ಚರ್ಮಗಂಟು ರೋಗ: ರಾಜ್ಯದಲ್ಲಿ 6 ತಿಂಗಳಲ್ಲಿ 1.44 ಲಕ್ಷ ಜಾನುವಾರುಗಳಿಗೆ ಸೋಂಕು!

ಜಾನುವಾರುಗಳಲ್ಲಿ ಮುದ್ದೆ ಚರ್ಮ ರೋಗ ವೇಗವಾಗಿ ಹರಡುತ್ತಿದ್ದು, ಈ ಪರಿಸ್ಥಿತಿ ರಾಜ್ಯ ಸರ್ಕಾರಕ್ಕೆ ದೊಡ್ಡ ಸವಾಲಾಗಿ ಪರಿಣಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಜಾನುವಾರುಗಳಲ್ಲಿ ಮುದ್ದೆ ಚರ್ಮ ರೋಗ ವೇಗವಾಗಿ ಹರಡುತ್ತಿದ್ದು, ಈ ಪರಿಸ್ಥಿತಿ ರಾಜ್ಯ ಸರ್ಕಾರಕ್ಕೆ ದೊಡ್ಡ ಸವಾಲಾಗಿ ಪರಿಣಿಸಿದೆ.

ಕಳೆದ ಆರು ತಿಂಗಳಲ್ಲಿ 1.44 ಲಕ್ಷ ಪ್ರಕರಣಗಳು ವರದಿಯಾಗಿದ್ದು, ಕೇವಲ ಒಂದು ತಿಂಗಳ ಅವಧಿಯಲ್ಲಿ ಒಂದು ಲಕ್ಷ ಜಾನುವಾರುಗಳಿಗೆ ಸೋಂಕು ತಗುಲಿದೆ ಎಂದು ತಿಳಿದುಬಂದಿದೆ.

ಇದುವರೆಗೆ 11,000 ಜಾನುವಾರುಗಳು ಸಾವನ್ನಪ್ಪಿದ್ದು, ಹಾಲು ಉತ್ಪಾದನೆಯು ತೀವ್ರವಾಗಿ ಕುಸಿದಿರುವುದರಿಂದ ರೈತರು ಕಂಗಾಲಾಗಿದ್ದಾರೆ. ಅಲ್ಲದೆ, ಕೃಷಿ ಗದ್ದೆಗಳಿಗೆ ಎತ್ತುಗಳನ್ನು ಕರೆದುಕೊಂಡು ಹೋಗುವುದು ರೈತರಿಗೆ ಕಷ್ಟವಾಗುತ್ತಿದೆ.

ಆರ್‌ಡಿಪಿಆರ್ ಇಲಾಖೆಯು ಎಲ್ಲಾ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುದ್ದೆ ಚರ್ಮ ರೋಗ ಪತ್ತೆಯಾದ ಪ್ರದೇಶಗಳಲ್ಲಿ ಫಾಗಿಂಗ್ ಮಾಡಲು ಆದೇಶಿಸಿದೆ.

ಕೆಲವು ಕ್ಲಸ್ಟರ್‌ ಪ್ರದೇಶಗಳಲ್ಲಿ ಹಾಲಿನ ಉತ್ಪಾದನೆ ಶೇ.10ರಿಂದ 20ರಷ್ಟು ಕಡಿಮೆಯಾಗಿದೆ. ಮುದ್ದೆ ಚರ್ಮದ ರೋಗ ಪರಿಣಾಮ ರಾಜ್ಯದ ಸರಾಸರಿ 94 ಲಕ್ಷ ಲೀಟರ್ ಹಾಲು ಉತ್ಪಾದನೆ ದಿನಕ್ಕೆ 90 ಲಕ್ಷ ಲೀಟರ್‌ಗೆ ಇಳಿದಿದೆ.

ಪಶುಸಂಗೋಪನಾ ಇಲಾಖೆ ಅಧಿಕಾರಿಗಳು ಹಂಚಿಕೊಂಡ ಮಾಹಿತಿಯ ಪ್ರಕಾರ, ರಾಜ್ಯದಲ್ಲಿ ಏಪ್ರಿಲ್ ಮತ್ತು ಅಕ್ಟೋಬರ್ ನಡುವೆ 2,070 ಜಾನುವಾರು ಸಾವುಗಳು ದಾಖಲಾಗಿವೆ, ಇದರೊಂದಿಗೆ ಒಂದು ತಿಂಗಳ ಅವಧಿಯಲ್ಲಿ ಸಾವಿನ ಸಂಖ್ಯೆಯಲ್ಲಿ 9,000 ರಷ್ಟು ಏರಿಕೆಯಾಗಿದೆ ಎಂದು ತಿಳಿದುಬಂದಿದೆ.

