ಮೋದಿ ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳ ಕರೆತರುವಂತೆ ಸೂಚನೆ: ವಿವಾದ ಭುಗಿಲೇಳುತ್ತಿದ್ದಂತೆ ಸುತ್ತೋಲೆ ವಾಪಸ್ ಪಡೆದ ಶಿಕ್ಷಣ ಇಲಾಖೆ

ಮೋದಿ ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳನ್ನು ಕಡ್ಡಾಯವಾಗಿ ಕರೆತರಬೇಕು ಎಂದು ಸುತ್ತೋಲೆ ಹೊರಡಿಸಿದ್ದ ಡಿಡಿಪಿಯು ವಿವಾದವಾಗುತ್ತಿದ್ದಂತೆ ಆದೇಶವನ್ನು ಹಿಂತೆಗೆದುಕೊಂಡಿದ್ದಾರೆ.
ಬಿಸಿ ನಾಗೇಶ್
ಬಿಸಿ ನಾಗೇಶ್

ಬೆಂಗಳೂರು: ಮೋದಿ ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳನ್ನು ಕಡ್ಡಾಯವಾಗಿ ಕರೆತರಬೇಕು ಎಂದು ಸುತ್ತೋಲೆ ಹೊರಡಿಸಿದ್ದ ಡಿಡಿಪಿಯು ವಿವಾದವಾಗುತ್ತಿದ್ದಂತೆ ಆದೇಶವನ್ನು ಹಿಂತೆಗೆದುಕೊಂಡಿದ್ದಾರೆ.

ನವೆಂಬರ್‌ 8ರಂದು ಸುತ್ತೋಲೆ ಹೊರಡಿಸಿರುವ ಪದವಿ ಪೂರ್ವ ಶಿಕ್ಷಣ ಇಲಾಖೆಯ ಬೆಂಗಳೂರು ಗ್ರಾಮಾಂತರ ಉಪ ನಿರ್ದೇಶಕರು, ಕಾರ್ಯಕ್ರಮಕ್ಕೆ ಜಿಲ್ಲೆಯ ಎಲ್ಲ ಸರಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪದವಿ ಪೂರ್ವ ಕಾಲೇಜುಗಳಿಂದ ನಿಗದಿತ ಸಂಖ್ಯೆಯ ವಿದ್ಯಾರ್ಥಿಗಳನ್ನು ಕರೆತರಬೇಕೆಂದು ಸೂಚಿಸಿದ್ದರು.

ವಿದ್ಯಾರ್ಥಿಗಳನ್ನು ಕರೆತರಲು ಬಸ್‌ಗಳನ್ನು ನಿಗದಿಪಡಿಸಿದ್ದು, ಅವು ನಿಗದಿತ ಸಮಯಕ್ಕೆ ಸರಿಯಾಗಿ ಸಂಬಂಧಿಸಿದ ಕಾಲೇಜುಗಳಿಂದ ಹೊರಡಲಿವೆ. ಆ ಬಸ್ಸುಗಳಿಗೆ ನೇಮಿಸಿರುವ ನೋಡಲ್‌ ಅಧಿಕಾರಿಗಳು ಹಾಗೂ ಪ್ರಾಂಶುಪಾಲರು ವಿದ್ಯಾರ್ಥಿಗಳನ್ನು ಕ್ಷೇಮವಾಗಿ ಕಾರ್ಯಕ್ರಮಕ್ಕೆ ಕರೆತಂದು ಕಾರ್ಯಕ್ರಮ ಮುಗಿದ ಬಳಿಕ ವಾಪಸ್‌ ಕರೆದೊಯ್ಯಬೇಕು. ತಪ್ಪಿದಲ್ಲಿ ಮುಂದಿನ ಆಗು ಹೋಗುಗಳಿಗೆ ಪ್ರಾಂಶುಪಾಲರೇ ಜವಾಬ್ದಾರರು ಹೇಳಿದ್ದರು.

