65 ವರ್ಷಗಳಲ್ಲೇ ಮೊದಲು: 1ನೇ ತಾರೀಖು ವೇತನ ಪಾವತಿ, ಕೆಎಸ್‌ಆರ್‌ಟಿಸಿ ದಾಖಲೆ
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್ಆರ್‌ಟಿಸಿ) ಚಾಲಕರು ಹಾಗೂ ನಿರ್ವಾಹಕರಿಗೆ 65 ವರ್ಷಗಳ ಬಳಿಕ ಮೊದಲ ಬಾರಿಗೆ ತಿಂಗಳ ಆರಂಭದ ದಿನದಂದೇ ವೇತನ ಪಾವತಿಸಲಾಗಿದೆ.
Published: 02nd October 2022 12:43 AM | Last Updated: 02nd October 2022 12:43 AM | A+A A-

ಕೆಎಸ್ ಆರ್ ಟಿಸಿ ಬಸ್ ಗಳು
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್ಆರ್‌ಟಿಸಿ) ಚಾಲಕರು ಹಾಗೂ ನಿರ್ವಾಹಕರಿಗೆ 65 ವರ್ಷಗಳ ಬಳಿಕ ಮೊದಲ ಬಾರಿಗೆ ತಿಂಗಳ ಆರಂಭದ ದಿನದಂದೇ ವೇತನ ಪಾವತಿಸಲಾಗಿದೆ.
ಹೌದು.. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು (ಕೆಎಸ್‌ಆರ್‌ಟಿಸಿ/ KSRTC) ತನ್ನ 36 ಸಾವಿರ ಸಿಬ್ಬಂದಿ ವರ್ಗಕ್ಕೆ ದಸರಾ (Dasara) ಹಬ್ಬದ ಸಿಹಿ ಸುದ್ದಿ ನೀಡಿದೆ. ಸಾರಿಗೆ ಸಂಸ್ಥೆಯ 65 ವರ್ಷಗಳ ಇತಿಹಾಸದಲ್ಲಿ ತಿಂಗಳ ಮೊದಲ ದಿನ ಎಲ್ಲ ಅಧಿಕಾರಿ, ಸಿಬ್ಬಂದಿಗಳಿಗೆ ವೇತನ ಪಾವತಿ ಮಾಡಿರುವುದು ಇದೇ ಮೊದಲು. ಮೈಸೂರು ಸರಕಾರದ ರಸ್ತೆ ಸಾರಿಗೆ ಇಲಾಖೆಯು 1957ರಲ್ಲಿ ಶುರುವಾಯಿತು. ಅಂದಿನಿಂದ ಇಲ್ಲಿಯವರೆಗೆ ಎಲ್ಲ ಸಿಬ್ಬಂದಿಗೆ ಒಂದೇ ದಿನ ಸಂಬಳ ನೀಡುತ್ತಿರಲಿಲ್ಲ. ಈ ಬಗ್ಗೆ ಮಾಹಿತಿ ಪಡೆದಿದ್ದ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ವಿ.ಅನ್ಬುಕುಮಾರ್ ಅವರು ಪ್ರತಿ ತಿಂಗಳ 1ರಂದು ಎಲ್ಲರಿಗೂ ವೇತನ ಪಾವತಿಸಲು ಆದೇಶಿಸಿದ್ದರು. ಅದರಂತೆ ವೇತನ ನೀಡಲಾಗಿದೆ.
ನಿಗಮದ 36 ಸಾವಿರ ಚಾಲಕರು ಹಾಗೂ ನಿರ್ವಾಹಕರ ಬ್ಯಾಂಕ್ ಖಾತೆಗೆ ಅಕ್ಟೋಬರ್ 1ರಂದು ವೇತನ ನೀಡಲಾಗಿದೆ. 1957ರಿಂದ (ಅಂದಿನ ಮೈಸೂರು ಸರ್ಕಾರ ರಸ್ತೆ ಸಾರಿಗೆ ಇಲಾಖೆ) ಇದುವರೆಗೆ ಚಾಲಕರು ಹಾಗೂ ನಿರ್ವಾಹಕರಿಗೆ ಪ್ರತಿ ತಿಂಗಳ 7ರಂದು ವೇತನ ಪಾವತಿ ಆಗುತ್ತಿತ್ತು. ತಾಂತ್ರಿಕ ಸಿಬ್ಬಂದಿಗೆ ಆಯಾ ತಿಂಗಳ 4ರಂದು ಹಾಗೂ ಅಧಿಕಾರಿಗಳು, ಆಡಳಿತ ಸಿಬ್ಬಂದಿಗೆ 1ರಂದು ವೇತನ ನೀಡಲಾಗುತ್ತಿತ್ತು. ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ವಿ.ಅನ್ಬುಕುಮಾರ್ ಸೂಚನೆಯಂತೆ ಚಾಲಕರಿಗೆ ವೇತನ ಪಾವತಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಇದನ್ನೂ ಓದಿ: ಕೆಎಸ್ ಆರ್ ಟಿಸಿ ಆಸ್ಪತ್ರೆ ಖಾಸಗೀಕರಣಕ್ಕೆ ಸಂಸದ ತೇಜಸ್ವಿ ಸೂರ್ಯ ಯತ್ನ: ಕಾರ್ಮಿಕ ಒಕ್ಕೂಟ ಅಧ್ಯಕ್ಷ ಅನಂತ ಸುಬ್ಬಾರಾವ್
ಈ ಹಿಂದೆ ಚಾಲಕ, ನಿರ್ವಾಹಕರಿಗೆ ಪ್ರತಿ ತಿಂಗಳು 7ರಂದು, ತಾಂತ್ರಿಕ ಸಿಬ್ಬಂದಿಗೆ 4 ಹಾಗೂ ಅಧಿಕಾರಿ, ಆಡಳಿತ ಸಿಬ್ಬಂದಿಗೆ ತಿಂಗಳ ಒಂದನೇ ತಾರೀಖಿನಂದು ವೇತನ ಪಾವತಿ ಮಾಡಲಾಗುತ್ತಿತ್ತು. ಇದೀಗ ಎಲ್ಲರಿಗೂ ತಿಂಗಳ ಮೊದಲ ದಿನವೇ ವೇತನ ಪಾವತಿಸುವ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ. 36,000 ಸಿಬ್ಬಂದಿಯ ಮಾಸಿಕ ವೇತನಕ್ಕೆ ಸುಮಾರು 140 ಕೋಟಿ ರೂ. ವೆಚ್ಚವಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.