ಮೈಸೂರು: ಮೂವರು ಯುವಕರ ಮೇಲೆ ಎರಡು ಬಾರಿ ಎಸ್'ಯುವಿ ಕಾರು ಹರಿಸಿದ ಚಾಲಕ; ಆರೋಪಿ ದರ್ಶನ್ ಬಂಧನ

ತಿರುವು ಪಡೆಯುವ ಮುನ್ನ ಇಂಡಿಕೇಟರ್ ಹಾಕಿಲ್ಲ ಎಂದು ಪ್ರಶ್ನಿಸಿದ್ದಕ್ಕೆ ಎರಡು ಬಾರಿ ಮೂವರು ಯುವಕರ ಮೇಲೆ ಎಸ್'ಯುವಿ ಕಾರು ಹರಿಸಿ ಚಾಲಕನೊಬ್ಬ ಹತ್ಯೆಗೆ ಯತ್ನಿಸಿದ ಘಟನೆ ಟಿ ಕೆ ಬಡಾವಣೆಯಲ್ಲಿ ನಡೆದಿದೆ.
ಅಪಘಾತ ನಡೆದ ಸ್ಥಳ, ವಾಹನ ಮತ್ತು ಗಾಯಾಳುಗಳು
ಅಪಘಾತ ನಡೆದ ಸ್ಥಳ, ವಾಹನ ಮತ್ತು ಗಾಯಾಳುಗಳು

ಮೈಸೂರು: ತಿರುವು ಪಡೆಯುವ ಮುನ್ನ ಇಂಡಿಕೇಟರ್ ಹಾಕಿಲ್ಲ ಎಂದು ಪ್ರಶ್ನಿಸಿದ್ದಕ್ಕೆ ಎರಡು ಬಾರಿ ಮೂವರು ಯುವಕರ ಮೇಲೆ ಎಸ್'ಯುವಿ ಕಾರು ಹರಿಸಿ ಚಾಲಕನೊಬ್ಬ ಹತ್ಯೆಗೆ ಯತ್ನಿಸಿದ ಘಟನೆ ಟಿ ಕೆ ಬಡಾವಣೆಯಲ್ಲಿ ನಡೆದಿದೆ.

ಘಟನೆಯಲ್ಲಿ ರಾಹುಲ್, ಪ್ರಜ್ವಲ್ ಮತ್ತು ಆನಂದ್‌ ಎಂಬುವವರಿಗೆ ಗಂಭೀರ ಗಾಯವಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಮೂವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಮೂವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

ರಾತ್ರಿ ಪ್ರಜ್ವಲ್ ಮತ್ತು ರಾಹುಲ್ ಕಾರಿನಲ್ಲಿ ಬರುತ್ತಿದ್ದರು. ಈ ವೇಳೆ ಮತ್ತೊಂದು ಕಾರಿನಲ್ಲಿ ಬರುತ್ತಿದ್ದ ದರ್ಶನ್ ಮತ್ತು ಆತನ ತಂದೆ ಇಂಡಿಕೇಟರ್ ಹಾಕದೆ ಕಾರನ್ನು ತಿರುಗಿಸಿದ್ದಾನೆ. ಇದಕ್ಕೆ ಪ್ರಜ್ವಲ್ ಮತ್ತು ರಾಹುಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಂತರ ಮಾತಿಗೆ ಮಾತು ಬೆಳೆದಿದೆ.

ಈ ವೇಳೆ ಕೋಪಗೊಂಡ ದರ್ಶನ್ ತಂದೆ, ಪ್ರಜ್ವಲ್ ಮತ್ತು ರಾಹುಲ್ ಮೇಲೆ ಹಲ್ಲೆ ನಡೆಸಿರುವುದಾಗಿ ಆರೋಪಿಸಲಾಗಿದೆ. ಇವರ ನಡುವಿನ ಜಗಳ ನೋಡಿ ಅದೇ ದಾರಿಯಲ್ಲಿ ಹೋಗುತ್ತಿದ್ದ ಆನಂದ್ ಎಂಬಾತ ಜಗಳ ಬಿಡಿಸಲು ಬಂದಿದ್ದಾನೆ. ಆದರೆ ಮಾತಿನ ಚಕಾಮಕಿ ತೀವ್ರವಾಗಿ ಆಕ್ರೋಶಗೊಂಡಿದ್ದ ದರ್ಶನ್, ಪ್ರಜ್ವಲ್, ರಾಹುಲ್ ಮತ್ತು ಜಗಳ ಬಿಡಿಸಲು ಬಂದ ಆನಂದ್ ಮೇಲೆ ಕಾರು ಹರಿಸಿ ಪರಾರಿಯಾಗಿದ್ದಾನೆ.

