ಕಲ್ಲು ಎತ್ತಿ ಹಾಕಿ ವ್ಯಕ್ತಿಯ ಬರ್ಬರ ಹತ್ಯೆ ಪ್ರಕರಣ: ಮಹಿಳೆ ಸೇರಿ 6 ಮಂದಿ ಬಂಧನ

ಕೆಪಿ ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬನ ತಲೆ ಮೇಲೆ ಹಲವು ಬಾರಿ ಕಲ್ಲು ಎತ್ತಿಹಾಕಿ ಬರ್ಬರವಾಗಿ ಹತ್ಯೆ ಮಾಡಿದ್ದ ಸಂಬಂಧಿಸಿದಂತೆ ಇಬ್ಬರು ಮಹಿಳೆಯರು ಸೇರಿದಂತೆ ಆರು ಮಂದಿಯನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಕೆಪಿ ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬನ ತಲೆ ಮೇಲೆ ಹಲವು ಬಾರಿ ಕಲ್ಲು ಎತ್ತಿಹಾಕಿ ಬರ್ಬರವಾಗಿ ಹತ್ಯೆ ಮಾಡಿದ್ದ ಸಂಬಂಧಿಸಿದಂತೆ ಇಬ್ಬರು ಮಹಿಳೆಯರು ಸೇರಿದಂತೆ ಆರು ಮಂದಿಯನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಬಾದಾಮಿ ನಿವಾಸಿ ಮಂಜುನಾಥ ಬಾಳಪ್ಪ ಜಮಖಂಡಿ (21) ಹತ್ಯೆಯಾದ ವ್ಯಕ್ತಿಯಾಗಿದ್ದಾರೆ. ಪ್ರಕರಣ ಸಂಬಂಧ ಪೊಲೀಸರು ಆರೋಪಿಗಳಾದ ಪ್ರೇಮವ್ವ, ಅಕ್ಕ ಮಹಾದೇವಿ, ಮಂಜುನಾಥ್, ಕಿರಣ್, ಚನ್ನಪ್ಪ, ಕಾಶಿನಾಥ್ ಎಂಬುವವರನ್ನು ಬಂಧನಕ್ಕೊಳಪಡಿಸಿದ್ದು, ತಲೆಮರೆಸಿಕೊಂಡಿರುವ ಮತ್ತೋರ್ವ ಆರೋಪಿ ಸರೋಜಾಗಾಗಿ ಹುಡುಕಾಟ ಆರಂಭಿಸಿದ್ದಾರೆ.

ಸಾಲ ವಸೂಲಾತಿ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದ ಮಂಜುನಾಥ್, ಸರೋಜಾ ಜತೆ ಸಂಬಂಧ ಹೊಂದಿದ್ದರು ಎಂದು ಮೂಲಗಳು ತಿಳಿಸಿವೆ.

ಮಂಜುನಾಥ್ ಅವರು ಸರೋಜಾಗೆ ಕಿರುಕುಳ ನೀಡಲಾರಂಭಿಸಿದ ನಂತರ ಇಬ್ಬರ ನಡುವಿನ ಸಂಬಂಧ ಹಾಳಾಗಿತ್ತು. ಇದರಿಂದ ಸರೋಜಾ ಮುಂಜುನಾಥ್ ನನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದಳು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಹತ್ಯೆಯಾದ ಮಂಜುನಾಥ್ ಅವರ ಮೇಲೂ ಯಾದಗಿರಿ ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ಹಲ್ಲೆ ಮತ್ತು ಕೊಲೆ ಯತ್ನ ಪ್ರಕರಣಗಳು ದಾಖಲಾಗಿದ್ದವು.

ಪ್ರಕರಣದ ಪ್ರಮುಖ ಆರೋಪಿಯಾಗಿರುವ ಸರೋಜಾ ತನ್ನ ತಾಯಿ ಪ್ರೇಮವ್ವ ಮತ್ತು ಆಕೆಯ ಸಂಬಂಧಿಕರನ್ನು ಹತ್ಯೆ ಯೋಜನೆಯಲ್ಲಿ ಬಳಸಿಕೊಂಡಿದ್ದಾಳೆ.

ಹತ್ಯೆಗೆ ಸಂಚು ರೂಪಿಸಿದ್ದ ಸರೋಜಾ, ಭೇಟಿ ಮಾಡಬೇಕೆಂದು ಹೇಳಿ ಮಂಜುನಾಥ್ ಅವರನ್ನು ಕರೆಸಿಕೊಂಡಿದ್ದಾಳೆ. ಇದರಂತೆ ಮಂಜುನಾಥ್ ಬೆಂಗಳೂರಿಗೆ ಬಂದಿದ್ದು, ಗಾಂಧಿನಗರದ ಲಾಡ್ಜ್ ವೊಂದರಲ್ಲಿ ರೂಮ್ ನಲ್ಲಿ ಉಳಿದುಕೊಂಡಿದ್ದಾರೆ.

ನಂತರ ಸರೋಜಾ ಅವರನ್ನು ಭೇಟಿ ಮಾಡಲು ಹೋದಾಗ ಸರೋಜಾ ಹಾಗೂ ಆಕೆಯ ಜೊತೆಗಿದ್ದ ಸಂಬಂಧಿಕರು ಏಕಾಏಕಿ ಮಂಜುನಾಥ್ ಮೇಲೆ ಹಲ್ಲೆ ನಡೆಸಿದ್ದಾರೆ. ಬಳಿಕ ಗುಂಪು ಗುಂಪಾಗಿ ಸೇರಿ ಹಲವು ಬಾರಿ ಮಂಜುನಾಥ್ ಅವರ ಮೇಲೆ ಕಲ್ಲು ಎತ್ತಿಹಾಕಿದ್ದಾರೆ.

ಪ್ರಕರಣ ಸಂಬಂಧ ಸ್ಥಳೀಯ ಮೆಡಿಕಲ್ ಸ್ಟೋರ್ ಸಿಬ್ಬಂದಿಗಳನ್ನು ಪೊಲೀಸರು ವಿಚಾರಣೆ ನಡೆಸಿದ್ದು, ಈ ವೇಳೆ ಮೆಡಿಕಲ್ ಸ್ಟೋರ್'ಗೆ ಬಂದಿದ್ದ ವ್ಯಕ್ತಿಯೊಬ್ಬರು ತಮ್ಮ ಮೊಬೈಲ್ ಫೋನ್ ಬಿಟ್ಟು ಹೋಗಿದ್ದರು. ಎಷ್ಟು ಹೊತ್ತಾದರೂ ಫೋನ್ ಮರಳಿ ತೆಗೆದುಕೊಂಡು ಹೋಗಲಿಲ್ಲ ಎಂದು ಮಾಹಿತಿ ನೀಡಿದ್ದಾರೆ. ಫೋನ್ ಪರಿಶೀಲಿಸಿದಾಗ ಆ ಫೋನ್ ಮಂಜುನಾಥ್ ಅವರದ್ದೇ ಆಗಿತ್ತು ಎಂಬುದು ಪೊಲೀಸರಿಗೆ ತಿಳಿದುಬಂದಿದೆ. ಈ ಮೂಲಕ ಹತ್ಯೆಯಾಗಿರುವುದು ಮಂಜುನಾಥ್ ಎಂದು ಪೊಲೀಸರು ಗುರ್ತಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com