ಈದ್ಗಾ ಮೈದಾನ ವಿವಾದ: ಜುಲೈ 12 ಚಾಮರಾಜಪೇಟೆ ಬಂದ್‌! ಶಾಸಕ ಜಮೀರ್ ವಿರುದ್ಧ ಸಂಘಟನೆಗಳ ಆಕ್ರೋಶ!

ಚಾಮರಾಜಪೇಟೆ ಈದ್ಗಾ ಮೈದಾನ ವಿವಾದ ತಾರಕಕ್ಕೇರಿದ್ದು, ವಕ್ಫ್ ಬೋರ್ಡ್ ಗೆ ಮೈದಾನ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿರುವ ಚಾಮರಾಜ ಪೇಟೆ ನಾಗರಿಕ ಒಕ್ಕೂಟ ಜುಲೈ 12 ಚಾಮರಾಜಪೇಟೆ ಬಂದ್‌ ಗೆ ಕರೆ ಕೊಟ್ಟಿದೆ.
ಚಾಮರಾಜಪೇಟೆ ಈದ್ಗಾ ಮೈದಾನ
ಚಾಮರಾಜಪೇಟೆ ಈದ್ಗಾ ಮೈದಾನ

ಬೆಂಗಳೂರು: ಚಾಮರಾಜಪೇಟೆ ಈದ್ಗಾ ಮೈದಾನ ವಿವಾದ ತಾರಕಕ್ಕೇರಿದ್ದು, ವಕ್ಫ್ ಬೋರ್ಡ್ ಗೆ ಮೈದಾನ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿರುವ ಚಾಮರಾಜ ಪೇಟೆ ನಾಗರಿಕ ಒಕ್ಕೂಟ ಜುಲೈ 12 ಚಾಮರಾಜಪೇಟೆ ಬಂದ್‌ ಗೆ ಕರೆ ಕೊಟ್ಟಿದೆ.

ಚಾಮರಾಜಪೇಟೆ ನಾಗರಿಕರ ಒಕ್ಕೂಟ ಜುಲೈ 12 ರಂದು ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಬಂದ್‌ಗೆ ಕರೆ ನೀಡಿದೆ. ಚಾಮರಾಜ ಪೇಟೆಯ ಜಂಗಮ ಕ್ಷೇತ್ರ ಪ್ರಾರ್ಥನಾ ಮಂದಿರದಲ್ಲಿ ಚಾಮರಾಜ ಪೇಟೆ ನಾಗರಿಕ ಒಕ್ಕೂಟ ಕರೆದ ಸಭೆಯಲ್ಲಿ 22ಕ್ಕೂ ಹೆಚ್ಚು ಸಂಘಟನೆಗಳು ಭಾಗವಹಿಸಿ ಬಂದ್‌ಗೆ ಸಂಪೂರ್ಣ ಬೆಂಬಲ ಸೂಚಿಸಿದವು. ಇದೇ ವೇಳೆ ಚಾಮರಾಜಪೇಟೆ ಆಟದ ಮೈದಾನಕ್ಕೆ ಜಯ ಚಾಮರಾಜ ಒಡೆಯರ್‌ ಹೆಸರಿಡಬೇಕು ಎಂದು ಒತ್ತಾಯಿಸಲಾಯಿತು. ಅಂತೆಯೇ ಆಗಸ್ಟ್‌ 15 ರಂದು ಮೈದಾನದಲ್ಲಿ ಧ್ವಜಾರೋಹಣ ನಡೆಸಲು ನಿರ್ಧರಿಸಲಾಯಿತು.

ನಾಗರಿಕ ಒಕ್ಕೂಟದ ಸದಸ್ಯ ಹಾಗೂ ಮಾಜಿ ಮೇಯರ್‌ ರಾಮೇಗೌಡ ಮಾತನಾಡಿ 'ಈಗಿನ ಈದ್ಗಾ ಮೈದಾನ ಆಟದ ಮೈದಾನ. ಇದು ಬಿಬಿಎಂಪಿ ಸ್ವತ್ತು ಎನ್ನುವುದಕ್ಕೆ ಹಲವು ದಾಖಲೆಗಳು ನಮ್ಮಲ್ಲಿವೆ. ಬಿಬಿಎಂಪಿ ಅಧಿಕಾರಿಗಳು ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ಆಟದ ಮೈದಾನವನ್ನು ಬೇರೆಯವ ಸ್ವತ್ತಾಗಲು ಬಿಡುವುದಿಲ್ಲ' ಎಂದು ಹೇಳಿದರು.

