ಗೋಬಿಮಂಚೂರಿ ವಿಚಾರಕ್ಕೆ ಕೊಲೆ: ಅಜ್ಜಿ ಕೊಂದಿದ್ದ ಮೊಮ್ಮಗನ ಸೆರೆ, 5 ವರ್ಷದಿಂದ ಮನೆಯ ಕಪಾಟಿನಲ್ಲಿತ್ತು ಶವ!

ಗೋಬಿಮಂಚೂರಿ ವಿಚಾರಕ್ಕೆ ಕೋಪಗೊಂಡಿದ್ದ ಅಜ್ಜಿಯನ್ನು ಮೊಮ್ಮಗನೇ ಕೊಂದು ಮನೆಯ ಕಪಾಟಿನಲ್ಲಿ ಬಚ್ಚಿಟ್ಟು ಇದೀಗ ಪೊಲೀಸರ ಅತಿಥಿಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ವೃದ್ದೆಯ ಕೊಂದಿದ್ದ ಕೊಲೆಗಾರರ ಬಂಧನ
ವೃದ್ದೆಯ ಕೊಂದಿದ್ದ ಕೊಲೆಗಾರರ ಬಂಧನ
Updated on

ಬೆಂಗಳೂರು: ಗೋಬಿಮಂಚೂರಿ ವಿಚಾರಕ್ಕೆ ಕೋಪಗೊಂಡಿದ್ದ ಅಜ್ಜಿಯನ್ನು ಮೊಮ್ಮಗನೇ ಕೊಂದು ಮನೆಯ ಕಪಾಟಿನಲ್ಲಿ ಬಚ್ಚಿಟ್ಟು ಇದೀಗ ಪೊಲೀಸರ ಅತಿಥಿಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಕಳೆದ ಐದು ವರ್ಷಗಳ ಹಿಂದೆ ರಾಜಧಾನಿಯಲ್ಲಿ ಬೆಚ್ಚಿ ಬೀಳಿಸಿದ ಗೋಬಿ ಮಂಚೂರಿ ವಿಷಯದಲ್ಲಿ ಸಿನಿಮೀಯ ರೀತಿಯಲ್ಲಿ ನಡೆದಿದ್ದ ವೃದ್ಧೆ ಶಾಂತಕುಮಾರಿ ಕೊಲೆ ಪ್ರಕರಣವನ್ನು ಕೆಂಗೇರಿ ಪೊಲೀಸರು ಕೊನೆಗೂ ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಕರಣದ ಸಂಬಂಧ ಕೊಲೆಯಾದ ವೃದ್ಧೆಯ ಮಗಳು, ಮೊಮ್ಮಗ ಹಾಗೂ ಮತ್ತೊಬ್ಬ ಸೇರಿ ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಪ್ರಕರಣ ಬೇಧಿಸುವ ಮುನ್ನ ಆರೋಪಿಗಳ ಬಂಧನಕ್ಕೆ ಪೊಲೀಸರು ವಿವಿಧ ತಂಡ ರಚಿಸಿ ತನಿಖೆ ನಡೆಸಿದರೂ, ಪ್ರಕರಣದ ಮೂರನೇ ಆರೋಪಿ ಹೊರತುಪಡಿಸಿ ಮುಖ್ಯ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ವಿಫಲರಾಗಿದ್ದರು.  ತಾರ್ಕಿಕ ಅಂತ್ಯ ಕಾಣದೆ ಧೂಳು ಹಿಡಿದಿದ್ದ ಪ್ರಕರಣವನ್ನು ಮತ್ತೆ ಸವಾಲಾಗಿ ಸ್ವೀಕರಿಸಿ ರಚಿಸಿದ್ದ ಕೆಂಗೇರಿ ಠಾಣೆಯ ಇನ್‌ಸ್ಪೆಕ್ಟರ್ ವಸಂತ್ ನೇತೃತ್ವದ ತಂಡ, ತಾಯಿ ಶಾಂತಕುಮಾರಿ ಕೊಲೆಗೈದ ಆರೋಪದಡಿ ಶಶಿಕಲಾ (೪೬), ಆಕೆಯ ಮಗ ಸಂಜಯ್ (೨೬) ಎಂಬುವರನ್ನು ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಬಂಧಿಸಿ ನಗರಕ್ಕೆ ಕರೆತಂದು ವಿಚಾರಣೆ ನಡೆಸಿದೆ ಎಂದು ಡಿಸಿಪಿ ಲಕ್ಷ್ಮಣ ನಿಂಬರಗಿ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

