ಬೆಂಗಳೂರು: ಮತದಾರರ ಮಾಹಿತಿ ಕಳವು ಪ್ರಕರಣ ಸಂಬಂಧ ಶಿವಾಜಿನಗರ, ಚಿಕ್ಕಪೇಟೆ ಮತ್ತು ಮಹದೇವಪುರ ವಿಧಾನಸಭಾ ಕ್ಷೇತ್ರಗಳಲ್ಲಿ ತನಿಖೆ ಮುಂದುವರಿದಿದ್ದು, ಈ ನಡುವಲ್ಲೇ ಬಿಬಿಎಂಪಿ ನೌಕರರ ಸಂಘ ಪೊಲೀಸರು ಕಿರುಕುಳ ನೀಡುತ್ತಿರುವುದಾಗಿ ಆರೋಪ ಮಾಡಿದ್ದಾರೆ.
ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಚುನಾವಣಾ ಕಂದಾಯ ಅಧಿಕಾರಿಗಳು (ಇಆರ್‌ಒ) ಮತ್ತು ಸಹಾಯಕ ಚುನಾವಣಾ ಕಂದಾಯಾಧಿಕಾರಿಗಳಿಗೆ ನಿರೀಕ್ಷಣಾ ಜಾಮೀನು ನೀಡಲು ಚಿಂತನೆ ನಡೆಯುತ್ತಿದೆ ಎಂದು ತಿಳಿದುಬಂದಿದೆ.
ಬಿಬಿಎಂಪಿ ನೌಕರರ ಸಂಘ ಅಧ್ಯಕ್ಷ ಅಮೃತ್ ರಾಜ್ ಮಾತನಾಡಿ, ಬಿಬಿಎಂಪಿ ಅಧಿಕಾರಿಗಳು ವಿಚಾರಣೆಯ ನೆಪದಲ್ಲಿ ಪೊಲೀಸರ ಚಿತ್ರಹಿಂಸೆಯನ್ನು ಎದುರಿಸುತ್ತಿದ್ದಾರೆ. ಮಹಿಳಾ ಅಧಿಕಾರಿಗಳು ರಾತ್ರಿ 10 ಗಂಟೆಯವರೆಗೆ ಸಂಬಂಧಪಟ್ಟ ಠಾಣೆಯಲ್ಲಿ ಕುಳಿತುಕೊಳ್ಳುವಂತೆ ಮಾಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
“ಐಪಿಸಿ 406, 419, 420 ಮತ್ತು 120 ಬಿ ಸೇರಿದಂತೆ ಸಿಆರ್‌ಪಿಸಿ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ, ಆರೋಪಗಳ ಹಿನ್ನೆಲೆಯಲ್ಲಿ ನೋಟಿಸ್ ಕಳುಹಿಸಲಾಗಿದೆ. ಹೀಗಾಗಿ ಒಂದು ಸಂಸ್ಥೆಗೆ ತನಿಖೆಯ ಹೊಣೆ ನೀಡುವಂತೆ ಸಿಎಂ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಪಾಲಿಕೆ ಆವರಣದಲ್ಲಿರುವ ಸಂಘದ ಕಚೇರಿಯಲ್ಲಿ ಸೋಮವಾರ ಸುಮಾರು 30 ಮಂದಿ ಅಧಿಕಾರಿಗಳು ಜಮಾಯಿಸಿ ಪೊಲೀಸರ ವರ್ತನೆ ವಿರುದ್ಧ ಪ್ರತಿಭಟಿಸಿದರು.
ಅಧಿಕಾರಿಗಳನ್ನು ಬಂಧಿಸಲಾಗುತ್ತಿದೆ. ಈಗಾಗಲೇ ನಾವು ವಕೀಲರನ್ನು ಸಂಪರ್ಕಿಸಿದ್ದು, ನಿರೀಕ್ಷಣಾ ಜಾಮೀನು ಪಡೆದುಕೊಳ್ಳುತ್ತೇವೆ, ಕನಿಷ್ಠ 10 ರಿಂದ 15 ಅಧಿಕಾರಿಗಳು ಇದೇ ರೀತಿಯ ಕಿರುಕುಳ ಅನುಭವಿಸುತ್ತಿದ್ದಾರೆಂದು ಅಮೃತ್ ರಾಜ್ ಅವರು ಹೇಳಿದ್ದಾರೆ.
ಈ ನಡುವೆ ಸೆಂಟ್ರಲ್ ಡಿಸಿಪಿ ಆರ್ ಶ್ರೀನಿವಾಸ್ ಗೌಡ ‘ಕಿರುಕುಳ’ ಆರೋಪಗಳನ್ನು ತಳ್ಳಿಹಾಕಿದ್ದಾರೆ. ಬಿಬಿಎಂಪಿ ಹಿರಿಯ ಅಧಿಕಾರಿಗಳು ನೀಡಿರುವ ದೂರಿನ ಮೇರೆಗೆ ನಾವು ಕ್ರಮಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.
Advertisement