ವೋಟರ್ ಐಡಿ ಹಗರಣ: ನಕಲಿ ಐಡಿ ಪಡೆಯಲು ಎನ್‌ಜಿಒಗೆ ಸಹಾಯ ಮಾಡಿದ್ದ ನಾಲ್ವರು ಆರ್‌ಒಗಳ ಬಂಧನ

ವೋಟರ್ ಐಡಿ ಪರಿಷ್ಕರಣೆಯಲ್ಲಿ ಅಕ್ರಮ ವ್ಯವಹಾರಕ್ಕೆ ಸಂಬಂಧಿಸಿದಂತೆ ಮತದಾರರ ಜಾಗೃತಿ ಕಾರ್ಯಕ್ರಮಗಳಲ್ಲಿ ತೊಡಗಿದ್ದ ಎನ್‌ಜಿಒ ಚಿಲುಮೆ ಟ್ರಸ್ಟ್‌ನ ಪ್ರತಿನಿಧಿಗಳಿಗೆ ನಕಲಿ ಗುರುತಿನ ಚೀಟಿ ನೀಡಿದ ಆರೋಪದ ಮೇಲೆ ನಾಲ್ವರು ಅಧಿಕಾರಿಗಳನ್ನು ಹಲಸೂರು ಗೇಟ್ ಪೊಲೀಸರು ಬಂಧಿಸಿದ್ದಾರೆ.
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ

ಬೆಂಗಳೂರು: ವೋಟರ್ ಐಡಿ ಪರಿಷ್ಕರಣೆಯಲ್ಲಿ ಅಕ್ರಮ ವ್ಯವಹಾರಕ್ಕೆ ಸಂಬಂಧಿಸಿದಂತೆ ಮತದಾರರ ಜಾಗೃತಿ ಕಾರ್ಯಕ್ರಮಗಳಲ್ಲಿ ತೊಡಗಿದ್ದ ಎನ್‌ಜಿಒ ಚಿಲುಮೆ ಟ್ರಸ್ಟ್‌ನ ಪ್ರತಿನಿಧಿಗಳಿಗೆ ನಕಲಿ ಗುರುತಿನ ಚೀಟಿ ನೀಡಿದ ಆರೋಪದ ಮೇಲೆ ಮೂವರು ಕಂದಾಯ ಅಧಿಕಾರಿಗಳು ಮತ್ತು ಒಬ್ಬ ಉಪ ಕಂದಾಯ ಅದಿಕಾರಿ ಸೇರಿದಂತೆ ನಾಲ್ವರು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅಧಿಕಾರಿಗಳನ್ನು ಹಲಸೂರು ಗೇಟ್ ಪೊಲೀಸರು ಬಂಧಿಸಿದ್ದಾರೆ.

ಮತದಾರರ ನೋಂದಣಾಧಿಕಾರಿಗಳಾಗಿ ಕಾರ್ಯನಿರ್ವಹಿಸುತ್ತಿದ್ದ ಶಿವಾಜಿನಗರದ ಕಂದಾಯ ಅಧಿಕಾರಿ ಸುಹೇಲ್ ಅಹಮದ್, ಮಹದೇವಪುರದ ಕಂದಾಯ ಅಧಿಕಾರಿ ಕೆ.ಚಂದ್ರಶೇಖರ್, ಆರ್.ಆರ್. ನಗರದ ಕಂದಾಯ ಅಧಿಕಾರಿ ಮಹೇಶ್ ಮತ್ತು ಚಿಕ್ಕಪೇಟೆ ಉಪ ಕಂದಾಯ ಅಧಿಕಾರಿ ವಿ.ಬಿ.ಭೀಮಾಶಂಕರ್ ಬಂಧಿತರು.

ವೋಟರ್ ಐಡಿ ಅಕ್ರಮದ ಪ್ರಕರಣ ಬೆಳಕಿಗೆ ಬಂದ ಬಳಿಕ ಇವರ ಬಂಧನದ ನಿರೀಕ್ಷೆಯಲ್ಲಿ ಬಿಬಿಎಂಪಿ ನವೆಂಬರ್ 21 ರಂದು ನಾಲ್ವರನ್ನು ಅಮಾನತುಗೊಳಿಸಿದೆ. ಶಿವಾಜಿನಗರ ವಿಧಾನಸಭಾ ಕ್ಷೇತ್ರದ 14 ಬೂತ್ ಮಟ್ಟದ ಸಮಿತಿ (ಬಿಎಲ್‌ಸಿ) ಗುರುತಿನ ಚೀಟಿಯನ್ನು ಸುಹೇಲ್ ಅವರು ಚಿಲುಮೆ ಪ್ರತಿನಿಧಿಗಳಿಗೆ ವಿತರಿಸಿದ್ದಾರೆ ಎನ್ನಲಾಗಿದೆ. ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಚಂದ್ರಶೇಖರ್ ಅವರು ಚಿಲುಮೆ ಪ್ರತಿನಿಧಿ ಲೋಕೇಶ್ ಅವರಿಗೆ ಬೂತ್ ಮಟ್ಟದ ಅಧಿಕಾರಿ ಗುರುತಿನ ಚೀಟಿ ನೀಡಿದ್ದಾರೆ.

ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಚಿಲುಮೆ ಪ್ರತಿನಿಧಿಗಳಿಗೆ ಬಿಎಲ್‌ಸಿ ಕಾರ್ಡ್ ವಿತರಿಸಿದ ಆರೋಪ ಭೀಮಾಶಂಕರ್ ಮೇಲಿದ್ದು, ಮಹೇಶ್ ಕೂಡ ಅದೇ ಅಕ್ರಮ ಎಸಗಿದ್ದಾರೆ. ಖಾಸಗಿ ವ್ಯಕ್ತಿಗಳಿಗೆ ಗುರುತಿನ ಚೀಟಿ ವಿತರಣೆ ಚುನಾವಣಾ ಆಯೋಗದ ನಿಯಮಗಳ ಉಲ್ಲಂಘನೆಯಾಗಿರುವುದರಿಂದ ತನಿಖಾ ತಂಡವು ಅಧಿಕಾರಿಗಳನ್ನು ಬಂಧಿಸಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮತದಾರರ ಮಾಹಿತಿ ಕಳ್ಳತನ: ಫೋನ್‌ಗಳಲ್ಲಿ ಕಾರ್ಯನಿರ್ವಹಿಸುವ ಚಿಲುಮೆ

ಮತದಾರರ ಮಾಹಿತಿಯನ್ನು ತಿದ್ದಿದ ಆರೋಪ ಎದುರಿಸುತ್ತಿರುವ ಚಿಲುಮೆ ಎನ್‌ಜಿಒ ಫೋನ್‌ಗಳಲ್ಲಿ ಕಾರ್ಯಾಚರಣೆ ನಡೆಸುತ್ತಿದೆ ಎಂದು ವರದಿಯಾಗಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನೇಮಿಸಿಕೊಂಡಿರುವ ಖಾಸಗಿ ಎನ್‌ಜಿಒ ಯಾವುದೇ ಸ್ಥಳಕ್ಕೆ ಭೇಟಿ ನೀಡದೆ ಮತದಾರರ ಪಟ್ಟಿಯಿಂದ ಒಂದು ಲಕ್ಷಕ್ಕೂ ಹೆಚ್ಚು ಹೆಸರನ್ನು ಅಳಿಸಿ ಹಾಕಿರುವುದು ಬೆಳಕಿಗೆ ಬಂದಿದೆ. ಇದು ಆನ್‌ಲೈನ್‌ನಲ್ಲಿ ಅನೇಕ ಹೆಸರುಗಳನ್ನು ಅಳಿಸಿದೆ ಎಂದು ಆರೋಪಿಸಲಾಗಿದೆ.

ಮತ್ತೊಂದೆಡೆ ಮತದಾರರ ಪಟ್ಟಿ ಪರಿಷ್ಕರಣೆ ಮಾಡಲು ಬಿಬಿಎಂಪಿ ಅಧಿಕಾರಿಗಳು ಚಿಲುಮೆಯಿಂದ ಲಕ್ಷಾಂತರ ರೂಪಾಯಿ ಪಡೆದಿದ್ದಾರ ಎಂಬ ಆರೋಪ ಕೇಳಿ ಬರುತ್ತಿದೆ. ನಕಲಿ ಗುರುತಿನ ಚೀಟಿಗಳನ್ನು ಬಳಸಿ ಮತ್ತೂ ಬೂತ್ ಮಟ್ಟದ ಅದಿಕಾರಿಗಳ (ಬಿಎಲ್ಒ) ಸೋಗಿನಲ್ಲಿ ಮೂರು ತಿಂಗಳೊಳಗೆ ಮತದಾರರ ಸಂಪೂರ್ಣ ಮಾಹಿತಿಯನ್ನು ಕಲೆಹಾಕಿದ್ದಾರೆ. ಬಿಬಿಎಂಪಿಯ ನೆರವಿನೊಂದಿಗೆ ಎನ್‌ಜಿಒ ನೂರಾರು ಫೀಲ್ಡ್ ವರ್ಕರ್‌ಗಳನ್ನು ಸಮೀಕ್ಷೆಗೆ ನೇಮಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com