ಚಿಕನ್ ರೋಲ್ ಕೊಟ್ಟಿಲ್ಲ ಎಂದು ಹೋಟೆಲ್ ಸಿಬ್ಬಂದಿ ಕೋಣೆಗೆ ಬೆಂಕಿ ಹಚ್ಚಿದ ಕಿಡಿಕೇಡಿಗಳು!

ಹೋಟೆಲ್‌ನಲ್ಲಿ ಊಟದ ವಿಚಾರವಾಗಿ ಆರಂಭವಾದ ಜಗಳದಿಂದ ಕೋಪಗೊಂಡಿದ್ದ ಕೆಲ ಕಿಡಿಗೇಡಿಗಳು ಹೋಟೆಲ್ ಸಿಬ್ಬಂದಿ ತಂಗಿದ್ದ ರೂಮಿಗೆ ಬೆಂಕಿ ಹಚ್ಚಿರುವ ಘಟನೆ ಭಾನುವಾರ ರಾತ್ರಿ ಹನುಮಂತನಗರದಲ್ಲಿ ನಡೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಹೋಟೆಲ್‌ನಲ್ಲಿ ಊಟದ ವಿಚಾರವಾಗಿ ಆರಂಭವಾದ ಜಗಳದಿಂದ ಕೋಪಗೊಂಡಿದ್ದ ಕೆಲ ಕಿಡಿಗೇಡಿಗಳು ಹೋಟೆಲ್ ಸಿಬ್ಬಂದಿ ತಂಗಿದ್ದ ರೂಮಿಗೆ ಬೆಂಕಿ ಹಚ್ಚಿರುವ ಘಟನೆ ಭಾನುವಾರ ರಾತ್ರಿ ಹನುಮಂತನಗರದಲ್ಲಿ ನಡೆದಿದೆ.

ಪ್ರಕರಣ ಸಂಬಂಧ ಪೊಲೀಸರು ಅಪ್ರಾಪ್ತ ಬಾಲಕ ಸೇರಿದಂತೆ ಇಬ್ಬರನ್ನು ಬಂಧಿನಕ್ಕೊಳಪಡಿಸಿದ್ದಾರೆ.

ಎನ್.ಆರ್.ಕಾಲೋನಿ ನಿವಾಸಿ ಮೇಸ್ತ್ರಿ ದೇವರಾಜು ಎಂಬಾತನನ್ನು ಪೊಲೀಸರು ಬಂಧಿಸಿದ್ದು, 15 ವರ್ಷದ ಬಾಲಕನ ವಿರುದ್ಧ ಕಾನೂನು ರೀತ್ಯಾ ಕ್ರಮ ಕೈಗೊಂಡಿದ್ದಾರೆ.

ದೇವರಾಜು, ಆತನ ಸ್ನೇಹಿತ ಗಣೇಶ್ ಮತ್ತು ಬಾಲಕ ಭಾನುವಾರ ರಾತ್ರಿ 11 ಗಂಟೆ ಸುಮಾರಿಗೆ ಅಶೋಕನಗರ 3ನೇ ಕ್ರಾಸ್‌ನಲ್ಲಿರುವ ಕುಮಾರ್ ಹೋಟೆಲ್‌ಗೆ ಹೋಗಿ ಮೊಟ್ಟೆ ಮತ್ತು ಚಿಕನ್ ರೋಲ್ ಕೇಳಿದ್ದಾರೆ. ಆದರೆ, ಈ ಹೊತ್ತಿನಲ್ಲಿ ಹೋಟೆಲ್ ಮುಚ್ಚಿದ್ದ ಸಿಬ್ಬಂದಿಗಳು ಊಟ ಎಲ್ಲವೂ ಖಾಲಿಯಾಗಿದೆ ಎಂದು ಹೇಳಿದ್ದಾರೆ.

ಹಸಿವಿನಿಂದ ಏನಾದರೂ ಬಡಿಸಿ ಎಂದು ದೇವರಾಜು ಪಟ್ಟು ಹಿಡಿದಿದ್ದಾನೆ. ಇದರಿಂದ ಹೋಟೆಲ್ ಸಿಬ್ಬಂದಿಗಳು ಹಾಗೂ ದೇವರಾಜು ನಡುವೆ ಮಾತಿನ ಚಕಮಕಿ ನಡೆದಿದೆ. ಬಳಿಕ ಹೋಟೆಲ್ ಸಿಬ್ಬಂದಿಗಳು ಕಬ್ಬಿಣದ ರಾಡ್ ಮತ್ತು ಚಾಕುಗಳಿಂದ ಮೂವರ ಮೇಲೆ ಹಲ್ಲೆ ನಡೆಸಿ ಸ್ಥಳದಿಂದ ಕಾಲ್ಕಿತ್ತುವಂತೆ ಮಾಡಿದ್ದರು ಎಂದು ಆರೋಪಿಸಲಾಗಿದೆ.

ಘಟನೆಯಿಂದ ತೀವ್ರವಾಗಿ ಕೆಂಡಾಮಂಡಲಗೊಂಡಿದ್ದ ಮೂವರು ಬಳಿಕ ಬೆಳಿಗಿನ ಜಾವ 3.30ರ ಸುಮಾರಿಗೆ ಹೋಟೆಲ್‌ನಿಂದ ಕೇವಲ ಮೂರು ಕಟ್ಟಡಗಳ ದೂರದಲ್ಲಿರುವ ಹೋಟೆಲ್ ಸಿಬ್ಬಂದಿ ಮಲಗಿದ್ದ ಮನೆಗೆ ಹೋಗಿ, ಪೆಟ್ರೋಲ್ ಸುರಿದು ಮುಖ್ಯ ಬಾಗಿಲು ಮತ್ತು ಕಿಟಕಿಗಳಿಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ.

ಈ ವೇಳೆ ಸಿಬ್ಬಂದಿಗಳು ಕಿರುಚಾಡಲು ಆರಂಭಿಸಿದ್ದು, ಇದನ್ನು ಕೇಳಿದ ನೆರೆಹೊರೆಯವರು ಬೆಂಕಿಯನ್ನು ನಂದಿಸಿದ್ದಾರೆಂದು ಪೊಲೀಸರು ಹೇಳಿದ್ದಾರೆ.

ಘಟನೆ ಸಂಬಂಧ ಹೋಟೆಲ್ ಮಾಲೀಕರು ನೀಡಿದ ದೂರಿನ ಆಧಾರದ ಮೇಲೆ ನಿತೀಶ್ ಕುಮಾರ್, ದೇವರಾಜ್ ಮತ್ತು ಅಪ್ರಾಪ್ತ ಬಾಲಕನನ್ನು ಬಂಧಿಸಲಾಗಿದೆ,

ಈ ನಡುವೆ ಹೋಟೆಲ್ ಸಿಬ್ಬಂದಿ ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ದೇವರಾಜ್ ಕೂಡ ದೂರು ದಾಖಲಿಸಿದ್ದು, ತನಿಖೆ ಆರಂಭಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com