ಆ ಆದೇಶಕ್ಕೆ ದೊಡ್ಡ ಮಟ್ಟದಲ್ಲಿ ಆಕ್ಷೇಪಗಳು ವ್ಯಕ್ತವಾಗಿದ್ದವು. ಈ ಹಿನ್ನೆಲೆಯಲ್ಲಿ ಆದೇಶವನ್ನು ಡಿಡಿಪಿಯು ಹಿಂಪಡೆದುಕೊಂಡಿದ್ದಾರೆ.

ಆದೇಶ ಕುರಿತು ಪ್ರತಿಕ್ರಿಯೆ ನೀಡಿದ್ದ ಸಿದ್ದರಾಮಯ್ಯ ಅವರು, ಬಿಜೆಪಿ ಸರ್ಕಾರದ ಅಡಿಯಲ್ಲಿ ಶಿಕ್ಷಣ ಇಲಾಖೆಯು ಒಂದಲ್ಲ ಒಂದು ವಿಷಯದ ಮೇಲೆ ಗೂಂಡಾಗಿರಿ ಮಾಡುತ್ತಿದೆ. ಬಿಜೆಪಿಯ ಸಭೆ, ಸಮಾರಂಭಗಳಿಗೆ ಜನರು ಬರುತ್ತಿಲ್ಲ. ಹೀಗಾಗಿ ಶಾಲಾ ಕಾಲೇಜು ವಿದ್ಯಾರ್ಥಿಗಳನ್ನು ಶೋಷಿಸಲು ಯತ್ನಿಸುತ್ತಿದೆ. ಸರ್ಕಾರದ ಈ ನಡೆ ಖಂಡನೀಯ ಎಂದು ಹೇಳಿದ್ದರು.

ಮಾಜಿ ಸಿಎಂ ಹಾಗೂ ಜೆಡಿಎಸ್ ಮುಖಂಡ ಹೆಚ್.ಡಿ.ಕುಮಾರಸ್ವಾಮಿ ಅವರು ಮಾತನಾಡಿ, ''ಮೊದಲು ಇಂತಹ ಸುತ್ತೋಲೆ ಹೊರಡಿಸಿದ್ದು ಏಕೆ, ರದ್ದುಗೊಳಿಸಿದ್ದು ಏಕೆ? ಸಾರ್ವಜನಿಕ ಸಮಾರಂಭದಲ್ಲಿ ಪ್ರಧಾನಿ ಭಾಷಣ ಕೇಳಲು ವಿದ್ಯಾರ್ಥಿಗಳನ್ನು ಬಿಸಿಲಿನಲ್ಲಿ ಕೂರಿಸುವುದು ಏಕೆ? ಎಂದು ಪ್ರಶ್ನಿಸಿದ್ದರು.

ವಿಧಾನ ಪರಿಷತ್ತಿನ ಕಾಂಗ್ರೆಸ್ ಪಕ್ಷದ ಮುಖ್ಯ ಸಚೇತಕ ಪ್ರಕಾಶ್ ರಾಥೋಡ್ ಮಾತನಾಡಿ, ಜನರನ್ನು  ಸಜ್ಜುಗೊಳಿಸಲು ಸರ್ಕಾರವು ಅಧಿಕೃತ ಸುತ್ತೋಲೆಯನ್ನು ಬಳಸುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದಿದ್ದಾರೆ.

ಸುತ್ತೋಲೆ ಕುರಿತು ಪ್ರತಿಕ್ರಿಯೆ ನೀಡಿರುವ ಸಚಿವ ಬಿ.ಸಿ.ನಾಗೇಶ್ ಅವರು, ಡಿಡಿಪಿಐ ಸುತ್ತೋಲೆಯನ್ನು ಹಿಂಪಡೆದಿದ್ದಾರೆ. ತಪ್ಪಿತಸ್ಥ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಪ್ರಧಾನ ಕಾರ್ಯದರ್ಶಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com