ಶಾಲೆಗೆ ಬಾಂಬ್ ಬೆದರಿಕೆ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌: ನ್ಯಾಷನಲ್ ಹಿಲ್ ವ್ಯೂ ಪಬ್ಲಿಕ್ ಸ್ಕೂಲ್ ನ 10ನೇ ಕ್ಲಾಸ್ ವಿದ್ಯಾರ್ಥಿಯಿಂದಲೇ ಇ- ಮೇಲ್!

ಬಾಂಬ್ ಬೆದರಿಕೆ ಬಂದಿದ್ದ ನ್ಯಾಶನಲ್ ಹಿಲ್ ವ್ಯೂ ಪಬ್ಲಿಕ್ ಸ್ಕೂಲ್‌ನಲ್ಲಿಯೇ ಎಸ್‌ಎಸ್‌ಎಲ್‌ಸಿ ಓದುತ್ತಿದ್ದ ವಿದ್ಯಾರ್ಥಿಯಿಂದಲೇ ಈ ಕೃತ್ಯ ನಡೆದಿದೆ ಎಂಬುದು ಇದೀಗ ಬಹಿರಂಗವಾಗಿದೆ.
ನ್ಯಾಷನಲ್ ಹಿಲ್ ವ್ಯೂ ಪಬ್ಲಿಕ್ ಸ್ಕೂಲ್
ನ್ಯಾಷನಲ್ ಹಿಲ್ ವ್ಯೂ ಪಬ್ಲಿಕ್ ಸ್ಕೂಲ್

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಒಡೆತನದ ರಾಜ ರಾಜೇಶ್ವರಿನಗರದಲ್ಲಿರುವ ನ್ಯಾಷನಲ್ ಹಿಲ್ ವ್ಯೂ ಪಬ್ಲಿಕ್ ಶಾಲೆಗೆ ಸೋಮವಾರ ಬಾಂಬ್ ಬೆದರಿಕೆ ಬಂದಿತ್ತು. ಹುಚ್ಚಾ ವೆಂಕಟ್ ಹೆಸರಿನ ಇ-ಮೇಲ್ ಮೂಲಕ ಬೆದರಿಕೆ ಹಾಕಿದ್ದ ಆರೋಪಿ ಅದೇ ಶಾಲೆಯ 10 ನೇ ತರಗತಿಯ ವಿದ್ಯಾರ್ಥಿ ಎಂಬುದಾಗಿ ತಿಳಿದುಬಂದಿದೆ

ಬಾಂಬ್ ಬೆದರಿಕೆ ಬಂದಿದ್ದ ನ್ಯಾಶನಲ್ ಹಿಲ್ ವ್ಯೂ ಪಬ್ಲಿಕ್ ಸ್ಕೂಲ್‌ನಲ್ಲಿಯೇ ಎಸ್‌ಎಸ್‌ಎಲ್‌ಸಿ ಓದುತ್ತಿದ್ದ ವಿದ್ಯಾರ್ಥಿಯಿಂದಲೇ ಈ ಕೃತ್ಯ ನಡೆದಿದೆ ಎಂಬುದು ಇದೀಗ ಬಹಿರಂಗವಾಗಿದೆ. ಸೋಮವಾರದಿಂದ 10ನೇ ತರಗತಿಯ ಮೊದಲನೇ ಪರೀಕ್ಷೆ ಇತ್ತು. ಪರೀಕ್ಷೆಯನ್ನು ಮುಂದೂಡುವ ಸಲುವಾಗಿ ವಿದ್ಯಾರ್ಥಿ ಈ ರೀತಿ ಪ್ಲ್ಯಾನ್ ಮಾಡಿದ್ದ ವಿಚಾರ ತನಿಖೆಯ ವೇಳೆ ಬೆಳಕಿಗೆ ಬಂದಿದೆ.

