ಹೊಸ ದಾಖಲೆ: ಲೋಕ ಅದಾಲತ್ ನಲ್ಲಿ 7.65 ಲಕ್ಷ ಪ್ರಕರಣಗಳು ಇತ್ಯರ್ಥ
ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ (ಕೆಎಸ್‌ಎಲ್‌ಎಸ್‌ಎ) ಶನಿವಾರ ಆಯೋಜಿಸಿದ್ದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ರಾಜ್ಯದ ಎಲ್ಲ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ 2.23 ಲಕ್ಷ ಸಂಚಾರ ಉಲ್ಲಂಘನೆ ಪ್ರಕರಣಗಳು ಸೇರಿದಂತೆ ರಾಜ್ಯಾದ್ಯಂತ 7.65 ಲಕ್ಷ ಪ್ರಕರಣಗಳನ್ನು ಇತ್ಯರ್ಥಪಡಿಸುವ ಮೂಲಕ ಹೊಸ ದಾಖಲೆ ನಿರ್ಮಿಸಿದೆ.
Published: 28th June 2022 12:17 PM | Last Updated: 28th June 2022 01:45 PM | A+A A-

ಲೋಕ್-ಅದಾಲತ್
ಬೆಂಗಳೂರು: ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ (ಕೆಎಸ್‌ಎಲ್‌ಎಸ್‌ಎ) ಶನಿವಾರ ಆಯೋಜಿಸಿದ್ದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ರಾಜ್ಯದ ಎಲ್ಲ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ 2.23 ಲಕ್ಷ ಸಂಚಾರ ಉಲ್ಲಂಘನೆ ಪ್ರಕರಣಗಳು ಸೇರಿದಂತೆ ರಾಜ್ಯಾದ್ಯಂತ 7.65 ಲಕ್ಷ ಪ್ರಕರಣಗಳನ್ನು ಇತ್ಯರ್ಥಪಡಿಸುವ ಮೂಲಕ ಹೊಸ ದಾಖಲೆ ನಿರ್ಮಿಸಿದೆ.
ಅಕ್ಟೋಬರ್ 8, 2016 ರಂದು ನಡೆದ ಲೋಕ ಅದಾಲತ್‌ನಲ್ಲಿ ಹಿಂದಿನ ಅತಿ ಹೆಚ್ಚು ಪ್ರಕರಣಗಳು 6.16 ಲಕ್ಷ ಇತ್ಯರ್ಥವಾಗಿದ್ದವು. ಇದು ಈ ವರೆಗಿನ ಅತೀ ಹೆಚ್ಚು ಪ್ರಕರಣಗಳ ಇತ್ಯರ್ಥದ ದಾಖಲೆಯಾಗಿತ್ತು. ಈ ಕುರಿತು ಮಾಹಿತಿ ನೀಡಿರುವ ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶ ನ್ಯಾಯಮೂರ್ತಿ ಬಿ ವೀರಪ್ಪ ಅವರು, ರಾಜ್ಯದ ಎಲ್ಲ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ 2.23 ಲಕ್ಷ ಸಂಚಾರ ಉಲ್ಲಂಘನೆ ಪ್ರಕರಣಗಳು ಸೇರಿದಂತೆ ರಾಜ್ಯಾದ್ಯಂತ 7.65 ಲಕ್ಷ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. 7.65 ಲಕ್ಷ ಪ್ರಕರಣಗಳಲ್ಲಿ ಐದು ಲಕ್ಷ ವ್ಯಾಜ್ಯ ಪೂರ್ವ ಪ್ರಕರಣಗಳು ಸೇರಿವೆ ಎಂದು ಹೇಳಿದರು. ರಾಜ್ಯದ ಎಲ್ಲಾ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಸಂಚಾರ ಉಲ್ಲಂಘನೆ ಪ್ರಕರಣಗಳಲ್ಲಿ ರಾಜ್ಯ ಸರ್ಕಾರಕ್ಕೆ 1,003 ಕೋಟಿಗೂ ಹೆಚ್ಚು ದಂಡ ಬರಬೇಕಿದೆ, ಇದರಲ್ಲಿ ಶೇ 80 ರಷ್ಟು ಪ್ರಕರಣಗಳು ಬೆಂಗಳೂರು ಕಮಿಷನರೇಟ್‌ನಲ್ಲಿಯೇ ಬಾಕಿ ಇವೆ ಎಂದು ನ್ಯಾಯಮೂರ್ತಿ ವೀರಪ್ಪ ಹೇಳಿದರು.
ಇದನ್ನೂ ಓದಿ: ಮೈಸೂರು: ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದ್ದ ಪ್ರಸಿದ್ಧ ಕವಿಗಳ ಸಂಬಂಧಿಕರ ಕೇಸ್ 53 ವರ್ಷಗಳ ನಂತರ ಇತ್ಯರ್ಥ!