2016ರಲ್ಲಿ ವೃದ್ದೆ ಕೊಲೆ
ಕೆಂಗೇರಿ ಉಪನಗರ ಬಡಾವಣೆಯ ಮನೆಯೊಂದರಲ್ಲಿ ಹತ್ಯೆಯಾದ 69 ವರ್ಷದ ಶಾಂತಕುಮಾರಿ ಜೊತೆಗೆ ಮಗಳು ಶಶಿಕಲಾ ಹಾಗೂ ಮೊಮ್ಮಗ ಸಂಜಯ್ ಒಂದೇ ಮನೆಯಲ್ಲಿ ವಾಸಿಸುತ್ತಿದ್ದರು. ಶಿಸ್ತು ಹಾಗೂ ಮಡಿವಂತಿಕೆಯನ್ನು ಶಾಂತಕುಮಾರಿ ಬೆಳೆಸಿಕೊಂಡಿದ್ದರು. ಈಕೆಯ ಪತಿ ಹಲವು ವರ್ಷಗಳ ಹಿಂದೆ ಮೃತರಾಗಿದ್ದರು. ಪುತ್ರ ಸಂಜಯ್ ಖಾಸಗಿ ಕಾಲೇಜಿನಲ್ಲಿ ಏರೊನಾಟಿಕಲ್ ಇಂಜಿನಿಯರ್ ಮೂರನೇ ಸೆಮಿಸ್ಟರ್ ವಿದ್ಯಾರ್ಥಿಯಾಗಿದ್ದ. ಪ್ರತಿಭಾವಂತನಾಗಿದ್ದ ಈತ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಶೇ.90ಕ್ಕೂ ಹೆಚ್ಚು ಅಂಕ ಪಡೆದಿದ್ದ.

ಮಡಿ-ಮೈಲಿಗೆ ಎನ್ನುತ್ತಿದ್ದ ಸಂತ್ರಸ್ಥ ವೃದ್ದೆ
ಓದುವ ವಿಷಯದಲ್ಲಿ ಮುಂದಿದ್ದು ಪ್ರತಿಭಾವಂತನಾಗಿದ್ದ ಸಂಜಯ್ ಯಾರೊಂದಿಗೂ ಹೆಚ್ಚು ಮಾತನಾಡುತ್ತಿರಲಿಲ್ಲ. ಮಡಿ-ಮೈಲಿಗೆ ಸಂಪ್ರದಾಯ ಬೆಳೆಸಿಕೊಂಡಿದ್ದ ವೃದ್ದೆ ಶಾಂತಕುಮಾರಿ ಅದನ್ನು ಪಾಲಿಸುವಂತೆ ಮನೆಯವರ ಮೇಲೆ ಒತ್ತಡ ತರುತ್ತಿದ್ದರು. 2016ರ ಆಗಸ್ಟ್‌ನಲ್ಲಿ ಕಾಲೇಜು ಮುಗಿಸಿ ಸಂಜಯ್ ಮನೆಗೆ ಬಂದು ಗೋಬಿಮಂಜೂರಿ ತಂದುಕೊಟ್ಟಿದ್ದ. ಇದನ್ನು ಯಾವುದೇ ಕಾರಣಕ್ಕೂ ಮನೆಯವರೂ ಸೇವಿಸಬಾರದು ಎಂದು ನಿರಾಕರಿಸಿ ಬೈದು ಮೊಮ್ಮಗನ ಮೇಲೆ ಬಿಸಾಕಿದ್ದರು. ಇದರಿಂದ ಆಕ್ರೋಶಗೊಂಡ ಸಂಜಯ್ ಅಡುಗೆ ಮನೆಯಲ್ಲಿದ್ದ ಲಟ್ಟಣಿಗೆ ತಂದು ಅಜ್ಜಿಯತ್ತ ಎಸೆದಿದ್ದು ಅದು ಬಲವಾಗಿ ತಲೆಗೆ ತಗುಲಿ ತೀವ್ರ ರಕ್ತಸ್ರಾವವಾಗಿ ಮನೆಯಲ್ಲಿ ಶಾಂತಕುಮಾರಿ ಮೃತಪಟ್ಟಿದ್ದರು.

