10 ವರ್ಷಗಳಲ್ಲಿ ಡೀಸೆಲ್-ಇಂಜಿನ್ ಸಂಪೂರ್ಣ ನಿಷೇಧ: ಸಚಿವ ಮುರುಗೇಶ್ ನಿರಾಣಿ

ಮುಂದಿನ ಹತ್ತು ವರ್ಷಗಳಲ್ಲಿ ಕರ್ನಾಟಕ ಸೇರಿದಂತೆ ಬಹುತೇಕ ರಾಜ್ಯಗಳಲ್ಲಿ ಡಿಸೇಲ್-ಪೆಟ್ರೋಲ್ ಇಂಜಿನ್ ಸಂಪೂರ್ಣ ನಿಷೇಧಿಸಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಹೇಳಿದರು.
ಮುರುಗೇಶ್ ನಿರಾಣಿ
ಮುರುಗೇಶ್ ನಿರಾಣಿ

ಬೆಂಗಳೂರು: ಮುಂದಿನ ಹತ್ತು ವರ್ಷಗಳಲ್ಲಿ ಕರ್ನಾಟಕ ಸೇರಿದಂತೆ ಬಹುತೇಕ ರಾಜ್ಯಗಳಲ್ಲಿ ಡಿಸೇಲ್-ಪೆಟ್ರೋಲ್ ಇಂಜಿನ್ ಸಂಪೂರ್ಣ ನಿಷೇಧಿಸಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಹೇಳಿದರು.

ನಗರದಲ್ಲಿಂದು ಬೆಂಗಳೂರು ಪ್ರೆಸ್ ಕ್ಲಬ್ ಹಮ್ಮಿಕೊಂಡಿದ್ದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈಗಾಗಲೇ ಬಹುತೇಕ ಕಡೆ ಡಿಸೇಲ್ ಇಂಜಿನ್ ಬಂದ್ ಆಗಿದೆ. ಆದರೆ, ವರದಿ ಅನ್ವಯ ಡಿಸೇಲ್, ಪೆಟ್ರೋಲ್ ಗಳು ಹತ್ತು ವರ್ಷದೊಳಗೆ ಬಂದ್ ಆಗಲಿವೆ. ಡಿಸೇಲ್, ಪೆಟ್ರೋಲ್ ತೈಲದ ಬಳಿಕ ಇಲ್ಲಿಯೇ ಸ್ಥಳೀಯವಾಗಿ ತೆಗೆದ ಎಥನಾಲ್ ಬಳಕೆ ಮಾಡುವ ಇಂಜಿನ್‌ಗಳು ಕಾರ್ಯರೂಪಕ್ಕೆ ಬರಲಿವೆ. ಪ್ರಸ್ತುತ ಶೇ.20 ರಷ್ಟು ಎಥನಾಲ್ ಬಳಕೆ ಆಗುತ್ತಿದ್ದು, ಮುಂದಿನ ಎರಡು ವರ್ಷಗಳಲ್ಲಿ ಇದರ ಬಳಕೆ ಪ್ರಮಾಣ ದ್ವಿಗುಣ ಆಗಲಿದೆ ಎಂದು ಅವರು ತಿಳಿಸಿದರು.

ಇನ್ನೂ, ಭಾರತದ ಆಮದು ಕಡಿಮೆ ಮಾಡಿ, ರಫ್ತು ಹೆಚ್ಚು ಮಾಡಬೇಕು ಎಂದು ಸರ್. ಎಂ.ವಿಶ್ವೇಶ್ವರಯ್ಯ ಕನಸು ಕಂಡಿದ್ದರು.ಇಂತಹ ಅದ್ಭುತ ಕನಸು ನಾವು ಪೂರ್ಣಗೊಳಿಸದರೆ, ಅಭಿವೃದ್ಧಿ ರಾಷ್ಟ್ರಗಳಲ್ಲಿ ಭಾರತ ಸ್ಥಾನ ಪಡೆದುಕೊಳ್ಳಲಿದೆ ಎಂದು ನಿರಾಣಿ ಅಭಿಪ್ರಾಯಪಟ್ಟರು. ಶಿಕ್ಷಣ ಮತ್ತು ಕೈಗಾರಿಕೆಗಳ ಬೆಳವಣಿಗೆ ಆಧಾರದ ಮೇಲೆ ದೇಶದ ಅಭಿವೃದ್ಧಿ ನಿರ್ಧಾರವಾಗುತ್ತದೆ ಎಂದ ಅವರು, ಇತ್ತೀಚೆಗೆ ನಡೆದ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ 9.81 ಲಕ್ಷ ಕೋಟಿ ಬಂಡವಾಳ ಹರಿದು ಬಂದಿದೆ ಎಂದರು. 

