ಬೆಂಗಳೂರು: ಆನ್'ಲೈನ್ ನಲ್ಲಿ ಡೈಪರ್ ಖರೀದಿಸಲು ಹೋಗಿ ವ್ಯಕ್ತಿಯೊಬ್ಬರು ಸೈಬರ್ ವಂಚಕರ ಕೈಗೆ ಸಿಕ್ಕಿಹಾಕಿಕೊಂಡು ರೂ.50,000 ಕಳೆದುಕೊಂಡಿದ್ದಾರೆ.
ವೃತ್ತಿಯಲ್ಲಿ ಚಾಲಕರಾಗಿರುವ ಬೆಂಗಳೂರು-ರಾಮನಗರ ರಸ್ತೆಯ ನಿವಾಸಿ ಬಿಟಿ ಸಂತೋಷ್ ಕುಮಾರ್ ಸೈಬರ್ ವಂಚಕರಿಂದ ಹಣ ಕಳೆದುಕೊಂಡ ವ್ಯಕ್ತಿಯಾಗಿದ್ದಾರೆ.
ತಮ್ಮ ನವಜಾತ ಶಿಶುವಿಗೆ ಆನ್'ಲೈನ್ ನಲ್ಲಿ ಡೈಪರ್ ಖರೀದಿಸಲು ಸಂತೋಷ್ ಮುಂದಾಗಿದ್ದಾರೆ. ಈ ವೇಳೆ ಸೈಬರ್ ವಂಚಕರು ಸಂತೋಷ್ ಅವರಿಗೆ ಕರೆ ಮಾಡಿ, ವಿಳಾಸ ಹಾಗೂ ಇತರೆ ಮಾಹಿತಿಗಳನ್ನು ಪಡೆದುಕೊಂಡಿದ್ದಾರೆ. ಬಳಿಕ ಮೊಬೈಲ್ ಸಂಖ್ಯೆಗೆ ಲಿಂಕ್ ವೊಂದನ್ನು ಕಳುಹಿಸಿದ್ದು, ಅದನ್ನು ಕ್ಲಿಕ್ ಮಾಡುವಂತೆ ತಿಳಿಸಿದ್ದಾರೆ.
ಸಂತೋಷ್ ಅವರು ಆ ಲಿಂಕ್ ಕ್ಲಿಕ್ ಮಾಡುತ್ತಿದ್ದಂತೆಯೇ ಬ್ಯಾಂಕ್ ಯುಪಿಐ ಖಾತೆಯಿಂದ ಹಣ ವಂಚಕರ ಖಾತೆಗೆ ವರ್ಗಾವಣೆಗೊಂಡಿದೆ. ಬ್ಯಾಂಕ್ ಬ್ಯಾಲೆನ್ಸ್ ಚೆಕ್ ಮಾಡಿದ ಸಂತೋಷ್ ಅವರಿಗೆ ಆಘಾತವಾಗಿದೆ. ಕೂಡಲೇ ಪೊಲೀಸರಿಗೆ ದೂರು ನೀಡಿದ್ದಾರೆ.
ವ್ಯಕ್ತಿಯ ಮೊಬೈಲ್ ಫೋನ್ ಹಾಗೂ ಇತರೆ ವಿವರಗಳನ್ನು ಪರಿಶೀಲಿಸಲಾಗುತ್ತಿದೆ. ಹಲವು ಬಾರಿ ಹಣ ವರ್ಗಾವಣೆಯಾಗಿದೆ. ಈ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಸಂತೋಷ್ ಅವರು ಕೂಡಲೇ ಬ್ಯಾಂಕ್'ಗೆ ಮಾಹಿತಿ ನೀಡಿ ಹಣ ವರ್ಗಾವಣೆಗೊಳ್ಳದಂತೆ ಮಾಡಬೇಕಿತ್ತು. ಆದರೆ, ಅವರು ಅದನ್ನು ಮಾಡಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
Advertisement