ದಂಡ ಮನ್ನಾ ಮಾಡಿ, ಬಾಡಿಗೆ ಪಡೆಯಿರಿ: ಬಿಬಿಎಂಪಿಗೆ ಶಿವಾಜಿನಗರದ ವ್ಯಾಪಾರಿಗಳ ಮನವಿ
ಶಿವಾಜಿನಗರ ಮಾರುಕಟ್ಟೆಗಳಲ್ಲಿ ಬಾಡಿಗೆ ಹಾಗೂ ದಂಡ ಪಾವತಿಸದ ಹಿನ್ನೆಲೆಯಲ್ಲಿ ಬಿಬಿಎಂಪಿಯಿಂದ ನೋಟಿಸ್ ಪಡೆದಿರುವ ವ್ಯಾಪಾರಿಗಳು ಇದೀಗ ದಂಡವನ್ನು ಮನ್ನಾ ಮಾಡಿ ಬಾಡಿಗೆ ಮಾತ್ರ ವಸೂಲಿ ಮಾಡುವಂತೆ ಬಿಬಿಎಂಪಿ ವಲಯ ಆಯುಕ್ತರಿಗೆ ಮನವಿ ಮಾಡಿದ್ದಾರೆ.
Published: 05th December 2022 08:29 AM | Last Updated: 05th December 2022 02:47 PM | A+A A-

ಸಂಗ್ರಹ ಚಿತ್ರ
ಬೆಂಗಳೂರು: ಶಿವಾಜಿನಗರ ಮಾರುಕಟ್ಟೆಗಳಲ್ಲಿ ಬಾಡಿಗೆ ಹಾಗೂ ದಂಡ ಪಾವತಿಸದ ಹಿನ್ನೆಲೆಯಲ್ಲಿ ಬಿಬಿಎಂಪಿಯಿಂದ ನೋಟಿಸ್ ಪಡೆದಿರುವ ವ್ಯಾಪಾರಿಗಳು ಇದೀಗ ದಂಡವನ್ನು ಮನ್ನಾ ಮಾಡಿ ಬಾಡಿಗೆ ಮಾತ್ರ ವಸೂಲಿ ಮಾಡುವಂತೆ ಬಿಬಿಎಂಪಿ ವಲಯ ಆಯುಕ್ತರಿಗೆ ಮನವಿ ಮಾಡಿದ್ದಾರೆ.
ಕೋವಿಡ್ -19-ಪ್ರೇರಿತ ಲಾಕ್‌ಡೌನ್‌ನಿಂದಾಗಿ ಭಾರಿ ನಷ್ಟಗಳು ಎದುರಾಗಿತ್ತು. ಹೀಗಾಗಿ ಬಾಡಿಗೆಯನ್ನು ಪಾವತಿಸಲು ಸಾಧ್ಯವಾಗಲಿಲ್ಲ ಎಂದು ಅನೇಕ ವ್ಯಾಪಾರಿಗಳು ಹೇಳಿದ್ದಾರೆ.
ಪೂರ್ವ ವಲಯದ ವಿಶೇಷ ಆಯುಕ್ತ ಪಿಎನ್ ರವೀಂದ್ರ ಅವರು ಮಾತನಾಡಿ, ಸುಮಾರು 3 ಕೋಟಿ ರೂಪಾಯಿ ಬಾಕಿ ಇದೆ ಎಂದು ಹೇಳಿದ್ದಾರೆ.
ದಂಡವನ್ನು ಮನ್ನಾ ಮಾಡುವಂತೆ ಪಾಲಿಕೆಯ ಮುಂದೆ ವ್ಯಾಪಾರಸ್ಥರು ಮನವಿ ಇರಿಸಿದ್ದಾರೆ. ಇದನ್ನು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರ ಒಪ್ಪಿಗೆಗಾಗಿ ರವಾನಿಸಲಾಗುವುದು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಶಿವಾಜಿನಗರಕ್ಕೆ ಸ್ಮಾರ್ಟ್ ಲುಕ್: ಜ.15ಕ್ಕೆ ಜನತೆಗೆ ಸಂಕ್ರಾಂತಿ ಉಡುಗೊರೆ ನೀಡಲು ಅಧಿಕಾರಿಗಳು ಮುಂದು!
ರಸೆಲ್ ಮಾರುಕಟ್ಟೆಯ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಇದ್ರೀಸ್ ಚೌದ್ರಿ ಮಾತನಾಡಿ, 470 ಅಂಗಡಿಗಳಿರುವ ರಸೆಲ್ ಮಾರುಕಟ್ಟೆ ಸಂಕೀರ್ಣದಿಂದ ಸಂಜೆ ಬಜಾರ್, ನಾಲಾ ಮಾರುಕಟ್ಟೆ, ದನದ ಮಾರುಕಟ್ಟೆ, ಬೋಟಿ ಮಾರುಕಟ್ಟೆಯ ಜತೆಗೆ ಮಟನ್ ಮಾರುಕಟ್ಟೆ ವ್ಯಾಪಾರಿಗಳ ಬಾಡಿಗೆ ಮಾತ್ರ ಬಾಕಿ ಇದೆ. ರಿಚರ್ಡ್ ಸ್ಕ್ವೇರ್ ಮಾರುಕಟ್ಟೆ ಮತ್ತು ಮೀನು ಮಾರುಕಟ್ಟೆಯ ವ್ಯಾಪಾರಸ್ಥರು ತಮ್ಮ ದಂಡವನ್ನು ಮನ್ನಾ ಮಾಡುವಂತೆ ವಿಶೇಷ ಆಯುಕ್ತರು ಮತ್ತು ಶಾಸಕ ರಿಜ್ವಾನ್ ಅರ್ಷದ್ ಇಬ್ಬರಿಗೂ ಮನವಿ ಮಾಡಿದ್ದಾರೆಂದು ಹೇಳಿದ್ದಾರೆ.
ರಿಜ್ವಾನ್ ಅರ್ಷದ್ ಅವರು ಪ್ರತಿಕ್ರಿಯೆ ನೀಡಿ, ಅಧಿಕಾರಿಗಳೊಂದಿಗೆ ಮಾತನಾಡುವುದಾಗಿ ಭರವಸೆ ನೀಡಿದ್ದಾರೆ.
“ಸಾಂಕ್ರಾಮಿಕ ರೋಗ ಮತ್ತು ಲಾಕ್‌ಡೌನ್ ವ್ಯಾಪಾರಿಗಳಿಗೆ ಭಾರಿ ಹೊಡೆತವನ್ನು ನೀಡಿದೆ, ಇದರಿಂದಾಗಿ ಹಲವರು ಬಾಡಿಗೆ ಕಟ್ಟಲು ಸಾಧ್ಯವಾಗಿಲ್ಲ. ಇದೀಗ ವ್ಯಾಪಾರಗಳು ಮತ್ತೆ ಚುರುಕುಗೊಂಡಿದ್ದು, ಬಾಡಿಗೆ ಕಟ್ಟಲು ಮುಂದೆ ಬಂದಿದ್ದಾರೆ. ಅವರಿಗೆ ಬಿಬಿಎಂಪಿ ಸಹಾಯ ಮಾಡಬೇಕೆಂದು ರಿಜ್ವಾನ್ ಅರ್ಷದ್ ಹೇಳಿದ್ದಾರೆ.