ಶವ ಬಚ್ಚಿಟ್ಟ ತಾಯಿ-ಮಗ
ತನ್ನ ತಾಯಿಯನ್ನು ಮಗ ಸಂಜಯ್ ಕೊಲೆಗೈದ ವಿಚಾರ ಅರಿತುಕೊಂಡ ಶಶಿಕಲಾ, ಪೊಲೀಸರಿಗೆ ಮಾಹಿತಿ ನೀಡಲು ಮುಂದಾಗಿದ್ದರು. ಪೊಲೀಸರಿಗೆ ತಿಳಿಸಿದರೆ ನಾನು ಜೈಲಿಗೆ ಹೋಗುವೆ. ನಿನ್ನ ಮಗನ ಭವಿಷ್ಯವನ್ನು ನೀನೇ ಹಾಳು ಮಾಡುತ್ತೀಯಾ ಎಂದು ಪೊಲೀಸರಿಗೆ ಹೇಳದಂತೆ ಸಂಜಯ್ ಗೋಗರೆದಿದ್ದ. ಮಗನ ಮೇಲಿನ ಅತಿಯಾದ ಪ್ರೀತಿಗೆ ಶಶಿಕಲಾ ಒಪ್ಪಿಕೊಂಡಿದ್ದರು. ಮನೆಯಿಂದ ಶವ ಹೊರತೆಗೆಯುವುದು ಅಸಾಧ್ಯವೆಂದು ನಿರ್ಧರಿಸಿ ಸ್ನೇಹಿತ ಕುಂಬಳಗೋಡಿನ ನಿವಾಸಿ ನಂದೀಶ್‌ಗೆ ಸಂಜಯ್ ವಿಷಯ ತಿಳಿಸಿ ಮನೆಗೆ ಕರೆಯಿಸಿಕೊಂಡಿದ್ದ. ಮೂವರು ಒಟ್ಟುಗೂಡಿ ಮನೆಯ ಕಬೋರ್ಡ್‌ನಲ್ಲಿ ಶವ ಬಚ್ಚಿಟ್ಟಿದ್ದರು. ವಾಸನೆ ಬರದಿರಲು ಕೆಮಿಕಲ್ಸ್ ಹಾಕಿದ್ದರು. ಬಳಿಕ ಮನೆಯೊಳಗೆ ಗೋಡೆ ಕೊರೆದು ಶವವಿಟ್ಟು ಸಿಮೆಂಟ್‌ನಿಂದ ಪ್ಲಾಸ್ಟರಿಂಗ್ ಮಾಡಿ ಬಣ್ಣ ಬಳಿದಿದ್ದರು. ಕೆಲ ತಿಂಗಳ ಬಳಿಕ ಊರಿಗೆ ಹೋಗಿ ಬರುವುದಾಗಿ ಹೇಳಿ ಮನೆ ಮಾಲೀಕರಿಗೆ ತಿಳಿಸಿ ಪರಾರಿಯಾಗಿದ್ದರು.

ವೃದ್ಧೆ ಶವ ಪತ್ತೆ
ಆರು ತಿಂಗಳಾದರೂ ಊರಿಗೆ ಹೋಗಿದ್ದ ಅಮ್ಮ-ಮಗ ಮನೆಗೆ ಬಾರದೆ ಅನುಮಾನಗೊಂಡ ಮನೆ ಮಾಲೀಕರು, ಮನೆ ರಿಪೇರಿ ಮಾಡಿಸಲು 2017ರ ಮೇ 7 ರಂದು ಮನೆಯೊಳಗೆ ಪ್ರವೇಶಿಸಿದ್ದರು. ಈ ವೇಳೆ ಹೂತು ಹಾಕಿದ್ದ ಗೋಡೆ ಬಳಿ ರಕ್ತಸಿಕ್ತವಾಗಿದ್ದ ಬಿದ್ದಿದ್ದ ಸೀರೆಯನ್ನು ಗಮನಿಸಿದ್ದರು. ಮನೆಯಲ್ಲಿ ವಾಸವಾಗಿದ್ದ ವೃದ್ಧೆಯೂ ಕಾಣದಿದ್ದಾಗ ಸಂಶಯಗೊಂಡು ಕೂಡಲೇ ಆಗಿನ ಇನ್‌ಸ್ಪೆಕ್ಟರ್ ಗಿರಿರಾಜ್ ಅವರ ಗಮನಕ್ಕೆ ತಂದಿದ್ದರು. ಸ್ಥಳಕ್ಕೆ ದೌಡಾಯಿಸಿ ಮನೆಯಲ್ಲಿ ಶೋಧಿಸಿದಾಗ ಸಂಜಯ್ ಬಿಟ್ಟುಹೋಗಿದ್ದ ಮೊಬೈಲ್ ಪತ್ತೆಯಾಗಿತ್ತು. ಕರೆ ವಿವರ ಪರಿಶೀಲಿಸಿದಾಗ ನಂದೀಶ್ ಮೊಬೈಲ್ ನಂಬರ್ ತಳಕುಹಾಕಿಕೊಂಡಿತ್ತು. ಈತನ ಜಾಡು ಹಿಡಿದು ಹೊರಟ ಪೊಲೀಸ್ ತಂಡ, ನಂದೀಶ್‌ನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ವೃದ್ಧೆಯನ್ನು ಕೊಲೆಮಾಡಿ ಶವವನ್ನು ಗೋಡೆಯಲ್ಲಿ ಅವಿತಿಟ್ಟಿರುವ ಸಂಗತಿ ಬಯಲಾಗಿತ್ತು. ಆರೋಪಿ ಹೇಳಿಕೆ ಆಧರಿಸಿ ಗೋಡೆ ಕೊರೆದು ಪರಿಶೀಲಿಸಿದಾಗ ವೃದ್ಧೆಯ ಕಳೇಬರ ಪತ್ತೆಯಾಗಿತ್ತು.

