ಬೆಂಗಳೂರು: ವರುಣಾರ್ಭಟಕ್ಕೆ ಅಂಡರ್‌ಪಾಸ್‌ಗಳು, ರಸ್ತೆಗಳು ಜಲಾವೃತ; ಮುಂದಿನ 2 ದಿನ ಭಾರಿ ಮಳೆಯಾಗುವ ಸಾಧ್ಯತೆ
ಬೆಂಗಳೂರು: ಬುಧವಾರ ಸಂಜೆಯಿಂದ ಎಡೆಬಿಡದೆ ಸುರಿದ ಮಳೆಗೆ ಬೆಂಗಳೂರಿನ ಅಂಡರ್‌ಪಾಸ್‌ಗಳು, ರಸ್ತೆಗಳು ಮತ್ತು ಮಾರುಕಟ್ಟೆ ಸಂಕೀರ್ಣಗಳು ಜಲಾವೃತವಾಗಿವೆ. ಮಳೆಯಿಂದಾಗಿ ಸಂಚಾರ ಕುಂಠಿತಗೊಂಡ ಪರಿಣಾಮ ಮೆಜೆಸ್ಟಿಕ್, ಮಲ್ಲೇಶ್ವರಂ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಯಿತು.
ನಗರದಾದ್ಯಂತ ರಾತ್ರಿ 8.30 ರಿಂದ 10.30 ರವರೆಗೆ ನಿರಂತರ ಸಿಡಿಲು ಮತ್ತು ಗುಡುಗು ಸಹಿತ ಮಳೆಗೆ ಶಿವಾನಂದ ವೃತ್ತ ಮತ್ತು ರೈಲ್ವೆ ಕೆಳಸೇತುವೆ, ಸಿಬಿಐ ರಸ್ತೆಯ ಅಂಡರ್‌ಪಾಸ್, ಆರ್‌ಟಿ ನಗರ, ಶಾಂತಿನಗರ ಬಸ್ ನಿಲ್ದಾಣ, ವಿಲ್ಸನ್ ಗಾರ್ಡನ್, ರಸೆಲ್ ಮಾರುಕಟ್ಟೆ, ದೊಡ್ಡನೆಕ್ಕುಂದಿ ಮತ್ತು ಸುತ್ತಮುತ್ತಲಿನ ಪ್ರದೇಶಗಳು ಜಲಾವೃತಗೊಂಡವು.
ಭಾರಿ ಮಳೆಯಿಂದಾಗಿ ರಸ್ತೆಗಳು ಜಲಾವೃತಗೊಂಡರೆ, ಹಲವೆಡೆ ಮರ ಬಿದ್ದ ಘಟನೆಗಳು ನಡೆದಿವೆ. ಕೆಲವು ಕಡೆ ಮೂಲಸೌಕರ್ಯಗಳಿಗೆ ಹಾನಿ ಮತ್ತು ಹಲವಾರು ಭಾಗಗಳಲ್ಲಿ ವಿದ್ಯುತ್ ಕಡಿತ ಉಂಟಾಯಿತು. ನಗರದ ಮಧ್ಯ, ದಕ್ಷಿಣ ಮತ್ತು ಪೂರ್ವ ಭಾಗಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಾಗಿದೆ.
ಶೇಷಾದ್ರಿಪುರಂ ಬಳಿ ಮೆಟ್ರೋದ ತಡೆಗೋಡೆ ಕುಸಿದಿದ್ದು, ಹಲವಾರು ಕಾರುಗಳು ಮತ್ತು ಬೈಕ್‌ಗಳು ಜಖಂಗೊಂಡಿವೆ.
ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುಂದಿನ 24 ಗಂಟೆಗಳಲ್ಲಿ ಭಾರಿ ಮಳೆ ಅಥವಾ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಮುನ್ಸೂಚನೆ ನೀಡಿದೆ.
ನಗರದಲ್ಲಿ ಕಳೆದ ಕೆಲವು ದಿನಗಳಿಂದ ಮಳೆಯಾಗುತ್ತಿದೆ. ಕಳೆದ ತಿಂಗಳು ಸಂಭವಿಸಿದ ಪ್ರವಾಹವು ನಗರದಲ್ಲಿ ದೊಡ್ಡ ಪ್ರಮಾಣದ ಆಸ್ತಿಗಳ ನಾಶಕ್ಕೆ ಕಾರಣವಾಯಿತು ಮತ್ತು ಹಲವಾರು ಕಚೇರಿಗಳು ತನ್ನ ಉದ್ಯೋಗಿಗಳನ್ನು ಮನೆಯಿಂದಲೇ ಕೆಲಸ ಮಾಡಲು ಅವಕಾಶ ನೀಡಿದ್ದವು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