ಇಲ್ಲಿಯವರೆಗೆ ಪತ್ತೆಯಾದ 1.44 ಲಕ್ಷ ಪ್ರಕರಣಗಳಲ್ಲಿ 61,400 ಜಾನುವಾರುಗಳು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು, ಚೇತರಿಕೆ ಪ್ರಮಾಣ ಶೇ.60ರಷ್ಟಿದೆ.

ಕಳೆದ ತಿಂಗಳು ಸಭೆ ನಡೆಸಿದ್ದ ಸಿಎಂ ಬೊಮ್ಮಾಯಿ ಅವರು, ಹಸು ಸಾವಿಗೆ ರೂ. 20 ಸಾವಿರ ಹಾಗೂ ಎತ್ತು ಸತ್ತರೆ ರೂ.30 ಸಾವಿರ ಪರಿಹಾರ ನೀಡಲಾಗುತ್ತದೆ ಎಂದು ಹೇಳಿದ್ದರು.

ಪರಿಹಾರವಾಗಿ ಈಗಾಗಲೇ ಒಟ್ಟು 2 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದ್ದು, ರೋಗಪೀಡಿತ ಜಾನುವಾರುಗಳ ಚಿಕಿತ್ಸೆಗೆ ಹೆಚ್ಚುವರಿಯಾಗಿ 5 ಕೋಟಿ ರೂಪಾಯಿ ಮತ್ತು ಲಸಿಕೆ ಹಾಕಲು ಇನ್ನೂ 8 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದ್ದರು.

ಕರ್ನಾಟಕ ಪಶುವೈದ್ಯಕೀಯ, ಪಶು ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಪ್ರೊ.ವೀರೇಗೌಡ ಮಾತನಾಡಿ,  ಸೋಂಕು ಉತ್ತುಂಗಕ್ಕೇರಿದ್ದು, ಹೆಚ್ಚಿನ ಲಸಿಕೆ ಹಾಕುವ ಮೂಲಕ ಸೋಂಕು ನಿಯಂತ್ರಣಕ್ಕೆ ತರಲಾಗುತ್ತಿದೆ ಎಂದಿದ್ದಾರೆ.

"ಬೆಂಗಳೂರಿನ ಇನ್‌ಸ್ಟಿಟ್ಯೂಟ್ ಆಫ್ ಅನಿಮಲ್ ಹೆಲ್ತ್ ಅಂಡ್ ವೆಟರ್ನರಿ ಬಯೋಲಾಜಿಕಲ್ಸ್‌ನಲ್ಲಿ ಲಸಿಕೆಗಳನ್ನು ತಯಾರಿಸಲಾಗುತ್ತಿದೆ, ಜೊತೆಗೆ ಇನ್ನೂ ಎರಡು ಖಾಸಗಿ ಏಜೆನ್ಸಿಗಳು ಲಸಿಕೆಗಳನ್ನು ತಯಾರಿಸುತ್ತಿವೆ. ರಾಜ್ಯದಲ್ಲಿ 1.2 ಕೋಟಿ ಜಾನುವಾರುಗಳ ಜನಸಂಖ್ಯೆಯನ್ನು ಗಮನಿಸಿದರೆ, ಸೋಂಕಿತ ಜಾನುವಾರುಗಳ ಸಂಖ್ಯೆ ತುಲನಾತ್ಮಕವಾಗಿ ಕಡಿಮೆಯಾಗಿದೆ. ಆದರೂ ಅಧಿಕಾರಿಗಳು ಸೋಂಕನ್ನು ಹತೋಟಿಗೆ ತರಲು ಪ್ರಯತ್ನಿಸುತ್ತಿದ್ದಾರೆ. ಈ ಸೋಂಕು ಮನುಷ್ಯರಿಗೆ ಹರಡುವುದಿಲ್ಲ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com