ನಮ್ಮ ಸಂಪನ್ಮೂಲವನ್ನು ಬಳಸಿಕೊಂಡು ಹೊರರಾಜ್ಯದ ಉದ್ಯಮಿಗಳು ಆರ್ಥಿಕವಾಗಿ ಬಲಿಷ್ಠರಾಗುತ್ತಿದ್ದಾರೆ. ಮುಂದೆ ಬಂದು ನಮ್ಮವರೇ ಹೂಡಿಕೆ ಮಾಡಿದರೆ ಖುಷಿಯಾಗುತ್ತದೆ. ಇನ್ನೂ, ಕೈಗಾರಿಕೆಗಳನ್ನು ಆರಂಭಿಸಲು ಶೇ. ೫೦ರಷ್ಟು ಸಬ್ಸಿಡಿ ಸಿಗುತ್ತದೆ. ಬ್ಯಾಂಕ್‌ಗಳು ಸಾಲ ನೀಡುತ್ತವೆ. ಸರಳ: ಕರ್ನಾಟಕ ಕೈಗಾರಿಕಾ ಇಲಾಖೆ ಭೂಮಿ ಹಂಚಿಕೆ ವ್ಯವಸ್ಥೆ ಸರಳೀಕರಣಗೊಳಿಸಿದೆ. ‘ಈಸ್ ಆಫ್ ಡುಯಿಂಗ್ ಬಿಸಿನೆಸ್’ ಮಾದರಿಯಲ್ಲಿ ೧ಈಸ್ ಆಫ್ ಲ್ಯಾಂಡ್ ಅಲಾಟ್‌ಮೆಂಟ್’ ಪದ್ದತಿಯನ್ನು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಹೊಸ ಆದೇಶದ ಮೂಲಕ ಜಾರಿಗೊಳಿಸಿದೆ ಎಂದರು.

ರಾಜ್ಯದಲ್ಲಿ ಬಂಡವಾಳ ಹೂಡಿಕೆ ಮಾಡಲು ಮುಂದೆ ಬರುವ ಉದ್ಯಮಗಳಿಗೆ ಅಗತ್ಯವಿರುವ ಭೂಮಿಯನ್ನು ಸುಲಭವಾಗಿ ನೀಡುವುದು ಇದರ ಮುಖ್ಯ ಉದ್ದೇಶ. ಸುಲಲಿತ ವ್ಯವಹಾರದಲ್ಲಿ ದೇಶದಲ್ಲೇ ಮುಂಚೂಣಿ ಸ್ಥಾನದಲ್ಲಿರುವ ರಾಜ್ಯಕ್ಕೆ ಹೆಚ್ಚು ಹೆಚ್ಚು ಉದ್ಯಮಗಳನ್ನು ಆಕರ್ಷಿಸಲು ಈ ನಿರ್ಧಾರವನ್ನು ತೆಗೆದುಕೊಂಡಿದೆ. ಅಲ್ಲದೆ, 10 ಎಕರೆಗಿಂತ ಕಡಿಮೆ ವಿಸ್ತೀರ್ಣದ ಭೂಮಿಗಾಗಿ ಜಮೀನು ಪರಿಶೀಲನಾ ಸಮಿತಿಗೆ ಹೋಗುವ ಬದಲು ನೇರವಾಗಿ ಜಿಲ್ಲಾ ಅಥವಾ ರಾಜ್ಯ ಮಟ್ಟದ ಅನುಮೋದನಾ ಸಮಿತಿಯಲ್ಲಿ ಅನುಮೋದನೆ ನೀಡುವುದರಿಂದ ಪ್ರಸ್ತಾವನೆಗಳಿಗೆ ತ್ವರಿತವಾಗಿ ಅನುಮೋದನೆ ದೊರೆಯುತ್ತದೆ. ಇದರಿಂದ ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ಉದ್ಯಮದಾರರಿಗೆ ಅನುಕೂಲವಾಗುವುದು ಎಂದು ವಿವರಿಸಿದರು.