ಕೂಡಲೇ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಗಾಯಾಳುಗಳ ಪೋಷಕರು ಕೃತ್ಯದ ಬಗ್ಗೆ ಸರಸ್ವತಿಪುರಂ ಠಾಣೆಗೆ ದೂರು ನೀಡಿದ್ದಾರೆ.

ದೂರು ಹಿನ್ನೆಲೆಯಲ್ಲಿ ಸರಸ್ವತಿಪುರಂ ಪೊಲೀಸರು ಮಂಗಳವಾರ ತನ್ನ ಆರೋಪಿ ದರ್ಶನ್ (20) ವಿರುದ್ಧ ಕೊಲೆ ಯತ್ನ (ಐಪಿಸಿ ಸೆಕ್ಷನ್ 307), ಸ್ವಯಂಪ್ರೇರಿತವಾಗಿ ಗಾಯಗೊಳಿಸುವುದು (ಐಪಿಸಿ 324) ಮತ್ತು ಶಾಂತಿ ಭಂಗವನ್ನು ಪ್ರಚೋದಿಸುವ ಉದ್ದೇಶದಿಂದ ಉದ್ದೇಶಪೂರ್ವಕ ಅವಮಾನ (ಐಪಿಸಿ 504) ಪ್ರಕರಣ ದಾಖಲಿಸಿಕೊಂಡಿದ್ದು, ಬಂಧನಕ್ಕೊಳಪಡಿಸಿದ್ದಾರೆ.

ರಾಹುಲ್, ಪ್ರಜ್ವಲ್ ಮತ್ತು ಆನಂದ್ ಎಂಬ ಮೂವರು 20ರ ಹರೆಯದ ಯುವಕರಾಗಿದ್ದು. ಆರೋಪಿ ರಾಹುಲ್ ಎಂಟೆಕ್ ಪದವೀಧರನಾಗಿದ್ದಾನೆ. ಮೂವರ ಪೈಕಿ ರಾಹುಲ್ ಎಂಬಾತನಿಗೆ ಗಂಭೀರವಾಗಿ ಗಾಯವಾಗಿದೆ ಎಂದು ಹೇಳಲಾಗುತ್ತಿದ್ದು, ಆನತ ತಲೆ ಮತ್ತು ಪಕ್ಕೆಲುಬುಗಳಿಗೆ ತೀವ್ರ ಗಾಯಗಳಾಗಿವೆ ಎಂದು ತಿಳಿದುಬಂದಿದೆ.

ಬಿಸಿಎ ಪದವೀಧರರಾದ ಪ್ರಜ್ವಲ್ ಅವರ ಬೆನ್ನುಹುರಿ, ಪಕ್ಕೆಲುಬುಗಳು ಮತ್ತು ಎಡಗಾಲಿನ ಮೂಳೆಗೆ ಗಾಯಗಳಾಗಿವೆ. ಇನ್ನು ಫಾಸ್ಟ್ ಫುಡ್ ಸೆಂಟರ್ ಹೊಂದಿರುವ ಆನಂದ್ ಅವರ ದೇಹದ ಪೂರ್ತಿ ಗಾಯಗಳಾಗಿರುವುದಾಗಿ ವರದಿಗಳು ತಿಳಿಸಿವೆ.

ಸೋಮವಾರ ಸಂಜೆ ಸೋದರ ಸಂಬಂಧಿಗಳಾದ ರಾಹುಲ್ ಮತ್ತು ಪ್ರಜ್ವಲ್ ತಮ್ಮ ಸ್ನೇಹಿತರೊಂದಿಗೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಶಾರದಾದೇವಿನಗರದ ಮನೆಗೆ ತೆರಳಿದ್ದಾಗ ಈ ಘಟನೆ ನಡೆದಿದೆ.

ಕಾರ್ಯಕ್ರಮವೊಂದಕ್ಕೆ ಬಂದಿದ್ದ ರಾಹುಲ್ ಮತ್ತು ಪ್ರಜ್ವಲ್ ಸ್ನೇಹಿತರೊಬ್ಬರು ಫೋನ್ ಮಾಡಿ ತಮ್ಮ ರೂಮ್ ಕೀಯನ್ನು ಕಾರಿನಲ್ಲಿ ಇಟ್ಟು ಹೋಗಿರುವುದಾಗಿ ತಿಳಿಸಿದ್ದರು. ಹೀಗಾಗಿ ಇಬ್ಬರೂ ತಮ್ಮ ಸ್ನೇಹಿತನಿಗೆ ರೂಮ್ ಕೀ ಕೊಡಲು ಕಾರಿನಲ್ಲಿ (ಮಾರುತಿ ಬೊಲೆರೊ) ಮನೆಯಿಂದ ಹೊರಟಿದ್ದರು.

