ಬೆಂಗಳೂರು: 1 ಕೋಟಿ ರೂಪಾಯಿ ನಕಲಿ ನೋಟು ನೀಡಿ ಉದ್ಯಮಿಗೆ ವಂಚನೆ, ಮೂವರ ಬಂಧನ

ಗುತ್ತಿಗೆದಾರನಿಗೆ ಸಾಲ ಕೊಡಿಸುವುದಾಗಿ ಹೇಳಿ 1 ಕೋಟಿ ರೂಪಾಯಿ ನಕಲಿ ನೋಟುಗಳ ನೀಡಿ ಸರ್ವಿಸ್ ಚಾರ್ಜ್ ಎಂದು 27 ಲಕ್ಷ ರೂಪಾಯಿ ಪಡೆದು ವಂಚಿಸಿದ್ದ ಮೂವರನ್ನು ಜಯನಗರ ಪೊಲೀಸರು ಬಂಧಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ಗುತ್ತಿಗೆದಾರನಿಗೆ ಸಾಲ ಕೊಡಿಸುವುದಾಗಿ ಹೇಳಿ 1 ಕೋಟಿ ರೂಪಾಯಿ ನಕಲಿ ನೋಟುಗಳ ನೀಡಿ ಸರ್ವಿಸ್ ಚಾರ್ಜ್ ಎಂದು 27 ಲಕ್ಷ ರೂಪಾಯಿ ಪಡೆದು ವಂಚಿಸಿದ್ದ ಮೂವರನ್ನು ಜಯನಗರ ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳನ್ನು ಆರ್ ಟಿ ನಗರದ ದಿನ್ನೂರು ಮುಖ್ಯರಸ್ತೆ ನಿವಾಸಿಗಳಾದ ಮುನ್ನಾ ಶರಣ್ (35), ವಿಷ್ಣುರಾಜನ್ ಆರ್ (26), ರಾಮಮೂರ್ತಿನಗರದ ಪ್ರವೀಣ್ ಕುಮಾರ್ (40) ಎಂದು ಗುರುತಿಸಲಾಗಿದೆ.

ಪ್ರಕರಣ ಸಂಬಂಧ ತಲೆಮರೆಸಿಕೊಂಡಿರುವ ಲಕ್ಷ್ಮಣ್ ರಾವ್, ತುಷಾರ್ ಮತ್ತು ಆಶಾಲತಾ ರಾವ್‌ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಜಯನಗರ 4ನೇ ಬ್ಲಾಕ್‌ನಲ್ಲಿ ಕಚೇರಿ ಹೊಂದಿರುವ ರಾಜರಾಜೇಶ್ವರಿ ನಗರದ ಐಡಿಯಲ್‌ ಹೋಮ್ಸ್‌ ಟೌನ್‌ ನಿವಾಸಿಯಾಗಿರುವ ದೂರುದಾರ ಎನ್‌ ಪಾರ್ಥಸಾರಥಿ ಅವರು 2017ರಲ್ಲಿ ಬಾಣಸವಾಡಿಯ ಸಂಸ್ಥೆಯೊಂದರಲ್ಲಿ ಬಂಡವಾಳ ಹೂಡಲು ಆಸ್ತಿಯನ್ನು ಅಡಮಾನವಿಟ್ಟು ಸುಮಾರು 1.75 ಕೋಟಿ ರೂಪಾಯಿ ಸಾಲ ಪಡೆದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಸಾಂಕ್ರಾಮಿಕ ರೋಗದಿಂದಾಗಿ ಪಾರ್ಥಸಾರಥಿಯವರು ನಷ್ಟವನ್ನು ಅನುಭವಿಸಿದ್ದರು. ಬ್ಯಾಂಕ್ ಸಾಲ ತೀರಿಸಲು ಸಾಧ್ಯವಾಗದೆ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದರು.

ಸಾಲ ತೀರಿಸುವ ಪ್ರಯತ್ನದ ವೇಳೆ ಪಾರ್ಥಸಾರಥಿಯವರು ಆರೋಪಿಗಳ ಸಂಪರ್ಕಕ್ಕೆ ಸಿಕ್ಕಿದ್ದಾರೆ, ಈ ವೇಳೆ ಆರೋಪಿಗಳು ಸಾಲವನ್ನು ತೀರಿಸುವ ಭರವಸೆ ನೀಡಿದ್ದಾರೆ.

ತಮ್ಮ ಬಳಿ 13 ಕೋಟಿ ರೂ.ಗಳಿದ್ದು, ಈ ಹಣವನ್ನು ಸಂಪೂರ್ಣವಾಗಿ ಸಾಲವೆಂದು ಪಡೆದುಕೊಡರೆ ಶೇ.5ರಷ್ಟು ರಿಯಾಯಿತಿ ನೀಡುವುದಾಗಿ ಹೇಳಿಕೊಂಡಿದ್ದಾರೆ. ಬಳಿಕ ಸರ್ವಿಸ್ ಚಾರ್ಚ್ ಎಂದು 27 ಲಕ್ಷ ರೂಪಾಯಿಯನ್ನು ವರ್ಗಾಯಿಸಲು ಹೇಳಿದ್ದಾರೆ. ಈ ವೇಳೆ ವ್ಯಕ್ತಿ ಆನ್ ಲೈನ್ ಮೂಲಕ ಹಣವನ್ನು ವರ್ಗಾಯಿಸಿದ್ದಾರೆ. ಬಳಿಕ ಆರೋಪಿಗಳು 500 ರುಪಾಯಿ ಮುಖಬೆಲೆಯ ನೋಟನ್ನು ಬ್ಯಾಗ್ ನಲ್ಲಿ ತುಂಬಿದ್ದು, ರೂ.1 ಕೋಟಿ ಇದೆ ಎಂದು ಹೇಳಿದ್ದಾರೆ. ಬ್ಯಾಗ್ ಪಡೆದ ಪಾರ್ಥ ಅವರಿಗೆ ಅನುಮಾನ ಬಂದಿದ್ದು, ನೋಟುಗಳನ್ನು ಪರಿಶೀಲಿಸಿದಾಗ ಅದು ನಕಲಿ ನೋಟುಗಳು ಎಂದು ತಿಳಿದುಬಂದಿದೆ. ಕೂಡಲೇ ಪೊಲೀಸರಿಗೆ ದೂರು ನೀಡಿದ್ದಾರೆ.

ಆರೋಪಿಗಳಿಂದ ಪೊಲೀಸರು ಜಾಗ್ವಾರ್ ಐಷಾರಾಮಿ ಕಾರು, 6 ಕೆಜಿ ನಕಲು ಚಿನ್ನದ ಬಿಸ್ಕತ್‌ಗಳು, 1 ಕೋಟಿ ರೂಪಾಯಿ ನಕಲಿ ನೋಟು, 20 ಲಕ್ಷ ರೂಪಾಯಿ ನಗದು, ನಕಲಿ ಬುಲೆಟ್‌ಗಳು ಸೇರಿದಂತೆ ಎರಡು ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com