
ಸಾವು (ಸಾಂಕೇತಿಕ ಚಿತ್ರ)
ಬೆಂಗಳೂರು: ಕಟ್ಟಡವೊಂದರ ಸೀಲಿಂಗ್ ಕುಸಿದ ಪರಿಣಾಮ ಇಬ್ಬರು ಸಾವನ್ನಪ್ಪಿ ಮೂರು ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಂಗಳೂರಿನಲ್ಲಿ ಮಂಗಳವಾರ ನಡೆದಿದೆ.
ಬೆಂಗಳೂರಿನ ಮಹದೇವಪುರದ ಹೂಡಿ ಬಳಿ ಮಂಗಳವಾರ ಬೆಳಗ್ಗೆ ತೆರವು ಮಾಡುತ್ತಿದ್ದ ಕಟ್ಟಡದ ಸೀಲಿಂಗ್ ಕುಸಿದು ಬಿದ್ದ ಪರಿಣಾಮ ಇಬ್ಬರು ಕೂಲಿ ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಂತೆಯೇ ಮೂರು ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ: ಕಾರು ನಿಲ್ಲಿಸಿ ಚಾಲಕನ ಕಣ್ಣಿಗೆ ಖಾರದ ಪುಡಿ ಎರಚಿದ ಬೈಕ್ ಸವಾರರು; ವೈಯುಕ್ತಿಕ ದ್ವೇಷ ಶಂಕೆ
ಮೃತ ಕೂಲಿ ಕಾರ್ಮಿಕರನ್ನು 27 ವರ್ಷದ ಅರ್ಮಾನ್ ಮತ್ತು 38 ವರ್ಷದ ಜೈನುದ್ದೀನ್ ಎಂದು ಗುರುತಿಸಲಾಗಿದ್ದು, ಮೃತ ಕಾರ್ಮಿಕರಿಬ್ಬರೂ ಬಿಹಾರ ಮೂಲದವರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮಹದೇವಪುರದ ಗ್ರಾಫೈಟ್ ಇಂಡಿಯಾ ಬಳಿ ಖಾಸಗಿ ಕಂಪನಿಗೆ ಸೇರಿದ ಕಟ್ಟಡ ತೆರವು ಹಂತದಲ್ಲಿತ್ತು. ತೆರವು ಕಾರ್ಯಕ್ಕೆ ನಿಯೋಜನೆಗೊಂಡಿದ್ದ ಅರ್ಮಾನ್, ಜೈನುದ್ದೀನ್ ಸೇರಿದಂತೆ ಐವರು ಕಾರ್ಮಿಕರು ಕಟ್ಟಡದಲ್ಲಿ ಮಲಗಿದ್ದರು. ರಾತ್ರಿ ಮಳೆ ಬಂದಿದ್ದರಿಂದ ಕೆಳ ಅಂತಸ್ತಿನಲ್ಲಿ ಎಲ್ಲರೂ ಮಲಗಿದ್ದರು. ಮುಂಜಾನೆ 5 ಗಂಟೆ ಸುಮಾರಿಗೆ ಕಟ್ಟಡದ ಚಾವಣಿ ಏಕಾಏಕಿ ಕುಸಿದಿದ್ದು, ಇಬ್ಬರು ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ: ಉತ್ತರಕಾಶಿ: ಹಿಮಪಾತದಲ್ಲಿ ಸಾವನ್ನಪ್ಪಿದ್ದ ಇಬ್ಬರು ಕನ್ನಡಿಗರ ಮೃತದೇಹ ಬೆಂಗಳೂರಿಗೆ!
ದುರ್ಘಟನೆ ತಿಳಿದ ತಕ್ಷಣ ಕಟ್ಟಡಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಇತರ ಮೂವರು ಕಾರ್ಮಿಕರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಹದೇವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.