ಶಿವಾಜಿನಗರಕ್ಕೆ ಸ್ಮಾರ್ಟ್ ಲುಕ್: ಜನವರಿ 15ಕ್ಕೆ ಸಂಕ್ರಾಂತಿಯಂದು ಉದ್ಘಾಟನೆಗೆ ಚಿಂತನೆ!

ಸ್ಮಾರ್ಟ್ ಸಿಟಿ ಬೆಂಗಳೂರು ಲಿಮಿಟೆಡ್ ಅಡಿಯಲ್ಲಿ ಶಿವಾಜಿನಗರದ ಪ್ರಮುಖ ಪ್ರದೇಶಗಳಿಗೆ ಹೊಸ ರೂಪ ನೀಡಲು ಮುಂದಾಗಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಈಗಾಗಲೇ ಶೇ.70 ರಷ್ಟು ಕಾಮಗಾರಿ ಪೂರ್ಣಗೊಳಿಸಿದೆ.
ಅಭಿವೃದ್ಧಿ ಕಾಮಗಾರಿ ಪರಿಶೀಲಿಸುತ್ತಿರುವ ಅಧಿಕಾರಿಗಳು.
ಅಭಿವೃದ್ಧಿ ಕಾಮಗಾರಿ ಪರಿಶೀಲಿಸುತ್ತಿರುವ ಅಧಿಕಾರಿಗಳು.

ಬೆಂಗಳೂರು: ಸ್ಮಾರ್ಟ್ ಸಿಟಿ ಬೆಂಗಳೂರು ಲಿಮಿಟೆಡ್ ಅಡಿಯಲ್ಲಿ ಶಿವಾಜಿನಗರದ ಪ್ರಮುಖ ಪ್ರದೇಶಗಳಿಗೆ ಹೊಸ ರೂಪ ನೀಡಲು ಮುಂದಾಗಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಈಗಾಗಲೇ ಶೇ.70 ರಷ್ಟು ಕಾಮಗಾರಿ ಪೂರ್ಣಗೊಳಿಸಿದೆ.

ಅಭಿವೃದ್ಧಿ ಹೊಂದಿದ ಯೋಜನೆಯನ್ನು ಅಧಿಕಾರಿಗಳು ಹಾಗೂ ಸ್ಥಳೀಯ ಶಾಸಕರು ಜನವರಿ 15 ರಂದು ಜನರಿಗೆ ಸಂಕ್ರಾಂತಿ ಉಡುಗೊರೆಯಾಗಿ ನೀಡಲು ಚಿಂತನೆ ನಡೆಸಿದ್ದಾರೆ.

ಶಿವಾಜಿನಗರದ ಬ್ರಾಡ್‌ವೇ ರಸ್ತೆ, ರಿಚರ್ಡ್ ಸ್ಕ್ವೇರ್ ಮತ್ತು ಮೀನಾಕ್ಷಿ ಕೊಯಿಲ್ ರಸ್ತೆ, ಬೀಫ್ ಮಾರುಕಟ್ಟೆ, ರಸೆಲ್ ಮಾರುಕಟ್ಟೆ ಮತ್ತು ಸೆಂಟ್ ಮೇರಿ ಚರ್ಚ್ ರಸ್ತೆಗಳಲ್ಲಿ ದುರಸ್ತಿ ಕಾರ್ಯಗಳನ್ನು ಮಾಡಲಾಗಿದ್ದು, ಚರಂಡಿ, ಕಲ್ಲುಹಾಸು, ಸ್ಮಾರ್ಟ್ ಲೈಟಿಂಗ್ ಕಾಮಗಾರಿಗಳನ್ನು ನಡೆಸಲಾಗಿದೆ. ಇನ್ನು ಪಾರ್ಕಿಂಗ್ ಅನ್ನು ವ್ಯವಸ್ಥಿತವಾಗಿ ಮಾಡಲಾಗಿದ್ದು, ಉದ್ಯಾನಗಳು ಮತ್ತು ಕಾರಂಜಿಗಳ ಜೊತೆಗೆ ಗಡಿಯಾರ ಗೋಪುರವನ್ನೂ ಸ್ಥಾಪಿಸಲಾಗುತ್ತಿದೆ.

ಬಿಬಿಎಂಪಿ ವಿಶೇಷ ಆಯುಕ್ತ, ಪೂರ್ವ ವಲಯ, ರವೀಂದ್ರ ಪಿಎನ್ ಅವರು ಮಾತನಾಡಿ, ನಾನು ಮತ್ತು ವಲಯ ಜಂಟಿ ಆಯುಕ್ತೆ ಶಿಲ್ಪಾ ಅವರು ಕಾಮಗಾರಿಗಳನ್ನು ಪರಿಶೀಲಿಸಿದೆವು. ಯೋಜನೆಯಿಂದ ನಾವು ಪ್ರಭಾವಿತರಾಗಿದ್ದೇವೆಂದು ಹೇಳಿದ್ದಾರೆ.

