ಗಣೇಶೋತ್ಸವಕ್ಕೆ ಸಾವರ್ಕರ್ ಏಕೆ? ಲೋಕಲ್ ನಾಯಕರ ಆಯ್ಕೆ ಮಾಡಿ: ಶಂಕರ್ ನಾಗ್ ಅಭಿಮಾನಿಗಳ ಸಂಘ ಒತ್ತಾಯ

ರಾಜ್ಯ ಸರ್ಕಾರವೂ ಸಾವರ್ಕರ್ ಉತ್ಸವ ಬದಲು ಈ ಬಾರಿ ಗಣೇಶೋತ್ಸವದೊಂದಿಗೆ ಕನ್ನಡ ಚಿತ್ರರಂಗದ ಸ್ಥಳೀಯ ನಾಯಕರನ್ನು ಆಯ್ಕೆ ಮಾಡಬೇಕು ಎಂದು ಶಂಕರ್ ನಾಗ್ ಅಭಿಮಾನಿಗಳ ಸಂಘ ಒತ್ತಾಯಮಾಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ರಾಜ್ಯ ಸರ್ಕಾರವೂ ಸಾವರ್ಕರ್ ಉತ್ಸವ ಬದಲು ಈ ಬಾರಿ ಗಣೇಶೋತ್ಸವದೊಂದಿಗೆ ಕನ್ನಡ ಚಿತ್ರರಂಗದ ಸ್ಥಳೀಯ ನಾಯಕರನ್ನು ಆಯ್ಕೆ ಮಾಡಬೇಕು ಎಂದು ಶಂಕರ್ ನಾಗ್ ಅಭಿಮಾನಿಗಳ ಸಂಘ ಒತ್ತಾಯಮಾಡಿದೆ.

ಕರ್ನಾಟಕಕ್ಕೆ ಹಿಂದುತ್ವ ಸಿದ್ಧಾಂತವಾದಿ ವಿಡಿ ಸಾವರ್ಕರ್ ಕೊಡುಗೆ ಕುರಿತು ಪ್ರಶ್ನೆಗಳನ್ನು ಎತ್ತಿರುವ ಶಂಕರ್ ನಾಗ್ ಅಭಿಮಾನಿಗಳ ಸಂಘವು ಚಾಮರಾಜಪೇಟೆಯ ಮೈದಾನದಲ್ಲಿ ‘ಸಾವರ್ಕರ್ ಅವರ ಗಣೇಶ ಉತ್ಸವ’ವನ್ನು ಆಯೋಜಿಸುತ್ತಿರುವುದಕ್ಕಾಗಿ ಹಿಂದೂ ಸಂಘಟನೆಗಳನ್ನು ತರಾಟೆಗೆ ತೆಗೆದುಕೊಂಡಿದೆ. ಕೋಮುಸೌಹಾರ್ಧದತೆಯನ್ನು ಕದಡಿ, ಸಂಘರ್ಷ ಸೃಷ್ಟಿಸುವುದು ಅವರ ಉದ್ದೇಶವಾಗಿದೆ ಎಂದು ಹೇಳಿದ ಸಂಘವು ಕರ್ನಾಟಕದ ಐಕಾನ್‌ಗಳಾದ ಚಾಮರಾಜೇಂದ್ರ ಒಡೆಯರ್, ಪುನೀತ್ ರಾಜ್‌ಕುಮಾರ್ ಅಥವಾ ಶಂಕರ್ ನಾಗ್ ಅವರ ಹೆಸರಿನಲ್ಲಿ ಗಣೇಶ ಹಬ್ಬವನ್ನು ಆಚರಿಸಬೇಕು ಮತ್ತು ಅವರ ಕೊಡುಗೆಗಳನ್ನು ಗೌರವಿಸಬೇಕು ಎಂದು ಒತ್ತಾಯಿಸಿದೆ.

ಇನ್ನು ಈ ಹಿಂದೆ ಬಿಬಿಎಂಪಿ ಜಂಟಿ ಆಯುಕ್ತ (ಪಶ್ಚಿಮ) ಎಸ್‌ಎಂ ಶ್ರೀನಿವಾಸ ಅವರು 2.5 ಎಕರೆ ಜಮೀನು ಕಂದಾಯ ಇಲಾಖೆಗೆ ಸೇರಿದ್ದು ಎಂದು ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಚಾಮರಾಜಪೇಟೆ ನಗರಿಕರ ಒಕ್ಕೂಟ ಸಮಿತಿ ಹಾಗೂ ಹಿಂದೂಪರ ಸಂಘಟನೆಗಳು ವಿವಾದಿತ ಮೈದಾನದಲ್ಲಿ ಗಣೇಶ ಹಬ್ಬ ಆಚರಿಸಲು ಅನುಮತಿ ನೀಡುವಂತೆ ಕಂದಾಯ ಇಲಾಖೆಗೆ ಒತ್ತಾಯಿಸಿವೆ. ಬೆಂಗಳೂರು ನಗರ ಜಿಲ್ಲಾಧಿಕಾರಿ ಅನುಮತಿ ನೀಡುವ ಮುನ್ನವೇ ಒಕ್ಕೂಟ ಗಣೇಶ ಹಬ್ಬಕ್ಕೆ ಆಹ್ವಾನ ಪತ್ರಿಕೆ ಕೂಡ ಸಿದ್ದಪಡಿಸಿಕೊಂಡಿದೆ. 

