ರಾಜ್ಯಾದ್ಯಂತ ಮಳೆ ಮುಂದುವರಿಕೆ, ಹಾನಗಲ್ ನಲ್ಲಿ ಮಹಿಳೆ ಸಾವು, ಯಲ್ಲೋ ಅಲರ್ಟ್ ಘೋಷಣೆ

ಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಮಳೆ ಆರ್ಭಟ ಮುಂದುವರಿದಿದೆ. ಕಳೆದ ರಾತ್ರಿಯಿಡೀ ಸುರಿದ ಮಳೆಗೆ ಸಿಲಿಕಾನ್ ಸಿಟಿ ಮಂದಿ ಹೈರಾಣಾಗಿದ್ದಾರೆ.
ಮಳೆಗೆ ಚಾಮರಾಜನಗರದ ವಿವಿಧ ಕಡೆಗಳಲ್ಲಿ ಪ್ರವಾಹ ಉಂಟಾಗಿರುವುದು
ಮಳೆಗೆ ಚಾಮರಾಜನಗರದ ವಿವಿಧ ಕಡೆಗಳಲ್ಲಿ ಪ್ರವಾಹ ಉಂಟಾಗಿರುವುದು

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಮಳೆ ಆರ್ಭಟ ಮುಂದುವರಿದಿದೆ. ಕಳೆದ ರಾತ್ರಿಯಿಡೀ ಸುರಿದ ಮಳೆಗೆ ಸಿಲಿಕಾನ್ ಸಿಟಿ ಮಂದಿ ಹೈರಾಣಾಗಿದ್ದಾರೆ.

ಗೌರಿ-ಗಣೇಶ ಹಬ್ಬಕ್ಕೆ ಮಳೆರಾಯ ಅಡ್ಡಿ ಪಡಿಸಲಿದ್ದಾನೆ. ಭಾರೀ ಮಳೆಗೆ ಶಾಪಿಂಗ್ ಹಾಟ್‍ಸ್ಪಾಟ್ ಸಿಟಿ ಮಾರುಕಟ್ಟೆ, ಜೆ ಪಿ ನಗರ, ಜಯನಗರ, ಮಲ್ಲೇಶ್ವರಂಗಳಲ್ಲಿ ಅಡ್ಡಿಯಾಗುತ್ತಿದೆ. ಮಳೆಗೆ ಶಿವಾನಂದ ಸರ್ಕಲ್ ಕೆರೆಯಂತಾಗಿದೆ. ಮಾರ್ಕೆಟ್ ಸಂಪೂರ್ಣ ಮಳೆ ನೀರಿನಿಂದ ಮುಳುಗಡೆಯಾಗಿದೆ. ಚಂದ್ರಲೇಔಟ್, ಸುಲ್ತಾನ್‍ಪೇಟೆ, ಕೆಂಗೇರಿ, ಕಗ್ಗಲೀಪುರ, ಟೌನ್‍ಹಾಲ್‍ನಲ್ಲಿ ಮಳೆ ಅವಾಂತರವಾಗಿದೆ. ಅನುಗ್ರಹ ಲೇಔಟ್‍ನಲ್ಲಿ ರಾತ್ರಿ ಸುರಿದ ಮಳೆಯಿಂದಾಗಿ ಜಲಾವೃತವಾಗಿದೆ.

ಸ್ಮಾರ್ಟ್ ಸಿಟಿ ಯೋಜನೆ ಅಡಿ ನಿರ್ಮಿಸಿರುವ ರಿಚ್ಮಂಡ್ ರಸ್ತೆಯಲ್ಲಿಯ ತುಂಬೆಲ್ಲಾ ಮಳೆ ನೀರು ತುಂಬಿ ಹರಿಯುತ್ತಿತ್ತು. ಅವೈಜ್ಞಾನಿಕವಾಗಿ ಕಾಲುವೆಗೆ ನೀರು ಹೋಗದ ರೀತಿ ರಸ್ತೆ ನಿರ್ಮಿಸಿದ್ದೇ ಇದಕ್ಕೆ ಕಾರಣವಾಗಿದೆ. ಯಶವಂತಪುರದಲ್ಲಿ ರಸ್ತೆಗೆ ಅಡ್ಡಲಾಗಿ ಮರ ಬಿದ್ದಿದೆ. ವಾಹನ ಸಂಚಾರ ಇಲ್ಲದ ಕಾರಣ ಭಾರೀ ಅನಾಹುತವೊಂದು ತಪ್ಪಿದೆ.

ಭಾರೀ ಮಳೆಯಿಂದಾಗಿ ಬೆಂಗಳೂರು-ಮೈಸೂರು ಹೆದ್ದಾರಿ ಸೇರಿದಂತೆ ಹಲವು ಪ್ರಮುಖ ರಸ್ತೆಗಳಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿದೆ. ಕೊಪ್ಪಳ, ಗದಗ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಮಳೆ ಬಿಡುವು ಕೊಡದ ಹಿನ್ನೆಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಜಿಲ್ಲಾ ಶಿಕ್ಷಣಾಧಿಕಾರಿಗಳು (ಡಿಡಿಪಿಐ) ರಜೆ ಘೋಷಿಸಿದ್ದಾರೆ.

