ಬೆಂಗಳೂರು ತಂತ್ರಜ್ಞಾನದ ತವರಾಗಿದ್ದು, ಅಂತರ್ಗತ-ನವೀನ ನಗರವಾಗಿದೆ: 'ಬೆಂಗಳೂರು ತಂತ್ರಜ್ಞಾನ ಶೃಂಗಸಭೆ'ಗೆ ಪ್ರಧಾನಿ ಮೋದಿ ಚಾಲನೆ

ಭಾರತದ ನಾವೀನ್ಯತೆ ಸೂಚ್ಯಂಕದಲ್ಲಿ ಬೆಂಗಳೂರು ನಂಬರ್ 1 ಆಗಿದೆ. ಬೆಂಗಳೂರು ತಂತ್ರಜ್ಞಾನದ ತವರಾಗಿದೆ. ಅಂತರ್ಗತ ಮತ್ತು ನವೀನ ನಗರವಾಗಿದೆ ಎಂದು ಸಿಲಿಕಾನ್ ಸಿಟಿಯನ್ನು ಕೊಂಡಾಡಿರುವ ಪ್ರಧಾನಿ ಮೋದಿಯವರು ಬುಧವಾರ ಬೆಂಗಳೂರು ಟೆಕ್ ಶೃಂಗಸಭೆಗೆ ಚಾಲನೆ ನೀಡಿದ್ದಾರೆ.
ಪ್ರಧಾನಿ ಮೋದಿ
ಪ್ರಧಾನಿ ಮೋದಿ

ಬೆಂಗಳೂರು: ಭಾರತದ ನಾವೀನ್ಯತೆ ಸೂಚ್ಯಂಕದಲ್ಲಿ ಬೆಂಗಳೂರು ನಂಬರ್ 1 ಆಗಿದೆ. ಬೆಂಗಳೂರು ತಂತ್ರಜ್ಞಾನದ ತವರಾಗಿದೆ. ಅಂತರ್ಗತ ಮತ್ತು ನವೀನ ನಗರವಾಗಿದೆ ಎಂದು ಸಿಲಿಕಾನ್ ಸಿಟಿಯನ್ನು ಕೊಂಡಾಡಿರುವ ಪ್ರಧಾನಿ ಮೋದಿಯವರು ಬುಧವಾರ ಬೆಂಗಳೂರು ಟೆಕ್ ಶೃಂಗಸಭೆಗೆ ಚಾಲನೆ ನೀಡಿದ್ದಾರೆ.

ಬೆಂಗಳೂರಿನ ಅರಮನೆ ಮೈದಾನದಲ್ಲಿ ಬೆಂಗಳೂರು ತಂತ್ರಜ್ಞಾನ ಶೃಂಗಸಭೆಯ 25ನೇ ವರ್ಷದ ಸಮಾವೇಶ ನಡೆಯುತ್ತಿದೆ. ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಐಟಿ-ಬಿಟಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಸೇರಿದಂತೆ ಹಲವು ವಿದೇಶಿ ಗಣ್ಯರು ಉಪಸ್ಥಿತರಿದ್ದಾರೆ.

ಬೆಂಗಳೂರು ತಂತ್ರಜ್ಞಾನ ಶೃಂಗಸಭೆಗೆ ಪ್ರಧಾನಿ  ಮೋದಿಯವರು ವರ್ಚುವಲ್ ಮೂಲಕ ಚಾಲನೆ ನೀಡಿದ್ದು, ಸಮಾವೇಶ ಕುರಿತು ಈ ಮೊದಲೇ ಮೋದಿಯವರು ನೀಡಿದ್ದ ಹೇಳಿಕೆಯನ್ನು ಇದೀಗ ಬಿಡುಗಡೆ ಮಾಡಲಾಗಿದೆ.

ಶೃಂಗಸಭೆ ಕುರಿತು ಮಾತನಾಡಿರುವ ಮೋದಿಯವರು ಬೆಂಗಳೂರು ಬೆಳವಣಿಗೆಯನ್ನು ಶ್ಲಾಘಿಸಿದ್ದಾರೆ. ಬೆಂಗಳೂರು ತಂತ್ರಜ್ಞಾನದ ತವರು. ಭಾರತದ ಆವಿಷ್ಕಾರ ವಲಯದಲ್ಲಿ ಬೆಂಗಳೂರು ನಂಬರ್​ ಒನ್ ಆಗಿದೆ. ಜಾಗತಿಕ ಆವಿಷ್ಕಾರ ಇಂಡೆಕ್ಸ್​​ನಲ್ಲಿ ಭಾರತ 4ನೇ ಸ್ಥಾನದಲ್ಲಿದೆ ಎಂದು ಹೇಳಿದ್ದಾರೆ.

ನೂರಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಕಂಪನಿಗಳ ಆರ್ ಅಂಡ್ ಡಿ ಸೆಂಟರ್ ಗಳು ಭಾರತದಲ್ಲಿವೆ. ಭಾರತ ವಿಶ್ವದ 3ನೇ ಅತಿದೊಡ್ಡ ಸ್ಟಾರ್ಟ್ ಅಪ್​ ಕೇಂದ್ರ. ಆಯುಷ್ಮಾನ್​ ಭಾರತ್ ಯೋಜನೆ ವಿಶ್ವದ ದೊಡ್ಡ ಆರೋಗ್ಯ ವಿಮೆ. ಸ್ವಾಮಿತ್ವ ಯೋಜನೆಯಡಿ ಡ್ರೋನ್ ಮೂಲಕ ಭೂಮಿ ಸರ್ವೆ ​​ಮಾಡಲಾಗುತ್ತಿದೆ. ದೇಶದ ಜನರಿಗೆ ಪ್ರಾಪರ್ಟಿ ಕಾರ್ಡ್​ ನೀಡಲಾಗಿದೆ. ಕೋವಿಡ್ ಸಂದರ್ಭವೂ ಭಾರತದಲ್ಲಿ ಜನರಿಗೆ ಸರ್ಕಾರದ ಯೋಜನೆಗಳನ್ನು ತಲುಪಿಸುವ ನಿಟ್ಟಿನಲ್ಲಿ ತಂತ್ರಜ್ಞಾನ ಮಹತ್ವದ ಪಾತ್ರ ವಹಿಸಿತ್ತು. ಸಣ್ಣ ಉದ್ಯಮಿಗಳಿಗೂ ತಂತ್ರಜ್ಞಾನ ಸಾಕಷ್ಟು ಸಹಕಾರಿಯಾಗುತ್ತಿದೆ. ತಂತ್ರಜ್ಞಾನ ಬಳಕೆ ಭ್ರಷ್ಟಾಚಾರ ನಿಯಂತ್ರಣದ ಸಾಧನವೂ ಆಗಿ ಪರಿವರ್ತನೆಗೊಂಡಿದೆ ಎಂದು ತಿಳಿಸಿದರು.

ಸಮಾನತೆ ಹಾಗೂ ಸಶಕ್ತೀಕರಣದ ಪ್ರಧಾನ ಸಾಧನವಾಗಿದೆ ತಂತ್ರಜ್ಞಾನ. ತಂತ್ರಜ್ಞಾನಕ್ಕೆ ಮಾನವೀಯ ಮತ್ತು ಪ್ರಜಾಸತ್ತಾತ್ಮಕ ಸ್ಪರ್ಶವನ್ನು ನೀಡುತ್ತಲೇ ಇರುವುದು ಭಾರತದ ಅನನ್ಯ ಸಾಧನೆಯಾಗಿದೆ. ಅದರಲ್ಲೂ ತಂತ್ರಜ್ಞಾನವು ನಮಗೆ ಬಡತನದ ವಿರುದ್ಧದ ಹೋರಾಟಕ್ಕೆ ಶಕ್ತಿಶಾಲಿ ಅಸ್ತ್ರವಾಗಿದೆ. ಹೆಲ್ತ್ ಟೆಕ್‌, ಫಿನ್‌ ಟೆಕ್‌, ಎಡುಟೆಕ್‌ ಸೇರಿದಂತೆ ಎಲ್ಲ ರಂಗಗಳನ್ನೂ ಭಾರತೀಯರು ಜಾಗತಿಕ ಮಟ್ಟದಲ್ಲಿ ಮುನ್ನಡೆಸುತ್ತಿದ್ದಾರೆ. ಭಾರತದಲ್ಲಿ 81 ಸಾವಿರ ನವೋದ್ಯಮಗಳಿದ್ದು, ಯೂನಿಕಾರ್ನ್‌ಗಳಲ್ಲಿ ಪ್ರಪಂಚದ 3ನೇ ಅತಿದೊಡ್ಡ ಹಬ್‌ ಆಗಿದೆ. ಜತೆಗೆ, ಜಾಗತಿಕ ನಾವೀನ್ಯತಾ ಸೂಚ್ಯಂಕದಲ್ಲಿ ಭಾರತದ ಸ್ಥಾನಮಾನವು ಕಳೆದ ಎಂಟು ವರ್ಷಗಳಲ್ಲಿ 81 ರಿಂದ 41ಕ್ಕೆ ಜಿಗಿದಿದೆ ಎಂದರು.  ಕಳೆದ ಎಂಟು ವರ್ಷದಲ್ಲಿ ಬ್ರಾಡ್ ಬಾಂಡ್ ಹಾಗೂ ಸ್ಮಾರ್ಟ್ ಫೋನ್ ಬಳಕೆ ಹೆಚ್ಚಾಗಿದೆ. ತಂತ್ರಜ್ಞಾನದ ನೆರವಿನಿಂದ ಅತೀ ದೊಡ್ಡ ಲಸಿಕೆ ಅಭಿಯಾನವನ್ನು ಭಾರತದಲ್ಲಿ ಯಶಸ್ವಿ ಮಾಡಿದ್ದೇವೆ ಎಂದರು.