'ವಂದೇ ಮಾತರಂ' ಸಂಘಟನೆಯ ಶಿವಕುಮಾರ್‌ ಮಾತನಾಡಿ 'ಆಟದ ಮೈದಾನ ಉಳಿಸಿಕೊಳ್ಳುವ ಸಂಬಂಧ ಈ ಹಿಂದೆ ಹೋರಾಟ ಮಾಡಿ ಪೊಲೀಸರಿಂದ ಹೊಡೆತ ತಿಂದಿದ್ದೇವೆ. ಈಗಲೂ ಹೋರಾಡುತ್ತೇವೆ. ಪ್ರಾಣ ಬೇಕಾದರೂ ಕೊಟ್ಟೇವು, ಮೈದಾನ ಮಾತ್ರ ಬಿಡಲಾಗುವುದಿಲ್ಲ' ಎಂದರು.

ಈ ಬಗ್ಗೆ ಮಾಹಿತಿ ನೀಡಿರುವ ಪಾಲಿಕೆ ಮಾಜಿ ಸದಸ್ಯ ಬಿ. ವಿ. ಗಣೇಶ್‌, 'ಕ್ಷೇತ್ರದಲ್ಲಿ 20 ಶಾಲೆಗಳಿದ್ದರೂ ಆಟದ ಮೈದಾನವಿಲ್ಲ. ಹೀಗಾಗಿ, ಈದ್ಗಾ ಮೈದಾನ ಆಟದ ಮೈದಾನವಾಗಿಯೇ ಉಳಿಯಬೇಕು. ಇದಕ್ಕಾಗಿ ಬಂದ್‌ ಮಾಡುತ್ತೇವೆ. ಶಾಂತಿಯುತವಾಗಿ ಬಂದ್‌ ಮಾಡುತ್ತೇವೆ' ಎಂದರು.

ನಾಗರಿಕರ ಒಕ್ಕೂಟದ ಸಂಚಾಲಕ ರುಕ್ಮಾಂಗದ ಮಾತನಾಡಿ 'ಶಾಸಕರು, ಅಧಿಕಾರಿಗಳು ಅಡ್ಡಿಪಡಿಸಿದರೂ ಬಂದ್‌ ನಿಲ್ಲಲ್ಲ. ಯಾರೇ ಅಡ್ಡಿ ಮಾಡಿದರೂ ನಾವು ಬಂದ್‌ ಮಾಡೇ ತೀರುತ್ತೇವೆ. ಎಲ್ಲಾ ವಾಣಿಜ್ಯ ಸಂಸ್ಥೆಗಳು ತಾವಾಗಿಯೇ ಅಂಗಡಿಗಳನ್ನು ಮುಚ್ಚಲು ನಿರ್ಧರಿಸಿವೆ. ನಮ್ಮ ಬಂದ್‌ ಯಾರೂ ನಿಲ್ಲಿಸಲು ಸಾಧ್ಯವಿಲ್ಲ. ಸಂವಿಧಾನದಲ್ಲಿ ಪ್ರತಿಭಟನೆಗೆ ಅವಕಾಶ ಇದೆ. ಇದನ್ನು ಯಾರೂ ತಡೆಯೋಕೆ ಸಾಧ್ಯವಿಲ್ಲ. ಬಂದ್ ಸಾಂಕೇತಿಕ ಪ್ರತಿಭಟನೆ. ಜುಲೈ 10 ರಂದು ಬಕ್ರೀದ್ ಆಚರಿಸಲಾಗುವುದು ಮತ್ತು ಹಬ್ಬದ ಎರಡು ದಿನಗಳ ನಂತರ ಪ್ರತಿಭಟನೆಗೆ ಕರೆ ನೀಡಲಾಗಿದೆ ಎಂದರು.

