ಭಾರತೀಯ ಸೇನೆ-ಸಿಸಿಬಿ ಜಂಟಿ ಕಾರ್ಯಾಚರಣೆ: ಅಂತರಾಷ್ಟ್ರೀಯ ಕರೆಗಳನ್ನು ಸ್ಥಳೀಯ ಕರೆಗಳನ್ನಾಗಿ ಮಾರ್ಪಾಡಿಸುತ್ತಿದ್ದ ವ್ಯಕ್ತಿ ಬಂಧನ
ಭಾರತೀಯ ಸೇನಾಪಡೆ- ಸಿಸಿಬಿ ಜಂಟ ಕಾರ್ಯಾಚರಣೆ ನಡೆಸಿದ್ದು, ಅಂತರಾಷ್ಟ್ರೀಯ ಕರೆಗಳನ್ನು ಸ್ಥಳೀಯ ಕರೆಗಳನ್ನಾಗಿ ಮಾರ್ಪಾಡುತ್ತಿದ್ದ ಆರೋಪಿಯನ್ನು ಬಂಧನಕ್ಕೊಳಪಡಿಸಿದೆ.
Published: 22nd June 2022 11:18 AM | Last Updated: 22nd June 2022 12:54 PM | A+A A-

ಸಂಗ್ರಹ ಚಿತ್ರ
ಬೆಂಗಳೂರು: ಭಾರತೀಯ ಸೇನಾಪಡೆ- ಸಿಸಿಬಿ ಜಂಟ ಕಾರ್ಯಾಚರಣೆ ನಡೆಸಿದ್ದು, ಅಂತರಾಷ್ಟ್ರೀಯ ಕರೆಗಳನ್ನು ಸ್ಥಳೀಯ ಕರೆಗಳನ್ನಾಗಿ ಮಾರ್ಪಾಡುತ್ತಿದ್ದ ಆರೋಪಿಯನ್ನು ಬಂಧನಕ್ಕೊಳಪಡಿಸಿದೆ.
ಬಂಧಿತನನ್ನು ಶರ್ಫುದ್ದೀನ್ (41) ಎಂದು ಗುರ್ತಿಸಲಾಗಿದೆ. ಈತನನ್ನು ಸೋಮವಾರ ಬೆಳಿಕ್ಕೆ ಹೆಸರಘಟ್ಟದಲ್ಲಿ ಬಂಧನಕ್ಕೊಳಪಡಿಸಲಾಗಿದೆ. ಆರೋಪಿಯಿಂದ 32 ಸಿಮ್ ಕಾರ್ಡ್‌ಗಳನ್ನು ಹೊಂದಬಹುದಾದ 58 ಸಿಮ್ ಬಾಕ್ಸ್ ಸಾಧನಗಳನ್ನು ವಶಪಡಿಸಿಕೊಂಡಿದ್ದಾರೆ.
ಕೇರಳ ಮೂಲದ ಈತ ಅಂತರಾಷ್ಟ್ರೀಯ ಕರೆಗಳನ್ನು ಸ್ಥಳೀಯ ಕರೆಗಳನ್ನಾಗಿ ಮಾರ್ಪಾಡು ಮಾಡುತ್ತಿದ್ದ. ಈತನನ್ನು ಬಳಸಿಕೊಂಡು ಪಾಕಿಸ್ತಾನದ ಐಎಸ್ಐ ಭಾರತದಲ್ಲಿ ಬೇಹುಗಾರಿಕೆ ನಡೆಸುತ್ತಿದೆ ಎಂಬ ಮಾಹಿತಿಗಳು ತಿಳಿದುಬಂದಿದ್ದು, ಈ ಬಗ್ಗೆ ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ.
ಆರೋಪಿಯು ಅನಿಯಮಿತ ಕರೆ ಸೌಲಭ್ಯವಿರುವ (ಅನ್‌ಲಿಮಿಟೆಡ್) ಸಿಮ್ ಕಾರ್ಡ್‌ಗಳನ್ನು ಎಫ್‌ಟಿಸಿ ಬಾಕ್ಸ್, ಮೋಡೆಮ್ ಹಾಗೂ ರೂಟರ್‌ಗೆ ಜೋಡಿಸಿದ್ದ. ಇದೇ ಉಪಕರಣದ ಮೂಲಕ ಐಎಸ್‌ಡಿ ಕರೆಗಳನ್ನು ಎಸ್‌ಟಿಡಿ ಕರೆಗಳಿಗೆ ಪರಿವರ್ತಿಸುತ್ತಿದ್ದ. ಇದರಿಂದ ವಿದೇಶಿ ಕರೆಗಳಿಗೂ ಎಸ್‌ಟಿಡಿ ದರವೇ ಅನ್ವಯವಾಗುತ್ತಿತ್ತು. ಕೇಂದ್ರ ಸರ್ಕಾರಕ್ಕೂ ನಷ್ಟವಾಗುತ್ತಿತ್ತು.