ಪೊಲೀಸರ ಕೋರಿಕೆಯಂತೆ, ಸಂಚಾರ ಉಲ್ಲಂಘನೆ ಪ್ರಕರಣಗಳಲ್ಲಿ 1,003 ಕೋಟಿ ರೂಗಿಂತ ಹೆಚ್ಚಿನ ದಂಡವನ್ನು ವಸೂಲಿ ಮಾಡಲು ಎಸ್‌ಎಂಎಸ್ ಮೂಲಕ ಲೋಕ ಅದಾಲತ್ ನೋಟಿಸ್‌ಗಳನ್ನು ನೀಡಲಾಗಿದೆ. 2.23 ಲಕ್ಷ ಟ್ರಾಫಿಕ್ ಚಲನ್ ಪಟ್ಟಿ ಪ್ರಕರಣಗಳನ್ನು ವ್ಯಾಜ್ಯ ಪೂರ್ವ ಪ್ರಕರಣಗಳಾಗಿ ವಿಲೇವಾರಿ ಮಾಡಲಾಗಿದ್ದು, 22.36 ಕೋಟಿ ರೂ ದಂಡ ವಸೂಲಿ ಮಾಡಲಾಗಿದೆ ಎಂದರು.
50 ವರ್ಷಗಳ ಕಾಲ ಬೇರ್ಪಟ್ಟ ದಂಪತಿ ಮತ್ತೆ ಒಂದಾದರು
ಇತ್ತ ಮತ್ತೊಂದು ಪ್ರಕರಣದಲ್ಲಿ ಕಲಘಟಗಿಯ ಹಿರಿಯ ಸಿವಿಲ್ ನ್ಯಾಯಾಧೀಶರ ಮುಂದೆ ಬಾಕಿ ಉಳಿದಿದ್ದ ವಿಶಿಷ್ಟ ಜೀವನಾಂಶ ಪ್ರಕರಣದಲ್ಲಿ 50 ವರ್ಷಗಳಿಗಿಂತ ಹೆಚ್ಚು ಕಾಲ ಪ್ರತ್ಯೇಕವಾಗಿ ವಾಸಿಸುತ್ತಿದ್ದ ದಂಪತಿಗಳು, ಸುಮಾರು 80 ವರ್ಷ ವಯಸ್ಸಿನ ಪತ್ನಿ ಮತ್ತು 85 ವರ್ಷ ವಯಸ್ಸಿನ ಪತಿ ಮತ್ತೆ ಒಂದಾಗಿದ್ದಾರೆ ಎಂದು ನ್ಯಾಯಮೂರ್ತಿ ವೀರಪ್ಪ ಹೇಳಿದರು.
ಇದನ್ನೂ ಓದಿ: ಮೆಗಾ ಲೋಕ್ ಅದಾಲತ್: 3.37 ಲಕ್ಷ ಪ್ರಕರಣಗಳ ಇತ್ಯರ್ಥ; ಪ್ರತಿಷ್ಠೆ ಮರೆತು ಮತ್ತೆ ಒಂದಾದ 25 ಜೋಡಿಗಳು!
ಲೋಕ ಅದಾಲತ್‌ನಲ್ಲಿ ಇತ್ಯರ್ಥವಾದ 1,128 ವೈವಾಹಿಕ ವಿವಾದಗಳಲ್ಲಿ 107 ಜೋಡಿಗಳಲ್ಲಿ ಇದು ಒಂದಾಗಿದೆ. ಮೈಸೂರಿನಲ್ಲಿ 40 ಜೋಡಿಗಳು ಮತ್ತೆ ಒಂದಾದರೆ, ವಿಚ್ಛೇದನ, ದಾಂಪತ್ಯ ಹಕ್ಕುಗಳ ಮರುಸ್ಥಾಪನೆ ಇತ್ಯಾದಿಗಳಿಗೆ ಅರ್ಜಿ ಸಲ್ಲಿಸಿದ 30 ದಂಪತಿಗಳು ತಮ್ಮ ವಿವಾದಗಳನ್ನು ಇತ್ಯರ್ಥಪಡಿಸಿಕೊಂಡರು. ಎರಡು ಮೋಟಾರು ವಾಹನ ಅಪಘಾತ ಪ್ರಕರಣಗಳನ್ನು ಕ್ರಮವಾಗಿ 1.97 ಕೋಟಿ ಹಾಗೂ 2.03 ಕೋಟಿ ರೂ.ಗೆ ಇತ್ಯರ್ಥಪಡಿಸಲಾಗಿದೆ ಎಂದು ತಿಳಿಸಿದರು. ಲೋಕ ಅದಾಲತ್‌ನಿಂದ ರಾಜ್ಯ ಸರ್ಕಾರಕ್ಕೆ ದಂಡ ಮತ್ತು ದಂಡದ ಮೂಲಕ ಕೋಟ್ಯಂತರ ರೂಪಾಯಿ ಆದಾಯ ಬಂದಿದೆ ಮತ್ತು 7.65 ಲಕ್ಷ ಪ್ರಕರಣಗಳನ್ನು ನ್ಯಾಯಾಲಯದ ಮುಂದೆ ಇತ್ಯರ್ಥಪಡಿಸಲು ನ್ಯಾಯಾಧೀಶರಿಗೆ ಖರ್ಚು ಮಾಡಲು 508 ಕೋಟಿ ರೂಪಾಯಿಗಳನ್ನು ಉಳಿಸಲಾಗಿದೆ ಎಂದು ಮಾಹಿತಿ ನೀಡಿದರು.