ಮೈದಾನ ವಿಚಾರದಲ್ಲಿ ಶಾಸಕ ಬಿ.ಜೆ.ಜಮೀರ್ ಅಹಮದ್ ಖಾನ್ ಬಿಬಿಎಂಪಿ ಮೇಲೆ ಒಂದು ವರ್ಗದ ಪರವಾಗಿ ಪ್ರಭಾವ ಬೀರಿದ್ದಾರೆ ಎಂದು ಬಿಜೆಪಿ ಮುಖಂಡ ಎನ್.ಆರ್.ರಮೇಶ್ ಆರೋಪಿಸಿದ್ದು, ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಈ ಆರೋಪವನ್ನು ತಳ್ಳಿಹಾಕಿದ್ದು, ವಕ್ಫ್ ಬೋರ್ಡ್ ಮಾಲೀಕತ್ವ ಪಡೆಯಲು ಮುಂದಾಗಿಲ್ಲ ಎಂದು ಒತ್ತಿ ಹೇಳಿದ್ದು, 1965 ರಿಂದ ಖಥಾಕ್ಕಾಗಿ ಇದೀಗ ಅರ್ಜಿ ಸಲ್ಲಿಸಿದ್ದಾರೆ. 1974 ರ ದಾಖಲೆಗಳಲ್ಲಿ, ಜಮೀನು ಪಾಲಿಕೆ ಆಸ್ತಿ ಎಂದು ತೋರಿಸಲಾಗಿದೆ ಎಂದು ಅವರು ಹೇಳಿದರು. ಮಾಲೀಕತ್ವವನ್ನು ಸಾಬೀತುಪಡಿಸಲು ವಾರದೊಳಗೆ ಸಲ್ಲಿಸಬೇಕಾದ ಕೆಲವು ದಾಖಲೆಗಳ ಕುರಿತು ಪಾಲಿಕೆಯು ವಕ್ಫ್ ಮಂಡಳಿಗೆ ಮತ್ತೊಂದು ನೋಟಿಸ್ ಕಳುಹಿಸಿದೆ.

ಜಮೀರ್‌ಗೆ ಆಹ್ವಾನ ವಿವಾದ-ಆಕ್ರೋಶ
ಸಭೆಗೆ ಸ್ಥಳೀಯ ಶಾಸಕ ಜಮೀರ್‌ ಆಹ್ವಾನಿಸಿದ ವಿಚಾರವಾಗಿ ಗಲಾಟೆ ನಡೆಯಿತು. ಜಮೀರ್‌ ಸಭೆಗೆ ಬರಬಾರದು ಎಂದು ಕೆಲವರು ಆಕ್ರೋಶ ಹೊರ ಹಾಕಿದರು. 'ಜಮೀರ್‌ ಬಂದರೆ ನಾವೆಲ್ಲರೂ ಎದ್ದು ಹೋಗುತ್ತೇವೆ. ಶಾಸಕರಿಂದಲೇ ವಿವಾದ ಆಗುತ್ತಿದೆ. ಅವರನ್ನೇಕೆ ಆಹ್ವಾನ ನೀಡಿದ್ದೀರಿ' ಎಂದು ಹಲವರು ಆಕ್ಷೇಪಿಸಿದರು.

ಆಟದ ಮೈದಾನವನ್ನು ಇತರೆ ಧಾರ್ಮಿಕ ಉದ್ದೇಶಗಳಿಗೆ ಹಾಗೂ ಸ್ವಾತಂತ್ರ್ಯ ದಿನಾಚರಣೆಗೆ ಬಳಸಲು ಬಿಬಿಎಂಪಿ ಅನುಮತಿ ನೀಡಿ ನಿರಾಸೆ ಮೂಡಿಸಿದೆ ಎಂದು ಸುತ್ತಮುತ್ತಲಿನ ನಿವಾಸಿಗಳು ಅಭಿಪ್ರಾಯಪಟ್ಟಿದ್ದಾರೆ. ವಕ್ಫ್ ಬೋರ್ಡ್ ಆಸ್ತಿ ಹಕ್ಕು ಮತ್ತು 1965 ರ ಗೆಜೆಟ್ ಅಧಿಸೂಚನೆ ಸೇರಿದಂತೆ ದಾಖಲೆಗಳನ್ನು ಸಲ್ಲಿಸಿದೆ ಎಂದು ಬಿಬಿಎಂಪಿ ಇತ್ತೀಚೆಗೆ ಹೇಳಿತ್ತು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com