ದಸರಾ ಬ್ರೇಕ್ ಬಳಿಕ ಮತ್ತೆ ಒತ್ತುವರಿ ತೆರವು ಕಾರ್ಯಾಚರಣೆಗಿಳಿದ ಬಿಬಿಎಂಪಿ!

ಬೆಂಗಳೂರಿನಲ್ಲಿ ಮತ್ತೆ ಜೆಸಿಬಿಗಳು ಘರ್ಜಿಸಿದ್ದು, ದಸರಾ ಹಿನ್ನಲೆಯಲ್ಲಿ ಬ್ರೇಕ್ ತೆಗೆದುಕೊಂಡಿದ್ದ ಅಕ್ರಮ ಒತ್ತುವರಿ ತೆರವು ಕಾರ್ಯಾಚರಣೆ ಸೋಮವಾರ ಮತ್ತೆ ಪುನಾರಂಭಗೊಂಡಿದೆ.
ಅಕ್ರಮ ಒತ್ತುವರಿ ತೆರವು ಕಾರ್ಯಾಚರಣೆ
ಅಕ್ರಮ ಒತ್ತುವರಿ ತೆರವು ಕಾರ್ಯಾಚರಣೆ

ಬೆಂಗಳೂರು: ಬೆಂಗಳೂರಿನಲ್ಲಿ ಮತ್ತೆ ಜೆಸಿಬಿಗಳು ಘರ್ಜಿಸಿದ್ದು, ದಸರಾ ಹಿನ್ನಲೆಯಲ್ಲಿ ಬ್ರೇಕ್ ತೆಗೆದುಕೊಂಡಿದ್ದ ಅಕ್ರಮ ಒತ್ತುವರಿ ತೆರವು ಕಾರ್ಯಾಚರಣೆ ಸೋಮವಾರ ಮತ್ತೆ ಪುನಾರಂಭಗೊಂಡಿದೆ.

ಹೌದು.. ಕೇವಲ ಬಡವರ ಮನೆಗಳನ್ನು ಮಾತ್ರ ಧ್ವಂಸಗೊಳಿಸಿ ತೆರವು ಕಾರ್ಯಾಚರಣೆ ಬಿಬಿಎಂಪಿ ಕೈಬಿಟ್ಟಿದೆ ಎಂಬ ಆರೋಪಗಳ ಬೆನ್ನಲ್ಲೇ ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಇಂದಿನಿಂದ ಮತ್ತೆ ಜೆಸಿಬಿಗಳು ಘರ್ಜಿಸಿವೆ. ಬಿಬಿಎಂಪಿ ವ್ಯಾಪ್ತಿಯ ಮಹಾದೇವಪುರ ವಲಯದಲ್ಲಿ ಕಾರ್ಯಾಚರಣೆ ಆರಂಭಿಸಿದ ಅಧಿಕಾರಿಗಳ ತಂಡ, ವೈಟ್ ಫೀಲ್ಡ್ ಬಳಿಯ ರಾಮಗೊಂಡನಹಳ್ಳಿ, ನಲ್ಲೂರಳ್ಳಿ ಕಡೆ ಒತ್ತುವರಿ ಆಗಿದ್ದ ರಾಜಕಾಲುವೆ ತೆರವು ಮಾಡಿದರು.