ಹಲವು ವರ್ಷಗಳಿಂದ ಬೆಂಗಳೂರು ಭಾರತದ ನಾವೀನ್ಯತೆ ಸೂಚ್ಯಂಕದಲ್ಲಿ ಮೊದಲ ಸ್ಥಾನದಲ್ಲಿದೆ. ಭಾರತದ ಯುವಶಕ್ತಿ ಏನೆಂದು ಇಡೀ ಜಗತ್ತಿಗೆ ತಿಳಿದಿದೆ. ನಾವು ನಮ್ಮ ಪ್ರತಿಭೆಯನ್ನು ಜಾಗತಿಕ ಒಳಿತಿಗಾಗಿ ಬಳಸುತ್ತಿದ್ದೇವೆ. ತಂತ್ರಜ್ಞಾನದ ಮೂಲಕ ದೇಶದಲ್ಲಿ ಸಮಾನತೆ ಮತ್ತು ಸಬಲೀಕರಣಗಳನ್ನು ಸಾಧಿಸಲಾಗುತ್ತಿದೆ. ಜತೆಗೆ, ಭ್ರಷ್ಟಾಚಾರಕ್ಕೂ ಇದು ತೆರೆ ಎಳೆದಿದೆ. ಭಾರತವಂತೂ ಈಗ ಮಾಹಿತಿ ಸೂಪರ್​ ಹೈವೇ ಆಗಿದೆ. ಕರೊನಾ ಪಿಡುಗಿನ ವಿರುದ್ಧ ಹೋರಾಟ, ಶಿಕ್ಷಣ, ನೇರ ನಗದು ವರ್ಗಾವಣೆ, ಜನ್‌ಧನ್‌, ಆಧಾರ್, ಇ-ಮಾರ್ಕೆಟ್‌ ಎಲ್ಲವನ್ನೂ ಭಾರತ ತಂತ್ರಜ್ಞಾನದ ಸಮರ್ಥ ಬಳಕೆ ಮೂಲಕ ಯಶಸ್ವಿಯಾಗಿ ಕೈಗೊಂಡಿದೆ ಎಂದು ವಿವರಿಸಿದರು.

ತಂತ್ರಜ್ಞಾನದ ಅಳವಡಿಕೆ ಮೂಲಕ ನಾವು 200 ಕೋಟಿಗೂ ಹೆಚ್ಚು ಕೊರೋನಾ ಲಸಿಕೆ ನೀಡಿದ್ದೇವೆ. 200 ದಶಲಕ್ಷ ಕುಟುಂಬಗಳ 600 ದಶಲಕ್ಷ ಜನರಿಗೆ ಆಯುಷ್ಮಾನ್‌ ಭಾರತ ಯೋಜನೆಯ ಮೂಲಕ ವೈದ್ಯಕೀಯ ಚಿಕಿತ್ಸೆ ಸಿಗುವಂತೆ ಮಾಡಿದ್ದೇವೆ. ನಮ್ಮಲ್ಲಿ ಸಿಗುತ್ತಿರುವಷ್ಟು ಅಗ್ಗದ ದರದಲ್ಲಿ ಡೇಟಾ ಎಲ್ಲೂ ಸಿಗುತ್ತಿಲ್ಲ. ಒಟ್ಟಿನಲ್ಲಿ ತಂತ್ರಜ್ಞಾನದ ಮೂಲಕ ಭಾರತವು ಬೇರಾವ ದೇಶಕ್ಕೂ ಸಾಧ್ಯವಾಗದಂತಹ ಸಾಧನೆಗಳನ್ನು ಮಾಡುತ್ತಿದೆ ಎಂದು ಮೋದಿಯವರು ಅಭಿಪ್ರಾಯಪಟ್ಟರು.

ಬಳಿಕ ಸಮಾವೇಶದ ವೇದಿಕೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಈ 25 ವರ್ಷಗಳಲ್ಲಿ ತಾಂತ್ರಿಕವಾಗಿ ಕರ್ನಾಟಕ ರಾಜ್ಯ ಹಂತಹಂತವಾಗಿ ಬಹಳಷ್ಟು ಸಾಧನೆ ಮಾಡಿದ್ದು, ದೇಶದಲ್ಲಿಯೇ ಬಂಡವಾಳ ಆಕರ್ಷಣೆಯಲ್ಲಿ ಮೊದಲ ರಾಜ್ಯವಾಗಿ ಹೊರಹೊಮ್ಮಿದೆ. ಅದರಲ್ಲಿಯೂ ಬ್ರ್ಯಾಂಡ್ ಬೆಂಗಳೂರು ನವೋದ್ಯಮಗಳ ತವರೂರು ಎಂದು ಹೆಸರಾಗಿದೆ. ಕರ್ನಾಟಕದ ತಾಂತ್ರಿಕ ಗುಣಮಟ್ಟವನ್ನು ಜಗತ್ತಿಗೆ ಪರಿಚಯಿಸುತ್ತಿದೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com