತ್ಸವಮೂರ್ತಿಯಿದ್ದ ರಥವನ್ನು ಭಕ್ತರು ಎಳೆದು ಧನ್ಯ ಭಾವ ಅನುಭವಿಸಿದರು. ಸಜ್ಜನ್​ರಾವ್ ಸರ್ಕಲ್​ನ ಮುಕ್ಕಾಲು ಭಾಗ ಸಂಚರಿಸಿದ ರಥವನ್ನು ಅಲ್ಲಿಯೇ ನಿಲ್ಲಿಸಲಾಗಿದೆ.  ರಾತ್ರಿ 8-30ಕ್ಕೆ ಮತ್ತೊಮ್ಮೆ ರಥೋತ್ಸವ ಆರಂಭವಾಗಿ ದೇಗುಲವನ್ನು ತಲುಪಲಿದೆ. ವಾಡಿಕೆಯಂತೆ ಸುಬ್ರಮಣ್ಯ ರಥ ಮತ್ತು ದೇವಾಲಯವನ್ನು ಗರುಡ ಪಕ್ಷಿಯು ಮಂಗಳವಾರವೂ ಪ್ರದಕ್ಷಿಣೆ ಹಾಕಿ, ಗೋಪುರದ ಮೇಲೆ ಕುಳಿತುಕೊಂಡಿತು. ಗರುಡನನ್ನು ಕಂಡ ಭಕ್ತರು, ಆಗಸದತ್ತ ಮುಖ ಮಾಡಿ ಕೈಮುಗಿದರು. ನಂತರ ವಿವಿಧ ಸೇವೆಗಳು ಆರಂಭವಾದವು. ಬೆಳ್ಳಿ ರಥದಲ್ಲಿ ಸುಬ್ರಮಣ್ಯ ಸ್ವಾಮಿಯ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿದ ನಂತರ ಪೂಜಾ ಕೈಂಕರ್ಯ ಆರಂಭವಾಯಿತು.

ಅವರ ಹೊಟ್ಟೆ ಮೇಲೆ ಹೊಡೆಯಬಾರದು
ರಥೋತ್ಸವದಲ್ಲಿ ಅನ್ಯಧರ್ಮೀಯರ ವ್ಯಾಪಾರಕ್ಕೆ ಅವಕಾಶ ನೀಡುವ ಕುರಿತು ಪ್ರತಿಕ್ರಿಯಿಸಿದ ಶಾಸಕ ಉದಯ್​​ ಗರುಡಾಚಾರ್​, ‘ಒಂದು ದಿನ ವ್ಯಾಪಾರ ಮಾಡಿ ಕುಟುಂಬವನ್ನು ಸಾಕುತ್ತಾರೆ. ನಾವು ಯಾಕೆ ಅವರ ಹೊಟ್ಟೆ ಮೇಲೆ ಹೊಡೆಯಬೇಕು. ದರ್ಗಾ ಬಳಿ ಹಿಂದೂಗಳು ಕೂಡ ವ್ಯಾಪಾರ ಮಾಡಬಹುದು’ ಎಂದು ಹೇಳಿದರು. ರಥೋತ್ಸವ ಸಂಭ್ರಮದಿಂದ ನೆರವೇರಿತು, ನಾನೂ ಭಾಗವಹಿಸಿದ್ದೆ. ಹಿಂದೂಗಳು ಯಾವತ್ತು ಯಾರಿಗೂ ತೊಂದರೆ ಕೊಡದಿರುವ ಸಮುದಾಯ. ಕೆಲ ಹುಡುಗರು ಮಾತ್ರ ಸುಮ್ಮನೆ ಗಲಾಟೆ ಮಾಡ್ತಾರೆ ಅಷ್ಟೇ ಎಂದು ಹೇಳಿದರು.

ಏನಿದು ವಿವಾದ?
ಹಲವು ತಿಂಗಳುಗಳಿಂದ ತಣ್ಷಗಾಗಿದ್ದ ಧರ್ಮ ವಿವಾದ ಮತ್ತೆ ಭುಗಿಲೆದ್ದಿದ್ದು, ಈ ಬಾರಿ ಬೆಂಗಳೂರಿನ ವಿವಿ ಪುರಂನ ಸುಬ್ರಹ್ಮಣ್ಯ ಸ್ವಾಮಿ ಜಾತ್ರೆ ನಡೆಯುತ್ತಿದ್ದು, ಜಾತ್ರೆಯಲ್ಲಿ ಅನ್ಯಧರ್ಮೀಯರ ವ್ಯಾಪಾರಕ್ಕೆ ಅವಕಾಶಕ್ಕೆ ಹಿಂದೂ ಪರ ವಿರೋಧಗಳು ವ್ಯಕ್ತವಾಗುತ್ತಿದೆ. ಸುಬ್ರಮಣ್ಯೇಶ್ವ ಜಾತ್ರೆಯಲ್ಲಿ ಹಿಂದೂಯೇತರರಿಗೆ ವ್ಯಾಪಾರಕ್ಕೆ ಅವಕಾಶ ನೀಡಲ್ಲ ಎಂದು ಹೇಳಿದ್ದ ಭಜರಂಗದಳದ ಸಂಚಾಲಕ ತೇಜಸ್ ಗೌಡ ಅವರನ್ನು ವಶಕ್ಕೆ ಪಡೆಯಲಾಗಿದೆ. ಅಂತೆಯೇ ಅನ್ಯಧರ್ಮೀಯರ ವ್ಯಾಪಾರಕ್ಕೆ ಅವಕಾಶ ಕೊಡಬಾರದು ಎಂಬ ನಿರ್ಣಯ ಅಂಗೀಕರಿಸಲಾಗಿದೆ.

ಈ ಹಿಂದೆ ಎಲ್ಲ ಧರ್ಮದವರಿಗೆ ಅವಕಾಶ ನೀಡುವುದಾಗಿ ಶಾಸಕ ಗರುಡಾಚಾರ್ ಎಚ್ಚರಿಕೆ ನೀಡಿದ ಹೊರತಸಾಗಿಯೂ ಹಿಂದೂ ಸಂಘಟನೆಗಳು ಟ್ವಿಟರ್ ಹಾಗೂ ವಾಟ್ಸಾಪ್ ನಲ್ಲಿ ಅಭಿಯಾನ ಆರಂಭಿಸಿ ಅನ್ಯಧರ್ಮೀಯರ ಅಂಗಡಿಗೆ ತೆರಳದೆ ಹಿಂದೂ ಅಂಗಡಿಯಲ್ಲೇ ಖರೀದಿ ಮಾಡುವಂತೆ ಅಭಿಯಾನ ನಡೆಸಿವೆ. ಜಾತ್ತೆಯ ಸಂದರ್ಭದಲ್ಲಿ ಅಹಿತಕರ ಘಟನೆ ನಡೆಯದಂತೆ 600ಕ್ಕೂ ಹೆಚ್ಚು ಪೋಲೀಸರನ್ನು ನಿಯೋಜನೆ ಮಾಡಲಾಗಿದೆ.ಇದೇ ವೇಳೆ ಅನ್ಯಧರ್ಮೀಯರಿಗೆ ವ್ಯಾಪಾರಕ್ಕೆ ಅವಕಾಶ ನೀಡಬಾರದು ಎಂದು ಒತ್ತಾಯಿಸಿ ಹಿಂದೂ ಸಂಘಟನೆಗಳು ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಭದ್ರತೆ ಕೈಗೊಳ್ಳಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com