ಸ್ಥಳಕ್ಕೆ ಬಂದ ಜೆಸಿಬಿ, ಬಿಬಿಎಂಪಿ ಅಧಿಕಾರಿಗಳು, ಮಹಾದೇವಪುರ ಮುಖ್ಯ ಇಂಜಿನಿಯರ್ ಬಸವರಾಜ್ ಕಬಾಡೆ ನೇತೃತ್ವದಲ್ಲಿ ತೆರವು ಕಾರ್ಯಾಚರಣೆ ನಡೆಸಿದರು. 50 ಅಡಿಗೂ ಹೆಚ್ಚು ರಾಜಕಾಲುವೆ ಒತ್ತುವರಿ ಆಗಿದ್ದು, ಶೀಲವಂತನಕೆರೆಗೆ ಸಂಪರ್ಕ ಕಲ್ಪಿಸುವ ರಾಜಕಾಲುವೆ ಇದಾಗಿದೆ. ರಾಜಕಾಲುವೆ ಮೇಲೆಯೇ ತಡೆಗೋಡೆ ಹಾಗೂ ಶೆಡ್ ನಿರ್ಮಾಣ ಮಾಡಲಾಗಿತ್ತು. ಹಾಗಾಗಿ ಕಾರ್ಯಾಚರಣೆ ನಡೆಸಿದರು. 4 ಶೆಡ್ ಹಾಗೂ ತಡೆಗೋಡೆ ತೆರವು ಕಾರ್ಯ ಮಾಡಲಾಯಿತು. ಆದರೆ, ಇದೇ ವೇಳೆ ಕಾರ್ಯಾಚರಣೆಗೆ ಅಡ್ಡಿಪಡಿಸಲು ಮುಂದಾದ ಶೆಡ್ ಮಾಲಿಕರೊಂದಿಗೆ ವಾಗ್ದಾದ ನಡೆದ ಘಟನೆ ಜರುಗಿತು.

ಮತ್ತೊಂದೆಡೆ ರಾಜಕಾಲುವೆ ಒತ್ತುವರಿ ಮಾಡಿಕೊಂಡಿರುವ ಇಕೋಸ್ಪೇಸ್ ಕಂಪನಿಯ ಒತ್ತುವರಿ ಜಾಗ ತೆರವು ಮಾಡಲು ಅಧಿಕಾರಿಗಳಿಗೆ ಸ್ವಾತಂತ್ರ ನೀಡಲಾಗಿದೆ. ಇದರೊಂದಿಗೆ ಇಕೋಸ್ಪೇಸ್ ಒಳಗಿರುವ 12 ಅಂತಸ್ತಿನ 2 ಕಟ್ಟಡ ತೆರವು ನಿಶ್ಚಿತವಾಗಿದೆ. ವಳಕೆರೆಯಿಂದ ಬೆಳ್ಳಂದೂರು ಕೆರೆಗೆ ಸಂಪರ್ಕ ಸಲ್ಲಿಸುವ ರಾಜಕಾಲುವೆ ಮಾರ್ಗದಲ್ಲಿ500 ಮೀಟರ್ ಉದ್ದ, 40-50 ಅಡಿ ಅಗಲದ ಜಾಗ ಒತ್ತುವರಿಯಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದರು.

ಕಾರ್ಯಾಚರಣೆ ಕುರಿತು ಪ್ರತಿಕ್ರಿಯಿಸಿದ ಮುಖ್ಯ ಇಂಜಿನಿಯರ್ ಬಸವರಾಜ್ ಕಬಾಡೆ, 3 ಕಡೆ ಸೀತಾರಾಮಪಾಳ್ಯ ಕೆರೆ ಸಮೀಪ ಶೆಡ್‌ಗಳ ಒತ್ತುವರಿಯಾಗಿದೆ. ಬೆಳ್ಳಂದೂರು ಇಕೋ ಸ್ಪೇಸ್ ಬಳಿ ಶೆಡ್, ತಡೆಗೋಡೆ, ಸವನಹಳ್ಳಿ ಕೆರೆ ಸಮೀಪವೂ ಕೆಲವೊಂದು ತಡೆಗೋಡೆ ಒತ್ತುವರಿ ಆಗಿದೆ. ಇವತ್ತು ಯಾವುದೇ ಪ್ರಮುಖ ಕಟ್ಟಡ ತೆರವು ಮಾಡುತ್ತಿಲ್ಲ. ನ್ಯಾಯಾಲಯದಲ್ಲಿ ಪ್ರಕರಣಗಳ ಆಲಿಸಿ ತೀರ್ಮಾನ ಮಾಡಲಾಗಿದೆ. ಬಿಬಿಎಂಪಿ ಕೇವಿಯಟ್ ಆಧರಿಸಿ ಈಗ ಜಂಟಿ ಸರ್ವೆಗಳು ನಡೆಯುತ್ತಿದೆ. ಕೆ.ಆರ್ ಪುರಂ ವ್ಯಾಪ್ತಿಯಲ್ಲಿ ತೆರವು ಕಾರ್ಯ ಆರಂಭಿಸಿದ ಬಿಬಿಎಂಪಿ, ಕೇಂಬ್ರಿಡ್ಜ್ ಕಾಲೇಜು ಹಿಂಭಾಗದಿಂದ ತೆರವು ಕಾರ್ಯ ಕಾರ್ಯಾಚರಣೆ ನಡೆಸಿದೆ. ಎಸ್.ಆರ್ ಲೇಔಟ್​ನಲ್ಲಿ ಸುಮಾರು 300 ಮೀಟರ್ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲಿರುವ ಬಿಬಿಎಂಪಿ, ರಾಜಕಾಲುವೆ ಮೇಲಿರುವ ಕಾಂಪೌಂಡ್ ತೆರವು ಮಾಡುತ್ತಿದೆ. ಈಗಾಗಲೇ ಬಿಬಿಎಂಪಿ ರಾಜಕಾಲುವೆ ಒತ್ತುವರಿ ಬಗ್ಗೆ ಮಾರ್ಕಿಂಗ್ ಕೂಡ ಮಾಡಿದೆ ಎಂದು ತಿಳಿಸಿದರು.