ತರಳಬಾಳು ಜಂಕ್ಷನ್ ಬಳಿ ತೆರಳುತ್ತಿದ್ದಾಗ ದರ್ಶನ್ ಚಲಾಯಿಸುತ್ತಿದ್ದ ಎಸ್ ಯುವಿ (ಟೊಯೊಟಾ ಫಾರ್ಚುನರ್) ಕಾರು ವೇಗವಾಗಿ ಬಂದಿದೆ. ರಾಹುಲ್ ಅವರ ಕಾರನ್ನು ಓವರ್ ಟೇಕ್ ಮಾಡಿ, ಇಂಡಿಕೇಟರ್ ಹಾಕದೆ ತಿರುವು ತೆಗೆದುಕೊಂಡಿದ್ದಾನೆ. ಈ ವೇಳೆ ರಾಹುಲ್ ಎಸ್‌ಯುವಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹಠಾತ್ ಬ್ರೇಕ್ ಹಾಕಿದ್ದಾನೆ.

ಬಳಿಕ ತಿರುವು ತೆಗೆದುಕೊಳ್ಳುವ ಮೊದಲು ಇಂಡಿಕೇಟರ್ ಹಾಕುವಂತೆ ಎಸ್‌ಯುವಿ ಚಾಲಕ ರಾಹುಲ್'ಗೆ ತಿಳಿಸಿದ್ದಾನೆ. ಇದು ದರ್ಶನ್ ಹಾಗೂ ಅವರ ತಂದೆ ವಾಸು ಅವರನ್ನು ಕೆರಳಿಸಿದೆ. ದರ್ಶನ್ ವಾಹನ ನಿಲ್ಲಿಸಿದ ಸಂದರ್ಭದಲ್ಲಿ ಅವರ ತಂದೆ ವಾಸು ವಾಹನದಿಂದ ಹೊರಬಂದು ಚಾಲಕನ ಸೀಟಿನಲ್ಲಿದ್ದ ರಾಹುಲ್ ಗೆ ಹೊಡೆದಿದ್ದಾರೆ. ದರ್ಶನ್ ಕೂಡ ತಂದೆಯೊಂದಿಗೆ ಸೇರಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಯುವಕರನ್ನು ಥಳಿಸಿದ್ದಾರೆ.

ಮಾತಿನ ಚಕಮಕಿ ಬಳಿಕ ಮೂವರು ಯುವಕರು ಸ್ಥಳದಿಂದ ಸ್ವಲ್ಪ ದೂರ ಹೋದಾಗ ದರ್ಶನ್ ಕಾರಿನಲ್ಲಿ ಹೋಗಿ ಕುಳಿತು ಕಾರನ್ನು ಸ್ಟಾರ್ಟ್ ಮಾಡಿದ್ದ. ಘರ್ಷಣೆ ವೇಳೆ ರಸ್ತೆಯಲ್ಲಿ ತನ್ನ ಕನ್ನಡಕ ಬಿದ್ದಿದ್ದ ಹಿನ್ನೆಲೆಯಲ್ಲಿ ಪ್ರಜ್ವಲ್ ಅದನ್ನು ತೆಗೆದುಕೊಳ್ಳಲು ಹೋಗಿದ್ದಾನೆ. "ಪ್ರಜ್ವಲ್ ಹಿಂತಿರುಗಿ ಬರುವುದನ್ನು ಕಂಡ ದರ್ಶನ್ ಅವರ ತಾಯಿ, ಕಾರು ಹರಿಸುವಂತೆ ತಿಳಿಸಿದ್ದರು. ಬಳಿಕ ದರ್ಶನ್ ಮೂವರ ಮೇಲೂ ಕಾರು ಹರಿಸಿದ್ದ ಎಂದು ಪ್ರಜ್ವಲ್ ತಂದೆ ನಾಗರಾಜ್ ಹೇಳಿದ್ದಾರೆ. ಈ ನಡುವೆ ಪ್ರಕರಣ ಸಂಬಂಧ ಪೊಲೀಸರು ದರ್ಶನ್ ವಿರುದ್ಧ ಎಫ್ಐಆರ್ ದಾಖಲಿಸಿದ್ದು, ಆತನನ್ನು ಬಂಧನಕ್ಕೊಳಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com