ಕಾಮಗಾರಿ ಮುಕ್ತಾಯದ ಹಂತದಲ್ಲಿದೆ. ಹೆಚ್ಚುವರಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವಂತೆ ಶಾಸಕ ರಿಜ್ವಾನ್ ಅರ್ಷದ್ ಹಾಗೂ ವಿವಿಧ ವರ್ತಕ ಸಂಘಗಳು ಬಿಬಿಎಂಪಿಗೆ ಮನವಿ ಸಲ್ಲಿಸಿದ್ದವು. ರಸೆಲ್ ಮಾರುಕಟ್ಟೆಗೆ ನಿರ್ದಿಷ್ಟವಾಗಿ ಅದರ ಮೇಲ್ಛಾವಣಿ, ಶೌಚಾಲಯಗಳು ಮತ್ತು ಇತರ ಸ್ಥಳಗಳಲ್ಲಿ ಕೆಲವು ಕಾಮಗಾರಿಗಳ ಅಗತ್ಯವಿದ್ದು, ಅನುದಾನಕ್ಕಾಗಿ ಕಡತಗಳನ್ನು ಬಿಬಿಎಂಪಿ ಮುಖ್ಯ ಆಯುಕ್ತರ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಈ ರಸ್ತೆಯಲ್ಲಿ ಅಂಡರ್ ಗ್ರೌಂಡ್ ಕಾಮಗಾರಿ ಹಾಗೂ ವೈಟ್‌ ಟಾಪಿಂಗ್‌ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದರಿಂದ ಬ್ರಾಡ್‌ವೇ ರಸ್ತೆ, ಶಿವಾಜಿನಗರದ ಎಚ್‌ಕೆಪಿ ರಸ್ತೆಯಿಂದ ರಿಚರ್ಡ್‌ ಸ್ಕ್ವೇರ್‌, ರಸೆಲ್‌ ಮಾರ್ಕೆಟ್‌ನ ಪ್ರದೇಶದಲ್ಲಿ ಈ ಬಾರಿ ಪ್ರವಾಹ ಪರಿಸ್ಥಿತಿ ಎದುರಾಗಿರಲಿಲ್ಲ ಎಂದು ಅಭಿವೃದ್ಧಿ ಕಾಮಗಾರಿಗಳ ಮೇಲ್ವಿಚಾರಣೆ ನಡೆಸಿದ ಅರ್ಷದ್‌ ಅವರು ತಿಳಿಸಿದ್ದಾರೆ.

ಯೋಜನೆಯ ಶೇ 70ರಷ್ಟು ಕಾಮಗಾರಿ ಕೆಲಸಗಳು ಮುಗಿದಿದೆ. ಪಾರಂಪರಿಕ ಕಟ್ಟಡಗಳ ನವೀಕರಣಕ್ಕೆ ಸುಮಾರು 2 ಕೋಟಿ ರೂ. ವೆಚ್ಚವಾಗಲಿದೆ. ಜನವರಿ 15ರೊಳಗೆ ‘ಹೊಸ ಶಿವಾಜಿನಗರ’ವನ್ನು ಸಾರ್ವಜನಿಕರ ಮುಂದಿಡುತ್ತೇವೆ,’’ ಎಂದಿದ್ದಾರೆ.

ಶಿವಾಜಿನಗರ ಎಂದ ಕೂಡಲೇ ಹೊರಗಿನವರಿಗೆ ಹದಗೆಟ್ಟ ರಸ್ತೆಗಳು, ತುಂಬಿರುವ ಚರಂಡಿಗಳು, ಅಡ್ಡಾದಿಡ್ಡಿ ಪಾರ್ಕಿಂಗ್, ಕಸ ಮತ್ತು ದುರ್ನಾತವೇ ಎದುರಿಗೆ ಬರುತ್ತದೆ. ಇಂತಹವರಿಗೆ ಈ ಕಾಮಗಾರಿಯು ಶಿವಾಜಿನಗರದ ಬಗೆಗಿನ ಗ್ರಹಿಕೆಯನ್ನು ಬದಲಾಯಿಸಲಿದೆ ಎಂದು ರಸೆಲ್ ಮಾರುಕಟ್ಟೆಯ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಇದ್ರೀಸ್ ಚೌದ್ರಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com