ಮಂಗಳೂರು ಸ್ಫೋಟ ಪ್ರಕರಣ: ತಮಿಳುನಾಡಿಗೆ ಭೇಟಿ ನೀಡಿದ್ದ ಶಂಕಿತ ವ್ಯಕ್ತಿ, ಊಟಿ ವ್ಯಕ್ತಿಯ ಆಧಾರ್ ಕಾರ್ಡ್ ಬಳಸಿ ಸಿಮ್ ಕಾರ್ಡ್ ಖರೀದಿ!

ಮಂಗಳೂರಿನಲ್ಲಿ ಶನಿವಾರ ಸಂಭವಿಸಿದ ಆಟೋರಿಕ್ಷಾ ಸ್ಫೋಟದ ಪ್ರಮುಖ ಆರೋಪಿ ಶಿವಮೊಗ್ಗದ ತೀರ್ಥಹಳ್ಳಿಯ ಎಚ್ ಮೊಹಮ್ಮದ್ ಶಾರಿಕ್ (24) ಮಧುರೈ ಮತ್ತು ಕೊಯಮತ್ತೂರ್‌ಗೆ ಭೇಟಿ ನೀಡಿದ್ದು, ಸೆಪ್ಟೆಂಬರ್‌ನಲ್ಲಿ ಸಿಂಗಾನಲ್ಲೂರಿನ ವಸತಿ ನಿಲಯದಲ್ಲಿ ಕೆಲವು ದಿನಗಳ ಕಾಲ ತಂಗಿದ್ದ ಎಂದು ಕೊಯಮತ್ತೂರು ಪೊಲೀಸರು ಮಾಹಿತಿ ನೀಡಿದ್ದಾರೆ.
ಆಟೋ ಸ್ಫೋಟ
ಆಟೋ ಸ್ಫೋಟ

ಕೊಯಮತ್ತೂರು: ಮಂಗಳೂರಿನಲ್ಲಿ ಶನಿವಾರ ಸಂಭವಿಸಿದ ಆಟೋರಿಕ್ಷಾ ಸ್ಫೋಟದ ಪ್ರಮುಖ ಆರೋಪಿ ಶಿವಮೊಗ್ಗದ ತೀರ್ಥಹಳ್ಳಿಯ ಎಚ್ ಮೊಹಮ್ಮದ್ ಶಾರಿಕ್ (24) ಮಧುರೈ ಮತ್ತು ಕೊಯಮತ್ತೂರ್‌ಗೆ ಭೇಟಿ ನೀಡಿದ್ದು, ಸೆಪ್ಟೆಂಬರ್‌ನಲ್ಲಿ ಸಿಂಗಾನಲ್ಲೂರಿನ ವಸತಿ ನಿಲಯದಲ್ಲಿ ಕೆಲವು ದಿನಗಳ ಕಾಲ ತಂಗಿದ್ದ ಎಂದು ಕೊಯಮತ್ತೂರು ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ನಡುವೆ ರಾಜ್ಯ ಪೊಲೀಸರು ಪ್ರಕರಣದ ತನಿಖೆ ಚುರುಕುಗೊಳಿಸಿದ್ದು, ಕೊಯಮತ್ತೂರಿಗೆ ಭೇಟಿ ನೀಡಿದ್ದ ಶಾರಿಕ್, ಅಕ್ಟೋಬರ್ 23 ರಂದು ಕೊಯಮತ್ತೂರಿನಲ್ಲಿ ನಡೆದ ಕಾರ್ ಸ್ಫೋಟದಲ್ಲಿ ಸಾವನ್ನಪ್ಪಿದ ಜಮೇಶಾ ಮುಬೀನ್ ಅವರನ್ನು ಭೇಟಿಯಾಗಿದ್ದನೆಯೇ ಎಂಬುದರ ಕುರಿತು ತನಿಖೆ ನಡೆಸುತ್ತಿದ್ದಾರೆ.

ಇನ್ನು ಶಾರಿಕ್ ಸಿಮ್ ಕಾರ್ಡ್ ಖರೀದಿಸಲು ಆಧಾರ್ ವಿವರಗಳನ್ನು ಬಳಸಿದ್ದ ಎನ್ನಲಾದ ಉದಗಮಂಡಲಂನ ತುಮ್ಮನಟ್ಟಿಯ ಸುರೇಂದ್ರನ್ (28) ಎಂಬಾತನನ್ನೂ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಸುರೇಂದ್ರನ್ ಅವರು ಸಿಂಗಾನಲ್ಲೂರು ಬಳಿಯ ಖಾಸಗಿ ಶಾಲೆಯಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ ಮತ್ತು ಶಾರಿಕ್ ಅವರೊಂದಿಗೆ ವಸತಿ ನಿಲಯದಲ್ಲಿ ಕೊಠಡಿ ಹಂಚಿಕೊಂಡಿದ್ದರು ಎಂದು ಮೂಲಗಳು ತಿಳಿಸಿವೆ.

ಪೊಲೀಸ್ ಆಯುಕ್ತ ವಿ ಬಾಲಕೃಷ್ಣನ್ ಅವರು ಮಾತನಾಡಿ, “ಶಾರೀಕ್ ಸೆಪ್ಟೆಂಬರ್‌ನಲ್ಲಿ ಕೊಯಮತ್ತೂರ್‌ಗೆ ಭೇಟಿ ನೀಡಿದ್ದರು ಮತ್ತು ಸುರೇಂದ್ರನ್ ಎಂಬ ವ್ಯಕ್ತಿಯೊಂದಿಗೆ ಕೆಲವು ದಿನಗಳ ಕಾಲ ವಸತಿ ನಿಲಯದಲ್ಲಿ ತಂಗಿದ್ದ ಎಂದಿದ್ದಾರೆ.

