15 ದಿನ ಕಳೆದರೂ ಬೆಂಗಳೂರಿನಲ್ಲಿ ಕೇವಲ 5,000 ಮೀಟರ್ ರಾಜಕಾಲುವೆ ಒತ್ತುವರಿ ತೆರವು!
ಬೆಂಗಳೂರು: ಇತ್ತೀಚಿನ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ಭಾಗವಾಗಿ ಬಿಬಿಎಂಪಿ ಮಹದೇವಪುರ ವಲಯದಲ್ಲಿ ಕಳೆದ 15 ದಿನಗಳಿಂದ ಇಲ್ಲಿಯವರೆಗೂ ಕೇವಲ 5,000 ಮೀಟರ್ ರಾಜಕಾಲುವೆ ಒತ್ತುವರಿಯನ್ನು ತೆರವುಗೊಳಿಸಿದೆ.
ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ಬಿಬಿಎಂಪಿ ಮುಖ್ಯ ಎಂಜಿನಿಯರ್ ಲೋಕೇಶ್, ಮಹದೇವಪುರ ವಲಯದಲ್ಲಿ ಕಂದಾಯ ಇಲಾಖೆ ದಾಖಲೆ ಬಳಸಿಕೊಂಡು ಒತ್ತುವರಿಯಾಗದ ಜಾಗದ ಪಟ್ಟಿ ಸಿದ್ದಪಡಿಸಿಕೊಂಡು ತೆರವು ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಮಹದೇವಪುರ ವಲಯದ ಪಣತೂರು, ಹೂಡಿ, ದೊಡ್ಡನೆಕುಂದಿ, ವರ್ತೂರ್, ಕುಂದಲಹಳ್ಳಿ, ಮುನ್ನೆಕೊಲಾಲ ಮತ್ತು ಕಾಸವನಹಳ್ಳಿಯಲ್ಲಿ ಒತ್ತುವರಿಯಾಗಿರುವುದನ್ನು ಕಂಡುಹಿಡಿಯಲಾಗಿದೆ. ಭೂ ಸರ್ವೇದಾರರು ಜಾಗ ಗುರುತಿಸಿದ ನಂತರ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿ ಹೇಳಿದೆ.
ತ್ವರಿತಗತಿಯಲ್ಲಿ ಸರ್ವೇ ನಡೆಸಿ, ಒತ್ತುವರಿ ತೆರವು ಕಾರ್ಯಾಚರಣೆಯನ್ನು ಪುನರ್ ಆರಂಭಿಸುವಂತೆ ಮಹದೇವಪುರ ವಲಯ ಬಿಬಿಎಂಪಿ ಮುಖ್ಯ ಎಂಜಿನಿಯರ್ ಬಸವರಾಜ್ ಕಬಾಡೆ ರಾಜಕಾಲುವೆ ವಿಭಾಗದ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಈ ಮಧ್ಯೆ ಜನಪ್ರಿಯ ಲೇಕ್ ವ್ಹೀವ್ ಅಪಾರ್ಟ್ ಮೆಂಟ್ ನ ತಡೆಗೋಡೆಯನ್ನು ಪಾಲಿಕೆ ಬುಧವಾರ ಧ್ವಂಸಗೊಳಿಸಿತು.
ಬೊಮ್ಮನಹಳ್ಳಿ ವಲಯದ ಕೊಡಿಚಿಕ್ಕನಹಳ್ಳಿ (ಹಂತ 2) ರಲ್ಲಿ 11 ಅಡಿ ರಾಜಕಾಲುವೆ ಒತ್ತುವರಿ ಆರೋಪ ಕೇಳಿಬಂದಿದೆ. ಕೌಂಪೌಂಡ್ ಮತ್ತು ಗೇಟ್ ನ್ನು ಧ್ವಂಸಗೊಳಿಸಿದ್ದೇವೆ. ಇಂದು ಕೂಡಾ ಧ್ವಂಸ ಕಾರ್ಯಾಚರಣೆ ಮುಂದುವರೆಯಲಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದರು.