ಮತ್ತೊಂದೆಡೆ ಕಾರವಾರ ಭಾಗದಲ್ಲಿ ಮಳೆ ಮುಂದುವರಿದಿದ್ದು ಮತ್ತೆ ಅಣಶಿ ಘಟ್ಟದಲ್ಲಿ ಗುಡ್ಡ ಕುಸಿತ ಮುಂದುವರಿದಿದೆ. ಭಾರೀ ವಾಹನಗಳ ಸಂಚಾರಕ್ಕೆ ಬ್ರೇಕ್ ಹಾಕಲಾಗಿದ್ದು, ಪರ್ಯಾಯ ಮಾರ್ಗದಲ್ಲಿ ಸಂಚಾರಕ್ಕೆ ಅನುವು ಮಾಡಲಾಗಿದೆ.

ಇನ್ನೂ ಕೊಡಗಿನಲ್ಲಿ ನಿರಂತರವಾಗಿ ಸುರಿದ ಮಳೆಯಿಂದ ವಿವಿಧೆಡೆ ರಸ್ತೆ ಹಾಗೂ ಸೇತುವೆ ಸಂಪರ್ಕ ಕಡಿತಗೊಂಡಿದೆ ಮತ್ತು ಚಾಮರಾಜನಗರದಲ್ಲಿ ವರುಣಾರ್ಭಟ ಹಲವು ಅವಾಂತರಗಳನ್ನು ಸೃಷ್ಟಿಸಿದೆ. ಕಲ್ಯಾಣ ಮಂಟಪ, ಬಂಕ್, ಮನೆಗಳಿಗೆ ನೀರು ನುಗ್ಗಿ ಅಪಾರ ನಷ್ಟವುಂಟಾಗಿದೆ. ಉಳಿದಂತೆ ರಾಯಚೂರಿನಲ್ಲಿ ಭಾರಿ ಮಳೆ ಜಿಲ್ಲೆಯ ರೈತರನ್ನ ಕಂಗೆಡಿಸಿದೆ. ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆಗಳು ನೀರುಪಾಲಾಗಿವೆ. ಶಾಲಾ ಆವರಣ ಕೆರೆಯಂತಾಗಿ ವಿದ್ಯಾರ್ಥಿಗಳು ಪರದಾಡುವಂತಾಗಿದೆ.

ರಾಜ್ಯಾದ್ಯಂತ ಮುಂದಿನ 3 ದಿನಗಳ ಕಾಲ ಗುಡುಗು ಮಿಂಚಿನೊಂದಿಗೆ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ.

ಹಾನಗಲ್ ನಲ್ಲಿ ಮಹಿಳೆ ಮೃತ್ಯು: ಕಳೆದ ರಾತ್ರಿ ಸುರಿದ ಧಾರಾಕಾರ ಮಳೆಗೆ ಮನೆ ಗೋಡೆ ಕುಸಿದು ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ಹಾನಗಲ್ ತಾಲ್ಲೂಕಿನ ತುಮರಿಕೊಪ್ಪ ಗ್ರಾಮದಲ್ಲಿ ನಡೆದಿದೆ. ಮೃತರನ್ನು ನಿಂಬವ್ವ ನೆಗಳೂರು (48 ವ ) ಎಂದು ಗುರುತಿಸಲಾಗಿದೆ. ಮನೆಯಲ್ಲಿ ಮಲಗಿದ್ದ ವೇಳೆ ಮನೆ ಗೋಡೆ ಕುಸಿದು ದುರಂತ ಸಂಭವಿಸಿದೆ. ನಿಂಬವ್ವಳ ಪತಿ ಮತ್ತು ಮಗ ಅದೃಷ್ಟವಶಾತ್ ಅಪಾಯದಿಂದ ಪಾರಾದರು.

ಕೊಡಗಿನಲ್ಲಿ ಕೊಚ್ಚಿ ಹೋದ ಕಾಲು ಸೇತುವೆ: ಕೊಡಗು ಜಿಲ್ಲೆಯಲ್ಲಿ ಮಳೆ ಅವಾಂತರದಿಂದ ಮಡಿಕೇರಿ ತಾಲ್ಲೂಕು ಸಂಪಾಜೆ ಸಮೀಪದ ಚಡಾವು ಬಳಿ ನೀರಿನ ರಭಸಕ್ಕೆ ಚಡಾವು-ಮುಂಡಕ್ ಕಾಲು ಸೇತುವೆ ಕೊಚ್ಚಿ ಹೋಗಿದೆ. ಮರದ ದಿಮ್ಮಿಗಳು ಅಪ್ಪಳಿಸಿದ್ದರಿಂದ ಸೇತುವೆಯು ಕೊಚ್ಚಿಹೋಗಿದೆ.

ರಾಜ್ಯದಲ್ಲಿ ನೈರುತ್ಯ ಮುಂಗಾರು ಚುರುಕುಗೊಂಡಿದ್ದು, ಮುಂದಿನ 5 ದಿನ ಮಳೆಯಾಗಲಿದೆ. ಕರಾವಳಿಯ ಎಲ್ಲಾ ಜಿಲ್ಲೆಗಳಲ್ಲೂ 5 ದಿನ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಇಂದು ಧಾರವಾಡ, ಗದಗ, ಹಾವೇರಿ, ಕಲಬುರಗಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com