ಅಪಾರ್ಟ್‌ಮೆಂಟ್ ಬಳಿ ತೆರವು ಕಾರ್ಯಾಚರಣೆ
ಕೆ.ಆರ್ ಪುರಂ ಅಪಾರ್ಟ್‌ಮೆಂಟ್ ಬಳಿ ತೆರವು ಕಾರ್ಯಾಚರಣೆ ಆರಂಭಗೊಂಡಿದೆ. ಬಿಬಿಎಂಪಿ ಸಿಬ್ಬಂದಿ ಅಪಾರ್ಟ್‌ಮೆಂಟ್ ಕಾಂಪೌಂಡ್ ನ ಗೇಟ್ ತೆರವು ಮಾಡಿದ್ದಾರೆ. ಬಸವನಪುರ ಮುಖ್ಯರಸ್ತೆಯ ಶ್ರೀಪಾದಂ ಅಪಾರ್ಟ್‌ಮೆಂಟ್​ನಲ್ಲಿ ಜೆಸಿಬಿ ಮೂಲಕ ಕಾಂಪೌಂಡ್ ತೆರವು ಮಾಡಿದ್ದಾರೆ. ರಾಜಕಾಲುವೆ ಒತ್ತುವರಿ ಮಾಡಿ ಕಾಂಪೌಂಡ್ ನಿರ್ಮಾಣ ಮಾಡಲಾಗಿದೆ. ಈ ಸಂಬಂಧ ಈಗಾಗಲೇ ಸರ್ವೇ ಮಾಡಿ  ಕಂದಾಯ ಇಲಾಖೆ ಅಧಿಕಾರಿಗಳು ಒತ್ತುವರಿ ಮಾರ್ಕ್ ಮಾಡಿದ್ದಾರೆ. ಕೆ.ಆರ್ ಪುರ ತಹಶೀಲ್ದಾರ್ ಅವರು ಸಹ ಒತ್ತುವರಿ ತೆರವಿಗೆ ಆದೇಶಿಸಿದ್ದಾರೆ.

