ನೈತಿಕ ಪೊಲೀಸ್‌ಗಿರಿ: ಬಸ್ ನಲ್ಲಿ ಜೊತೆಗೆ ಪ್ರಯಾಣಿಸುತ್ತಿದ್ದ ಅನ್ಯಧರ್ಮೀಯ ಯುವಕ-ಯುವತಿಗೆ ಥಳಿತ!
ಬಸ್ ನಲ್ಲಿ ಜೊತೆಗೆ ಪ್ರಯಾಣಿಸುತ್ತಿದ್ದ ಅನ್ಯಧರ್ಮೀಯ ಯುವಕ ಮತ್ತು ಯುವತಿಗೆ ಸಂಘಪರಿವಾರದ ಸಂಘಟನೆಯ ಕಾರ್ಯಕರ್ತರು ಥಳಿಸಿರುವ ಘಟನೆ ನಗರದ ನಂತೂರು ಜಂಕ್ಷನ್ ಬಳಿ ನಡೆದಿದೆ.
Published: 26th November 2022 12:50 PM | Last Updated: 26th November 2022 12:50 PM | A+A A-

ಯುವಕನಿಗೆ ಥಳಿಸುತ್ತಿರುವುದು.
ಮಂಗಳೂರು: ಬಸ್ ನಲ್ಲಿ ಜೊತೆಗೆ ಪ್ರಯಾಣಿಸುತ್ತಿದ್ದ ಅನ್ಯಧರ್ಮೀಯ ಯುವಕ ಮತ್ತು ಯುವತಿಗೆ ಸಂಘಪರಿವಾರದ ಸಂಘಟನೆಯ ಕಾರ್ಯಕರ್ತರು ಥಳಿಸಿರುವ ಘಟನೆ ನಗರದ ನಂತೂರು ಜಂಕ್ಷನ್ ಬಳಿ ನಡೆದಿದೆ.
ಹಲ್ಲೆಗೊಳಗಾದ ಯುವಕನನ್ನು ಕಾರ್ಕಳ ತಾಲ್ಲೂಕಿನ ನಿಟ್ಟೆ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಬಿಇ ವಿದ್ಯಾರ್ಥಿ ಸೈಯದ್ ರಶೀಮ್ ಉಮರ್ (20) ಹಾಗೂ ಯುವತಿಯನ್ನು ಆತನ ಸಹಪಾಠಿ ಎಂದು ಗುರುತಿಸಲಾಗಿದೆ.
ಬಸ್ ನಲ್ಲಿ ಯುವಕ ಹಾಗೂ ಯುವತಿ ಪ್ರಯಾಣಿಸುತ್ತಿದ್ದ ವೇಳೆ ಇಬ್ಬರ ಬಳಿ ಬಂದ ಮೂವರು ವ್ಯಕ್ತಿಗಳು ಯುವಕನ ಐಡಿ ಕಾರ್ಡ್ ತೋರಿಸುವಂತೆ ತಿಳಿಸಿದ್ದಾರೆ. ಐಡಿ ಕಾರ್ಡ್ ತೋರಿಸುತ್ತಿದ್ದಂತೆಯೇ ಯುವಕನನ್ನು ಬಸ್ ನಿಂದ ಹೊರಗೆ ಎಳೆದು ತಂದು ಹಲ್ಲೆ ನಡೆಸಿದ್ದಾರೆಂದು ತಿಳಿದುಬಂದಿದೆ.
ಇದನ್ನೂ ಓದಿ: ನೈತಿಕ ಪೊಲೀಸ್ ಗಿರಿಯಡಿ ಬಂಧನ: ನೆರವಿಗೆ ಬಾರದ ಪುತ್ತೂರು ಶಾಸಕನ ಮೇಲೆ ಹಿಂದು ಸಂಘಟನೆ ಕಾರ್ಯಕರ್ತರಿಂದ ಹಲ್ಲೆ
ಹಲ್ಲೆ ನಡೆಸಿದ ಯುವಕರು ಯಾವ ಸಂಘಟನೆಗೆ ಸೇರಿದವರು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಘಟನೆ ಸಂಬಂಧ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಎಡಿಜಿಪಿ ಅಲೋಕ್ ಕುಮಾರ್ ಅವರು, ಘಟನೆಗೆ ಸಂಬಂಧಿಸಿದಂತೆ ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಯುವಕರು ನೀಡಿದ ದೂರಿನ ಮೇರೆಗೆ ಮಂಗಳೂರು ನಗರ ಪೊಲೀಸರು ಹಿಂದೂ ಸಂಘಟನೆಗಳ ಕಾರ್ಯಕರ್ತರ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 34 ರ ಜೊತೆಗೆ ಸೆಕ್ಷನ್ 323, 324, 504, 506 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.