ಹೊಟೇಲ್ ಸಪ್ಲೈಯರ್
ವೃದ್ಧೆಯ ಕೊಲೆ ನಂತರ ಬಂಧನ ಭೀತಿಯಿಂದ ತಾಯಿ-ಮಗ ಮಾಲೀಕರ ಬಳಿ ಸಂಬಂಧಿಕರಿಗೆ ಹುಷಾರಿಲ್ಲ ಎಂದು ಮನೆ ತೊರೆದಿದ್ದರು. ಆರೋಪಿಗಳು ಹುಟ್ಟೂರಾದ ಶಿವಮೊಗ್ಗದ ಸಾಗರಕ್ಕೆ ತೆರಳಿದ್ದರು. ನಂತರ ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ತಲೆಮರೆಸಿಕೊಂಡಿದ್ದರು. ಸ್ಥಳೀಯ ಹೊಟೇಲ್‌ವೊಂದರಲ್ಲಿ ಸಂಜಯ್ ಸಪ್ಲೈಯರ್ ಕೆಲಸ ಹಾಗೂ ತಾಯಿ ಕ್ಲೀನಿಂಗ್ ಕೆಲಸ ಮಾಡಿಕೊಂಡಿದ್ದರು. ಇತ್ತ ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿಗಳಿಗಾಗಿ ಪೊಲೀಸರು ತೀವ್ರ ಶೋಧ ನಡೆಸಿದರೂ ಪ್ರಯೋಜನವಾಗಿರಲಿಲ್ಲ.

ಸಿಕ್ಕಿಬಿದ್ದ ತಾಯಿ-ಮಗ
ಕಾಲಕ್ರಮೇಣ ಕೊಲೆ ಪ್ರಕರಣದ ಕಡತ ಧೂಳು ಸೇರಿತ್ತು. ಇತ್ತೀಚೆಗೆ ಇತ್ಯರ್ಥವಾಗದ ಪ್ರಕರಣಗಳ ಬಗ್ಗೆ ಪರಿಶೀಲನೆ ನಡೆಸಿ ಆರೋಪಿಗಳನ್ನು ಪತ್ತೆ ಹಚ್ಚುವಂತೆ ಕೆಂಗೇರಿ ಪೊಲೀಸರಿಗೆ ತಾಕೀತು ಮಾಡಲಾಗಿತ್ತು ಎಂದು ಅವರು ತಿಳಿಸಿದರು. ಪ್ರಕರಣವನ್ನು ಸವಾಲಾಗಿ ಸ್ವೀಕರಿಸಿ, ತಾಂತ್ರಿಕ ಆಯಾಮದಲ್ಲಿ ತನಿಖೆ ನಡೆಸಿದಾಗ ಸಿಕ್ಕ ಸುಳಿವಿನಿಂದ ಕೊಲ್ಲಾಪುರದಲ್ಲಿ ಅಡಗಿದ್ದ ತಾಯಿ-ಮಗನನ್ನು ಬಂಧಿಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com