ಇದೀಗ ಶಂಕರ್ ನಾಗ್ ಕನ್ನಡ ಗೆಳೆಯರ ಬಳಗ ಮತ್ತು ನಟ ಶಂಕರ್ ನಾಗ್ ಅವರ ಅಭಿಮಾನಿಗಳ ಸಂಘವು ಹಿಂದೂ ಸಂಘಟನೆಗಳ ಯೋಜನೆಗೆ ತಣ್ಣೀರು ಎರಚಬಹುದು ಎಂದು ಬಳಗದ ಕಾರ್ಯದರ್ಶಿ ಗಜೇಂದ್ರ ಹೇಳಿದ್ದಾರೆ. ಸಾವರ್ಕರ್ ಹೆಸರಿನಲ್ಲಿ ಗಣೇಶ ಹಬ್ಬವನ್ನು ಆಚರಿಸಬೇಕೆಂಬ ಬೇಡಿಕೆಯನ್ನು ತಳ್ಳಿಹಾಕಿದ ಗಜೇಂದ್ರ, “ಕರ್ನಾಟಕಕ್ಕೆ ಅವರ (ಸಾವರ್ಕರ್) ಕೊಡುಗೆ ಏನು? ಮೈಸೂರು ದೊರೆ ಚಾಮರಾಜೇಂದ್ರ ಒಡೆಯರ್ ಅವರಿಗೆ ಈ ಭೂಮಿ ಹೆಸರುವಾಸಿಯಾಗಿದೆ. ಈ ಉತ್ಸವವನ್ನು ಅವರಿಗೆ ಅರ್ಪಿಸಬೇಕು. ಪುನೀತ್ ರಾಜ್‌ಕುಮಾರ್ ಅವರು ಸಾಕಷ್ಟು ಸಮಾಜಮುಖಿ ಕೆಲಸಗಳನ್ನು ಮಾಡಿದ್ದಾರೆ, ಶಾಲೆಗಳನ್ನು ದತ್ತು ಸ್ವೀಕರಿಸಿದ್ದಾರೆ ಮತ್ತು ಅನಾಥಾಶ್ರಮಗಳನ್ನು ನಡೆಸುತ್ತಿದ್ದಾರೆ, ಶಂಕರ್ ನಾಗ್ ಅವರು ಬೆಂಗಳೂರು ಮತ್ತು ರಾಜ್ಯದ ಬಗ್ಗೆ ದೂರದೃಷ್ಟಿ ಹೊಂದಿದ್ದರು, ಅವರ ಹೆಸರನ್ನು ಗಣೇಶ ಉತ್ಸವಕ್ಕೆ ಹೆಸರಿಸಬೇಕು ಎಂದು ಹೇಳಿದರು. 

ಅಂತೆಯೇ ಕಂದಾಯ ಇಲಾಖೆಗೆ ಮಾಡಲು ಸಾಧ್ಯವಾಗದಿದ್ದರೆ ಶಂಕರ್ ನಾಗ್ ಹೆಸರಲ್ಲಿ ನಾವೇ ಉತ್ಸವ ಮಾಡುತ್ತೇವೆ. ಅವರು ದ್ವೇಷದ ಬೀಜಗಳನ್ನು ಬಿತ್ತಲು ಮತ್ತು ಇಲ್ಲಿ ಶಾಂತಿ ಕದಡಲು ಸಾವರ್ಕರ್ ಅವರನ್ನು ಕರೆತರುತ್ತಿದ್ದಾರೆ. ಇದನ್ನು ಹತ್ತಿಕ್ಕಬೇಕಾದ ಸರಕಾರವೇ ಪ್ರೋತ್ಸಾಹ ನೀಡುತ್ತಿರುವುದು ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಆರೋಪಿಸಿದರು.

ಏತನ್ಮಧ್ಯೆ, ಉತ್ಸವ ಸಮೀಪಿಸುತ್ತಿದ್ದಂತೆ ಪರಿಸ್ಥಿತಿ ಅಸ್ಥಿರವಾಗದಂತೆ ನೋಡಿಕೊಳ್ಳಲು ಪಶ್ಚಿಮ ವಿಭಾಗದ ಪೊಲೀಸರು ಕೆಎಸ್‌ಆರ್‌ಪಿ ತುಕಡಿ ಮತ್ತು ಹೊಯ್ಸಳ ಸಿಬ್ಬಂದಿಯನ್ನು ಮೈದಾನದಲ್ಲಿ ನಿಯೋಜಿಸಿದ್ದಾರೆ. ಚಾಮರಾಜಪೇಟೆಯಲ್ಲಿ ಗಣೇಶ ಹಬ್ಬಕ್ಕೆ ಇಲ್ಲಿಯವರೆಗೆ ಯಾರೂ ಅನುಮತಿ ಕೇಳಿಲ್ಲ ಎಂದು ಪೊಲೀಸ್ ಇಲಾಖೆ ತಿಳಿಸಿದ್ದು, ಚಾಮರಾಜಪೇಟೆ ನಗರಿಕರ ಒಕ್ಕೂಟ ಸಮಿತಿ ಸಲ್ಲಿಸಿರುವ ಮನವಿಗೆ ಜಿಲ್ಲಾಧಿಕಾರಿ ಒಪ್ಪಿಗೆ ನೀಡಿಲ್ಲ ಎನ್ನಲಾಗಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com