ಅಪ್ರಾಪ್ತ ಬಾಲಕ ಹಿನ್ನೆಲೆ ಆತನ ಹೆಸರು ಬಹಿರಂಗಪಡಿಸಲು ಸಾಧ್ಯವಿಲ್ಲ. ಘಟನೆ ಸಂಬಂಧ ಬಾಲ ನ್ಯಾಯ ಕಾಯ್ದೆ ಪ್ರಕಾರ ಬಾಲಕನ ಮೇಲೆ ಕ್ರಮ ಜರುಗಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಜು.21ರಂದು ಪರೀಕ್ಷೆಗಳು ನಿಗದಿ ಆಗಿದ್ದವು. ಆದರೆ, ವಿದ್ಯಾರ್ಥಿ ಹೆಚ್ಚು ಓದಿರಲಿಲ್ಲ. ಪರೀಕ್ಷೆಯಲ್ಲಿ ಅನುತ್ತೀರ್ಣ ಆಗುವ ಭಯವಿತ್ತು. ಪರೀಕ್ಷೆ ಮುಂದೂಡುವ ಉದ್ದೇಶದಿಂದ ಬಾಂಬ್ ಬೆದರಿಕೆ ಕಳುಹಿಸಿದ್ದ ಎನ್ನುವ ಮಾಹಿತಿ ವಿಚಾರಣೆಯಲ್ಲಿ ಗೊತ್ತಾಗಿದೆ.

ತಂದೆಯ ಲ್ಯಾಪ್‍ಟಾಪ್‍ನಲ್ಲಿ ಹುಚ್ಚ ವೆಂಕಟ್ ಹೆಸರಿನಲ್ಲಿ ಇ-ಮೇಲ್ ಸೃಷ್ಟಿಸಿದ್ದ ಬಾಲಕ, ಅದೇ ಇ-ಮೇಲ್‍ನಿಂದ ಶಾಲೆ ಇ-ಮೇಲ್ ವಿಳಾಸಕ್ಕೆ ಸಂದೇಶ ಕಳುಹಿಸಿದ್ದ. ಶಾಲೆ ಆವರಣದಲ್ಲಿ ಬಾಂಬ್ ಸ್ಫೋಟಗೊಳ್ಳುವುದಾಗಿ ಬೆದರಿಸಿದ್ದ ಎನ್ನುವ ಮಾಹಿತಿಯೂ ತಿಳಿದುಬಂದಿದೆ.

ವಶಕ್ಕೆ ಪಡೆದಿರುವ ಬಾಲಕ ಸೋಮವಾರವೂ ವಿದ್ಯಾರ್ಥಿಯಂತೆ ಎಂದಿನಂತೆ ಶಾಲೆಗೆ ಬಂದಿದ್ದ. ಪೊಲೀಸರು ಶೋಧ ನಡೆಸುವಾಗಲೂ ಆತ ಸ್ಥಳದಲ್ಲಿದ್ದ. ಆದರೆ, ಈತ ಇ-ಮೇಲ್ ಕಳುಹಿಸಿದ್ದ ಮಾಹಿತಿ ಪೋಷಕರಿಗೂ ಗೊತ್ತಿರಲಿಲ್ಲ. ಈ ಬಗ್ಗೆ ಬಾಂಬ್ ಬೆದರಿಕೆ ಸಂಬಂಧ ರಾಜರಾಜೇಶ್ವರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.  ಬಿಗಿ ಭದ್ರತೆಯಲ್ಲಿ ಮಂಗಳವಾರ ತರಗತಿಗಳು ಪುನರಾರಂಭಗೊಂಡವು. ಶಾಲೆಯು ತನ್ನ ಖಾಸಗಿ ಭದ್ರತೆಯನ್ನು ಹೆಚ್ಚಿಸುವುದರ ಜೊತೆಗೆ ಪೊಲೀಸರು ಹೆಚ್ಚುವರಿ ರಕ್ಷಣೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com