ಪೂರ್ವ ರಿಡ್ಜ್ , ಬಾಗ್ಮನೆ ಟೆಕ್ ಪಾರ್ಕ್ ದೊಡ್ಡವರ ಪ್ರಕರಣದ ಬಗ್ಗೆ ಸಹ ಗಮನ ಹರಿಸಿದ್ದೇವೆ. ಈಗ ತಡೆಯಾಜ್ಞೆ ತಂದಿದ್ದಾರೆ. ಈ ಸಂಬಂಧ ಜಂಟಿ ಸರ್ವೆಗೆ ಹೇಳಿದ್ದಾರೆ. ನ್ಯಾಯಾಲಯ ಅನುಮತಿ ಕೊಟ್ಟರೆ ತೆರವು ಕಾರ್ಯಾಚರಣೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು. ಈ ಮಧ್ಯೆ ಬಿಬಿಎಂಪಿ ಕೈಗೊಂಡಿರುವ ಎರಡನೇ ಹಂತದ ಒತ್ತುವರಿ ಕಾರ್ಯಾಚರಣೆಗೆ ಕೆ.ಆರ್.ಪುರದ ಗಾಯಿತ್ರಿ ಬಡಾವಣೆಯಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದೆ.

ಮನೆ ಮಾಲೀಕರ ಅಳಲು..!
ರಾಜಕಾಲುವೆ ಒತ್ತುವರಿ ಮಾಡಿ ಲೇಔಟ್ ನಿರ್ಮಾಣ ಆರೋಪ ಸಂಬಂಧ ಬಿಬಿಎಂಪಿ ತೆರವು ಕಾರ್ಯಾಚರಣೆ ನಡೆಸುತ್ತಿರುವ ಬಗ್ಗೆ ಇಲ್ಲಿನ ಮನೆ ಮಾಲೀಕರು ಅಳಲು ತೋಡಿಕೊಂಡರು. ಲೇಔಟ್‌ನಲ್ಲಿ 80 ಲಕ್ಷ ಹಣ ನೀಡಿ ನಿವೇಶನ ಖರೀದಿ ಮಾಡಿದ್ದೇವೆ. ಆದರೆ, ಈಗ ಬಿಬಿಎಂಪಿ ಅಧಿಕಾರಿಗಳು ಒತ್ತುವರಿ ಎಂದು ಹೇಳುತ್ತಿದ್ದಾರೆ. ಲಕ್ಷಾಂತರ ಹಣ ನಷ್ಟವಾಗಿದೆ. ಈಗ ಏನು ಮಾಡಬೇಕೆಂದು ಗೊತ್ತಾಗುತ್ತಿಲ್ಲ ಎಂದು ಲೇಔಟ್ ನಿವಾಸಿ ಲಕ್ಷ್ಮಿಶ್ ಅಳಲು ತೋಡಿಕೊಂಡರು.

ಎಲ್ಲೆಲ್ಲಿ ಒತ್ತುವರಿ ಗುರುತು!
ಕೆಆರ್ ಪುರಂ ವ್ಯಾಪ್ತಿಯ ಶಾಂತಮ್ಮನಹಳ್ಳಿ, ದೇವಸಂದ್ರ, ಎಸ್.ಆರ್ ಲೇಔಟ್, ವಿಜನಾಪುರ, ಮೇಡಳ್ಳಿ, ಎನ್. ನಾಗೇನಹಳ್ಳಿ, ಕಲ್ಕೆರೆ, ದೇವಸಂಧ್ರ, (ಭೀಮಯ್ಯಾ ಲೇಔಟ್), ವಿಭೂತಿಪುರ, ಕೋಡೇನಹಳ್ಳಿ, ಹೊರಮಾವು ಗುರುತಿಸಲಾಗಿದೆ. ಅದೇ ರೀತಿ, ಮಹಾದೇವಪುರ ವಲಯದಲ್ಲಿ ವೈಟ್ ಫೀಲ್ಡ್, ಕಸವನಹಳ್ಳಿ, ಬೆಳ್ಳಂದೂರು, ಹೂಡಿ, (ದಿವ್ಯಾ ಶಾಲೆ ಹತ್ತಿರ), ದೊಡ್ಡನಕ್ಕುಂದಿ, ಗುರುರಾಜ ಲೇಔಟ್, ಬಸವಣ್ಣನಗರ, ಚಿನ್ನಪ್ಪನಹಳ್ಳಿ, ಮುನ್ನೇಕೊಳಲು ತೆರವು ಕಾರ್ಯಾಚರಣೆ ನಡೆಸಲು ಗುರುತಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com