50 ಸಾವಿರ ಎಕರೆ: ರಾಜ್ಯದಲ್ಲಿ ಕೈಗಾರಿಕೆಗಳನ್ನು ಸ್ಥಾಪನೆ ಮಾಡಲು ಮುಂದೆ ಬರುವ ಉದ್ಯಮಿಗಳಿಗೆ ತಕ್ಷಣವೇ ಭೂ ಮಂಜೂರು ಮಾಡಲು ಅನುಕೂಲವಾಗುವಂತೆ ರಾಜ್ಯಾದ್ಯಂತ 50 ಸಾವಿರ ಎಕರೆ ಜಮೀನನ್ನು ಭೂ ಸ್ವಾಧೀನಪಡಿಸಿಕೊಳ್ಳಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು. ಹೆಚ್ಚಿನ ಕೈಗಾರಿಕೆಗಳನ್ನು ಸ್ಥಾಪಿಸುವುದರಿಂದ ಸ್ಥಳೀಯರಿಗೆ ಹೆಚ್ಚಿನ ಉದ್ಯೋಗಗಳು ಸೃಷ್ಟಿಯಾಗುತ್ತವೆ ಮತ್ತು ನಿರುದ್ಯೋಗ ಕಡಿಮೆಯಾಗುತ್ತದೆ. ಕೇಂದ್ರ ಸರ್ಕಾರದ ಬಹು ನಿರೀಕ್ಷಿತ ಆತ್ಮ ನಿರ್ಭರ ಭಾರತ ಯೋಜನೆಗೆ ಅನುಗುಣವಾಗಿ ರಾಜ್ಯದ 2 ಮತ್ತು 3ನೇ ಹಂತದ ನಗರಗಳಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಉತ್ತೇಜಿಸುವುದರ ಜೊತೆಗೆ ಶೀಘ್ರದಲ್ಲೇ ರಾಜ್ಯ ಸರ್ಕಾರವು ಒಂದು ಜಿಲ್ಲೆ ಒಂದು ಉತ್ಪನ್ನ ನೀತಿಯನ್ನು ಜಾರಿಗೆ ತರಲಿದೆ ಎಂದು ತಿಳಿಸಿದರು.

ಒಂದು ಜಿಲ್ಲೆ ಒಂದು ಉತ್ಪಾದನೆ ನೀತಿಯಿಂದ ಪ್ರತಿ ಜಿಲ್ಲೆಗೆ ಒಂದು ಉತ್ಪನ್ನವನ್ನು ಗುರುತಿಸಲಾಗುತ್ತದೆ. ಈ ಉತ್ಪನ್ನಗಳೊಂದಿಗೆ ತೊಡಗಿಸಿಕೊಂಡಿರುವ ಉದ್ಯಮಿಗಳು ಯೋಜನಾ ವೆಚ್ಚದ 35 ಪ್ರತಿಶತದಷ್ಟು ಕ್ರೆಡಿಟ್ – ಲಿಂಕ್ಡ್ ಕ್ಯಾಪಿಟಲ್ ಸಬ್ಸಿಡಿಯನ್ನು ಪ್ರತಿ ಯೂನಿಟ್‌ಗೆ ಗರಿಷ್ಠ 10 ಲಕ್ಷ ರೂ ಪಡೆಯಬಹುದು. ರಾಜ್ಯಾದ್ಯಂತ ಸಮತೋಲಿತ ಕೈಗಾರಿಕೀಕರಣವನ್ನು ಉತ್ತೇಜಿಸಿಸಲು ನಾವು ತೆಗೆದುಕೊಂಡಿರುವ ಮತ್ತೊಂದು ಪ್ರಮುಖ ನಿರ್ಧಾರವೆಂದರೆ ಉತ್ಪನ್ನ ನಿರ್ದಿಷ್ಟ ಕೈಗಾರಿಕಾ ಕ್ಲಸ್ಟರ್. ಈ ಯೋಜನೆ ಮೂಲಕ ಹಲವು ಕೈಗಾರಿಕಾ ಸಮೂಹಗಳನ್ನು ಗುರುತಿಸಲಾಗಿದ್ದು, ಪ್ರತಿ ಕ್ಲಸ್ಟರ್‌ಗೆ ಆಯಾ ಉತ್ಪನ್ನ ವಲಯಕ್ಕೆ ನಿರ್ದಿಷ್ಟವಾದ ವಿಶೇಷ ಪ್ರೊತ್ಸಾಹ ಮತ್ತು ರಿಯಾಯಿತಿಗಳನ್ನು ಘೋಷಿಸಲಾಗಿದೆ ಎಂದು ನಿರಾಣಿ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com