ವಸತಿ ಪ್ರದೇಶದಲ್ಲಿ ವಾಣಿಜ್ಯ ಚಟುವಟಿಕೆ; ವರದಿ ಸಲ್ಲಿಸುವಂತೆ ಬಿಬಿಎಂಪಿಗೆ ಹೈಕೋರ್ಟ್ ಸೂಚನೆ

ನಗರದ ವಸತಿ ಪ್ರದೇಶಗಳಲ್ಲಿ ನಡೆಯುತ್ತಿರುವ ವಾಣಿಜ್ಯ ಚಟುವಟಿಕೆಗಳನ್ನು ಪರಿಶೀಲಿಸಲು ಕೈಗೊಂಡ ಕ್ರಮಗಳ ಕುರಿತು ಎಂಟು ವಾರಗಳಲ್ಲಿ ವರದಿ ಸಲ್ಲಿಸುವಂತೆ ಬಿಬಿಎಂಪಿಗೆ ಹೈಕೋರ್ಟ್ ಶುಕ್ರವಾರ ಸೂಚನೆ ನೀಡಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ನಗರದ ವಸತಿ ಪ್ರದೇಶಗಳಲ್ಲಿ ನಡೆಯುತ್ತಿರುವ ವಾಣಿಜ್ಯ ಚಟುವಟಿಕೆಗಳನ್ನು ಪರಿಶೀಲಿಸಲು ಕೈಗೊಂಡ ಕ್ರಮಗಳ ಕುರಿತು ಎಂಟು ವಾರಗಳಲ್ಲಿ ವರದಿ ಸಲ್ಲಿಸುವಂತೆ ಬಿಬಿಎಂಪಿಗೆ ಹೈಕೋರ್ಟ್ ಶುಕ್ರವಾರ ಸೂಚನೆ ನೀಡಿದೆ. 

ಕಾನೂನು ಉಲ್ಲಂಘಿಸಿ ವಸತಿ ಪ್ರದೇಶಗಳಲ್ಲಿ ನಡೆಯುವ ವಾಣಿಜ್ಯ ಚಟುವಟಿಕೆಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ವಿಲ್ಸನ್ ಗಾರ್ಡನ್ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು. 

ಈ ಅರ್ಜಿಯ ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ ವರಾಳೆ ಮತ್ತು ನ್ಯಾಯಮೂರ್ತಿ ಅಶೋಕ್ ಎಸ್ ಕಿಣಗಿ ಅವರಿದ್ದ ವಿಭಾಗೀಯ ಪೀಠ ಈ ಸಂಬಂಧ ವರದಿ ಸಲ್ಲಿಸುವಂತೆ ಸೂಚನೆ ನೀಡಿದೆ. 

ವಸತಿ ವಲಯಗಳಲ್ಲಿ ಹೂವಿನ ವ್ಯಾಪಾರಿಗಳು ತಮ್ಮ ವ್ಯಾಪಾರ ನಡೆಸುತ್ತಿದ್ದು, ಇದನ್ನು ತಡೆಯುವಲ್ಲಿ ಬಿಬಿಎಂಪಿ ವಿಫಲವಾಗಿದೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಬಿಬಿಎಂಪಿ ವಕೀಲರು, ಕೆಲವು ಮಾರಾಟಗಾರರ ಮೇಲೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಮತ್ತು ನೋಟಿಸ್‌ಗಳನ್ನು ನೀಡಲಾಗಿದೆ. ಈ ಸಂಬಂಧ ಸಮಗ್ರ ವರದಿಯನ್ನು ಸಲ್ಲಿಸಲು ಸ್ವಲ್ಪ ಸಮಯ ಬೇಕಾಗುತ್ತದೆ ಎಂದು ಹೇಳಿದರು. 

ಈ ವೇಳೆ ನ್ಯಾಯಪೀಠವು "ಜನವಸತಿ ಪ್ರದೇಶಗಳಲಿ ವಾಣಿಜ್ಯ ಚಟುವಟಿಕೆಗಳನ್ನು ನಿರ್ಬಂಧಿಸಲು ಪ್ರತ್ಯೇಕ ನಿಯಮಗಳಿವೆಯೇ ಅಥವಾ ಸಂಪೂರ್ಣ ನಿಷೇಧವಿದೆಯೇ ? ಷರತ್ತು ಬದ್ಧ ಅನುಮತಿ ನೀಡಲು ಅವಕಾಶವಿದೆಯೇ, ಒಂದು ವೇಳೆ ಷರತ್ತುಬದ್ಧ ಅನುಮತಿ ನೀಡಲು ಅವಕಾಶವಿದ್ದಲ್ಲಿ, ಯಾವೆಲ್ಲಷರತ್ತುಗಳನ್ನು ವಿಧಿಸಲಾಗುತ್ತದೆ" ಎಂದು ಬಿಬಿಎಂಪಿಯನ್ನು ಪ್ರಶ್ನಿಸಿತು. 

ಅಲ್ಲದೆ, ಒಂದು ವೇಳೆ ಅಂತಹ ಷರತ್ತು ಉಲ್ಲಂಘಿಸಿದವರ ವಿರುದ್ಧ ಕಾಲ-ಕಾಲಕ್ಕೆ ಪರಿಶೀಲನೆ ನಡೆಸಿ ಕ್ರಮ ಜರುಗಿಸಲಾಗಿದೆಯೇ ಎಂಬ ಬಗ್ಗೆ ಎಂಟು ವಾರಗಳಲಿ ಸಮಗ್ರ ವರದಿ ಸಲ್ಲಿಸಬೇಕು" ಎಂದು ನಿರ್ದೇಶನ ನೀಡಿ ವಿಚಾರಣೆ ಮುಂದೂಡಿತು.

ಅಲ್ಲದೆ, ವಿಲ್ಸನ್‌ಗಾರ್ಡನ್‌ನ ಜನವಸತಿ ಪ್ರದೇಶಗಳಲ್ಲಿವಾಣಿಜ್ಯ ಚಟುವಟಿಕೆ ನಡೆಸುತ್ತಿರುವವರ ವಿರುದ್ದ ಅದರಲ್ಲೂ ಮುಖ್ಯವಾಗಿ ಹೂವಿನ ವ್ಯಾಪಾರಿಗಳ ಕುರಿತು ಪರಿಶೀಲನೆ ನಡೆಸಿ ಬೆಂಗಳೂರ ದಕ್ಷಿಣದ ಚೀಫ್ ಇಂಜಿನಿಯರ್ ಹಿರಿಯ ಅಧಿಕಾರಿಗಳಿಗೆ ವರದಿ ಸಲ್ಲಿಸಬೇಕು. ಆ ವರದಿ ಆಧರಿಸಿ ಏನು ಕ್ರಮ ಕೈಗೊಳ್ಳಲಾಗುವುದು ಎಂಬ ಬಗ್ಗೆ ಮೂರು ವಾರಗಳಲ್ಲಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕು ಎಂದು ಸೂಚನೆ ನೀಡಿತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com