ಬೆಂಗಳೂರು: ಎಂಟು ವರ್ಷದ ಬಾಲಕಿ ಮೇಲೆ ಬೀದಿ ನಾಯಿ ದಾಳಿ, ಬಿಡಿಸಲು ಬಂದ ತಂದೆಗೂ ಕಚ್ಚಿದ ನಾಯಿ

ಬಿಬಿಎಂಪಿ ವ್ಯಾಪ್ತಿಯ ಲಕ್ಷ್ಮೀದೇವಿ ನಗರದಲ್ಲಿ ಭಾನುವಾರ ರಾತ್ರಿ ಎಂಟು ವರ್ಷದ ಬಾಲಕಿ ಮತ್ತು ಆಕೆಯ ತಂದೆಯ ಮೇಲೆ ಬೀದಿ ನಾಯಿ ದಾಳಿ ಮಾಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಲಕ್ಷ್ಮೀದೇವಿ ನಗರದಲ್ಲಿ ಭಾನುವಾರ ರಾತ್ರಿ ಎಂಟು ವರ್ಷದ ಬಾಲಕಿ ಮತ್ತು ಆಕೆಯ ತಂದೆಯ ಮೇಲೆ ಬೀದಿ ನಾಯಿ ದಾಳಿ ಮಾಡಿದೆ.

ಬಿಬಿಎಂಪಿಯ ಆರಂಭಿಕ ವರದಿಗಳ ಪ್ರಕಾರ, ನೂರಿನ್ ಫಲಕ್ ಎಂಬ ಬಾಲಕಿ ತಡರಾತ್ರಿ ತನ್ನ ತಂದೆ ಫಕ್ರುದ್ದೀನ್‌ನೊಂದಿಗೆ ಹೊರಗೆ ಹೋಗುತ್ತಿದ್ದಾಗ ನಾಯಿಯು ಆಕೆಯನ್ನು ಹಿಂಬಾಲಿಸಿ ದಾಳಿ ಮಾಡಿದೆ. ಇದನ್ನು ತಪ್ಪಿಸಲು ಆಕೆಯ ತಂದೆ ಮುಂದಾದಾಗ, ಅವರಿಗೂ ನಾಯಿ ಕಚ್ಚಿದೆ. ಅವರು ಆಂಟಿ ರೇಬಿಸ್ ಇಂಜೆಕ್ಷನ್ ಪಡೆದಿದ್ದಾರೆ.

ಬಿಬಿಎಂಪಿ ಪಶುಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ ಶಿಂಧೆ ಮಾತನಾಡಿ, 'ಮಗುವಿಗೆ ಗಾಯಗಳಾಗಿದ್ದು, ಆಕೆಯ ಮುಖ ಮತ್ತು ಕುತ್ತಿಗೆ ಭಾಗದಲ್ಲಿ ಹೊಲಿಗೆ ಹಾಕಲಾಗಿದ್ದು, ಅಪಾಯದಿಂದ ಪಾರಾಗಿದ್ದಾಳೆ. ನಾವು ಚಿಕಿತ್ಸೆಯ ವೆಚ್ಚವನ್ನು ಮರುಪಾವತಿಸುತ್ತೇವೆ ಮತ್ತು ಪರಿಹಾರವಾಗಿ 10,000 ರೂ. ನೀಡುತ್ತೇವೆ' ಎಂದಿದ್ದಾರೆ.

'ಸುತ್ತಮುತ್ತಲಿನ ಮನೆಯ ಮಾಲೀಕರು ನಾಯಿಗೆ ಆಹಾರವನ್ನು ನೀಡುತ್ತಾರೆ. ಆದರೆ, ಈಗ ಆ ನಾಯಿಯನ್ನು ಹುಡುಕಲು ಸಾಧ್ಯವಿಲ್ಲ. ನಾಯಿ ಸಿಕ್ಕಿಬೀಳಬಹುದೆಂಬ ಭಯದಿಂದ ಮಾಲೀಕರು ಅದನ್ನು ಎಲ್ಲೋ ಬಿಟ್ಟು ಹೋಗಿದ್ದಾರೆ. ನಾಯಿಗೆ ಲಸಿಕೆ ಹಾಕಲಾಗಿದೆಯೇ ಎಂಬುದು ನಮಗೆ ತಿಳಿದಿಲ್ಲ' ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಬಿಬಿಎಂಪಿಯಿಂದ ಪ್ರಾಣಿ ಜನನ ನಿಯಂತ್ರಣ ಕಾರ್ಯಕ್ರಮ ವಿಫಲವಾಗಿರುವುದೇ ಘಟನೆಗೆ ಕಾರಣ ಎಂದು ಪ್ರಾಣಿ ಕಲ್ಯಾಣ ಕಾರ್ಯಕರ್ತರು ಆರೋಪಿಸಿದ್ದಾರೆ. ಕಾರ್ಯಕರ್ತೆ ಸುಜಯ ಜಗದೀಶ್ ಮಾತನಾಡಿ, ಆರ್‌ಆರ್‌ನಗರದ ಅನಿಮಲ್ ಬರ್ತ್ ಕಂಟ್ರೋಲ್ ಸೆಂಟರ್‌ಗೆ ಭೇಟಿ ನೀಡಿದ್ದು, ಅದು ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತಿಲ್ಲ ಎಂದಿದ್ದಾರೆ.

'ಕೇಂದ್ರವು ಫುಟ್‌ಪಾತ್ ಪಕ್ಕದಲ್ಲಿ ನಿರ್ಮಿಸಲಾಗಿದೆ ಮತ್ತು ವಿಶಾಲವಾದ ಸ್ಥಳವನ್ನು ಹೊಂದಿಲ್ಲ. ಸಿಬ್ಬಂದಿ, ಸ್ಥಳಾವಕಾಶ ಮತ್ತು ಹಣಕಾಸಿನ ಕೊರತೆಯಿಂದಾಗಿ ಎನ್‌ಜಿಒಗಳಿಗೆ ಶಸ್ತ್ರಚಿಕಿತ್ಸೆಗಾಗಿ ನಾಯಿಗಳನ್ನು ಆಯ್ಕೆ ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ, ಬೀದಿ ನಾಯಿಗಳ ದಾಳಿಯ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ' ಎಂದು ಅವರು ಹೇಳಿದರು.

ಪ್ರಾಣಿ ಸಂತಾನ ನಿಯಂತ್ರಣ ಪ್ರಕ್ರಿಯೆ ನಿರಂತರ ಪ್ರಕ್ರಿಯೆಯಾಗಬೇಕು ಎಂದು ಕಾರ್ಯಕರ್ತರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com