ಮಂಗಳೂರು ಸ್ಫೋಟ ಪ್ರಕರಣ: ಪ್ರಮುಖ ಶಂಕಿತ ಆರೋಪಿ ಶಾರೀಕ್ ಆರೋಗ್ಯದ ಮೇಲೆ ಪೊಲೀಸರು ನಿಗಾ!

ಮಂಗಳೂರು ಆಟೋ ಸ್ಫೋಟ ಪ್ರಕರಣದ ತನಿಖೆ ಮುಂದುವರೆದಿದ್ದು, ಪ್ರಮುಖ ಆರೋಪಿ ಮೊಹಮ್ಮದ್ ಶಾರೀಕ್ ಆರೋಗ್ಯವನ್ನು ರಾಜ್ಯ ಪೊಲೀಸರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ.
ಆರೋಪಿ ಶಾರೀಕ್
ಆರೋಪಿ ಶಾರೀಕ್

ಬೆಂಗಳೂರು: ಮಂಗಳೂರು ಆಟೋ ಸ್ಫೋಟ ಪ್ರಕರಣದ ತನಿಖೆ ಮುಂದುವರೆದಿದ್ದು, ಪ್ರಮುಖ ಆರೋಪಿ ಮೊಹಮ್ಮದ್ ಶಾರೀಕ್ ಆರೋಗ್ಯವನ್ನು ರಾಜ್ಯ ಪೊಲೀಸರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ.

ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ವಿಚಾರಿಸಿದ ಮಂಗಳೂರು ನಗರ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಅವರು, ಶಾರೀಕ್ ಅವರ ಆರೋಗ್ಯ ವಿಚಾರಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದೀಗ ಶಾರೀಕ್ ಆರೋಗ್ಯ ಸ್ಥಿರವಾಗಿದ್ದು, ವೈದ್ಯಕೀಯ ಫಿಟ್ನೆಸ್ ಪ್ರಮಾಣ ಪತ್ರ ನೀಡಿದ ನಂತರವಷ್ಟೇ ವಿಚಾರಣೆ ನಡೆಸಲಾಗುವುದು ಎಂದು ಹೇಳಿದರು.

ಸಂತ್ರಸ್ತ ಪುರುಷೋತ್ತಮ್ ಮತ್ತು ಆರೋಪಿ ಶಾರಿಕ್ ಚಿಕಿತ್ಸೆ ಪಡೆಯುತ್ತಿರುವ ವಾರ್ಡ್‌ಗೆ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ.

ಈ ನಡುವೆ ಪ್ರಕರಣಕ್ಕೆ ಸಂಬಂಧಿಸಿದ್ದೆ ಎನ್ನಲಾದ ವೈನ್ ಶಾಪ್‌ನೊಳಗೆ ಇಬ್ಬರು ವ್ಯಕ್ತಿಗಳು ತಿರುಗಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ಬಗ್ಗೆ ಸ್ಪಷ್ಟನೆ ನೀಡಿರುವ ಆಯುಕ್ತರು, ಸ್ಫೋಟಕ್ಕೂ ವಿಡಿಯೋಗೂ ಯಾವುದೇ ರೀತಿಯಲ್ಲಿ ಸಂಬಂಧವಿಲ್ಲ ಎಂದು ತಿಳಿಸಿದ್ದಾರೆ.

ವೀಡಿಯೊದಲ್ಲಿ ಟೋಪಿ ಧರಿಸಿರುವ ವ್ಯಕ್ತಿ ಶಾರೀಕ್ ಅಲ್ಲ. ಆರೋಪಿ ಮಸೀದಿಗೆ ಹೋಗಿದ್ದಾನೆ ಎಂಬ ವದಂತಿ ಸುಳ್ಳು ಎಂದು ಹೇಳಿದ್ದಾರೆ.

ಸಾರ್ವಜನಿಕರು ಇಂತಹ ವದಂತಿಗಳಿಗೆ ಕಿವಿಕೊಡಬಾರದು... ಶ್ವಾನದಳದೊಂದಿಗೆ ಸೂಕ್ಷ್ಮ ಪ್ರದೇಶಗಳಲ್ಲಿ ಶೋಧ ಕಾರ್ಯ ಮುಂದುವರೆಸಿದ್ದೇವೆ. ಮಾಲ್‌ಗಳು, ಆಸ್ಪತ್ರೆಗಳು, ಬಸ್‌ಗಳು, ಆಸ್ಪತ್ರೆಗಳು, ರೈಲು ನಿಲ್ದಾಣಗಳು ಮತ್ತು ಇತರ ಜನನಿಬಿಡ ಪ್ರದೇಶಗಳಲ್ಲಿ ಜನರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದೇವೆಂದು ಹೇಳಿದರು.

ಶಾರೀಕ್ ಆತ್ಮಹತ್ಯಾ ಬಾಂಬರ್ ಕುರಿತು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ನೀಡಿರುವ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಎಡಿಜಿಪಿ ಅಲೋಕ್ ಕುಮಾರ್ ಅವರು, ತನಿಖೆ ಇನ್ನೂ ಪ್ರಗತಿಯಲ್ಲಿದೆ. ಶಾರೀಕ್ ಅವರನ್ನು ವಿಚಾರಣೆ ಮಾಡಿದ ನಂತರವೇ ಎಲ್ಲಾ ವಿವರಗಳನ್ನು ಸ್ಪಷ್ಟವಾಗಲಿದೆ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com