ಪುಲ್ವಾಮಾ ಉಗ್ರದಾಳಿ ಕುರಿತು ಅವಹೇಳನಕಾರಿ ಪೋಸ್ಟ್: ಬೆಂಗಳೂರಿನ ವಿದ್ಯಾರ್ಥಿಗೆ 5 ವರ್ಷ ಜೈಲು ಶಿಕ್ಷೆ
ಬೆಂಗಳೂರು: ಫೆಬ್ರವರಿ 14, 2019 ರಂದು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ದಾಳಿ ಕುರಿತು ಅವಹೇಳನಕಾರಿ ಪೋಸ್ಟ್ ಹಾಕಿದ್ದ ಬೆಂಗಳೂರು 20 ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿಗೆ ಎನ್ಐಎ ವಿಶೇಷ ನ್ಯಾಯಾಲಯವು ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
ಹೌದು.. ಸೋಮವಾರ ಎನ್‌ಐಎ ನ್ಯಾಯಾಲಯ ಶಿಕ್ಷೆ ವಿಧಿಸಿದ್ದು, 5 ವರ್ಷಗಳ ಸಾಮಾನ್ಯ ಜೈಲು ಶಿಕ್ಷೆಯೊಂದಿಗೆ 10,000 ರೂ. ದಂಡ ವಿಧಿಸಿದೆ. ಎಚ್ ಆರ್ ಬಿಆರ್ ಲೇಔಟ್ ನಿವಾಸಿ ಫೈಜ್ ರಶೀದ್ ಎಂಬಾತನೇ ಶಿಕ್ಷೆಗೆ ಗುರಿಯಾಗಿರುವ ವಿದ್ಯಾರ್ಥಿ. ಭಯೋತ್ಪಾದಕ ದಾಳಿಯ ಬಗ್ಗೆ ಪ್ರಚೋದನಕಾರಿ ಪೋಸ್ಟ್‌ಗಳನ್ನು ಪೋಸ್ಟ್ ಮಾಡಲು ರಶೀದ್ ಫೇಸ್‌ಬುಕ್ ಖಾತೆಯನ್ನು ರಚಿಸಿದ್ದ ಎಂದು ವರದಿಯಾಗಿದೆ. ಸಿಸಿಬಿ ಪೊಲೀಸರು ರಶೀದ್ ನನ್ನು ಆತನ ಮನೆ ಸಮೀಪದ ಬೇಕರಿಯಿಂದ ಬಂಧಿಸಿದ್ದರು.
ಈತನ ವಿರುದ್ಧ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ರಶೀದ್ ನಗರದ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ವಿಭಾಗದಲ್ಲಿ ಮೂರನೇ ಸೆಮಿಸ್ಟರ್ ವ್ಯಾಸಂಗ ಮಾಡುತ್ತಿದ್ದಾನೆ. ಫೆಬ್ರವರಿ 17, 2019 ರಂದು ಬಂಧನಕ್ಕೊಳಗಾದ ನಂತರ, ರಶೀದ್ ನ್ಯಾಯಾಂಗ ಬಂಧನದಲ್ಲಿದ್ದು, ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿತ್ತು.
ಫೇಸ್‌ಬುಕ್‌ನಲ್ಲಿ ಅವರ ಪೋಸ್ಟ್‌ಗಳ ನಂತರ, ಹಲವು ಬಳಕೆದಾರರು, ಪೋಸ್ಟ್‌ಗಳನ್ನು ಟೀಕಿಸಿದ್ದರು. ಅಲ್ಲದೆ ಬೆಂಗಳೂರು ನಗರ ಪೊಲೀಸರ ಟ್ವಿಟರ್ ಖಾತೆಗೆ ಟ್ಯಾಗ್ ಮಾಡಿದ್ದಾರೆ. ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆಯೇ ಬಂಧನದ ಭೀತಿಯಿಂದ ರಶೀದ್ ತಮ್ಮ ಫೇಸ್‌ಬುಕ್ ಖಾತೆಯನ್ನು ಅಳಿಸಿ ಹಾಕಿದ್ದ. ಆತನ ಬಂಧನದ ನಂತರ ವಶಪಡಿಸಿಕೊಂಡ ಅವರ ಮೊಬೈಲ್ ಫೋನ್ ಅನ್ನು ವಿಶ್ಲೇಷಣೆಗಾಗಿ ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿದೆ. ಅದೇ ವರದಿಯನ್ನು ಚಾರ್ಜ್ ಶೀಟ್ ಜೊತೆಗೆ ಸಲ್ಲಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