‘ಪಾಕಿಸ್ತಾನದಿಂದ ಬರುತ್ತಿದ್ದ ಕರೆಗಳನ್ನು ಆರೋಪಿ ಮಾರ್ಪಾಡು ಮಾಡುತ್ತಿದ್ದ. ಐಎಸ್‌ಐ ಪ್ರತಿನಿಧಿಗಳು, ದೇಶದ ಕೆಲವರ ಜೊತೆ ಮಾತನಾಡುತ್ತಿದ್ದರು. ಭಾರತೀಯ ಸೇನೆ ಹಾಗೂ ಇತರೆ ಮಾಹಿತಿಗಳನ್ನು ತಿಳಿದುಕೊಳ್ಳುತ್ತಿದ್ದರೆಂಬ ಶಂಕೆಗಳಿವೆ. ಆರೋಪಿಯನ್ನು ಕಸ್ಟಡಿಗೆ ಪಡೆದು ಹೆಚ್ಚಿನ ವಿಚಾರಣೆ ನಡೆಸಬೇಕಿದೆ’ ಎಂದೂ ಮೂಲಗಳು ಹೇಳಿವೆ.
ಇದನ್ನೂ ಓದಿ: ಬೆಂಗಳೂರು: ಅಕ್ರಮ ಟೆಲಿಫೋನ್ ಎಕ್ಸ್ ಚೇಂಜ್ ನಡೆಸುತ್ತಿದ್ದ 6 ಮಂದಿ ಬಂಧನ
ಆರೋಪಿ ಕೃತ್ಯವನ್ನು ಪತ್ತೆ ಮಾಡಿದ್ದ ಭಾರತೀಯ ಸೇನೆಯ ಇಂಟೆಲಿಜೆನ್ಸ್ ಅಧಿಕಾರಿಗಳು, ಬೆಂಗಳೂರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಇದರಂತೆ ಸೇನೆ ಅಧಿಕಾರಿಗಳು ಹಾಗೂ ಸಿಸಿಬಿ ಪೊಲೀಸರು, ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧನಕ್ಕೊಳಪಡಿಸಿದ್ದಾರೆ.
ಅಂತರಾಷ್ಟ್ರೀಯ ಕರೆಗಳನ್ನು ಸ್ಥಳೀಯ ಕರೆಗಳನ್ನಾಗಿ ಮಾರ್ಪಾಡು ಮಾಡುವ ಪ್ರಕರಣಗಳ ಕುರಿತು ತನಿಖೆಯನ್ನು ತೀವ್ರಗೊಳಿಸಲಾಗಿದ್ದು, ಈ ವೇಳೆ ಬೆಂಗಳೂರಿನ ಉತ್ತರ ಭಾಗದಲ್ಲಿ ಇದರ ಕೇಂದ್ರವಿರುವ ಕುರಿತು ಅಧಿಕಾರಿಗಳಿಗೆ ಮಾಹಿತಿ ಬಂದಿದ್ದು, ಈ ವೇಳೆ ಶರ್ಫೂದ್ದೀನ್ ನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ. ಆರೋಪಿಯನ್ನು ವಶಕ್ಕೆ ಪಡೆಯಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕಳೆದ ವರ್ಷ ಜೂನ್‌ನಲ್ಲಿ, ಕೇಂದ್ರ ಅಪರಾಧ ವಿಭಾಗದ ಭಯೋತ್ಪಾದನಾ ನಿಗ್ರಹ ದಳವು ಅಕ್ರಮ ದೂರವಾಣಿ ವಿನಿಮಯ ಕೇಂದ್ರಗಳನ್ನು ನಡೆಸುವುದು, ರಾಷ್ಟ್ರೀಯ ಭದ್ರತೆಯನ್ನು ಅಪಾಯಕ್ಕೆ ಸಿಲುಕಿಸುವುದು ಮತ್ತು ಟೆಲಿಕಾಂಗಳಿಗೆ ನಷ್ಟ ಉಂಟುಮಾಡುವ ಆರೋಪದ ಮೇಲೆ ಏಳು ಜನರನ್ನು ಬಂಧಿಸಿತ್ತು.