ಪ್ರಕರಣವೊಂದರಲ್ಲಿ ಜಾಮೀನು ಪಡೆದುಕೊಂಡಿದ್ದ ತನ್ನನ್ನು ಶಿವಮೊಗ್ಗ ಪೊಲೀಸರು ಹುಟುಕುತ್ತಿದ್ದಾರೆಂದು ತಿಳಿದ ಶಾರಿಕ್ ತಮಿಳುನಾಡಿಗೆ ಬಂದಿರಬಹುದು ಎಂದು ಶಂಕಿಸಲಾಗಿದೆ. ಶಾರಿಕ್ ಮೃತ ಮುಬೀನ್ ಅವರನ್ನು ಭೇಟಿ ಮಾಡಿದ್ದನೆಯೇ ಎಂಬ ಬಗ್ಗೆಯೂ ನಾವು ತನಿಖೆ ನಡೆಸುತ್ತಿದ್ದೇವೆಂದು ಹೇಳಿದ್ದಾರೆ.

“ಸಂಘಿಗಳೊಂದಿಗೆ ವ್ಯವಹರಿಸಲು ಲಷ್ಕರ್-ಇ-ತೊಯ್ಬಾ ಮತ್ತು ತಾಲಿಬಾನ್‌ಗಳನ್ನು ಆಹ್ವಾನಿಸುವಂತೆ ಮಾಡದಿರಿ. ಲಷ್ಕರ್ ಜಿಂದಾಬಾದ್” ಎಂದು ಅಪಾರ್ಟ್‌ಮೆಂಟ್ ಕಾಂಪ್ಲೆಕ್ಸ್‌ನ ಕಾಂಪೌಂಡ್ ಗೋಡೆಯ ಮೇಲೆ ಕಪ್ಪು ಸ್ಪ್ರೇ ಪೇಂಟ್ ಬಳಸಿ ಬರೆದಿದ್ದ ಹಿನ್ನೆಲೆಯಲ್ಲಿ ಮಂಗಳೂರು ಪೂರ್ವ ಪೊಲೀಸರು ಶಾರಿಕ್ ಮತ್ತು ಯು ಸಾದತ್ ಹುಸೇನ್ (50) ಅವರನ್ನು ಡಿಸೆಂಬರ್ 3, 2020 ರಂದು ಯುಎಪಿಎ ಅಡಿಯಲ್ಲಿ ಬಂಧನಕ್ಕೊಳಪಡಿಸಿದ್ದರು,

ಜುಲೈ 23, 2021 ರಂದು ಕರ್ನಾಟಕ ಹೈಕೋರ್ಟ್‌ನಿಂದ ಷರತ್ತುಬದ್ಧ ಜಾಮೀನು ಪಡೆದ ನಂತರ ಇಬ್ಬರೂ ಜೈಲಿನಿಂದ ಹೊರಬಂದರು. ಆದರೆ, ಶಾರಿಕ್ ನಂತರ ನಾಪತ್ತೆಯಾಗಿದ್ದ ಎಂದು ಮೂಲಗಳು ತಿಳಿಸಿವೆ.

ನವೆಂಬರ್ 4, 2022 ರಂದು ಶಿವಮೊಗ್ಗ ಪೊಲೀಸರು ಮೊಹಮ್ಮದ್ ಯಾಸಿನ್ ಮತ್ತು ಮೇಜರ್ ಮುನೀರ್ ಅಹಮದ್ ಅವರನ್ನು ಐಸಿಸ್ ಜೊತೆ ಶಂಕಿತ ಸಂಪರ್ಕ ಹೊಂದಿದ್ದಾರೆಂದು ಶಂಕಿಸಿ ಬಂಧನಕ್ಕೊಳಪಡಿಸಿದ್ದರು. ಆ ಪ್ರಕರಣದಲ್ಲೂ ಮೊಹಮ್ಮದ್ ಶಾರಿಕ್‌ಗಾಗಿ ಹುಡುಕಾಟ ಆರಂಭಿಸಿದ್ದರು.

ಏತನ್ಮಧ್ಯೆ, ಕೊಯಮತ್ತೂರಿನ ಹೊರವಲಯದಲ್ಲಿ, ವಿಶೇಷವಾಗಿ ಕರ್ನಾಟಕದಿಂದ ಕೇರಳ-ತಮಿಳುನಾಡು ಗಡಿಯಲ್ಲಿರುವ ಆನೈಕಟ್ಟಿ ಮತ್ತು ಮಂಗರೈನಲ್ಲಿ ಬರುವ ವಾಹನಗಳ ತಪಾಸಣೆಯನ್ನು ಪೊಲೀಸರು ತೀವ್ರಗೊಳಿಸಿದ್ದಾರೆ.

ರೈಲ್ವೆ ನಿಲ್ದಾಣಗಳು, ಬಸ್ ನಿಲ್ದಾಣಗಳು ಮತ್ತು ಜನಸಂದಣಿಯ ಸ್ಥಳಗಳಲ್ಲಿ ಅನುಮಾನಾಸ್ಪದವಾಗಿ ಚಲಿಸುವವರ ಬ್ಯಾಗೇಜ್ ತಪಾಸಣೆ ನಡೆಸುವುದರೊಂದಿಗೆ ನಗರದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ.

ಮಂಗಳೂರಿನಿಂದ ಹಲವಾರು ರೈಲುಗಳು ನಗರದ ಮೂಲಕ ಹಾದು ಹೋಗುವುದರಿಂದ ರೈಲು ನಿಲ್ದಾಣಗಳಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚುವರಿ ಪಡೆಯನ್ನು ನಿಯೋಜಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com